ADVERTISEMENT

ಭೂರಮೆಯ ಸನ್ನಿಧಿಯಲ್ಲಿ...

ಸಾಕ್ಷಿ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಬ್ಲಾಗಿಲನು ತೆರೆದು~ ಕನ್ನಡ ಬ್ಲಾಗ್‌ಗಳ ಇಣುಕುನೋಟ. ಪ್ರತಿ ಶುಕ್ರವಾರ ಒಂದು ಬ್ಲಾಗ್ ಇಲ್ಲಿ ತೆರೆದುಕೊಳ್ಳಲಿದೆ.

ಸುಮಾ ಎನ್ನುವ ಹೆಸರಿನಲ್ಲಿಯೇ ಒಂದು ನವಿರುತನ ಇದೆಯಲ್ಲವೇ? ಈ ನವಿರುತನ ಸುಮಾ ಅವರ ಬ್ಲಾಗು `ಭೂರಮೆ~ಯಲ್ಲೂ (http://bhoorame.blogspot.i) ಇದೆ. ಭೂಮಿಗಿಂತ ಮಿಗಿಲಾದ ಸ್ವರ್ಗ ಎಲ್ಲಿದೆ ಎಂದು ತಮ್ಮ ಬ್ಲಾಗಿಗವರು ಅಡಿ ಟಿಪ್ಪಣಿ ಬರೆದುಕೊಂಡಿದ್ದಾರೆ. ಅಂದಹಾಗೆ, ಸುಮಾ ಮೂಲತಃ ಸಾಗರ ತಾಲ್ಲೂಕಿನ ಪುಟ್ಟದೊಂದು ಹಳ್ಳಿ- ಕಾನುಗೋಡಿನವರು.

ಹೇಳಿಕೇಳಿ ಅದು ಹಸಿರು ತುಂಬಿಕೊಂಡ ಪರಿಸರ. ಊರ ಹೆಸರಲ್ಲೂ ಇದೆ `ಕಾನು~. ಹಾಗಾಗಿ ಸುಮಾ ಅವರಿಗೆ ಭೂಮಿ ಸ್ವರ್ಗದಂತೆ ಕಂಡಿರಬಹುದು. ಆದರೆ, ಬೆಂಗಳೂರು ವಾಸಿಯಾದ ನಂತರವೂ ಅವರ ಸ್ವರ್ಗದ ಪರಿಕಲ್ಪನೆ ಬದಲಾದಂತಿಲ್ಲ.

ಸುಮಾ ಅವರಿಗೆ ಬೆಟ್ಟ ಗುಡ್ಡ ಕಾಡೆಂದರೆ ಪ್ರಾಣವಂತೆ. ಜೀವಶಾಸ್ತ್ರ ಆಸಕ್ತಿಯ ವಿಷಯ. ಸಿಕ್ಕಾಪಟ್ಟೆ ಓದು, ಕಡಿಮೆ ಬರಹ ಎನ್ನುವುದರಲ್ಲಿ ಅವರ ನಂಬಿಕೆ. ಆರಂಭದಲ್ಲಿ ಬರೆದದ್ದನ್ನೆಲ್ಲ ಹರಿದೆಸೆಯುವುದೇ ಒಂದು ಅಭ್ಯಾಸವಾಗಿತ್ತು. ಬ್ಲಾಗ್ ಸಖ್ಯ ಯಾವಾಗ ಶುರುವಾಯಿತೋ, ಆಗಿನಿಂದ ಬರವಣಿಗೆಯಲ್ಲಿ ಆತ್ಮವಿಶ್ವಾಸ ಕುದುರಿತು. ಬ್ಲಾಗುಗಳನ್ನೆಲ್ಲ ಓದಿ ಓದಿ, ನಾನೂ ಯಾಕೆ ಬ್ಲಾಗಿಗಳಾಗಬಾರದು ಎನ್ನುವ ಹಂಬಲದಿಂದ `ಭೂರಮೆ~ ಆರಂಭಿಸಿದ್ದಾರೆ.

ವಿಚಿತ್ರ ಕಥೆಗಳಿರುವ ಸಿನಿಮಾಗಳನ್ನು ಇಷ್ಟಪಡುವ `ಭೂರಮೆ~ಯ ಬ್ಲಾಗಿತಿಗೆ ಊರೂರು ಸುತ್ತುವುದೂ ಇಷ್ಟ. ಭಾವಗೀತೆಗಳಲ್ಲಿ ಹಾಗೂ ಅಮರ ಮಧುರ ಪ್ರೇಮದಂಥ ಹಳೆಯ ಕನ್ನಡ ಚಿತ್ರಗೀತೆಗಳಲ್ಲಿ ಕಳೆದುಹೋಗುವವರ ಸಾಲಿಗೆ ಇವರೂ ಸೇರುತ್ತಾರೆ.
ಬ್ಲಾಗಿತಿಯಿಂದ ಬ್ಲಾಗ್ ಬರವಣಿಗೆ ವಿಷಯಕ್ಕೆ ಬರೋಣ.

`ಭೂರಮೆ~ಯ ಈ ಸ್ವರ್ಗದಲ್ಲಿನ ವಿಶೇಷ ಒಂದೆರಡಲ್ಲ. ನೆನಪು ನೇವರಿಕೆ ಮಾದರಿಯ ಬರಹಗಳಂತೂ ಸಾಕಷ್ಟಿವೆ. ಸುಮಾ ಕಥೆಯನ್ನೂ ಬರೆದಿದ್ದಾರೆ. ಪ್ರಕೃತಿಯ ರಮಣೀಯ ಚಿತ್ರಗಳನ್ನು, ಜೊತೆಗೊಂದಿಷ್ಟು ಟಿಪ್ಪಣಿಗಳನ್ನು ದಾಖಲಿಸಿದ್ದಾರೆ.

ಇಡೀ ಬ್ಲಾಗಿನಲ್ಲಿ ಎದ್ದುಕಾಣುವುದು `ಜೀವ ವೈವಿಧ್ಯ~ ಕುರಿತಾದ ಬರಹಗಳು. ಚೋರಟೆ ಚಕ್ಲಿ, ಟರ್ಕಿ ಕೋಳಿ, ಹಿಸಕನ ಹುಳ, ಇಂಬಳ- ಹೀಗೆ `ಭೂರಮೆ~ಯ ವೈವಿಧ್ಯ ಸೊಗಸಾಗಿದೆ.ಸುಮಾ ಅವರ ಬರವಣಿಗೆಯ ರುಚಿಗಾಗಿ `ಅಡುಗೆ ಎಂಬ ಬ್ರಹ್ಮವಿದ್ಯೆ~

ಬರಹದ ಒಂದು ತುಣುಕು ನೋಡಿ:
“ಏಯ್ ಸುಮಾ ಇಲ್ಲಿ ಬಾ, ಸ್ವಲ್ಪ ಈ ಸಾಂಬಾರಿಗೆ ಮಸಾಲೆ ರುಬ್ಬು, ಎಂದು ಅಮ್ಮ ಕೂಗ್ತಾ ಇದ್ದರೆ, ನಾನು ಅಲ್ಲಿಂದ ಓಡಿ, ತೋಟದ ಮಧ್ಯದ ಹೊಳೆಯಲ್ಲಿನ ಕಪ್ಪೆ-ಮೀನು ನೋಡುತ್ತ ಕುಳಿತುಬಿಡುತ್ತಿದ್ದೆ. ಅಕಸ್ಮಾತ್ ನನಗೆಲ್ಲಿಯಾದರೂ ಮೂಡು ಬಂದು ಅಮ್ಮ ಹೇಳಿದ ಕೆಲಸ ಮಾಡಲು ಹೊರಟರೂ, `ಪಾಪ ಮಗು ಕೈಯಲ್ಲಿ ಅದೆಲ್ಲ ಮಾಡಿಸಬೇಕಾ? ನಾನು ಮಾಡ್ತೀನಿ ಬಿಡು ಪುಟ್ಟ ನೀನು ಹೋಗು~ ಅಂತ ಅಜ್ಜಿ ಹೇಳುತ್ತಿದ್ದರು! ಕಾಲೇಜಿಗೆ ಹೋಗೋ ಮುದ್ದಿನ ಮೊಮ್ಮಗಳು ಯಾಕೆ ಕೈ ಸುಟ್ಟುಕೊಳ್ಳಬೇಕೆಂದು ಅವರ ಯೋಚನೆ.

ಮನೆಯಲ್ಲಿ ಅಜ್ಜಿ, ಅಮ್ಮ, ಇಬ್ಬರು ಚಿಕ್ಕಮ್ಮಂದಿರು ಇದ್ದುದರಿಂದ ನನಗೆಂದೂ ಅಡುಗೆಮನೆಗೆ ಹೋಗುವ ಅನಿವಾರ್ಯತೆ ಬರಲೇ ಇಲ್ಲ. ಮನಸ್ಸು ಮೊದಲೇ ಇರಲಿಲ್ಲವಾದ್ದರಿಂದ ಇಪ್ಪತ್ತು ವರ್ಷವಾದರೂ ಅನ್ನ ಮಾಡೋದು ಹೇಗೆಂದು ಕೂಡ ನನಗೆ ಗೊತ್ತಿರಲಿಲ್ಲ. ಎಲ್ಲ ಅಮ್ಮಂದಿರಂತೆಯೆ ನನ್ನ ಅಮ್ಮ `ಅನ್ನ ಮಾಡಲೂ ಮಗಳಿಗೆ ಕಲಿಸದ ತಾಯಿ ಅಂತ ನನಗೆ ಕೆಟ್ಟ ಹೆಸರು ತರುತ್ತೀಯ ನೀನು ಮುಂದೆ ಗಂಡನ ಮನೆಯಲ್ಲಿ~ ಅಂತ ಬೇಸರಿಸುತ್ತಿದ್ದರು.

ಹೀಗಿದ್ದಾಗಲೇ ಬಿ.ಎಸ್‌ಸಿ ಕೊನೇ ವರ್ಷದಲ್ಲಿದ್ದಾಗ ನನಗೆ ಮದುವೆ ನಿಶ್ಚಯವಾಯಿತು. ಅಮ್ಮನಿಗೋ ಆತಂಕ, ಏನೂ ಅಡುಗೆ ಬಾರದ ಮಗಳು ಗಂಡನ ಮನೆಯಲ್ಲಿ ಏನು ಮಾಡುತ್ತಾಳೋ ಎಂದು. ಗಂಡನಾಗುವವನು ಮತ್ತು ಅವರ ಅಮ್ಮನ ಬಳಿ ಈ ವಿಚಾರವನ್ನೂ ಹೇಳಿಯೂಬಿಟ್ಟರು ಅಮ್ಮ. ಆದರೆ ಅವರಿಬ್ಬರೂ ನಗುತ್ತಾ, `ಇದ್ಯಾವ ದೊಡ್ಡ ವಿಷಯ ಬಿಡಿ, ಸ್ವಲ್ಪ ದಿನಕ್ಕೆ ಕಲಿಯುತ್ತಾಳೆ~ ಎಂದುಬಿಟ್ಟರಲ್ಲ! ನನಗೆ ತೂಕಡಿಸುವವರಿಗೆ ಹಾಸಿ ಕೊಟ್ಟಂತಾಯಿತು. ಮದುವೆಯಾಗುವವರೆಗೂ ಅಮ್ಮ ಎಷ್ಟೇ ಗೊಣಗಿದರೂ ನಾನಂತೂ ಅಡುಗೆಮನೆಗೆ ಕಾಲೇ ಇಡಲಿಲ್ಲ.

ಮದುವೆಗೆ ಎರಡು ದಿನ ಹಿಂದಿನವರೆಗೂ ಕಾಲೇಜಿಗೆ ಹೋಗಿ, ಬರೆಯಬೇಕಾದ ರೆಕಾರ್ಡ್ ಎಲ್ಲ ಮುಗಿಸಿ ಸಬ್ಮಿಟ್ ಮಾಡಿ ಅಂತೂ ಮದುಮಗಳ ಗೆಟಪ್ ಧರಿಸಿದ್ದಾಯಿತು, ಮದುವೆ, ಹನಿಮೂನ್ ಎಂದು ಹದಿನೈದು ದಿನ ಕಳೆದದ್ದೇ ತಿಳಿಯಲಿಲ್ಲ.

ಅತ್ತೆ, ಮಾವ, ಅಕ್ಕ ಭಾವನವರು ಎಲ್ಲ ಇದ್ದ ಊರಿನ ಮನೆಯಿಂದ ಬೀಳ್ಕೊಂಡು ಗಂಡನ ಕರ್ಮಭೂಮಿ ಬೆಂಗಳೂರಿಗೆ ಬಂದದ್ದಾಯಿತು. ಇಲ್ಲಿಯೂ ಗಂಡನ ಅಣ್ಣ ಅತ್ತಿಗೆ ಜೊತೆಗೇ ಇದ್ದುದರಿಂದ ನಾನು ನಿಶ್ಚಿಂತೆಯಿಂದಲೇ ಇದ್ದೆ. ತಿರುಗಾಟ, ಅಕ್ಕ ಭಾವನವರ ಪುಟ್ಟ ಮಗುವಿನೊಂದಿಗೆ ಆಟ, ನನ್ನ ಓದು- ಇವುಗಳಲ್ಲಿ ಸಮಯ ಕಳೆದುಹೋಗುತ್ತಿತ್ತು.
ಅಕ್ಕ ಅಡುಗೆ ಮಾಡುತ್ತಿದ್ದರೆ ಚಿಕ್ಕ ಪುಟ್ಟ ಸಹಾಯ ಮಾಡುವುದಷ್ಟೇ ನನ್ನ ಕೆಲಸವಾಗಿತ್ತು.

ಹನ್ನೊಂದಕ್ಕೆ ಕುಕ್ಕರ್ ಇಡಬೇಕೆಂದರೆ ಅಕ್ಕ ನನ್ನನ್ನು ಹತ್ತಕ್ಕೇ ತರಕಾರಿ ಹೆಚ್ಚಲು ಕೂರಿಸಬೇಕಾಗುತ್ತಿತ್ತು! ಅಷ್ಟು ಚುರುಕು ನಾನು! ದೋಸೆ ಎರೆದರೆ ಕಾವಲಿಯ ಹೊರಗೇ ಹೆಚ್ಚು ಹಿಟ್ಟು ಬೀಳುತ್ತಿತ್ತು. ಚಪಾತಿ ಲಟ್ಟಿಸಿದರೆ ಪ್ರಪಂಚದ ನಕ್ಷೆ! ಇಡ್ಲಿಗೆ ನೆನೆಸು ಎಂದರೆ ಇಡ್ಲಿ ರವೆ ನೆನೆಸಿ ಇಟ್ಟುಬಿಡುತ್ತಿದ್ದೆ! 

ಹೀಗ್ದ್ದಿದಾಗಲೇ ಸಂಪೂರ್ಣವಾಗಿ ನಾನೇ ಅಡುಗೆ ಮಾಡಬೇಕಾದ ಪ್ರಸಂಗ ಬಂದುಬಿಟ್ಟಿತು....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT