ADVERTISEMENT

ರಕ್ತದಾನ ಇವರ ಮಂತ್ರ

ಸತೀಶ ಬೆಳ್ಳಕ್ಕಿ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST
ಕೆವಿಕೆ ಸದಸ್ಯರು ರಕ್ತದಾನ ಶಿಬಿರವೊಂದರ ಸಂದರ್ಭದಲ್ಲಿ...
ಕೆವಿಕೆ ಸದಸ್ಯರು ರಕ್ತದಾನ ಶಿಬಿರವೊಂದರ ಸಂದರ್ಭದಲ್ಲಿ...   

ರೈಲ್ವೆ ಅವಘಡ, ಅಗ್ನಿ ಆಕಸ್ಮಿಕ, ಬಾಂಬ್ ಸ್ಫೋಟ, ಕಟ್ಟಡ ಕುಸಿತ ಅಥವಾ ದೊಂಬಿ-ಗಲಭೆಯಂತಹ ಸನ್ನಿವೇಶಗಳು ಎದುರಾದರೆ ಅವುಗಳನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸನ್ನದ್ಧವಾಗಿಯೇ? ಇಂಥದ್ದೊಂದು ಪ್ರಶ್ನೆಗೆ ಹೌದು ಎನ್ನುವ ಉತ್ತರ ಸಿಗುವುದು ಕಷ್ಟ. ದುರಂತದಲ್ಲಿ ಗಾಯಗೊಂಡವರ ತುರ್ತು ಚಿಕಿತ್ಸೆ ಸಂದರ್ಭ ರಕ್ತದ ಅವಶ್ಯಕತೆ ಎದುರಾಗುವುದು ಸಹಜ.

ಬೆಂಗಳೂರು ನಗರದಲ್ಲಿ ಸಾಕಷ್ಟು ರಕ್ತ ನಿಧಿಗಳಿವೆ. ಆದರೆ ಅಲ್ಲಿ ರೋಗಿಗೆ ಅವಶ್ಯಕವಿರುವ ರಕ್ತ ಸಿಗುತ್ತದೆ ಎಂಬ ಖಾತರಿ ಇಲ್ಲ. ಇದ್ದರೂ ಹೆಚ್ಚು ಹಣ ತೆರಬೇಕು. ಬಡವರಿಗೆ ಇದು ಗಗನ ಕುಸುಮ. ಹೀಗಿರುವಾಗ ಉಚಿತವಾಗಿ ಸಕಾಲಕ್ಕೆ ರಕ್ತ ಒದಗಿಸುವ ವ್ಯವಸ್ಥೆ ನಗರದಲ್ಲಿ ಲಭ್ಯವಾಗಬೇಕು ಎಂಬ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಸಂಘಟನೆಗಳಲ್ಲಿ ಪದ್ಮನಾಭನಗರದಲ್ಲಿರುವ `ಕರ್ನಾಟಕ ವಿದ್ಯಾರ್ಥಿ ಕೂಟ'ವೂ ಒಂದು. ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವುದೇ ಈ ಸಂಘಟನೆಯ ಗುರಿ.

ಕಣ್ತೆರೆಸಿದ ಫೋನ್ ಕರೆ
“ಮೂರು ವರ್ಷದ ಹಿಂದೆ ರಾತ್ರಿ ಹತ್ತು ಗಂಟೆಗೆ ಯು.ಕೆ.ಯಲ್ಲಿದ್ದ ನನ್ನ ಗೆಳೆಯ ಕರೆ ಮಾಡಿ ನಗರದ ಗಾಯತ್ರಿ ನರ್ಸಿಂಗ್ ಹೋಂನಲ್ಲಿ ದಾಖಲಾಗಿದ್ದ ತಮ್ಮ ಸಂಬಂಧಿಯೊಬ್ಬರಿಗೆ ತುರ್ತಾಗಿ ರಕ್ತ ಬೇಕಾಗಿದೆ, ಏನಾದರೂ ಸಹಾಯ ಮಾಡಲಾದೀತೇ ಎಂದು ವಿನಂತಿಸಿದರು. ನಾನು ಮತ್ತು ಗೆಳೆಯರು ರೋಗಿಗೆ ಅವಶ್ಯವಿದ್ದ ನಿರ್ದಿಷ್ಟ ಗುಂಪಿನ ರಕ್ತವನ್ನು ಸಂಗ್ರಹಿಸಲು ಮಧ್ಯರಾತ್ರಿವರೆಗೂ ಓಡಾಡಿದೆವು.

ಎಲ್ಲೂ ಸಿಗಲಿಲ್ಲ. ನಮಗೆ ಬೇಕಿದ್ದ ರಕ್ತ ಸಿಕ್ಕಾಗ ರಾತ್ರಿ ಮೂರು ಗಂಟೆಯಾಗಿತ್ತು. ಅದನ್ನು ತಲುಪಿಸಿ ಗೆಳೆಯನ ಸಂಬಂಧಿಕರ ಪ್ರಾಣವನ್ನು ಉಳಿಸಿಕೊಂಡದ್ದಾಯಿತು. ಈ ಘಟನೆಯಿಂದ ನಮಗೆ ಜ್ಞಾನೋದಯವಾಯಿತು. ರೋಗಿಗಳಿಗೆ ಬೇಕಿರುವ ರಕ್ತ ಅಗತ್ಯ ಸಂದರ್ಭದಲ್ಲಿ ಸಿಗುತ್ತಿಲ್ಲ ಎಂಬ ಸತ್ಯ ಗೊತ್ತಾಯ್ತು. ಆಗ ಹುಟ್ಟಿಕೊಂಡಿದ್ದೇ ಕರ್ನಾಟಕ ವಿದ್ಯಾರ್ಥಿ ಕೂಟ” ಎಂದು ಸಂಸ್ಥೆ ಹುಟ್ಟಿದ ಹಿನ್ನೆಲೆಯನ್ನು ವಿವರಿಸಿದರು ಕೆವಿಕೆ ಸಂಸ್ಥಾಪಕರಲ್ಲಿ ಒಬ್ಬರಾದ ಎಲ್.ಹರ್ಷ.

`ನಮ್ಮಲ್ಲಿ ಎಷ್ಟೋ ಜನರಿಗೆ ಒಡಹುಟ್ಟಿದವರು, ಗೆಳೆಯರ ರಕ್ತದ ಗುಂಪು ಯಾವುದು ಎಂದು ತಿಳಿದಿರುವುದಿಲ್ಲ. ಮೊದಲು ನಾವು ಅಲ್ಲಿಂದ ಕೆಲಸ ಪ್ರಾರಂಭಿಸಿದೆವು. ಡಾ. ಲೋಕೇಶ್ ಕೃಷ್ಣಮೂರ್ತಿ,  ಸುನೀಲ್ ಚಿತ್ರಶೇಖರಯ್ಯ, ಹರೀಶ್ ವಿ. ಮತ್ತು ನಾನು ಸೇರಿಕೊಂಡು ಕೆವಿಕೆಯನ್ನು 2010ರ ಮೇ ತಿಂಗಳಿನಲ್ಲಿ ಪ್ರಾರಂಭಿಸಿದೆವು. ಪ್ರಾರಂಭದಲ್ಲಿ ನಮ್ಮಲ್ಲಿನ ರಕ್ತದಾನಿಗಳ ದಾಖಲಾತಿ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಈಗ ಆ ಸಂಖ್ಯೆ ನಾಲ್ಕು ಸಾವಿರ ಇದೆ. ಇದನ್ನು ನಾಲ್ಕು ಲಕ್ಷಕ್ಕೆ ಹೆಚ್ಚಿಸುವ ಗುರಿಯೂ ಇದೆ' ಎಂದು ಮಾತು ಸೇರಿಸುತ್ತಾರೆ ಅವರು.

ರಕ್ತದಾನದ ಲಾಭ ನಮಗೇ
ಅಪಘಾತವಾದರಿಗೆ, ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ, ಗರ್ಭಿಣಿಯರಿಗೆ ಎಲ್ಲರಿಗೂ ರಕ್ತದ ಅವಶ್ಯಕತೆ ಇದೆ. ಆದರೆ, ಅದು ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ವಸ್ತು ಅಲ್ಲ. ಅದು ಸಿಗುವುದು ಬ್ಲಡ್ ಬ್ಯಾಂಕ್‌ಗಳಲ್ಲಿ ಮಾತ್ರ. ಕೆಲವರಿಗೆ ರಕ್ತದಾನ ಮಾಡುವ ಇಚ್ಛೆ ಇದ್ದರೂ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗುತ್ತಿಲ್ಲ. ಹಾಗಾಗಿ ಅನೇಕರು ರಕ್ತದಾನ ಮಾಡಿರುವುದಿಲ್ಲ.

`ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ವರ್ಷಕ್ಕೆ 12 ಜೀವಗಳನ್ನು ಉಳಿಸಬಹುದು. ಒಬ್ಬ ಪುರುಷ ವರ್ಷಕ್ಕೆ ನಾಲ್ಕು ಬಾರಿ ಹಾಗೂ ಮಹಿಳೆಯರು ಮೂರು ಬಾರಿ ರಕ್ತದಾನ ಮಾಡಬಹುದು. ವಿದೇಶದಲ್ಲಿ ಪುರುಷರು ಆರು ಬಾರಿ ಮತ್ತು ಮಹಿಳೆಯರು ನಾಲ್ಕು ಬಾರಿ ರಕ್ತದಾನ ಮಾಡುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಪುರುಷರಲ್ಲಿ ಹೃದಯಾಘಾತ ಸಂಭವ ಶೇ 80ರಷ್ಟು ಕಮ್ಮಿ ಆಗುತ್ತದೆ.

ಪುರುಷರು ರಕ್ತದಾನ ಮಾಡುವುದರಿಂದ ಅವರ ದೇಹದಲ್ಲಿರುವ ರಕ್ತ ಶುದ್ಧಗೊಳ್ಳುತ್ತದೆ. ಹೃದಯಾಘಾತವೂ ತಪ್ಪುತ್ತದೆ. ಮಹಿಳೆಯರಲ್ಲಿ ಪ್ರತಿ ತಿಂಗಳು ಋತುಸ್ರಾವ ಆಗುವುದರಿಂದ ಅವರಲ್ಲಿ ಹೃದಯಾಘಾತದ ಪ್ರಮಾಣ ಕಮ್ಮಿ' ಎಂದು ರಕ್ತದಾನದ ಉಪಯೋಗವನ್ನು ವಿವರಿಸುತ್ತಾರೆ ಹರ್ಷ.

ಸರ್ಕಾರದ ನಿರ್ಲಕ್ಷ್ಯ
`ಬಡ ರೋಗಿಗಳಿಗೆ ಉಚಿತವಾಗಿ ರಕ್ತ ಪೂರೈಕೆಯಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ವಿಕ್ಟೋರಿಯಾ ಆಸ್ಪತ್ರೆಗೆ ಒಂದು ಸುಸಜ್ಜಿತ ಬಸ್ (ರಕ್ತ ಸಂಗ್ರಹಿಸಲು ವಾಹನ) ನೀಡಿತ್ತು. ಆದರೆ, ಆಸ್ಪತ್ರೆಯವರು ಆ ಬಸ್‌ಗೆ ಒಬ್ಬ ಚಾಲಕನನ್ನು ನೇಮಕ ಮಾಡಿಕೊಳ್ಳಲಾಗದೆ ಎರಡು ವರ್ಷ ಹಾಗೆಯೇ ನಿಲ್ಲಿಸಿದ್ದರು.

ADVERTISEMENT

ತುಕ್ಕು ಹಿಡಿಯುವ ಹಂತಕ್ಕೆ ಬಂದಿದ್ದ ಬಸ್ಸನ್ನು ಈಗ ರೆಡ್‌ಕ್ರಾಸ್ ಸಂಸ್ಥೆ ನಿರ್ವಹಿಸುತ್ತಿದೆ. ಎಲ್ಲೆಂದರಲ್ಲಿ ಸಾಗಿ ರಕ್ತದಾನ ಶಿಬಿರ ಏರ್ಪಡಿಸಲು, ರಕ್ತ ಸಂಗ್ರಹಿಸಲು ನೆರವಾಗುವಂತಿದ್ದ ಬಸ್‌ನ ನಿರ್ವಹಣೆ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ರಕ್ತ ಸಂಗ್ರಹದ ಬಗ್ಗೆ ಸರ್ಕಾರ ಎಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ' ಎಂದು ಆರೋಪಿಸುತ್ತಾರೆ ಹರ್ಷ.

ರಕ್ತದ ದುರ್ಬಳಕೆ
ಕೆಲವು ಖಾಸಗಿ ರಕ್ತನಿಧಿಗಳಲ್ಲಿ ದಾನ ಮಾಡಿರುವ ರಕ್ತವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಬಹಳ ದಿನಗಳಿಂದಲೂ ಕೇಳಿಬರುತ್ತಲೇ ಇದೆ. ರಕ್ತದಾನಿಗಳು ದಾನ ಮಾಡಿದ ರಕ್ತವನ್ನು ಬ್ಲಡ್ ಬ್ಯಾಂಕ್‌ಗಳು ಕಾಂಪೊನೆಂಟ್ ರೀತಿಯಲ್ಲಿ ಬೇರ್ಪಡಿಸುತ್ತಾರೆ. ಹೀಗೆ ಬೇರ್ಪಡಿಸಿದಾಗ ಪ್ಲೇಟ್‌ಲೆಟ್ಸ್, ಪ್ಯಾಕರ್‌ಸೆಲ್ಸ್ ಹಾಗೂ ಪ್ಲಾಸ್ಮಾ ಸಿಗುತ್ತದೆ.

ಡೆಂಗೆ ಸೀಸನ್‌ನಲ್ಲಿ ಪ್ಲೇಟ್‌ಲೆಟ್ಸ್‌ಗೆ ಹೆಚ್ಚು ಬೇಡಿಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಬ್ಲಡ್‌ಬ್ಯಾಂಕ್‌ಗಳು ಬೇರ್ಪಡಿಸಿದ ರಕ್ತದಿಂದ ಕೆಲವು ಪ್ಲೇಟ್‌ಲೆಟ್ಸ್ ತೆಗೆದಿಟ್ಟುಕೊಂಡು ಕಮ್ಮಿ ಪ್ರಮಾಣದ ಪ್ಲೇಟ್‌ಲೆಟ್ಸ್ ಹಾಗೂ ಹೆಚ್ಚು ಪ್ಯಾಕರ್‌ಸೆಲ್ಸ್ ಇರುವ ರಕ್ತವನ್ನು ಪೂರೈಕೆ ಮಾಡುತ್ತಾರೆ. ಅಂದರೆ- ರಕ್ತ ಹೆಪ್ಪುಗಟ್ಟುವಲ್ಲಿ ಪ್ರಧಾನ ಪಾತ್ರವಹಿಸುವ `ಪ್ಲೇಟ್‌ಲೆಟ್' ರಕ್ತದಿಂದ ವಿಭಾಗವಾಗುವುದರಿಂದ ಅಧಿಕ ರಕ್ತದ ಅವಶ್ಯಕತೆ ಸೃಷ್ಟಿಯಾಗುತ್ತದೆ.

ರಕ್ತದಾನಿಗಳನ್ನು ಗುರ್ತಿಸಬೇಕು
ತುರ್ತು ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ನೆರವಿನೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ ಕೆವಿಕೆ. ಡಾ. ರಾಜ್‌ಕುಮಾರ್ ಅಭಿಮಾನಿ ಬಳಗ, ವಿಷ್ಣುವರ್ಧನ್ ಅಭಿಮಾನಿ ಬಳಗ ಮತ್ತಿತರ ಕನ್ನಡಪರ ಸಂಘಟನೆಗಳು ಸ್ವಇಚ್ಛೆಯಿಂದ ಪಾಲ್ಗೊಳ್ಳುತ್ತಾರೆ. ಜತೆಗೆ ಇನ್ಫೋಸಿಸ್, ರಿಯಲನ್ಸ್, ಆದಿತ್ಯ ಬಿರ್ಲಾ ಮೊದಲಾದ ಐಟಿ ಕಂಪೆನಿಗಳೂ ಕೈಜೋಡಿಸುತ್ತಿವೆ.

`ಅವಶ್ಯವಿರುವ ರೋಗಿಗಳಿಗೆ ರಕ್ತದಾನ ಮಾಡುವ ವ್ಯಕ್ತಿಗಳಿಗೆ ಕನಿಷ್ಠ ಕೃತಜ್ಞತೆಯನ್ನೂ ಸೂಚಿಸುವುದಿಲ್ಲ. ರಕ್ತದಾನಿಗಳನ್ನು ಗುರ್ತಿಸುವುದಿರಲಿ, ಒಂದು ವೇಳೆ ರಕ್ತದಾನ ಮಾಡಲು ತೆರಳುವಾಗ ಆ ವ್ಯಕ್ತಿಗೆ ಏನಾದರೂ ಅಪಾಯವಾದರೆ ಅವನ ನೆರವಿಗೆ ಬರುವ ಕನಿಷ್ಠ ಸೌಜನ್ಯವನ್ನೂ ತೋರುತ್ತಿಲ್ಲ. ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗುವವರಿಗೂ ಇದರಿಂದಾಗಿ ನಿರಾಸೆಯಾಗುತ್ತದೆ' ಎಂದು ದೂರುತ್ತಾರೆ ಹರ್ಷ. 
ಅವರ ಸಂಪರ್ಕಕ್ಕೆ: 93434 03218.

ಕೊರತೆ ಎದುರಾಗುವ ತಿಂಗಳು
ಜಯದೇವ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿಗೆ ದಾಖಲಾಗಿದ್ದ ಹಾವೇರಿಯ 12 ವರ್ಷದ ಹುಡುಗ ಶಿವಾನಂದನ  ಶಸ್ತ್ರಚಿಕಿತ್ಸೆಗೆ `ಬಿ ನೆಗೆಟಿವ್' ರಕ್ತವನ್ನು ಒದಗಿಸಿ ಅವನ ಜೀವ ರಕ್ಷಿಸಿದ ಕೆವಿಕೆ ಒಡಲಲ್ಲಿ ಇಂತಹ ಅನೇಕ ಜೀವದಾಯಿ ಕಥೆಗಳು ಅಡಗಿವೆ.

`ವಿದ್ಯಾರ್ಥಿಗಳೇ ನಮ್ಮ ಶಕ್ತಿ. ಅವಶ್ಯಕತೆ ಇರುವವರಿಗೆ ಸೂಕ್ತ ಸಂದರ್ಭದಲ್ಲಿ ರಕ್ತದಾನ ಮಾಡುವವರು ಇವರೇ. ಆದರೆ, ಮೇ ಮತ್ತು ಜೂನ್ ತಿಂಗಳು ಬಂದರೆ ನಮಗೆ ಭಯ ಶುರುವಾಗುತ್ತದೆ. ಕಾರಣ ಈ ಎರಡು ತಿಂಗಳು ರಕ್ತದಾನಿಗಳ ಕೊರತೆ ನಮ್ಮನ್ನು ಅಧಿಕವಾಗಿ ಕಾಡುತ್ತದೆ.

ಮಳೆಯ ಪರಿಣಾಮ ಎಲ್ಲಾ ಕಡೆ ಸೊಳ್ಳೆಗಳ ಉತ್ಪತ್ತಿ ಜಾಸ್ತಿ ಆಗುವುದರಿಂದ ಡೆಂಗೆ ಹರಡಲು ಶುರುವಾಗುತ್ತದೆ. ರಕ್ತದ ಬೇಡಿಕೆ ಅಧಿಕವಿರುತ್ತದೆ. ಆದರೆ, ಈ ತಿಂಗಳುಗಳಲ್ಲಿ ಕೆವಿಕೆಯ ಪ್ರಮುಖ ರಕ್ತದಾನಿ ಪಡೆಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುತ್ತವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವಶ್ಯವಿರುವವರಿಗೆ ರಕ್ತ ದೊರಕಿಸಿಕೊಡುವುದು ಸವಾಲಿನ ಸಂಗತಿ' ಎನ್ನುತ್ತಾರೆ ಎಲ್. ಹರ್ಷ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.