ADVERTISEMENT

ಮತದಾನ ಜಾಗೃತಿಗೊಂದು ಚುನಾವಣಾ ಗೀತೆ

ಪೀರ್‌ ಪಾಶ, ಬೆಂಗಳೂರು
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಮತದಾನ ಜಾಗೃತಿಗೊಂದು ಚುನಾವಣಾ ಗೀತೆ
ಮತದಾನ ಜಾಗೃತಿಗೊಂದು ಚುನಾವಣಾ ಗೀತೆ   

ಈಗ ಚುನಾವಣೆ ಕಾಲ. ರಾಜಕೀಯ ಪಕ್ಷಗಳು ಮತಬೇಟೆಗೆಂದು ಆಮಿಷ ಮತ್ತು ಪ್ರಣಾಳಿಕೆಯ ಬಲೆಗಳನ್ನು ಹೆಣೆಯುತ್ತಿವೆ. ಇತ್ತ ಚುನಾವಣಾ ಆಯೋಗ ಸುಸೂತ್ರವಾಗಿ ಚುನಾವಣೆ ನಡೆಸಲು ಭರದಿಂದ ತಯಾರಿ ನಡೆಸಿದೆ. ಮತಗಟ್ಟೆಗಳಿಗೆ ಹೆಚ್ಚು ಮತದಾರರನ್ನು ಸೆಳೆದು ಮತದಾನದ ಪ್ರಮಾಣ ಹೆಚ್ಚಿಸಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಿದೆ. ಅದರಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಯೂ ಒಂದು.

ಆಯೋಗವು ಸಂದೇಶಾತ್ಮಕ ವಿಡಿಯೊಗಳನ್ನು ಹರಿಬಿಡುತ್ತಿದೆ. ಇದಕ್ಕೆಂದು ರಾಜ್ಯ ಚುನಾವಣಾ ಅಧಿಕಾರಿ ಕಚೇರಿ ಕರ್ನಾಟಕ ಎಂಬ ಯೂಟ್ಯೂಬ್‌ ಚಾನಲ್‌ ಕೂಡ ಆರಂಭಿಸಿದೆ. ಇದರಲ್ಲಿ ಇತ್ತೀಚೆಗೆ ಬಿತ್ತರಿಸಿದ, ‘ಮಾಡಿ, ಮಾಡಿ ಮತದಾನ, ಇರಲಿ ದೇಶದ ಮೇಲೆ ಅಭಿಮಾನ’ ಎಂಬ ಚುನಾವಣಾ ಗೀತೆ (KARNATAKA ELECTION ANTHEM) ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಭಿನ್ನ ನೋಟಗಳು, ವೈವಿಧ್ಯಮಯ ಜನಸಮುದಾಯದ ಚಹರೆಗಳು, ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಈ ವಿಡಿಯೊದಲ್ಲಿದೆ. ಯೋಗರಾಜ್‌ಭಟ್ ನಿರ್ದೇಶನಕದಲ್ಲಿ ಮೂಡಿಬಂದಿರುವ ವಿಡಿಯೊಗೆ ಹರಿಕೃಷ್ಣ ಸಂಗೀತ ಮತ್ತು ಇಮ್ರಾನ್ ಸರ್ದಾರಿಯಾ ನೃತ್ ಸಂಯೋಜನೆ ಇದೆ. ಈ ವಿಡಿಯೊ ಅಗತ್ಯ ಮಾಹಿತಿಯೊಂದಿಗೆ ಮನವನ್ನು ರಂಜಿಸುತ್ತದೆ.

ADVERTISEMENT

ಚುನಾವಣೆಯಲ್ಲಿ ನೈತಿಕತೆ, ಮತದಾನದ ಮಹತ್ವ, ಮತ ಚಲಾವಣೆಯಿಂದ ದೂರಾದರೆ ಆಗುವ ನಷ್ಟವನ್ನು ವಿವರಿಸುವ ಗೀತೆಯ ಸಾಲುಗಳು ವೋಟು ಹಾಕುವಂತೆ ಪ್ರೇರೇಪಿಸುತ್ತವೆ. ಮತದ ಮಹತ್ವ ಸಾರುವ ಈ ನಾಲ್ಕೂವರೆ ನಿಮಿಷದ ವಿಡಿಯೊ ತಯಾರಾಗಲು ಆದಿವಾಸಿಗಳು, ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. ಇದರ ಸಾಹಿತ್ಯ ಗ್ರಾಂಥಿಕವೆನಿಸಿದರೂ, ಸಂಗೀತದ ಲಯ ಮನಸೆಳೆಯುತ್ತದೆ.

ವಿವಿಪ್ಯಾಟ್‌ಗಳು ಕಾರ್ಯನಿರ್ವಹಿಸುವ ಬಗೆ, ಮಹಿಳೆಯರು ಮತ್ತು ಅಂಗವಿಕಲರು ಮತದಾನದಲ್ಲಿ ಭಾಗಹಿಸುವಂತೆ ಉತ್ತೇಜಿಸುವ ಸಲಹೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯ ರಾಯಭಾರಿ ರಾಹುಲ್‌ ದ್ರಾವಿಡ್‌ ಮತದಾನದ ಮಹತ್ವ ತಿಳಿಸುವ ವಿಡಿಯೊಗಳು ಈ ಚಾನೆಲ್‌ನಲ್ಲಿವೆ. ವಿಡಿಯೊಗಳನ್ನು ನೋಡಿ, ಇಷ್ಟವಾದರೆ, ನೀವೂ ಹಂಚಿಕೊಂಡು ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.