ADVERTISEMENT

ಮುಂಗೋಪಿ ಅಂಜಲಿಯ ಐಎಎಸ್ ಕನಸು!

ಶಾಹಿನ್ ಎಸ್.ಮೊಕಾಶಿ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST
ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯ ಚಿನಕುರುಳಿ ಅಂಜಲಿ (ಸುಕೃತಾ ನಾಗ್)
ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯ ಚಿನಕುರುಳಿ ಅಂಜಲಿ (ಸುಕೃತಾ ನಾಗ್)   

ನಮಸ್ತೆ ಅಂಜಲಿ.. ಅಲ್ಲ ಅಲ್ಲ ಸುಕೃತಾ ನಾಗ್.. ಅಗ್ನಿಸಾಕ್ಷಿ ಅಂಜಲಿ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು. ಆದರೆ, ಪರದೆಯಾಚೆ ಇರುವ ಅಂಜಲಿನಾ ಪರಿಚಯ ಮಾಡಿಸ್ತೀರಾ?

ನಮಸ್ಕಾರ..ನಾನು ನಿಮ್ಮ ಅಂಜಲಿ. ನನ್ನ ನಿಜವಾದ ಹೆಸರು ಸುಕೃತಾ ನಾಗ್. ನನ್ನ ಅಪ್ಪ ಎಸ್.ನಾಗರಾಜ್. ಅಮ್ಮ ಭಾಗ್ಯಲಕ್ಷ್ಮೀ. ಅಕ್ಕ ಲಿಖಿತಾ. ಅಪ್ಪ ಮೂಲತಃ ಮಂಡ್ಯದವರು. ಆದರೆ, ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಸದ್ಯಕ್ಕೆ ವಿಟಿಯು ನಿಂದ ಕರೆಸ್ಪಾಂಡನ್ಸ್‌ನಲ್ಲಿ ಎಂಸಿಎ ಓದ್ತಿದೀನಿ. ಜೊತೆಗೆ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಅಂಜಲಿಯಾಗಿ ದಿನಾ ಟಿವಿ ಪರದೆ ಮೇಲೆ ಕಾಣಿಸಿಕೊಳ್ತೀನಿ.

ನಿಮ್ಮ ಚೂಟಿಯಾದ ಮಾತು, ಕೋಪ ಬಂದಾಗ ನೋಡಲೇ ಬೇಕಾದ ನಿಮ್ಮ ಮೂಗು, ನಿಮ್ಮ ನೇರವಾದ ಮಾತು ಇವೆಲ್ಲವೂ ಬರೀ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಷ್ಟೇನಾ? ಅಥವಾ ಅದರಾಚೆ ಅಂಜಲಿ ಮತ್ತೇ ಸುಕೃತಾ ಇಬ್ಬರೂ ಒಂದೇನಾ?

ADVERTISEMENT

ಹಾ..ಹಾ..ಅಗ್ನಿಸಾಕ್ಷಿಯ ಅಂಜಲಿಗೂ, ನಿಜ ಜೀವನದ ಸುಕೃತಾಗೂ ಒಂಚೂರೂ ವ್ಯತ್ಯಾಸವಿಲ್ಲ. ನನಗೆ ಅಂತ ಹೇಳಿ ಮಾಡಿಸಿದ ಪಾತ್ರ ಅಂತ ಅನಿಸುತ್ತೆ ಕೆಲವೊಮ್ಮೆ. ನಾನು ಧಾರಾವಾಹಿಯಲ್ಲಿ ಹೇಗಿದೀನೋ ಹಾಗೇ ರಿಯಲ್ ಲೈಫ್ ಅಲ್ಲಿ ಇರೋದು. ತುಂಬಾ ತರ್ಲೆ ಮತ್ತು ಬಬ್ಲೀ. ಮನೇಲೀ ಅಕ್ಕ ಇದಾಳೆ, ಅಲ್ಲಿ ಅಣ್ಣಂದಿರು ಇದಾರೆ ಅಷ್ಟೇ ವ್ಯತ್ಯಾಸ.

ಅಗ್ನಿಸಾಕ್ಷಿ ಕನ್ನಡದ ಜನರಿಗೆ ಅದೆಷ್ಟು ಇಷ್ಟ ಆಗಿದೆ ಅಂದ್ರೆ ಅದನ್ನು ನಂಬರ್ ಒನ್ ಧಾರಾವಾಹಿ ಮಾಡಿ ಬಿಟ್ಟಿದ್ದಾರೆ. ಅದರಲ್ಲಿ ನಿಮ್ಮ ಪಾತ್ರ ಕೂಡ ತುಂಬ ಮಹತ್ವದ್ದು. ಸೋ...ನಿಮ್ಮ ಪಾತ್ರದ ಬಗ್ಗೆ ಏನ್ ಹೇಳ್ತೀರಾ?

ಅಗ್ನಿಸಾಕ್ಷಿಯಲ್ಲಿ ನನಗೆ ಸದ್ಯಕ್ಕೆ ಇಬ್ಬರು ಅಣ್ಣಂದಿರು. ನಾನು ಅವರ ಮುದ್ದಿನ ತಂಗಿ, ಅಪ್ಪನ ಮುದ್ದಿನ ಮಗಳು. ಅತ್ತಿಗೆಗೆ ನಾನಂದ್ರೆ ಪ್ರಾಣ. ಅನಿಸಿದ್ದನ್ನು ನೇರವಾಗಿ ಮುಖಕ್ಕೆ ಹೊಡೆಯುವ ಹಾಗೆ ಹೇಳುವುದು ನನ್ನ ಗುಣ. ಪ್ರೀತಿಸೋರಿಗೆ ಜೀವ ಕೊಡ್ತೀನಿ. ದ್ವೇಷಿಸೋರನ್ನಾ ಮಾತಲ್ಲೇ ಸೋಲಿಸ್ತೀನಿ...ಸಾಯಿಸ್ತೀನಿ.

ಸುಕೃತಾ ನಾಗ್...ಕಿರುತೆರೆಗೆ ನಿಮ್ಮ ಆಗಮನದ ಹಿಂದಿನ ತಿರುಳು ಯಾವುದು?

ಆಕ್ಯ್ಚುಲಿ ನಾನು ಕಿರುತೆರೆಗೆ ಪ್ರವೇಶ ಪಡೆದಿದ್ದು ಬಾಲ ನಟಿಯಾಗಿ. ಒಂದನೇ ತರಗತಿಯಲ್ಲಿದ್ದೆ ಅನ್ಸತ್ತೆ ಅವಾಗಿಂದ ನಾನು ಕಿರುತೆರೆಯ ಮೇಲೆ ಯಾವುದಾದರೊಒದು ಪಾತ್ರದಲ್ಲಿ ಕಾಣಿಸಿಕೊಳ್ತಿದ್ದೆ. ಬೆಳಿತಾ ಬೆಳಿತಾ ಅಭ್ಯಾಸದ ಜೊತೆ ಅಭಿನಯವೂ ಬೆಳೆಯಿತು. ಇದರ ಹೊರತಾಗಿ ನಾನೊಬ್ಬ ಡಾನ್ಸರ್. ನಾನು ಡಾನ್ಸ್ ಕ್ಲಾಸ್‌ನಲ್ಲಿದ್ದಾಗ ಒಬ್ಬರು ಡೈರೆಕ್ಟರ್ ನನ್ನನ್ನು ನೋಡಿ ಆಡಿಷನ್‌ಗೆ ಕರೆದ್ರು. ಆಡಿಷನ್ ನಲ್ಲಿ ಸೆಲೆಕ್ಟ್ ಆದೆ. ಅಲ್ಲಿಂದ ಇಲ್ಲಿವರೆಗೆ ಸುಮಾರು 25 ಧಾರಾವಾಹಿಯಲ್ಲಿ ಅಭಿನಯಿಸಿದಿನಿ.

ನೀವು ಅಭಿನಯಿಸಿರುವ ಧಾರಾವಾಹಿಗಳ ಹೆಸರು..

ಸೋ..ನಾನು ಬಾಲನಟಿಯಾಗಿ ತುಂಬಾ ಪಾತ್ರಗಳನ್ನು ಮಾಡಿದ್ದೆ. ಆದರೆ ಜನರಿಗೆ ನಾನು ಪರಿಚಯ ಆಗಿದ್ದು ತುಂಬಾ ತಡವಾಗಿ. ಆಡಿಷನ್ ನಂತರ ನಾನು ಮಾಡಿದ ಮೊದಲ ಧಾರಾವಾಹಿ ಕಾದಂಬರಿ. ಅದಾದ ನಂತರ ಶಿವಲೀಲಾಮೃತ, ಉದಯ ಟಿವಿಯಲ್ಲಿ ಮಹಾಭಾರತ, ಸುವರ್ಣದಲ್ಲಿ ಸರಸ್ವತಿ, ಜೀ ಟಿವಿಯಲ್ಲಿ ಪುರುಷೋತ್ತಮ ಮಾಡಿದೆ. ಪುರುಷೋತ್ತಮ ಮಾಡುವಾಗ ನನಗೆ ಅಗ್ನಿಸಾಕ್ಷಿ ಆಫರ್ ಬಂತು. ಆಗ ನನ್ನನ್ನು ಹುರಿದುಂಬಿಸಿದವರು ಕೆ.ಪುರುಷನಾಥ್ ಸರ್ ಮತ್ತು ಶರಣ್ ಸರ್. ನಂತರ ಅಗ್ನಿಸಾಕ್ಷಿ ಆಡಿಷನ್ ನಲ್ಲಿ ಸೆಲೆಕ್ಟ್ ಆದೆ. ಆಗ ನಾನು ಬಿಸಿಎ ಮಾಡ್ತಿದ್ದೆ. ನಂತರ ಈ ಧಾರಾವಾಹಿ ನನ್ನ ಅದೃಷ್ಟದ ಬಾಗಿಲು ತೆರೆಯಿತು. ಇಡೀ ರಾಜ್ಯದ ಜನರಿಗೆ ಒಬ್ಬ ಚೂಟಿ ಅಂಜಲಿ ಸಿಕ್ಕಳು.

ನಿಮ್ಮ ಜೀವನದ ಗುರಿ..

ನನ್ನ ಜೀವನದ ಅಲ್ಟಿಮೇಟ್ ಗುರಿ ಐಎಎಸ್ ಅಧಿಕಾರಿ ಆಗಬೇಕೆನ್ನುವುದು. ಅದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧ. ಅಧಿಕಾರ ಸಿಕ್ಕರೆ ಅದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎನ್ನುವ ಪ್ಲಾನ್ ಕೂಡ ಮಾಡಿದೀನಿ. ಸಮಾಜ ನನ್ನನ್ನು ಒಬ್ಬ ಉತ್ತಮ ಅಧಿಕಾರಿಯಾಗಿಯೂ ನೋಡಬೇಕು ಎನ್ನುವುದು ನನ್ನ ಆಸೆ.

ಐಎಎಸ್ ಮಾಡೋ ಗುರಿ ಇಟ್ಟುಕೊಂಡಿರೋ ನೀವು ಟೈಮ್ ಮ್ಯಾನೇಜ್‌ಮೆಂಟ್ ಬಗ್ಗೆ ಏನ್ ಹೇಳ್ತೀರಾ?

ನನಗೆ ಮುಂಚೆಯಿಂದನೂ ಶೂಟಿಂಗ್ ಮತ್ತು ಸ್ಟಡೀಸ್ ನಾ ಜೊತೆ ಜೊತೆಯಾಗಿ ಹ್ಯಾಂಡಲ್ ಮಾಡಿ ಅಭ್ಯಾಸ. ಸುಮಾರು ಸಲ ದಿನಪೂರ್ತಿ ಶೂಟಿಂಗ್ ನಲ್ಲಿ ಬಿಜಿ ಇದ್ರೂ, ರಾತ್ರಿ ಇಡೀ ಓದಿ, ಮಾರನೇ ದಿನ ಪರೀಕ್ಷೆಗೆ ಹಾಜರಾಗಿದೀನಿ. ನನಗೆ ಓದೋದು ತುಂಬಾ ಇಷ್ಟ. ಶೂಟಿಂಗ್ ಟೈಮ್ ಅಲ್ಲಿ ಸ್ವಲ್ಪ ಬಿಡುವು ಸಿಕ್ಕರೂ, ಒಂದು ಚಿಕ್ಕ ಬ್ರೇಕ್ ಸಿಕ್ಕಾಗೆಲ್ಲಾ ಗೂಗಲ್ ನಲ್ಲಿ ನ್ಯೂಸ್ ಅಪ್‌ಡೇಟ್ಸ್ ನೋಡ್ತೀನಿ. ಮನೆಲೆಲ್ಲಾ ಕಾಂಪಿಟೆಟಿವ್ ಬುಕ್ಸ್ ಇವೆ. ಅವೆಲ್ಲಾ ಓದ್ತೀನಿ. ನಾನ್ ಸದ್ಯ ಮಾಡ್ತೀರೋ ಕೆಲಸದ ಮೇಲೆ ನನಗೆ ಶ್ರದ್ಧೆ ಇದೆ. ಜೊತೆಗೆ ನನ್ನ ಕನಸನ್ನು ನಾನು ನನಸಾಗಿಸ್ತೀನಿ ಅನ್ನೋ ಛಲ ಇದೆ. ಅದಕ್ಕೆ ಕುಂಟು ನೆಪ ಹೇಳ್ದೆ ಎಲ್ಲಾನೂ ಮ್ಯಾನೇಜ್ ಮಾಡ್ತೀನಿ.

ನಿಮ್ಮ ಗುರು ಸಾಧನೆಗೆ ನೀವು ಹೇಗೆ ತಯಾರಿ ಮಾಡಿಕೊಳ್ತೀದೀರಾ?

ಟೈಮ್ ಸಿಕ್ಕಾಗಲೆಲ್ಲಾ ಟಿವಿ ನ್ಯೂಸ್ ನೋಡ್ತೀನಿ. ಯಾವುದಾದ್ರೂ ವಿಷಯದ ಮೇಲೆ ಚರ್ಚೆ ಅಂತ ಬಂದಾಗ ಎಲ್ಲರ ಜೊತೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ತೀನಿ. ಹೊಸ ವಿಷಯದ ಬಗ್ಗೆ ತಿಳಿದುಕೊಳ್ಳುವ ತವಕ ನನಗೆ. ನನಗೆ ವರ್ಕ್ ಕಮಿಟ್‌ಮೆಂಟ್ ಕೂಡ ಇರೋದ್ರಿಂದ ಧಾರಾವಾಹಿಯಿಂದ ಹೊರಗ್ ಬರೋಕ್ ಆಗಲ್ಲ. ಆದರೆ ಪ್ರಿಪರೇಷನ್ ಮಾತ್ರ ಜಾರಿಯಲ್ಲಿದೆ. ಮುಂದಿನ ವರ್ಷ ಅದಿನ್ನೂ ಜಾಸ್ತಿ ಆಗುತ್ತೆ. ಅವಾಗ ಸಿರಿಯಲ್‌ಗಿಂತ ಜಾಸ್ತಿ ಗಮನ ನನ್ನ ಕನಸಿಗೆ ನೀಡುವೆ.

ನಿಮ್ಮ ಹವ್ಯಾಸಗಳು

ನನಗೆ ಡಾನ್ಸ್ ಇಷ್ಟ. ಹಾಡು ಹೇಳೋದು, ಪುಸ್ತಕ ಓದೋದು, ಟಿವಿ ನೋಡೋದು ಮತ್ತು ಗೂಗಲ್ ಅಲ್ಲಿ ಯಾವಾಗ್ಲೂ ಏನಾದ್ರೂ ಹುಡುಕ್ತಾನೇ ಇರ್ತಿನೀ. ಒಂಥರಾ ಎಲ್ಲೋ ಏನೋ ಕಳೆದ್ ಹೋಗಿದೆ ಅನ್ನೋ ರೀತಿ. ನನಗೆ ಪ್ರಪಂಚ ಸುತ್ತೋ ಆಸೆ. ಅಂಡ್ ಐ ಹೇಟ್ ಶಾಪಿಂಗ್.

ನಿಮ್ಮ ಫೆವರೆಟ್ ನಟ, ನಟಿ

ಕನ್ನಡದಲ್ಲಿ ಸುದೀಪ್ ಸರ್, ಧ್ರುವ ಸರ್ಜಾ, ರಮ್ಯಾ, ರಚಿತಾ ರಾಮ್. ಹಿಂದಿಲೀ ಅಫ್‌ಕೋರ್ಸ್ ಸಲ್ಮಾನ್ ಖಾನ್, ರಣವೀರ್ ಸಿಂಗ್, ಕರೀನಾ ಕಪೂರ್ ಇಷ್ಟ.

ಸಿರಿಯಲ್‌ನಿಂದ ಮೂವೀಗೆ ಬ್ರೆಕ್ ಸಿಕ್ಕರೆ ಮೂವೀಲಿ ಆಕ್ಟ್ ಮಾಡ್ತೀರಾ?

ನನಗೆ ಈಗಾಗಲೇ ಮೂವೀಗೆ ಆಫರ್ ಬಂದಿತ್ತು. ಆದರೆ, ನನಗೆ ಪಾತ್ರ ಮಹತ್ವದ್ದಲ್ಲ. ಚಿಕ್ಕ ರೋಲ್ ಆಗಿದ್ರೂ ಪರವಾಗಿಲ್ಲ..ಆದರೆ ನಾನ್ ಮಾಡೋ ಪಾತ್ರ ಜನರ ಮನಸ್ಸಲ್ಲಿ ಯಾವಾಗ್ಲೂ ಉಳಿಬೇಕು.

ಯುವಜನತೆಗೆ ಏನ್ ಹೇಳ್ತೀರಿ?

ಓದಿಗೆ ಆದ್ಯತೆ ಕೊಡಿ. ಜೀವನದುದ್ದಕ್ಕೂ ನೆಮ್ಮದಿಯಾಗಿ ಕಾಲ ಕಳೀಬೇಕು ಅಂದ್ರೆ ನಾವು ಎಜುಕೇಷನ್ ಕಂಪ್ಲೀಟ್ ಮಾಡ್ಲೇ ಬೇಕು. ಸುಮ್ನೆ ನೆಗೆಟಿವ್ ಆಗಿ ಏನೇನೋ ಮಾಡೋದಕ್ಕಿಂತ ಅವಶ್ಯವಾಗಿರೋದಕ್ಕೆ ಜಾಸ್ತಿ ಒತ್ತು ಕೊಡಿ. ಆರ್ಟಿಕಲ್ಸ್ ಬರೀರಿ. ಬ್ಲಾಗ್ ಕ್ರಿಯೇಟ್ ಮಾಡಿ, ಅನ್ಯಾಯದ ವಿರುದ್ಧ ಮಾತಾಡೋಕೆ ಸಾಮಾಜಿಕ ಜಾಲತಾಣ ಒಂದು ವೇದಿಕೆ ಆಗಬೇಕು. ಅದನ್ನು ನಾವು, ಯುವಜನತೆ ಮಾಡಬೇಕು.

ನೀವು ಹುಡಿಗಿಯರಿಗೆ ಏನು ಸಲಹೆ ಕೊಡ್ತೀರಾ?

‘ಪ್ಲೀಸ್ ಪ್ರೂವ್ ಯುವರಸೆಲ್ಫ್ ಆಸ್ ಆನ್ ಇಂಡಿಪೆಂಡೆಂಟ್ ವುಮನ್’. ಪ್ರತಿಯೊಬ್ಬರಿಗೂ ಸಮಸ್ಯೆಗಳು ಎದುರಾಗುತ್ತವೆ. ಹಾಗಂತ ಭಯ ಪಡೋ ಅಗತ್ಯವಿಲ್ಲ. ಮಹಿಳೆ ಮನಸ್ಸು ಮಾಡಿದರೆ ಏನ್ ಬೇಕಾದ್ರೂ ಮಾಡಬಹುದು. ಅದಕ್ಕೆ ಯಾರ್ ಏನ್ ಅಂತಾರೆ ಅಂತ ತಲೆ ಕೆಡಿಸಿಕೊಳ್ಳೋ ಬದಲು ನಾನ್ ಏನ್ ಮಾಡ್ಬೇಕು, ಹೇಗಿರಬೇಕು ಅಂತ ಯೋಚನೆ ಮಾಡಿ ಹೆಜ್ಜೆ ಇಡಿ.

ನಿಮ್ಮ ಮಾಡೆಲ್ ಯಾರು?

ನನಗೆ ಡಾ.ಅಬ್ದುಲ್ ಕಲಾಂ, ಡಾ. ಅಂಬೇಡ್ಕರ್ ಮತ್ತು ಇಂದಿರಾ ಗಾಂಧಿ ಅಂದ್ರೆ ತುಂಬಾ ಇಷ್ಟ. ಅವರನ್ನು ನೆನಸಿ, ಅವರ ಆದರ್ಶಗಳನ್ನು ಫಾಲೋ ಮಾಡಿದ್ರೆ ನಮ್ಮ ಜೀವನಕ್ಕೆ ಒಂದು ದಾರಿ ಕಂಡ್ಕೋಬಹುದು. ಅವರೇ ನನಗೆ ಮಾಡೆಲ್.

ನಿಮ್ಮ ಕನಸಿನ ಹುಡುಗ ಹೇಗಿರಬೇಕು?

(ಜೋರಾಗಿ ನಗು) ಅದರ ಬಗ್ಗೆ ನಾನಿನ್ನೂ ಯೋಚನೆ ಮಾಡಿಲ್ಲ. ನನ್ನ ಹುಡುಗ ನಮ್ಮಮ್ಮ, ಅಪ್ಪನ ಚಾಯ್ಸ್ ಆಗೀರಬೇಕು. ದೊಡ್ಡವರಿಗೆ ರೆಸ್ಪೆಕ್ಟ್ ಕೊಡ್ಬೇಕು. ನಾನು ಧರ್ಮ, ಜಾತಿ ಅಂತೆಲ್ಲಾ ನೋಡಲ್ಲ. ಬಟ್ ಹಿ ಶುಡ್ ಬೀ ಸಿಂಪಲ್ ಲೈಕ್ ಮೀ. ನನ್ ತರಹ ಸೋಷಿಯಲ್ ಸರ್ವೀಸ್ ಮಾಡ್ಬೇಕು. ಅದಕ್ಕೂ ಹೆಚ್ಚಾಗಿ ಅವನು ನನ್ನ ಬೆಸ್ಟ್ ಫ್ರೆಂಡ್ ಆಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.