ADVERTISEMENT

ರಾಕ್ ಬ್ಯಾಂಡ್‌ಗಳ ಸಂಗೀತ ಲೋಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಸಂಗೀತ ಸರ್ವವ್ಯಾಪಿ. ಯಾವುದೇ ಕಟ್ಟುಪಾಡುಗಳಿಲ್ಲದೆ ಇಡೀ ಪ್ರಪಂಚವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳಬಲ್ಲ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ. 

ಇಂತಹ ಸಂಗೀತದ ರಸದೌತಣಕ್ಕೆ ವೇದಿಕೆಯೊದಗಿಸಲೆಂದೇ ಅಂತರರಾಷ್ಟ್ರೀಯ ಫಾಸ್ಟ್‌ಫುಡ್ ವ್ಯಾಪಾರ ಸಂಸ್ಥೆ ಮ್ಯಾರಿಬ್ರೌನ್ ಇಂಡಿಯಾ ಇತ್ತೀಚೆಗಷ್ಟೆ ರಾಕ್ ಬ್ಯಾಂಡ್‌ಗಳ ಸಂಗೀತ ಸ್ಪರ್ಧೆ ಮತ್ತು ಸಂಗೀತೋತ್ಸವವನ್ನು ಹಮ್ಮಿಕೊಂಡಿತ್ತು.

ಮೂರು ದಿನಗಳ ಕಾಲ ನಡೆದ ಈ ಸಂಗೀತೋತ್ಸವದಲ್ಲಿ ಸಂಗೀತದ ವಿವಿಧ ಆಯಾಮಗಳು ಪರಿಚಿತಗೊಂಡವು. ಹಲವು ಬ್ಯಾಂಡ್‌ಗಳ ವಿಭಿನ್ನ ಆಸಕ್ತಿಯನ್ನು ಪ್ರಚುರಪಡಿಸುವ ಸಂಗೀತ ಪ್ರಕಾರಗಳು ಒಂದೆಡೆ ಮಿಳಿತಗೊಂಡಿದ್ದವು.

ರಾಕ್, ಜಾಸ್, ಬ್ಲೂಸ್, ಪಾಪ್, ಕರ್ನಾಟಿಕ್ ಫ್ಯೂಷನ್ ಸೇರಿದಂತೆ ಹಲವು ಪ್ರಕಾರದ ಸಂಗೀತವನ್ನು ಅನೇಕ ಬ್ಯಾಂಡ್‌ಗಳು ತಮ್ಮದೇ ಧಾಟಿಯಲ್ಲಿ ಹಾಡಿ ತಣಿಸಿದವು.

ಒಂದೊಂದು ಸಂಗೀತ ಪ್ರಕಾರವೂ ಒಂದೊಂದು ವಿಶೇಷತೆ ಹೊಂದಿದೆ. ಆ ವಿಶೇಷತೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ನೀಡುತ್ತದೆ ಎಂಬುದು ಈ ಉತ್ಸವದಲ್ಲಿ ಸಾಬೀತಾಗಿತ್ತು.

ದಕ್ಷಿಣ ಭಾರತದ ಸುಮಾರು 40 ಬ್ಯಾಂಡ್‌ಗಳು ಈ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದವು. ಮೊದಲ ಸ್ಥಾನಕ್ಕೆ 50,000ರೂ, ಎರಡನೇ ಸ್ಥಾನಕ್ಕೆ 30,000 ಹಾಗೂ ತೃತೀಯ ಸ್ಥಾನಕ್ಕೆ 20,000 ನಗದು ಬಹುಮಾನವನ್ನು ನಿಗದಿಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಚೆನ್ನೈನ `ಡಿ- ವೆಟ್‌ಸ್ಟೋನ್~ ಬ್ಯಾಂಡ್ ಮೊದಲ ಸ್ಥಾನ ಗಳಿಸಿತು. ಎರಡನೇ ಸ್ಥಾನವನ್ನು ಬೆಂಗಳೂರಿನ~ ದಿ ನ್ಯೂಸ್~ ಬ್ಯಾಂಡ್, ಮೂರನೇ ಸ್ಥಾನವನ್ನೂ ಬೆಂಗಳೂರಿನ `ಕ್ರೊಕ್ ಚೆಟ್ಸ್~ ಪಡೆದುಕೊಂಡಿತು.

ಅಂತರರಾಷ್ಟ್ರೀಯ ಗಿಟಾರ್ ವಾದಕ ಅಮಿತ್ ಥಾಮಸ್, ದುಬೈನ ಡೆಸರ್ಟ್ ರಾಕ್ ಫೆಸ್ಟಿವಲ್‌ನಲ್ಲಿ ಪ್ರಥಮ ಭಾರಿಗೆ ಪ್ರದರ್ಶನ ನೀಡಿ ಭಾರತದ ಹೆಸರಾಂತ ಬ್ಯಾಂಡ್ ಎಂದು ಪ್ರಸಿದ್ದಿ ಪಡೆದಿರುವ ತಂಡದ ಶಾನ್ ರೊಬಾರ್ಟ್ಸ್, ಜಂಕ್‌ಯಾರ್ಡ್ ಗ್ರೋವ್ ತಂಡದ ಮೋಲೋಟೋವ್ ಈ ಸ್ಪರ್ಧೆಗೆ ತೀರ್ಪುಗಾರರಾಗಿದ್ದರು.

`ಮೂರು ದಿನಗಳ ಕಾಲ ನಡೆದ ಈ ಸಂಗೀತದ ಉತ್ಸವ ಉದಯೋನ್ಮುಖ ಸಂಗೀತ ತಂಡಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆ ಒದಗಿಸಿಕೊಟ್ಟಿತು. ಎಲೆಮರೆಕಾಯಿಯಂತೆ ಉಳಿದುಕೊಂಡಿದ್ದ ಹಲವು ಪ್ರತಿಭೆಗಳು ಇಲ್ಲಿ ಬೆಳಕಿಗೆ ಬಂದವು~ ಎಂದರು ಮ್ಯಾರಿಬ್ರೌನ್‌ನ ಮಾರ್ಕೆಟಿಂಗ್ ವ್ಯವಸ್ಥಾಪಕ ಕಾರ್ಡಿನ್ ರೋಬಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.