ADVERTISEMENT

ಯಕ್ಷದೇಗುಲದ ತಾರಾ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST
ಯಕ್ಷದೇಗುಲದ  ತಾರಾ
ಯಕ್ಷದೇಗುಲದ ತಾರಾ   

ಕರಾವಳಿಯ ಕಲೆಯೆಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಬೆಂಗಳೂರಿನಂತಹ ಬಹುಸಂಸ್ಕೃತಿಯ ನಗರದಲ್ಲೂ ಜನಪ್ರಿಯತೆ ಉಳಿಸಿಕೊಂಡಿದೆ. ನಗರದ ಯಕ್ಷದೇಗುಲ ತಂಡ ಕಳೆದ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಒತ್ತಿದೆ. 

  ಕೆ. ಮೋಹನ್ ನಿರ್ದೇಶನ, ಬಾಲಕೃಷ್ಣ ಭಟ್‌ರ ಅಧ್ಯಕ್ಷತೆಯಲ್ಲಿ ಯಕ್ಷದೇಗುಲವು ಪ್ರಾರಂಭದಲ್ಲಿ ಅತಿಥಿ ಕಲಾವಿದರನ್ನು ಒಂದು ಕಡೆ ಸೇರಿಸಿ ಪ್ರದರ್ಶನ ನೀಡುವ ಮಟ್ಟಕ್ಕೆ ಹೋಗಿ  ಈಗ ತನ್ನದೇ ಕಾಯಂ ಕಲಾವಿದರನ್ನು ಹೊಂದಿದೆ. ಕರ್ನಾಟಕದ ಹಳ್ಳಿ, ಹಳ್ಳಿಯಲ್ಲಿ ಅಲ್ಲದೇ ಜಮ್ಮು ಕಾಶ್ಮೀರ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲೂ ಅಮೆರಿಕ ಮತ್ತು ಲಂಡನ್‌ಗಳಲ್ಲೂ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದೆ.
 
ವರ್ಷಕ್ಕೆ 100ಕ್ಕೂ ಹೆಚ್ಚು ಕಾರ್ಯಕ್ರಮ ನೀಡುವುದಲ್ಲದೇ ಯಕ್ಷಗಾನದ ಕುರಿತಾದ ಕಮ್ಮಟ, ಮೇಕಪ್ ಕಾರ್ಯಗಾರ, ತಾಳಮದ್ದಲೆ ಮತ್ತು ಯಕ್ಷಗಾನ ನೃತ್ಯ ಪ್ರಕಾರ ಇತ್ಯಾದಿಗಳ ಬಗ್ಗೆ ವಿಚಾರ ಸಂಕಿರಣ, ಉಚಿತ ಯಕ್ಷಾಭ್ಯಾಸ, ಉಡುಪಿ ಜಿಲ್ಲೆಯ ಎರಡು ಶಾಲೆಯಲ್ಲಿ ನಿರಂತರ ಯಕ್ಷಾಭ್ಯಾಸ, ಹಿರಿಯ ಕಲಾವಿದರ  ಸನ್ಮಾನ.. ಹೀಗೆ ಸದಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.

ಯಕ್ಷದೇಗುಲ ಇಂದಿನ ಪ್ರೇಕ್ಷಕರಿಗೆ ಹೊಸತು, ಹಳತು ಎರಡನ್ನೂ ತೋರಿಸುವ ನಿಟ್ಟಿನಲ್ಲಿ ನಗರದಲ್ಲಿ ಸೆಪ್ಟೆಂಬರ್ 4ರತನಕ `ಯಕ್ಷಗಾನ ಉತ್ಸವ~ ನಡೆಸುತ್ತಿದೆ.
 
 ಉತ್ಸವದಲ್ಲಿ
ಶನಿವಾರ ಬನಶಂಕರಿ 2ನೇ ಹಂತ ದೇವಗಿರಿಯ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮತ್ತು ಭಾನುವಾರ ಮಹಾಲಕ್ಷ್ಮಿ ಬಡಾವಣೆಯ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ `ತಾರಾ ಶಶಾಂಕ~ ಯಕ್ಷಗಾನ (ನಿರ್ದೇಶನ: ಕೆ.ಮೋಹನ್). ನಿತ್ಯ ಸಂಜೆ 6.

ದೇವಗುರು ಬೃಹಸ್ಪತಿಯ ಪತ್ನಿ ತಾರೆಯನ್ನು ಕಂಡು ಚಂದ್ರ ಮೋಹಿತನಾಗುತ್ತಾನೆ. ಆಕೆಯಲ್ಲಿ ತನ್ನ ಕಾಮದ ಅಳಲನ್ನು ತೋಡಿಕೊಳ್ಳುತ್ತಾನೆ. ಆಕೆ ನಿರಾಕರಿಸುತ್ತಾಳೆ. ಚಂದ್ರನಿಗೆ ಹಿತೋಪದೇಶ ಮಾಡುತ್ತಾಳೆ. ತಾನು ಗುರು ಪತ್ನಿಯೆಂದು ತನ್ನನ್ನು ಬಯಸಬಾರದೆಂದು ಕೇಳಿಕೊಳ್ಳುತ್ತಾಳೆ. ಆದರೂ ಆತ ಕೇಳದೆ ಪರಿಪರಿಯಾಗಿ ಪೀಡಿಸುತ್ತಾನೆ.

ಇಷ್ಟಾದರೂ ಸುಮ್ಮನಾಗದ ಚಂದ್ರ ಹೇಗಾದರೂ ಅವಳನ್ನು ಪಡೆಯಬೇಕೆಂದು ಯೋಚಿಸಿ ಪೂರ್ಣ ಕಳೆಯಿಂದ ಶೋಭಿಸುತ್ತಾನೆ. ಚಂದ್ರನ ಪ್ರಭೆ ತಾರೆಯ ಮೇಲೆ ಬಿದ್ದು ಅವಳು ಪುಳಕಿತಗೊಳ್ಳುತ್ತಾಳೆ. ಅವನಲ್ಲಿ ಮೋಹಿತಳಾಗುತ್ತಾಳೆ. ವಿಷಯ ತಿಳಿದ ಬೃಹಸ್ಪತಿಯು ದೇವೇಂದ್ರನಲ್ಲಿ ದೂರುತ್ತಾನೆ. ಆಗ ಇಂದ್ರ ದೇವೇಂದ್ರ ಗುರುವಿಗೆ ಧೈರ್ಯ ಹೇಳಿ ಚಿತ್ರಸೇನನನ್ನು ಚಂದ್ರನ ಬಳಿ ಕಳಿಸುತ್ತಾನೆ. ಅವನ ಬುದ್ಧಿವಾದಕ್ಕೂ ಮಣಿಯದಿದ್ದಾಗ ದೇವೇಂದ್ರನು ಚಂದ್ರನ ಮೇಲೆ ಯುದ್ಧವನ್ನು ಸಾರುತ್ತಾನೆ. ಹೀಗೆ ಸಾಗುತ್ತದೆ ಈ ಕಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.