ADVERTISEMENT

ಮನೆಯಂಗಳದಲ್ಲಿ ತೊರವಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಶನಿವಾರ `ಮನೆಯಂಗಳದಲ್ಲಿ ಮಾತುಕತೆ~ಯಲ್ಲಿ ತಿಂಗಳ ಅತಿಥಿ ಹಿಂದುಸ್ತಾನಿ ಗಾಯಕ ಪಂಡಿತ್ ವಿನಾಯಕ ತೊರವಿ.

ಕರ್ನಾಟಕ ಸಂಗೀತದ ಪ್ರಭಾವವೇ ಹೆಚ್ಚಿದ್ದ ಬೆಂಗಳೂರಿನಲ್ಲಿ ಹಿಂದುಸ್ತಾನಿ ಸಂಗೀತವನ್ನು ಜನಪ್ರಿಯಗೊಳಿಸಿದ ಗಾಯಕರ ಪರಂಪರೆಯಲ್ಲಿ ವಿನಾಯಕ ತೊರವಿ ಪ್ರಮುಖ ಹೆಸರು.

ಉತ್ತರ ಕರ್ನಾಟಕದ ಸಂಗೀತ ಮನೆತನದಲ್ಲಿ ಜನಿಸಿದ (1948, ಸೆ. 4) ತೊರವಿಯವರಿಗೆ ಬಾಲ್ಯದಲ್ಲಿ ಸ್ಫೂರ್ತಿ ದೊರೆತಿದ್ದು ಸ್ವತಃ ಕೀರ್ತನಕಾರರಾಗಿದ್ದ ತಂದೆಯಿಂದ. ಒಂಬತ್ತನೆ ವಯಸ್ಸಿನಲ್ಲಿಯೇ ಸಂಗೀತದತ್ತ ಆಕರ್ಷಿತರಾದರು. ಗುರುರಾವ್ ದೇಶಪಾಂಡೆಯವರಿಂದ ಸಂಗೀತವನ್ನು ಕಲಿತದ್ದು ಮಾತ್ರವಲ್ಲದೆ, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದರು.

1951ರಲ್ಲಿ ಸಂಗೀತ ಕಛೇರಿ ನೀಡಲಾರಂಭಿಸಿದ ತೊರವಿ ಮುಂಬೈ, ಕೋಲ್ಕತ್ತ, ನವದೆಹಲಿ ಸೇರಿದಂತೆ ವಿವಿಧೆಡೆ ಪ್ರಮುಖ ಸಮಾರಂಭಗಳಲ್ಲಿ ಹಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಾರ್ಕ್ ಸಮ್ಮೇಳನ, ಅಖಿಲ ಭಾರತ ಸಂಗೀತ ಮಹೋತ್ಸವಗಳಲ್ಲಿ ಗಾನ ಸುಧೆ ಹರಿಸಿದ ಭಾಗವಹಿಸಿದ ಹಿರಿಮೆ ಅವರದು.

ಪಂಡಿತ್ ಭೀಮಸೇನ್ ಜೋಶಿಯವರೊಂದಿಗೆ ಹಾಡಿರುವ ತೊರವಿ, ಕರ್ನಾಟಕ ಸಂಗೀತ ದಿಗ್ಗಜರಾದ ಆರ್.ಕೆ.ಶ್ರೀಕಂಠನ್, ಟಿ.ಎನ್. ಶೇಷಗೋಪಾಲನ್, ಎಸ್.ಶಂಕರ್ ಅವರೊಂದಿಗೆ ಜುಗಲ್ ಬಂದಿ  ನಡೆಸಿಕೊಟ್ಟಿದ್ದಾರೆ.

ಹಿಂದುಸ್ತಾನಿ ಸಂಗೀತದ ವಿರಳ ರಾಗಗಳಾದ ರಾಮ್ಕಲಿ, ಭಟಿಯಾರ್, ಜೋನ್‌ಪುರಿ, ಕೇದಾರ, ಮಿಯಾ ಮಲ್ಹಾರ್ ಮುಂತಾದವುಗಳಲ್ಲಿ 14 ಧ್ವನಿಮುದ್ರಿಕೆ ಹೊರತಂದಿದ್ದಾರೆ.

ಮುಂಬೈನ ಸುರ್ ಸಿಂಗಾರ್ ಸಂಸದ್‌ನ `ಸುರಮಣಿ ಪ್ರಶಸ್ತಿ~, ಮ್ಯೂಸಿಕ್ ಫೋರಂನ `ಕಿರಣ-ಗರಾಣ~ ಪ್ರಶಸ್ತಿ, ಚೌಡಯ್ಯ ಸ್ಮಾರಕ ಪ್ರಶಸ್ತಿ ಒಳಗೊಂಡಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸ್ಥಳ: ಕನ್ನಡ ಭವನ, ಜೆ ಸಿ ರಸ್ತೆ. ಸಂಜೆ 4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.