ADVERTISEMENT

ಮೇರಿಯಮ್ಮ ನಮೋನಮಃ

ರೂಪಾ .ಕೆ.ಎಂ.
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST
ಮೇರಿಯಮ್ಮ ನಮೋನಮಃ
ಮೇರಿಯಮ್ಮ ನಮೋನಮಃ   

ಏಸು ಸ್ವಾಮಿಯ ಮಹಾಮಾತೆ ಸಂತ ಮೇರಿ. ಶಿವಾಜಿನಗರದಲ್ಲಿನ ಸೆಂಟ್ ಮೇರಿ ಬೆಸಿಲಿಕಾ ಜಾತಿ ಧರ್ಮಗಳ ಕಟ್ಟುಪಾಡುವ ಮೀರಿದ ಅಸಂಖ್ಯಾತ ಭಕ್ತರ ಶ್ರದ್ಧಾಕೇಂದ್ರ.
ಇಲ್ಲಿ ಈಗ ಸಂತ ಮೇರಿ ಉತ್ಸವ ನಡೆದಿದೆ. ಒಂದು ದಿನಕ್ಕೆ ಸೀಮಿತವಲ್ಲ; ಹತ್ತು ದಿನಗಳ ಸಂಭ್ರಮ. ಕಳೆದ ಮಂಗಳವಾರ ಆರಂಭವಾಗಿದ್ದು, ಬರುವ ಗುರುವಾರ ರಥೋತ್ಸವದೊಡನೆ ಮುಕ್ತಾಯಗೊಳ್ಳುತ್ತದೆ.
 
ಸಾಲು ಸಾಲು ಮೊಂಬತ್ತಿ ಹಿಡಿದು, ತಮ್ಮ  ಕಷ್ಟಗಳನ್ನು ದೇವ ಮಾತೆಯಲ್ಲಿ ನಿವೇದಿಸಿಕೊಳ್ಳಲು ಭಕ್ತ ಸಮೂಹ ಈ ಸಮಯವನ್ನು ಕಾತರದಿಂದ ಕಾಯುತ್ತಾರೆ. ಪ್ರಾಪಂಚಿಕ ಕಷ್ಟಗಳನ್ನು ಮರೆತು ಕಾವಿ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತ ಮರಿಯಮ್ಮನ ಪ್ರಾರ್ಥನೆಗೆ ಚರ್ಚ್‌ನಲ್ಲಿ ಒಂದೆಡೆ ಸೇರುತ್ತಾರೆ.

ಉತ್ಸವದ ಮುಂಚಿನ ನವದಿನಗಳೂ ಕೂಡ ಪಾರ್ಥನೆಯಿಂದ ಕೂಡಿರುತ್ತವೆ. ದೇವಮಾತೆಯಲ್ಲಿ ನಂಬಿಕೆಯುಳ್ಳ ಎಲ್ಲಾ ಧರ್ಮದವರು ಈ ಹತ್ತೂ ದಿನವು ಮೊಂಬತ್ತಿ ಹಿಡಿದು ನಮನ ಸಲ್ಲಿಸುತ್ತಾರೆ. ವಿವೇಕ ನಗರದ ಬಾಲಯೇಸುವಿನಂತೆ ಸಂತ ಮೇರಿಯು ಹಲವು ಪವಾಡಗಳನ್ನು ಮಾಡುವ ಪುಣ್ಯ ದೇವಮಾತೆಯೆಂಬುದು ಭಕ್ತರ ನಂಬಿಕೆ.

ಆರೋಗ್ಯಮಾತೆ:
ಸಂತ ಮರಿಯಮ್ಮನಿಗೆ ಆರೋಗ್ಯಮಾತೆ ಎಂಬ ಇನ್ನೊಂದು ಹೆಸರೂ ಇದೆ. ಮಕ್ಕಳು, ಮಹಿಳೆಯರು, ವೃದ್ಧರಲ್ಲಿ ಕಾಣಿಸಬಹುದಾದ ಯಾವುದೇ ಕಾಯಿಲೆಯನ್ನು ಮಾತೆ ಗುಣಪಡಿಸುತ್ತಾಳೆ ಎಂಬ ಬಲವಾದ ನಂಬಿಕೆಯಿದೆ. ಪವಾಡವೆಂಬಂತೆ ಹಲವು ಕಾಯಿಲೆಗಳು ಗುಣಮುಖ ಕಂಡಿರುವುದರಿಂದ ಆರೋಗ್ಯ ಕರುಣಿಸುವ ಮಾತೆಯೆಂದೇ ಆರಾಧಿಸಲಾಗುತ್ತದೆ.

ಗುರುವಾರ ತೇರು: ಸಂತ ಮರಿಯಮ್ಮ ಜನಿಸಿದ್ದು ಸೆಪ್ಟೆಂಬರ್ 8 ರಂದು. ಅದಕ್ಕಾಗಿ ಈ ದಿನ ಸಂಭ್ರಮ ಮತ್ತು ಸಡಗರ ಎಲ್ಲೆ ಮೀರುತ್ತದೆ. ಅಂದು ಪವಿತ್ರ ಬಲಿ ಪೂಜೆ ಸಲ್ಲಿಸಲಾಗುತ್ತದೆ.

ಅವರವರ ನಂಬಿಕೆಯಂತೆ ಅನೇಕರು ಹರಕೆ ಹೊರುತ್ತಾರೆ. ಮಹಿಳಾ ಭಕ್ತರು ಹತ್ತೂ ದಿನ ತಿಳಿ ಗುಲಾಬಿ ಸೀರೆಯುಟ್ಟು ಮಾತೆಯಲ್ಲಿ ತಮ್ಮ ಬೇಡಿಕೆಗಳನ್ನು ನಿವೇದಿಸಿಕೊಳ್ಳುತ್ತಾರೆ, ಮಾಂಸಹಾರವನ್ನು ಸಂಪೂರ್ಣ ತ್ಯಜಿಸುತ್ತಾರೆ. ದೇಹದ ಯಾವುದೇ ಭಾಗಕ್ಕೆ ತಗುಲಿರುವ ಕಾಯಿಲೆಯನ್ನು ಗುಣಪಡಿಸುವಂತೆ  ಬೇಡಿಕೊಳ್ಳುವ  ಭಕ್ತರು ದೇಹ ಭಾಗವನ್ನು ಹೋಲುವ ಲೋಹದ ವಸ್ತುಗಳನ್ನು ಹುಂಡಿಗೆ ಹಾಕಿ ಸಂತೃಪ್ತರಾಗುತ್ತಾರೆ. ಇನ್ನೂ ಕೆಲವರು ಜಪಸರ ಹಿಡಿದು ಪ್ರಾರ್ಥನೆ ಕೈಗೊಳ್ಳುತ್ತಾರೆ.

ಈ ಹತ್ತೂ ದಿನ ನಿತ್ಯ ಬೆಳಿಗ್ಗೆ 5.30ರಿಂದ ಸಂಜೆ 8.30ರ ವರೆಗೆ ಪವಿತ್ರ ಬಲಿಪೂಜೆ ನಡೆಯುತ್ತದೆ. ಪಾದ್ರಿಗಳು ನಡೆಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.

ಗುರುವಾರ ಸಂಜೆ 5.30ಕ್ಕೆ ಮಾತೆಯ ರಥೋತ್ಸವ. ಅದಕ್ಕಾಗಿ ಈಗಿನಿಂದಲೇ ಭರ್ಜರಿ ತಯಾರಿ ನಡೆದಿದೆ. ಮಾತೆಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ತೇರಿನ ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರು ಮೊಂಬತ್ತಿಯ ದೀಪದಲ್ಲಿ ಮಾತೆಯನ್ನು ಕಾಣುತ್ತಾರೆ.

ಉತ್ಸವದಂದು ಚರ್ಚ್‌ಗೆ ಭೇಟಿ ನೀಡಲು ಸಾಧ್ಯವಾಗದೇ ಇರುವವರು ಮನೆಗಳಲ್ಲಿರುವ ಮೇರಿ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ಬಹುತೇಕ ಕ್ರೈಸ್ತರ ಮನೆಗಳಲ್ಲಿ ಮಾಡುವ 11ಬಗೆಯ ವಿಶೇಷ ಅಡಿಗೆಯು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.

ಹತ್ತು ದಿನದ ಉತ್ಸವದಲ್ಲಿ ಪ್ರತಿ ದಿನ ಸರಿಸುಮಾರು ಒಂದೂವರೆ ಲಕ್ಷ ಜನ ಚರ್ಚ್‌ಗೆ ಭೇಟಿ ನೀಡುತ್ತಾರೆ. ಕ್ಯಾಥೋಲಿಕ್ ಕ್ರೈಸ್ತರು ಹೆಚ್ಚು ನಂಬುವ ಈ ಉತ್ಸವದಲ್ಲಿ ಎಲ್ಲ ಧರ್ಮೀಯರು ಭಾಗವಹಿಸುತ್ತಾರೆ ಎಂದು ಚರ್ಚ್ ಫಾದರ್ ಪೀಟರ್ ಹೇಳುತ್ತಾರೆ.

ಚಿತ್ರಗಳು: ಬಿ.ಕೆ. ಜನಾರ್ದನ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT