ADVERTISEMENT

ಮಕ್ಕಳನ್ನು ನಾಟಕವಾಡಲು ಬಿಡಿ

ರೋಹಿಣಿ ಮುಂಡಾಜೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಕಳೆದ ವರ್ಷದ ರಂಗ ಶಿಬಿರದ ಮಕ್ಕಳೊಂದಿಗೆ
ಕಳೆದ ವರ್ಷದ ರಂಗ ಶಿಬಿರದ ಮಕ್ಕಳೊಂದಿಗೆ   

ಮಕ್ಕಳ ಬೇಸಿಗೆ ರಜೆ ಮತ್ತು ವಿಶ್ವ ರಂಗಭೂಮಿ ದಿನ ಬರುವುದು ಮಾರ್ಚ್‌ನಲ್ಲಿಯೇ. ರಜೆಯಲ್ಲಿ ಮಕ್ಕಳನ್ನು ಚಟುವಟಿಕೆಯಿಂದ ಇರಿಸುವ ಅತ್ಯುತ್ತಮ ಮಾರ್ಗ ಬೇಸಿಗೆ ಶಿಬಿರಗಳು. ರಂಗಭೂಮಿಯನ್ನು ವಿವಿಧ ಆಯಾಮಗಳಲ್ಲಿ ತೆರೆದಿಡುವ ರಂಗ ತರಬೇತಿ ಶಿಬಿರಗಳು ಮಕ್ಕಳಿಗೆ ಹೊಸ ಪ್ರಪಂಚವನ್ನು ಪರಿಚಯಿಸುತ್ತವೆ. ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಬ್ಯುಸಿಯಾಗಿರುವ ಜೆ.ಪಿ.ನಗರದ ‘ಕಥಾ ಕಾರ್ನರ್‌’ನ ಸ್ನೇಹಾ ಕಪ್ಪಣ್ಣ ನಡೆಸುವ ರಂಗ ಶಿಬಿರದಲ್ಲಿ ಮಕ್ಕಳೇ ಸರದಾರರು! ಮಕ್ಕಳೊಳಗೆ ಸುಪ್ತವಾಗಿರುವ ಕಲಾನೈಪುಣ್ಯವನ್ನು ಹೊರಗೆಳೆಯಲು ರಂಗ ಚಟುವಟಿಕೆಯಷ್ಟು ಪರಿಣಾಮಕಾರಿ ವೇದಿಕೆ ಇನ್ನೊಂದಿಲ್ಲ ಎಂದು ಅವರು ಹೇಳುತ್ತಾರೆ.

ಮಕ್ಕಳನ್ನು ಯಾವ ವಯಸ್ಸಿನಲ್ಲಿ ರಂಗ ತರಬೇತಿಗೆ ಸೇರಿಸಬಹುದು?
ಐದು ವರ್ಷದೊಳಗೆ ಮಕ್ಕಳು ಏಳರಿಂದ ಎಂಟು ಭಾಷೆಗಳನ್ನು ಕಲಿಯಲು, ಗ್ರಹಿಸಲು ಶಕ್ತರಿರುತ್ತಾರೆ. ಹಾಗಾಗಿ ಮಕ್ಕಳಿಗೆ ಎಳೆವೆಯಿಂದಲೇ ರಂಗ ಚಟುವಟಿಕೆಗಳಿಗೆ ಸೇರಿಸಬಹುದು. ನಾವು ನಡೆಸುವ ಶಿಬಿರಗಳಲ್ಲಿ ನಾಲ್ಕರಿಂದ 14 ವರ್ಷದೊಳಗಿನ ಮಕ್ಕಳು ಇರುತ್ತಾರೆ. ಎಲ್ಲಾ ವಯಸ್ಸಿನವರು ಎಲ್ಲಾ ಚಟುವಟಿಕೆಗಳಲ್ಲಿಯೂ ಉಮೇದಿನಿಂದ ಪಾಲ್ಗೊಳ್ಳುತ್ತಾರೆ. ಇದು, ಮಕ್ಕಳಲ್ಲಿ ಸುಪ್ತವಾಗಿರುವ ಕಲಾನೈಪುಣ್ಯವನ್ನು ಬಿಂಬಿಸುತ್ತದೆ. ಅವರ ಮಿದುಳು ಎಷ್ಟು ಚುರುಕು ಮತ್ತು ಕ್ರಿಯಾಶೀಲವಾಗಿರುತ್ತದೋ ಅಷ್ಟು ಬೇಗ ಬೆಳೆಯುತ್ತಾರೆ.

ರಂಗ ತರಬೇತಿಗಳು ಮಕ್ಕಳ ವ್ಯಕ್ತಿತ್ವಕ್ಕೆ ಸಾಣೆ ಕೊಡುತ್ತವೆ ಅಂತಾರೆ. ಇದೆಷ್ಟು ನಿಜ?
ಇದು ವಾಸ್ತವ. ಮಕ್ಕಳ ವ್ಯಕ್ತಿತ್ವಕ್ಕೆ ಉತ್ತಮ ಅಡಿಪಾಯ ಹಾಕಲು ರಂಗ ತರಬೇತಿ ಅತ್ಯುತ್ತಮ ಆಯ್ಕೆ. ಮಕ್ಕಳನ್ನು ರಂಗ ತರಬೇತಿಗೆ ಸೇರಿಸಬೇಕಾದರೆ ಅವರು ನಾಟಕ, ಹಾಡು, ನೃತ್ಯ ಮತ್ತು ಮಾತಿನಲ್ಲಿ ಚುರುಕಾಗಿರಬೇಕು ಎಂಬ ಸಾಮಾನ್ಯ ಅಭಿಪ್ರಾಯ ಪೋಷಕರಲ್ಲಿದೆ. ಆದರೆ ಈ ಹಿಂಜರಿಕೆ ಮಕ್ಕಳ ಆಸಕ್ತಿಯನ್ನು ಗಮನಿಸದಂತೆ ಮಾಡಿಬಿಡುವ ಅಪಾಯವಿದೆ. ನಾಟಕವನ್ನು ಒಂದು ಪ್ರದರ್ಶನವಾಗಿ ನೋಡುವಾಗ ಮಾತ್ರ ಇವೆಲ್ಲಾ ಮುಖ್ಯವೆನಿಸುವುದು ಸಹಜ. ವಾಸ್ತವವಾಗಿ, ಇತರರೊಂದಿಗೆ ಬೆರೆಯಲು, ಮಾತನಾಡಲು, ಅನಿಸಿದ್ದನ್ನು ಹೇಳಿಕೊಳ್ಳಲು ಹಿಂಜರಿಯುವ ನಾಚಿಕೆ ಸ್ವಭಾವದ, ನಿರರ್ಗಳವಾಗಿ ಮಾತನಾಡದ ಮತ್ತು ಕೀಳರಿಮೆ ಇರುವ ಮಕ್ಕಳನ್ನು ಅಗತ್ಯವಾಗಿ ಉತ್ತಮ ರಂಗ ತರಬೇತಿ ಶಿಬಿರಕ್ಕೆ ಸೇರಿಸಲೇಬೇಕು. ಮಕ್ಕಳ ಸ್ವಭಾವ, ವರ್ತನೆ ಮತ್ತು ವ್ಯಕ್ತಿತ್ವದಲ್ಲಿ ಗಮನಾರ್ಹ ಶಿಸ್ತನ್ನು ತರುವ ಸಾಮರ್ಥ್ಯ ರಂಗ ಚಟುವಟಿಕೆಗಳಿಗೆ ಇದೆ. ಇದು ಮನಃಶಾಸ್ತ್ರೀಯ ವಿಶ್ಲೇಷಣೆಯೂ ಹೌದು.

ADVERTISEMENT

ರಂಗ ತರಬೇತಿಗಳೂ ಇಂಗ್ಲಿಷ್‌ಗೇ ಹೆಚ್ಚು ಆದ್ಯತೆ ಕೊಡುತ್ತಿವೆಯಲ್ಲ?
ಕನ್ನಡೇತರರು ಬೆಂಗಳೂರಿನಲ್ಲಿ ಹೆಚ್ಚು ಇರುವ ಕಾರಣ ಇಂಗ್ಲಿಷ್‌ನಲ್ಲಿ ರಂಗ ಶಿಬಿರಗಳು ಹೆಚ್ಚಾಗಿ ನಡೆಯುತ್ತಿರುವುದು ನಿಜ. ಆದರೆ ಕನ್ನಡದಲ್ಲಿಯೇ ರಂಗ ತರಬೇತಿ ನಡೆಸುವ ಸಂಘ–ಸಂಸ್ಥೆಗಳೂ, ಹವ್ಯಾಸಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕಾರ್ಪೊರೇಟ್‌ ಸಂಸ್ಕೃತಿ ರಂಗಭೂಮಿ ಮೇಲೆಯೂ ಪ್ರಭಾವ ಬೀರಿದೆ. ನಮ್ಮ ‘ಕಥಾ ಕಾರ್ನರ್‌’ ಮೂಲಕವೂ ಇಂಗ್ಲಿಷ್‌ ನಾಟಕ ಶಿಬಿರ ನಡೆಸುತ್ತೇವೆ.

‘ಕಥಾ ಕಾರ್ನರ್‌’ ನಡೆಸುವ ರಂಗ ಶಿಬಿರದಲ್ಲಿ ಮಕ್ಕಳೇ ಸರದಾರರು. ಈ ಪರಿಕಲ್ಪನೆ ಬಗ್ಗೆ ಹೇಳಿ...
‘ಕಥಾ ಕಾರ್ನರ್‌’ ನಡೆಸುವ ಮಕ್ಕಳ ಬೇಸಿಗೆ ರಂಗ ಶಿಬಿರಕ್ಕೆ ವರ್ಷಕ್ಕೊಂದು ಥೀಮ್‌ ಇಟ್ಟುಕೊಳ್ಳುತ್ತೇವೆ. ಕಳೆದ ಬಾರಿ ರಷ್ಯನ್‌ ಕತೆಗಳನ್ನು ಆರಿಸಿಕೊಂಡಿದ್ದೆವು. ಒಂದಷ್ಟು ಕತೆಗಳನ್ನು ಕೊಟ್ಟು ಓದಲು, ಅರ್ಥ ಮಾಡಿಕೊಳ್ಳಲು ಬಿಡುತ್ತೇವೆ. ಈ ಅವಧಿಯಲ್ಲಿ ಪ್ರತಿ ಮಕ್ಕಳ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಮುಂದಿನದು ಪ್ರಾಯೋಗಿಕ ಹಂತ. ತಾವು ಓದಿ ಅರ್ಥೈಸಿಕೊಂಡ ಕತೆಗೆ ನಾಟಕದ ರೂಪ ನೀಡುವುದು, ನಿರ್ದೇಶನ, ಪಾತ್ರವನ್ನು ರೂಪಿಸಲು ಬೇಕಾದ ಪರಿಕರಗಳನ್ನು ವಿನ್ಯಾಸ ಮಾಡುವುದು, ಬೆಳಕು‌ ಮುಂತಾದ ರಂಗಸಜ್ಜಿಕೆಗೆ ಈ ಹಂತ ಮೀಸಲು. ನಾಟಕವನ್ನು ಅಭಿನಯಿಸಿ ತೋರಿಸುವ ಹೊತ್ತಿಗೆ ಒಬ್ಬೊಬ್ಬರೂ ತಮ್ಮ ಆಸಕ್ತಿಯ ವಿಭಾಗದಲ್ಲಿ ಪಳಗಿರುತ್ತಾರೆ. ಕಳೆದ ವರ್ಷದ ಶಿಬಿರದಲ್ಲಿ ಮಕ್ಕಳು ತೊಡಗಿಸಿಕೊಂಡ ರೀತಿ ಅಮೋಘವಾಗಿತ್ತು. ಮೊದಲ ದಿನ ಯಾವ ಮಕ್ಕಳ ವರ್ತನೆ ಮತ್ತು ಸ್ವಭಾವದಲ್ಲಿ ದೋಷ ಅಥವಾ ಕೊರತೆ ಕಂಡುಬಂದಿತ್ತೋ ಅಂತಹ ಮಕ್ಕಳೇ ಮುಂಚೂಣಿಯಲ್ಲಿ ನಿಂತಿದ್ದರು! ಈ ಬಾರಿಯ ಶಿಬಿರ ಮೇ 9ರಿಂದ 19ರವರೆಗೆ ನಡೆಯಲಿದೆ.
(ಸ್ನೇಹಾ ಕಪ್ಪಣ್ಣ: 94482 74290)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.