ಮಾತು...ಮಾತು...ಮಾತು... ಲಲನೆಯರ ಕ್ಯಾಟ್‌ವಾಕ್‌ನ ಟಕ್ ಟಕ್ ಸದ್ದು ಮಾರ್ದನಿಸಬೇಕಿದ್ದ ಆ ರೆಡ್‌ಕಾರ್ಪೆಟ್ ಕಿವಿಯಾಗಿದ್ದು ಮಾತಿಗೆ. ಸುಮಾರು ಮೂರು ಗಂಟೆ ಹೊತ್ತು ವೇದಿಕೆ ಸುತ್ತಲಿನಿಂದ ವೀಕ್ಷಕರನ್ನು ಕದಲದಂತೆ ತಡೆಹಿಡಿದಿದ್ದು ಅವೇ ಮಾತುಗಳು. `ಇಷ್ಟೊಂದು ಮಾತಾಡುತ್ತಾರಾ~ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಮತ್ತದೇ ರೇಡಿಯೊ ಜಾಕಿಗಳು.
ಈ ಕಾರ್ಯಕ್ರಮ ನಡೆದಿದ್ದು ವೈಟ್‌ಫೀಲ್ಡ್‌ನ ಫೋನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ. ಅದು ಎಫ್‌ಬಿಬಿ (ಫ್ಯಾಶನ್ ಎಟ್ ಬಿಗ್ ಬಜಾರ್) ಆಯೋಜಿಸಿದ್ದ `ಆರ್‌ಜೆ ಸ್ಟೈಲ್-ಒ-ಮೀಟರ್; ಮೋಸ್ಟ್ ಸ್ಟೈಲಿಶ್ ಆಫ್ ದಿ ಸಿಟಿ~ ಪ್ರತಿಭಾನ್ವೇಷಣೆ. ಮೂರು ಗಂಟೆಹೊತ್ತು ನಾಲ್ಕು ಖಾಸಗಿ ಎಫ್‌ಎಂ ಚಾನೆಲ್‌ಗಳ 8 ಮಂದಿ ನಿರೂಪಕರು ಮಾತನಾಡಿದರು, ನಕ್ಕರು, ನಗಿಸಿದರು, ತಾರೆಗಳ ಅನುಕರಿಸಿ ಹೆಜ್ಜೆಹಾಕಿದರು. ರ‌್ಯಾಂಪ್‌ವಾಕ್ ಮಾಡುವಾಗಲೂ ಸುಮ್ಮನಿರದೆ ಹಾಸ್ಯದ ಚಟಾಕಿ ಸಿಡಿಸಿ ತಾವು ಮಾತಿನ ಪಟಾಕಿಗಳೆಂಬುದನ್ನು ಮತ್ತೆ ರುಜುವಾತುಪಡಿಸಿದರು.
ಈವರೆಗೆ ದನಿ ಮಾತ್ರ ಕೇಳಿ ಅಭಿಮಾನಿಗಳಾಗಿರುವ ವೀಕ್ಷಕರು ಆ ಮುಖವನ್ನೂ ನೋಡುವಂತಾಗಲಿ, ಅವರಿಬ್ಬರ ಭಾವನಾತ್ಮಕ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹತ್ತು ದಿನಗಳಿಂದ ಫೇಸ್‌ಬುಕ್‌ನಲ್ಲಿ ನಿಮ್ಮಿಷ್ಟದ ಆರ್‌ಜೆ ಆಯ್ಕೆಗಾಗಿ ವೋಟ್ ಮಾಡುವ ಅವಕಾಶ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ನಟಿ ಯಜ್ಞಾ ಶೆಟ್ಟಿ, ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಶಿಕ್ಷಕಿಯರಾದ ರೀಟಾ, ಪೂಜಾ ಹಾಗೂ ಆಯಿ ಚಿತ್ರತಂಡದ ನಾಯಕಿ ಸುಷ್ಮಾ ಹಾಗೂ ನಿರ್ದೇಶಕ ವರ್ಧನ್ ಹರೀಶ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಮೂರು ವಿಭಾಗಗಳಲ್ಲಿ ಆರ್‌ಜೆಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕಪ್ಪು ಬಿಳುಪು ರೌಂಡ್‌ನಲ್ಲಿ ಅನುಭವಿ ರೂಪದರ್ಶಿಯರಿಗೆ ಕಡಿಮೆ ಇಲ್ಲ ಎಂಬಂತೆ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಎರಡನೇ ರೌಂಡ್‌ನಲ್ಲಿ ಮುಖಕ್ಕೆ ಮುಖವಾಡ ಧರಿಸಿ ಬಂದು ಕೇವಲ ದನಿಯಿಂದ ಪರಿಚಯಿಸಿಕೊಳ್ಳಬೇಕಿತ್ತು. ಅವರದೇ ಆದ ಭಿನ್ನ ಶೈಲಿಯಲ್ಲಿ `ಹಲೋ ಹಾಯ್, ನಾನು ನಿಮ್ಮ...~ ಎನ್ನುತ್ತಲೇ ಪ್ರೇಕ್ಷಕರು ಅವರನ್ನು ಗುರುತಿಸಿ, ಶಿಳ್ಳೆಗಳ ಸ್ವಾಗತ ನೀಡುತ್ತಿದ್ದರು.
`ನಾನು ರಾಜ್‌ಕುಮಾರ್ ಅಲ್ಲ, ಶಂಕರ್‌ನಾಗ್ ಅಲ್ಲ, ಶಿವರಾಜ್, ಪುನೀತ್ ಅಲ್ವೇ ಅಲ್ಲ... ಹಾಗೇಂತ ಮಾತಿಗೆ ಸಿಕ್ಕರೆ ಬಿಡೋನೂ ಅಲ್ಲ, ಇನ್ನೂ ಡೌಟ್ ಯಾಕೇ, ನಾನೇ ನಿಮ್ಮ ಪ್ರದೀಪ...~ ಎನ್ನುತ್ತಲೇ ವೇದಿಕೆಯೇರಿದರು. ಪ್ರೇಕ್ಷಕರು ಬೇಡಿಕೆ ಸಲ್ಲಿಸಿದಂತೆ ಶಂಕರ್‌ನಾಗ್, ಅಂಬರೀಷ್, ಪ್ರಭಾಕರ್, ಪುನೀತ್, ಉಪೇಂದ್ರ, ಜಗ್ಗೇಶ್ ಅವರನ್ನು ಅನುಕರಿಸಿ (ಮಿಮಿಕ್ರಿ) ಚಪ್ಪಾಳೆ ಗಿಟ್ಟಿಸಿಕೊಂಡರು. ಬಳಿಕ ಬಂದ ಬಿಗ್‌ಎಫ್‌ಎಂ ನಿರೂಪಕಿ ರಶ್ಮಿ 16 ವರ್ಷಗಳಿಂದ ಸಂಗೀತ ಕಲಿಯುತ್ತಿದ್ದೇನೆ, ನಿಮಗಾಗಿ ಈ ಹಾಡು ಎನ್ನುತ್ತಾ ಮುಂಗಾರು ಮಳೆಯ `ಅನಿಸುತಿದೆ ಯಾಕೋ ಇಂದು...~ ಹಾಡಿದರು. ಚರಣ ಮುಗಿದು ಪಲ್ಲವಿ ಆರಂಭಿಸುತ್ತಿದ್ದಂತೆ ಮೈಕ್ ಕೈಕೊಟ್ಟಿತು. `ನಿಮ್ಮ ಮಾತು-ಹಾಡಿಗೆ ಹೆದರಿ ಮೈಕ್ ಸುಮ್ಮನಾಯಿತು~ ಎಂಬ ಕಾಮೆಂಟ್ ಪ್ರೇಕ್ಷಕರಿಂದ ಕೇಳಿಬಂತು.
ಬಿಗ್‌ಎಫ್‌ಎಂನ ರೋಹಿತ್ ಪ್ರಾಣಿ ಪಕ್ಷಿಗಳನ್ನು ಅನುಕರಿಸಿ ಸಮಸ್ಯೆಗಳು ಯಾರಿಗೆ- ಹೇಗೆ- ಯಾಕೆ ಬರುತ್ತವೆ ಎಂಬ ಕುರಿತಾಗಿ ಹಾಸ್ಯ ಭಾಷಣ ಮಾಡಿ ನಗಿಸಿದರು. ಫೀವರ್ ಎಫ್‌ಎಂನ ಪುನೀತಾ ಕನ್ನಡ-ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕಿದರು. ರೆಡ್‌ಎಫ್‌ಎಂನ ಅಂಕಿತಾ ಮುಂಜಾನೆಗೆ `ಕೃಷ್ಣಾ ನೀ ಬೇಗನೇ ಬಾರೋ~ ಹಾಡಿಗೆ ಮಾಧುರ‌್ಯ ತುಂಬಿದರೆ, ಮಧ್ಯಾಹ್ನದ ರೊಮ್ಯಾಂಟಿಕ್ ಮೂಡ್‌ಗೆ `ಗಗನವೇ ಬಾಗಿ ಭುಮಿಯನು...~ ಹಾಗೂ ರಾತ್ರಿಯ ಸವಿಕನಸಿಗೆ `ಯೇ ಮೇರಾ ದಿಲ್... ಪ್ಯಾರ್‌ಕಾ ದಿವಾನಾ~ ಹಾಡುಗಳನ್ನು ಅರ್ಪಿಸಿದರು.
ನಿಖಿಲ್ ಮೇರಾ ನಾಮ್, ಕಿರಿಕ್ ಮೇರಾ ಕಾಮ್ ಎನ್ನುತ್ತಾ ಬಿಂದಾಸ್ ಬಜಾಯಿಸಿದ ನಿಖಿಲ್ ಸ್ವಾಮಿ ನಟರಾದ ವೀರೇಂದ್ರ ಗೋಪಾಲ್, ಮುಖ್ಯಮಂತ್ರಿ ಚಂದ್ರು, ಕಲ್ಪನಾ ಮೊದಲಾದ ನಟನಟಿಯರ ದನಿ ಅನುಕರಿಸಿ ನೆರೆದವರ ಖುಷಿಪಡಿಸಿದರು. ಕನ್ನಡ ಬಾರದ ಫಿವರ್ ಎಫ್‌ಎಂನ ದಾನಿಷ್‌ಗೆ ಪ್ರದೀಪ ಕನ್ನಡ ಕಲಿಸಿದರು.
ಪ್ರಶಸ್ತಿ ವಿತರಿಸಿದ `ಎದ್ದೇಳು ಮಂಜುನಾಥ~ ಖ್ಯಾತಿಯ ಯಜ್ಞಾ ಶೆಟ್ಟಿ `ಅಬ್ಬಾ ಎಷ್ಟೂಂತ ಮಾತಾಡ್ತೀರಾ~ ಎಂದು ಅಚ್ಚರಿ ಪಡಿಸುವುದರೊಂದಿಗೆ ಮಾತು-ನಗು ಜುಗಲ್‌ಬಂದಿ ಕಾರ್ಯಕ್ರಮಕ್ಕೆ ತೆರೆಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.