ADVERTISEMENT

ಮಾನಿನಿಯರ ಮುಡಿ–ನುಡಿ...

ಅಭಿಲಾಷ ಬಿ.ಸಿ.
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಕ್ಯಾಮೆಲ್ಲಾ ಕೇಶವಿನ್ಯಾಸದಲ್ಲಿ ರೂಪದರ್ಶಿಯರು
ಕ್ಯಾಮೆಲ್ಲಾ ಕೇಶವಿನ್ಯಾಸದಲ್ಲಿ ರೂಪದರ್ಶಿಯರು   

ಸುರುಳಿ ಕೂದಲ ಚೆಲುವೆಗೆ ಮುಗಿಲು ನೋಡಿದರೂ ಹೆಗಲು ಮುಟ್ಟದಷ್ಟು ಉದ್ದದ ಕೂದಲು ಅದರಲ್ಲೂ ಅರಳಿದ ಬಗೆ ಬಗೆ ಚಿತ್ತಾರ.ಹೊನಲು ಹೊನಲಾಗಿ ಹರಡಿಕೊಂಡ ಕಪ್ಪು ಕೇಶರಾಶಿಯ ಕೆಂಪು ಸುಂದರಿಯ ಪ್ರತಿ ಕೂದಲಿಗೂ ಒಂದೊಂದು ರಂಗು. ನೀಳ ಕೇಶರಾಶಿಯ ಲಲನೆಗೆ ಮುಂಗುರುಳೇ ಶೃಂಗಾರ. ಮಂಡಿಯುದ್ದದ ಕೂದಲ ಬೆಡಗಿಯದ್ದು ಅತ್ತ ಗುಂಗುರು ಅಲ್ಲದ, ಇತ್ತ ನೀಳವೂ ಅಲ್ಲದ ಬೆಳ್ಳಿ ಬಣ್ಣದ ಹೆರಳು. ಎಲ್ಲೆಡೆ ಮೊಳಗುತ್ತಿದ್ದ ಇಂಗ್ಲಿಷ್‌ ಹಾಗೂ ಹಿಂದಿ ಸಂಗೀತದ ಲಯಕ್ಕೆ ಬದ್ಧವಾಗಿ ತಿಳಿ ಬಣ್ಣದ ಗೌನ್‌ಗಳನ್ನು ತೊಟ್ಟು ಮಂದಸ್ಮಿತರಾಗಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುವ ರೂಪದರ್ಶಿಯರಿಗೆ ಮತ್ತಷ್ಟು ಮೆರಗು ನೀಡಿದ್ದು ಕೇಶರಾಶಿಯ ವಿನ್ಯಾಸ.

ಬಾಡಿಕ್ರಾಫ್ಟ್‌ ಅಕಾಡೆಮಿ ಕೋರಮಂಗಲದಲ್ಲಿ ಆಯೋಜಿಸಿದ್ದ ‘ವಿಡಾಲ್‌ ಸಸೂನ್‌’ ಅಕಾಡೆಮಿ ಉದ್ಘಾಟನೆಯ ಸಮಾರಂಭದಲ್ಲಿ ‘ವಿಡಾಲ್ ಸಸೂನ್‌’ನ ಮುಖ್ಯಸ್ಥೆ ಕ್ಯಾಮೆಲ್ಲಾ ಹರೆಲ್‌ (CAMILLA HURRELL) ಅವರ ಕೇಶವಿನ್ಯಾಸದಲ್ಲಿ ಲಲನೆಯರು ಮಿಂಚಿದರು. ಒಬ್ಬಾಯೆಕದ್ದು ಕಡು ಕಪ್ಪು ಬಣ್ಣದ ಕೂದಲಿನಲ್ಲಿ ಗೀಜುಗನ ಗೂಡಿನಂತಹ ವಿನ್ಯಾಸ. ಮತ್ತೊಬ್ಬಾಕೆಯದು ತಲೆಮೇಲೆ ಚಿಟ್ಟೆ ಕುಳಿತಂತೆ ಶೃಂಗಾರ. ರಾಷ್ಟ್ರೀಯ, ಅಂತರರಾಷ್ಟ್ರೀಯ ಕೇಶವಿನ್ಯಾಸಗಳು ಸೌಂದರ್ಯ ಪ್ರಿಯರ ಕಣ್ಣು ಕುಕ್ಕುವಂತಿದ್ದವು.

ನಡಿಗೆಯಲ್ಲಿಯೇ ನೃತ್ಯದ ಲಯವಿದ್ದ ಲಲನೆಯರು, ಇಂಗ್ಲಿಷ್‌ ಹಾಗೂ ಹಿಂದಿ ಸಂಗೀತಕ್ಕೆ ಒಪ್ಪುವಂತೆ ಹೆಜ್ಜೆ ಹಾಕುತ್ತಿದ್ದರೆ ವೀಕ್ಷಕರ ಎದೆಬಡಿತ ಗತಿ ತಪ್ಪುತ್ತಿತ್ತು. ಕಡು ಕಪ್ಪು, ತುಸು ಬಿಳುಪು, ಕೆಂಪು, ಬೆಳ್ಳಿ, ಬಂಗಾರದ ಬಣ್ಣಗಳೆಲ್ಲವೂ ಹೆರಳಿನಲ್ಲಿಯೂ ರಾರಾಜಿಸುತ್ತಿದ್ದವು.

ADVERTISEMENT

‘ವಿಡಾಲ್‌ ಸಸೂನ್‌’ ವಿಶ್ವವಿಖ್ಯಾತ ಪಾರ್ಲರ್ ಆಗಿದ್ದು, ಬಾಡಿಕ್ರಾಫ್ಟ್‌ ಸಂಸ್ಥೆ ಇದೇ ಮೊದಲಬಾರಿಗೆ ಭಾರತಕ್ಕೆ ಪರಿಚಯಿಸುತ್ತಿದೆ. ವಿಡಾಲ್ ಸಸೂನ್‌ ಬ್ರಿಟಿಷ್‌ ಕೇಶವಿನ್ಯಾಸಕನಾಗಿದ್ದು, ‘ಬಾಬ್ ಕಟ್‌’ನ್ನು ಮೊದಲ ಬಾರಿಗೆ ಪರಿಚಯಿಸಿದ್ದ. ಈತ ನ್ಯೂಯಾರ್ಕ್‌ನಲ್ಲಿ 1965ರಲ್ಲಿ ಆರಂಭಿಸಿದ ಸಂಸ್ಥೆಯೇ ವಿಡಾಲ್‌ ಸಸೂನ್‌.  ಅಮೆರಿಕ, ಆಸ್ಟ್ರೇಲಿಯಾ, ಕೋರಿಯಾದಲ್ಲಿ ವಿಡಾಲ್‌ ಸಸೂನ್‌ ಶಾಖೆಗಳಿವೆ. ಸದ್ಯ ಬಾಡಿಕ್ರಾಫ್ಟ್‌ ಮೂಲಕ್‌ ಭಾರತಕ್ಕೂ ಪರಿಚಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.