ADVERTISEMENT

ರವಿ ಕಂಡದ್ದು!

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST

`ನಾನು ಅವರಿಗೆ ಚಿತ್ರದಲ್ಲಿ ಹಸ್ತಕ್ಷೇಪ ಮಾಡುವುದು ಬೇಕಾಗಿಲ್ಲ, ತೊಡಗಿಕೊಳ್ಳವುದೂ ಬೇಕಾಗಿಲ್ಲ~- ರವಿಚಂದ್ರನ್ ನೀಡಿದ ಈ ಪ್ರತಿಕ್ರಿಯೆಯಲ್ಲಿ ನೋವಿತ್ತು.

ರವಿಚಂದ್ರನ್ ನಟಿಸಿದ ಇತ್ತೀಚಿನ ಸಿನಿಮಾಗಳು ಅವರ ಹಿಂದಿನ ಚಿತ್ರಗಳಂತೆ ಇಲ್ಲ ಎಂದು ಅಭಿಮಾನಿಗಳು ಬೇಸರ ಪಟ್ಟುಕೊಳ್ಳುತ್ತಿದ್ದಾರೆ. ತೆರೆಯ ಮೇಲೆ ರವಿಚಂದ್ರನ್ ಕಾಣಿಸಿಕೊಳ್ಳುವ ರೀತಿ ಬಲವಂತಕ್ಕೆ ನಟಿಸುತ್ತಿರುವಂತೆ ಅನಿಸುತ್ತಿದೆ ಎನ್ನುವುದು ಸಿನಿಪ್ರಿಯರ ಮಾತು.

ಈ ಅನುಮಾನಗಳಿಗೆ ರವಿಚಂದ್ರನ್ ಪ್ರತಿಕ್ರಿಯೆ ನೀಡಿದ್ದು ಹೀಗೆ: `ನಾನು ಮುಕ್ತವಾಗಿ ಈ ಚಿತ್ರಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ. ಒಬ್ಬ ನಟನಾಗಿ ನಿರ್ದೇಶಕ ಹೇಳಿದಂತೆ ನಾನು ಮಾಡಿದ್ದೇನೆ ಅಷ್ಟೇ.
 
ನನ್ನ ನಿರ್ದೇಶನದ ಚಿತ್ರಗಳೇ ಸೋತಾಗ ಆ ಸೋಲನ್ನು ಎದುರಿಸುವ ಸ್ಥೈರ್ಯ ನನ್ನಲ್ಲಿತ್ತು. ಇನ್ನು ಕೇವಲ ನಟಿಸಿದ ಚಿತ್ರಗಳ ಸೋಲಿನ ಬಗ್ಗೆ ಚಿಂತಿಸುವುದಿಲ್ಲ~ ಎಂದು ರವಿಚಂದ್ರನ್ ಮುಕ್ತವಾಗಿಯೇ ಹೇಳಿಕೊಂಡರು. ಅವರ ಮಾತುಗಳು ಇತ್ತೀಚಿನ ಅವರ ನಟನೆಯ ಚಿತ್ರಗಳ ಸೋಲಿನ ಕಾರಣಗಳನ್ನು ಸೂಚ್ಯವಾಗಿ ತೆರೆದಿಟ್ಟವು.

ನಿರ್ದೇಶಕ-ನಿರ್ಮಾಪಕರ ಈ ಪ್ರವೃತ್ತಿ ಇಂದು ನಿನ್ನೆಯದಲ್ಲ ಎನ್ನುವುದು ರವಿಚಂದ್ರನ್ ಅನುಭವದ ನುಡಿ. ತಮ್ಮ ಹಿಂದಿನ ಎಷ್ಟೋ ಚಿತ್ರಗಳ ಅಪರೂಪದ ಪ್ರಯೋಗಗಳ ಹಿಂದಿನ ರೂವಾರಿ ಸ್ವತಃ ರವಿಚಂದ್ರನ್. ಆದರೆ ಅವುಗಳ ಶ್ರೇಯಸ್ಸು ಸಂದದ್ದು ಮಾತ್ರ ನಿರ್ದೇಶಕರಿಗೆ. ಸೌಜನ್ಯಕ್ಕಾದರೂ ಈ ನಿರ್ದೇಶಕರು ರವಿಚಂದ್ರನ್ ಹೆಸರನ್ನು ಹೇಳುತ್ತಿರಲಿಲ್ಲ. ಅಂತಹ ಹಳೆಯ ನೆನಪುಗಳನ್ನು ಕೆದಕಿದರು ರವಿಚಂದ್ರನ್. ಅವರ ಮಾತುಗಳು ತಮ್ಮ ಸಿನಿಮಾ ಆರಂಭದ ಬದುಕಿನಿಂದ ಇಲ್ಲಿವರೆಗಿನ ಪಯಣವಲ್ಲದೆ ಸಿನಿಮದಾಚೆಗೂ ಹರಿದಾಡಿತು.

“ಶಾಂತಿಕ್ರಾಂತಿ ಸಿನಿಮಾ ಮಾಡುವಾಗ `ಒನ್ ಟೂ ಥ್ರೀ~ ಹಾಡಿಗೆ ನೃತ್ಯ ಸಂಯೋಜನೆ ಮಾಡಬೇಕಿದ್ದ ಚಿನ್ನಿ ಪ್ರಕಾಶ್ ಬರಲಿಲ್ಲ. ನಾನೇ ಸಂಯೋಜನೆ ಮಾಡಿದೆ. ಕ್ಲೈಮ್ಯಾಕ್ಸ್‌ನ ಮಹತ್ವದ ಫೈಟಿಂಗ್ ದೃಶ್ಯ. ಆಗಲೂ ಸ್ಟಂಟ್ ಮಾಸ್ಟರ್ ಕೈ ಕೊಟ್ಟರು.
 
ಅದರ ಜವಾಬ್ದಾರಿಯನ್ನೂ ನಾನೇ ನಿರ್ವಹಿಸಿದೆ. 20 ವರ್ಷಗಳಾದವು. ಅಂದಿನಿಂದ ಇಂದಿಗೆ ನನ್ನ ಸಿನಿಮಾಗಳಿಗೆ ನಾನೇ ಕೊರಿಯೊಗ್ರಾಫರ್, ನಾನೇ ಸ್ಟಂಟ್ ಮಾಸ್ಟರ್. ಬೇರೆಯವರನ್ನು ಬಳಸಲೇ ಇಲ್ಲ. `ಶಾಂತಿಕ್ರಾಂತಿ~ ಇನ್ನೂ ಕೊನೆಯ ಹಂತದಲ್ಲಿರುವಾಗಲೇ ದಿವಾಳಿಯಾಗಿದ್ದೆ. ತಂದೆ ಆಸ್ಪತ್ರೆ ಸೇರಿದ್ದರು.
 
ಆಗಲೂ ಧೃತಿಗೆಡಲಿಲ್ಲ. ನೂರಾರು ಮಕ್ಕಳನ್ನು ಶೂಟಿಂಗ್‌ಗೆ ಬಳಸಿಕೊಂಡಿದ್ದೆ. ಕೊನೆಯಲ್ಲಿ ಮಕ್ಕಳ ಶಿಕ್ಷಕರು `ನೀವು ಪ್ರಪಂಚದ ಅತ್ಯುತ್ತಮ ಶಿಕ್ಷಕ~ ಎಂದು ಕೈ ಮುಗಿದರು. ಆ ಚಿತ್ರ ಬಿಡುಗಡೆಯಾದಾಗ ನನ್ನ ಜೊತೆ ಕೊನೆಯಲ್ಲಿ ಉಳಿದದ್ದು ಆ ಮಾತೊಂದೇ. `ಏಕಾಂಗಿ~ ಮಾಡಿದಾಗ ಉಳಿದದ್ದು ಪಿಯಾನೋ ಮಾತ್ರ!

ಸಿನಿಮಾ ಬಗ್ಗೆ ನಿಜವಾದ ಪ್ರೀತಿ ಇಟ್ಟುಕೊಂಡ ನಿರ್ಮಾಪಕ ಎಂದಿಗೂ ಹೀರೋಗಳ ಬಗ್ಗೆ ಹಗುರವಾಗಿ ಮಾತನಾಡೊಲ್ಲ. ವ್ಯಾವಹಾರಿಕವಾಗಿ ಮಾತನಾಡುವವನು ಸಿನಿಮಾವನ್ನು ಎಂದಿಗೂ ಪ್ರೀತಿಸುವುದಿಲ್ಲ. ಅದರ ಬಗ್ಗೆ ಆತನಿಗೆ ತಿಳಿವಳಿಕೆಯೂ ಇರುವುದಿಲ್ಲ. ಎಷ್ಟೋ ಚಿತ್ರಗಳಲ್ಲಿ ನಾನು ನೀಡಿದ ಸಲಹೆಯನ್ನು ನಿರ್ದೇಶಕ ಅನುಸರಿಸುವುದಿಲ್ಲ.

ನಿರ್ದೇಶಕನ ಚಿತ್ರವಾದ್ದರಿಂದ ಆತನಿಗೆ ಸ್ವಾತಂತ್ರ್ಯವಿರುತ್ತದೆ. ಆದರೆ ಆ ಸನ್ನಿವೇಶಕ್ಕೆ ತಕ್ಕಂತೆ ತಾಂತ್ರಿಕತೆ ಬಳಸಿಕೊಳ್ಳಬೇಕಲ್ಲವೆ. ಇಂತಹ ನಿರ್ದೇಶಕ ನನಗೆ ಸಿಕ್ಕಿದ್ದು `ಕನಸುಗಾರ~ದಲ್ಲಿ. ನಿರ್ದೇಶಕ ಕರಣ್ ನಾನಿದ್ದಾಗ ಚಿತ್ರದ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳಲಿಲ್ಲ. ತೆರೆಯ ಮೇಲೆ ನನ್ನನ್ನು ನೋಡಿದಾಗಲೇ ತಿಳಿಯುತ್ತದೆ ಆ ಚಿತ್ರ ನನಗೆ ಎಷ್ಟು ಖುಷಿ ಕೊಟ್ಟಿತೆಂದು. ಅದಾದ ಬಳಿಕ ಅಷ್ಟೇ ಲವಲವಿಕೆಯಿಂದ ಮಾಡಿದ ಚಿತ್ರ ಏಕಾಂಗಿ”.

ರವಿಚಂದ್ರನ್ ಮಾತು `ಕ್ರೇಜಿಸ್ಟಾರ್~ನತ್ತ ತಿರುಗಿತು. ಜೂನಿಯರ್ ಆರ್ಟಿಸ್ಟ್‌ಗಳ ಬದಲಾಗಿ ಅವರು ಜನರ ಮಧ್ಯೆಯೇ ಹಾಡಿನ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜನ ಬಂದು ಅಪ್ಪಿಕೊಳ್ಳುತ್ತಾರೆ, ಕೈ ಕುಲುಕುತ್ತಾರೆ, ಮಾತನಾಡಿಸುತ್ತಾರೆ. ಅದರಲ್ಲಿ ಸಿಗುವ ಖುಷಿ ಬೇರೆ ಇಲ್ಲ ಎನ್ನುತ್ತಾರೆ ಅವರು.

`ಕ್ರೇಜಿಲೋಕ~ ಚಿತ್ರಕ್ಕಾಗಿ ಅವರೀಗ `ಬಾ ಬಾರೋ ಪ್ರೇಕ್ಷಕ~ ಹಾಡಿನ ಚಿತ್ರೀಕರಣ ನಡೆಸುತ್ತಿದ್ದಾರೆ. ಈ ಹಾಡು ಎಲ್ಲಾ ಚಿತ್ರಗಳಿಗೂ ಅನ್ವಯಿಸುವಂತಿದೆ ಎಂದ ಅವರು, ದೀಪಾವಳಿಯಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದರು. ನಂತರ ಅವರ ಮಹತ್ವಾಕಾಂಕ್ಷೆಯ `ಮಂಜಿನಹನಿ~ ಮೇಲೆ ಗಮನ ಹರಿಸಲಿದ್ದಾರಂತೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.