ADVERTISEMENT

ರಂಗಶ್ರೀ ನರ್ತನ: ಗೀತ ಸಾಧನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 19:30 IST
Last Updated 14 ಫೆಬ್ರುವರಿ 2011, 19:30 IST

‘ರಂಗಶ್ರೀ’ ನರ್ತಕಿ, ಬೋಧಕಿಯಾಗಿ ಸುಪರಿಚಿತರಾಗಿರುವ ಕಲಾವಿದೆ. ಕಿಂಕಿಣಿ ನೃತ್ಯೋತ್ಸವದಲ್ಲಿ ತಮ್ಮ ಕಾರ್ಯಕ್ರಮವನ್ನು ರಾಗಮಾಲಿಕೆಯ ಗುರುವಂದನದಿಂದ ಪ್ರಾರಂಭಿಸಿದರು.

ವಿರಹಿ ನಾಯಕಿಯ ಭಾವವುಳ್ಳ ವರ್ಣವನ್ನು ಸುಲಲಿತವಾಗಿ ನರ್ತಿಸಿದರು. ಚುರುಕು ನಡೆಯಿಂದ ನೃತ್ತ-ನೃತ್ಯಗಳೆರಡರಲ್ಲೂ ತಮ್ಮ ಪ್ರತಿಭೆ, ಅನುಭವ ವೇದ್ಯವಾಗುವಂತೆ ಮಾಡಿದರು. ಉಗಾಭೋಗದಿಂದ ಪ್ರಾರಂಭಿಸಿ ಬಾಲಕೃಷ್ಣನೆ ಬಾರೊ ದೇವರನಾಮದಲ್ಲಿ ನಾಟಕೀಯ ಅಂಶಗಳಿಂದ ಅಭಿನಯಿಸಿದರು.

ತ್ಯಾಗರಾಜರ ಕೀರ್ತನೆ (ಎಂತನಿನೇ ವರ್ಣಿಂತು) ಭಾವಪೂರ್ಣವಾದದ್ದೇ. ಆದರೆ ಒಂದು ತಿಲ್ಲಾನವನ್ನೂ ಆರಿಸಿದ್ದರೆ, ಕಾರ್ಯಕ್ರಮದ ಮುಕ್ತಾಯವೂ ಹೆಚ್ಚು ಸ್ವಾರಸ್ಯಕರವಾಗಿರುತ್ತಿತ್ತು.

ಗಾಯನದಲ್ಲಿ ಡಿ.ಎಸ್. ಶ್ರೀವತ್ಸ, ನಟುವಾಂಗದಲ್ಲಿ ರಮಾ ವೇಣುಗೋಪಾಲ್, ಮೃದಂಗದಲ್ಲಿ ವಿ.ಆರ್. ಚಂದ್ರಶೇಖರ್ ಹಾಗೂ ಕೊಳಲಿನಲ್ಲಿ ಎಚ್.ಎಸ್. ವೇಣುಗೋಪಾಲ್ ನೆರವಾದರು. 

 ಸಂಗೀತ  ಸಾಧಕರು
ಕಾಂಚನ ಸಹೋದರಿಯರಾದ ಶ್ರೀರಂಜನಿ ಮತ್ತು ಶೃತಿರಂಜನಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಸಂಗೀತ ಮನೆತನಕ್ಕೆ ಸೇರಿದವರು. ಗಾಯನವಲ್ಲದೆ ಪಿಟೀಲು ವಾದನದಲ್ಲೂ ಸಾಧಕರು.

ಬಿಟಿಎಂ. ಕಲ್ಚರಲ್ ಅಕಾಡೆಮಿ ನಡೆಸಿದ ಆರಾಧನಾ ಸಪ್ತಾಹದದಲ್ಲಿ ಅಪರೂಪವೂ, ಕ್ಲಿಷ್ಟವೂ ಆದ ವೀಣೆ ಶೇಷಣ್ಣನವರ ರಚನೆಗಳನ್ನು ಹಾಡಿದ್ದು, ಅವರ ಶ್ರದ್ಧೆಯ ಸಾಧನೆಯನ್ನು ಬಿಂಬಿಸುತ್ತದೆ. ವಾಚಸ್ಪತಿ ರಾಗವನ್ನು ಇಬ್ಬರೂ ಹಂಚಿಕೊಂಡು ವಿಸ್ತರಿಸಿ ‘ಏಮನಿ ದೆಲುಪುದುರಾ’ ಕೃತಿಯ ಅಂತರಾಳವನ್ನು ಹೊರಗೆಡಹಿದರು. ಹಾಗೆಯೇ ಮಾನವತಿ ಜತಿಸ್ವರ, ರಾಗಮಾಲಿಕೆ ವರ್ಣ, ನಾಟಕಪ್ರಿಯ ಕೀರ್ತನೆಗಳಲ್ಲದೆ, ಕಲ್ಯಾಣಿಯಲ್ಲಿ ದೇವರನಾಮ ‘ಶಾರದೆ ವರದೆ’ ಹಾಡಿದರು. ಉತ್ತಮ ಕಂಠ, ಶ್ರದ್ಧೆಯ ಯುಗಳ ಗಾಯನ.

ಮೈಸೂರು ಶ್ರೀಕಾಂತ್, ಸಿ. ಚೆಲುವರಾಜ್, ದಯಾನಂದ ಮೋಹಿತೆ, ಭಾರದ್ವಾಜ್ ಸಾತವಳ್ಳಿ ಪಕ್ಕವಾದ್ಯಗಳಲ್ಲಿ ಸ್ವಾದ ಹೆಚ್ಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.