ADVERTISEMENT

ಬೆಳಕು ಕಾಣುವ ಛಲ

ಬದುಕು ಬನಿ

ಪ್ರಜಾವಾಣಿ ವಿಶೇಷ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ಬಾಲಮುರುಗನ್‌
ಬಾಲಮುರುಗನ್‌   

ನಮ್ಮ ನಡುವೆ ತಮ್ಮ ಕರ್ತವ್ಯಪಾಲನೆಯಿಂದ ಗುರುತಾಗುವ ಕಾಯಕ ಯೋಗಿಗಳಿದ್ದಾರೆ. ಅವರು ಮಾಡುವ ಕೆಲಸದಲ್ಲಿ ಚಿಕ್ಕದು, ದೊಡ್ಡದು ಎಂಬ ವ್ಯತ್ಯಾಸ ಮಾಡಲಾಗದು. ಅವೆಲ್ಲ ದೈನಂದಿನ ಬದುಕಿಗೆ ಅನಿವಾರ್ಯ. ರಸ್ತೆಗಳ ಕಸ ಗುಡಿಸುವವರು, ಹೊಗೆ ಕುಡಿಯುತ್ತಾ ನಿಂತ ಟ್ರಾಫಿಕ್‌ ಪೊಲೀಸರು, ಚಪ್ಪಲಿ ಹೊಲಿಯುವವರು ಹೀಗೆ ಯಾರು ಬೇಕಾದರೂ ಆಗಿರಬಹುದು. ಅಂಥವರ ಅಂತರಂಗದ ಮಾತಿನ ಸಣ್ಣ ಮಂಟಪ ಇದು.

ನನ್ನ ಹೆಸರು ಬಾಲಮುರುಗನ್‌. ನಾನು ಹುಟ್ಟು ಕುರುಡ. ಹುಟ್ಟಿದ್ದು ಆರ್‌.ಟಿ. ನಗರ ಹತ್ತಿರವಿರುವ ಕಾವಲ್‌ಬೈರಸಂದ್ರದಲ್ಲಿ. ಆರು ವರ್ಷದವನಿದ್ದಾಗ ವಸತಿ ಶಾಲೆಗೆ ಸೇರಿಸಿದರು. ರಮಣ ಮಹರ್ಷಿ ಅಂಧರ ಶಾಲೆಯಲ್ಲಿ ಓದಿದೆ. ಹತ್ತನೇ ತರಗತಿವರೆಗೆ ಅಲ್ಲೇ ಓದಿದ್ದು. ಅಪ್ಪಅಮ್ಮನ ಜೊತೆ ನಾನು ಇರಲಿಲ್ಲ.

‘ಕುರುಡ ಓದಿದ್ದು ಇನ್ನು ಸಾಕು’ ಎಂದು ಹತ್ತನೆ ತರಗತಿ ಆದ ಮೇಲೆ ನನ್ನನ್ನು ಮನೆಗೆ ಕರೆತಂದು ಕೂಡಿ ಹಾಕಿಬಿಟ್ಟರು. ‘ಎಲ್ಲೂ ಹೋಗಬೇಡ ಮನೆಯಲ್ಲೇ ಇರು’ ಎನ್ನುತ್ತಿದ್ದರು. ಆದರೆ ನನಗೆ ಅದು ಹಿತವೆನಿಸಲಿಲ್ಲ. ಹೊರಗೆ ಹೋಗಬೇಕು, ಏನಾದರೂ ಉದ್ಯೋಗ ಮಾಡಬೇಕು, ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ಆಸೆ ಇತ್ತು. ಹಾಗಾಗಿ  ಮನೆ ಬಿಟ್ಟು ಬಂದೆ. ಹೊರಗೆ ಜೀವನ ನಡೆಸಲು ಶುರು ಮಾಡಿದೆ.

ನನ್ನಂಥವರೊಂದಿಗೆ ಇದ್ದು ಏನಾದರೂ ಸಾಧಿಸಬೇಕು ಎಂಬ ಛಲ ನನ್ನಲ್ಲಿ ಇತ್ತು. ಕಣ್ಣು ಕಾಣದೇ ಇದ್ದರೂ ಸ್ವತಂತ್ರವಾಗಿ ಬದುಕಬೇಕು; ಏನಾದರೂ ಸಾಧನೆ ಮಾಡಬೇಕು. ದೇವರು ಕೈಕಾಲು ಕೊಟ್ಟಿದ್ದಾನೆ. ಏನಾದರೂ ಹೊಸದು ಕಲಿಯಬೇಕು ಎಂಬ ಛಲ ನನ್ನಲ್ಲಿತ್ತು.

ಕಾರ್ಡ್‌ಬೋರ್ಡ್‌ ಕಾರ್ಖಾನೆಗೆ ಸೇರಿದೆ. ಕಟ್ಟಿಂಗ್‌ ಕೆಲಸ ಮಾಡುವಾಗ ಮಧ್ಯ ಬೆರಳು ಕತ್ತರಿಸಿಕೊಂಡೆ. ಆಗ ಎಲ್ಲರೂ, ‘ನಿನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಛೇಡಿಸಿದರು. ಆದರೂ ನಾನು ಪ್ರಯತ್ನ ಬಿಡಲಿಲ್ಲ. ಮತ್ತೆ ಗಾರ್ಮೆಂಟ್ಸ್‌ ಕಾರ್ಖಾನೆಗೆ ಸೇರಿಕೊಂಡೆ. ಹಟದಿಂದ ಕೆಲಸ ಮಾಡಿದೆ.

ಕೆಲವು ಕಡೆ ಕೆಲಸ ಕೊಡದೆ ಸುಮ್ಮನೆ ಕೂರಿಸಿ ಸಂಬಳ ಕೊಡುತ್ತಾರೆ. ಅಂತಹ ಸ್ಥಳದಲ್ಲಿ ನಾನು ಕೆಲಸ ಮಾಡುವುದಿಲ್ಲ. ನನಗೆ ‘ಕುರುಡ’ ಎಂದು ಕರುಣೆ ತೋರಿಸುವವರು ಬೇಡ. ನಾನು ಕುರುಡನಾಗಿರುವುದನ್ನು ಒಪ್ಪಿಕೊಂಡು ಕೆಲಸ ಕೊಡುವವರು ಬೇಕು.

ಸುಮಾರು ಐದಾರು ಕಡೆ ಕೆಲಸ ಮಾಡಿದೆ. ನನಗೆ ತೃಪ್ತಿ ಸಿಗಲಿಲ್ಲ. ನಾಲ್ಕು ಜನರಿಗೆ ತಲುಪುವ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡೆ. ಆ ಸಂದರ್ಭದಲ್ಲಿ ನನ್ನ ಜೊತೆ ಹಾಡುವ ಗೆಳೆಯರಿದ್ದರು. ಅವರೊಂದಿಗೆ ಸೇರಿ ‘ಮಾರ್ಗಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್‌’ ಸ್ಥಾಪಿಸಿದೆ. ಸಂಸ್ಥೆ ವತಿಯಿಂದ ಆರ್ಕೆಸ್ಟ್ರಾ ನಡೆಸಿಕೊಂಡು ಬರುತ್ತಿದ್ದೇವೆ.

ಗಣೇಶ ಹಬ್ಬ, ಕನ್ನಡ ರಾಜ್ಯೋತ್ಸವ ಹೀಗೆ ವಿಶೇಷ ಸಂದರ್ಭಗಳಲ್ಲಿ ನಮ್ಮ ತಂಡದ ವತಿಯಿಂದ ಹಾಡಲು ಹೋಗುತ್ತೇವೆ. ಸಿಕ್ಕ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತೇವೆ.

ಮೊದಲು ನಮ್ಮ ಆರ್ಕೆಸ್ಟ್ರಾ ಕಂಡವರು, ‘ಕುರುಡರು ಏನು ಹಾಡುತ್ತಾರೆ’ ಎಂದು ನಿರ್ಲಕ್ಷಿಸುತ್ತಿದ್ದರು.  ನಂತರ ನಾವು ಸರ್ಕಾರಿ ಸ್ಥಳವೊಂದರಲ್ಲಿ  ಅನುಮತಿ ಪಡೆದು ಉಚಿತವಾಗಿ ಗಾಯನ ಕಾರ್ಯಕ್ರಮ ನೀಡಿದೆವು. ಅದನ್ನು ನೋಡಿ ಹಲವರು ಇಷ್ಟಪಟ್ಟು ಅವಕಾಶ ನೀಡಿದರು. ಇನ್ನೂ ಕೆಲವರು ಕಾರ್ಯಕ್ರಮ ಮುಗಿದ ಮೇಲೆ ಹಣ ಕೊಡಲು ಹಿಂದೆ–ಮುಂದೆ ನೋಡಿದರು.

ಆರ್ಕೆಸ್ಟ್ರಾದಲ್ಲಿ ಮೈಕ್‌, ಸೌಂಡ್‌ ಅರೇಂಜ್‌ಮೆಂಟ್‌ ಎಲ್ಲಾ ನಾವೇ ಮಾಡಿಕೊಳ್ಳುತ್ತೇವೆ. ನಮ್ಮ ತಂಡದಲ್ಲಿ 12 ಜನರಿದ್ದೇವೆ. ಆರ್ಕೆಸ್ಟ್ರಾ ನಂಬಿಕೊಂಡು ಬದುಕು ನಡೆಸುತ್ತಿದ್ದೇವೆ.

ಎಂ.ಜಿ.ರಸ್ತೆಯಲ್ಲಿ ಲಾಟರಿ ಟಿಕೆಟ್‌ ಮಾರುತ್ತಿದ್ದ ಸಿದ್ಧಗಂಗಮ್ಮ ಅವರನ್ನು 1997ರಲ್ಲಿ ಮದುವೆಯಾದೆ. ಅವರಿಗೂ ಕಣ್ಣು ಕಾಣುವುದಿಲ್ಲ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸರ್ಕಾರ ಕೊಟ್ಟ ಮನೆ ಇದೆ. ಅಲ್ಲೆ ಸಂಸ್ಥೆ ನಡೆಸಿಕೊಂಡು ಆರ್ಕೆಸ್ಟ್ರಾದಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದೇವೆ.

ಮಕ್ಕಳಿಲ್ಲ. ಅಪ್ಪನ ಮನೆಯನ್ನು ಬಿಟ್ಟು ಬಂದು 20 ವರ್ಷವಾಯ್ತು. ಇಂದಿಗೂ ನಾನು ಆ ಮನೆಯ ಆಸರೆ ಅರಸಿ ಹೋಗಿಲ್ಲ. ಎಷ್ಟೆ ಕಷ್ಟವಿದ್ದರೂ ನನ್ನ ಸ್ವಂತ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದೇನೆ. ಹಬ್ಬ–ಹುಣ್ಣಿಮೆಗೆ ನೆಂಟರಂತೆ ಹೋಗಿ ಬಂದು ಬಿಡುತ್ತೇವೆ. ಹೀಗೆ ನಮ್ಮ ಬದುಕು ನಡೆದುಕೊಂಡು ಹೋಗುತ್ತಿದೆ.

ಪಿ. ಬಾಲಮುರುಗನ್‌ ಅವರ ಸಂಪರ್ಕ ಸಂಖ್ಯೆ– 93423 21212, 94814 54825.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.