ADVERTISEMENT

ಮಹಾಶಿವರಾತ್ರಿ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಶ್ರೀರಾಮ ಕಲಾ ವೇದಿಕೆಯು ಮಹಾ ಶಿವರಾತ್ರಿ ಪ್ರಯುಕ್ತ ಇತ್ತೀಚೆಗಷ್ಟೆ ಭಾರತೀಯ ವಿದ್ಯಾ ಭವನದಲ್ಲಿ`ಸಂಗೀತ ಸುಧೆ~ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮದಲ್ಲಿ ಈ ಬಾರಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪಂ. ವೆಂಕಟೇಶ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿದುಷಿ ಆರ್. ಸುಮಾ ಸುಧೀಂಧ್ರ, ಪಂ.ನಯನ್ ಘೋಷ್, ಪಂ.ರವೀಂದ್ರ ಯಾವಗಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಂಡಿತ್ ನಯನ್ ಘೋಷ್ ಅವರ ತಬಲಾ ಸಂಗೀತದೊಂದಿಗೆ ಕಾರ್ಯಕ್ರಮ ಆರಂಭಗೊಂಡು 11 ವರ್ಷದ ಮಗ ಇಶಾನ್ ಘೋಷ್ ಕೂಡ ತಂದೆಗೆ ಸರಿಸಾಟಿಯಾಗಿ ತಬಲಾ ಸಾಥ್ ನೀಡಿದ್ದು ಪ್ರೇಕ್ಷಕರನ್ನು ಬೆರಗುಗೊಳಿಸಿತು.

ಉಸ್ತಾದ್ ಅಹಮದ್ ಜಾನ್ ತಿರಖ್ವಾಹ್, ಉಸ್ತಾದ್ ಆಮಿರ್‌ಹುಸೇನ್ ಖಾನ್ ಮುಂತಾದವರ ಗತ್, ಚಕ್ರಧಾರ್‌ಗಳನ್ನು ಅನನ್ಯ ರೀತಿಯಲ್ಲಿ ಎಲ್ಲರ ಮನಮುಟ್ಟುವಂತೆ ಪ್ರಸ್ತುತಪಡಿಸಲಾಯಿತು.

ಸತೀಶ್ ಕೊಳ್ಳಿ ಹಾರ್ಮೋನಿಯಂನಲ್ಲಿ ಲೆಹರಾ ಸಾಥ್ ಮಾಡಿ ಎಲ್ಲರ ಮನಗೆದ್ದರು. ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಪಂ.ವೆಂಕಟೇಶ್‌ಕುಮಾರ್ ಅವರು ತಮ್ಮ ಯಶಸ್ಸಿಗೆ ಗುರು ಪದ್ಮವಿಭೂಷಣ ಡಾ. ಪುಟ್ಟರಾಜ ಗವಾಯಿಗಳ ಕೃಪೆಯೇ ಕಾರಣ ಎಂದು ಸ್ಮರಿಸಿಕೊಂಡರು. ಅಲ್ಹೈಯ್ಯಾ ಬಿಲಾವಲ್, ಬೃಂದಾವನಿ ಸಾರಂಗ್ ಮತ್ತು ಭೈರವಿಯಲ್ಲಿ ಠುಮ್ರಿ, ವಚನ ಹಾಗೂ ದಾಸರಪದಗಳನ್ನು ಹಾಡಿ ಸಂಗೀತ ಅಭಿಮಾನಿಗಳನ್ನು ಸಂತೃಪ್ತಗೊಳಿಸಿದರು. ತಬಲಾದಲ್ಲಿ ಕೇಶವ್ ಜೋಶಿ ಹಾಗೂ ಹಾರ್ಮೋನಿಯಂನಲ್ಲಿ ಡಾ. ಪಂಚಾಕ್ಷರಿ ಹಿರೇಮಠ ಸಮರ್ಥ ಸಾಥ್ ನೀಡಿದರು. ಈ ಕಾರ್ಯಕ್ರಮದಿಂದಾಗಿ ಅಪೂರ್ವವಾದ ಸಂಗೀತ ಸಾಗರದಲ್ಲಿ ಮಿಂದೆದ್ದ ಅನುಭವ ಕೇಳುಗರದಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.