ADVERTISEMENT

ರಾಮೋತ್ಸವ ಗಾಯನ ಕಛೇರಿ

ಪ್ರಜಾವಾಣಿ ವಿಶೇಷ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಮೊನ್ನೆ ಯುಗಾದಿಗೆ ರಾಮೋತ್ಸವ ಪ್ರಾರಂಭವಾದ ಸಂಸ್ಥೆಗಳಲ್ಲಿ ಶ್ರಿಕಾಂತಂ ಸಂಗೀತ ಸಭಾ, ಸಪ್ತಗಿರಿ ಭಜನ ಮಂಡಳಿ ಮಲ್ಲೇಶ್ವರದ ರಾಘವೇಂದ್ರ ಮತ್ತು ಆಂಜನೇಯ ಸ್ವಾಮೀಜಿ ದೇವಸ್ಥಾನದ ಆವರಣದಲ್ಲಿ ನಡೆಸುವ ಸಂಗೀತೋತ್ಸವವೂ ಒಂದು. ಉತ್ಸವದ ಚೊಚ್ಚಲ ಕಛೇರಿ ಮಾಡಿದ ಎಸ್.ಆರ್. ವಿನಯ ಶರ್ವ ಅವರು ಎಸ್. ಶಂಕರ್ ಮತ್ತು ನೇದನೂರಿ ಕೃಷ್ಣಮೂರ್ತಿ ಅವರ ಶಿಷ್ಯ.

ತನ್ನ ಗಾಯನವನ್ನು ಪ್ರಚಲಿತ ವರ್ಣದಿಂದ ಪ್ರಾರಂಭಿಸಿ ಮುತ್ತಯ್ಯ ಭಾಗವತರ  `ಗಣಪತೆ ನಮೊ ನಮೊ ಶಂಕರಿ ತನಯ~ ದಿಂದ ಮುಂದುವರೆಸಿದರು. ಕನ್ನಡ ದೇವರನಾಮ  `ಸದಾ ಎನ್ನ ಹೃದಯದಲ್ಲಿ~  ಕಿರು ರಾಗದೊಂದಿಗೆ ಹಸನಾಗಿ ಮೂಡಿತು. ಖರಹರಪ್ರಿಯ ರಾಗದ ಆಲಾಪನೆ ಮಾಡಿ ತ್ಯಾಗರಾಜರ  ಪ್ರಕ್ಕಲನಿಲಬಡಿ  ವಿಸ್ತರಿಸಿದರು.
 
ಅನುಭವ ಬೆಳೆದಂತೆ ರಾಗ, ಸ್ವರಗಳು ಗಾಢವಾದೀತು. ಉತ್ತಮ ಕಂಠವೂ ಇರುವ ವಿನಯ ಶರ್ವರ ಸಂಗೀತ ಭವಿಷ್ಯ ಆಶಾದಾಯಕ. ನುರಿತ ಕಲಾವಿದರಾದ ನಳಿನಾ ಮೋಹನ್, ಆನೂರು ಅನಂತಕೃಷ್ಣ ಶರ್ಮ ಮತ್ತು ವ್ಯಾಸ ವಿಠಲ ಗಣನೀಯ ನೆರವು ನೀಡಿದರು.

ಯುಗಳ ಗಾಯನ

ಶನಿವಾರ ವೈಯಾಲಿಕಾವಲ್ ರಾಮರ ದೇವಸ್ಥಾನದಲ್ಲಿ ಯುಗಳ ಗಾಯನ ಮಾಡಿದ ಕೃಷ್ಣ ಮೋಹನ್ ಮತ್ತು ರಾಮಕುಮಾರ್ ಮೋಹನ್  ತ್ರಿಚೂರು ಸಹೋದರರು  ಎಂದೇ ಪರಿಚಿತರು. ಮಾತೆ ಮಲಯಧ್ವಜ, ಪಂಚಮಾತಂಗ ಹಾಡಿ, ನಾಗಾಲೋಟದಲ್ಲಿ  ಸೀತಮ್ಮ ಮಾಯಮ್ಮ  ನಿರೂಪಿಸಿದರು.
 
ಅದಕ್ಕೆ ತದ್ವಿರುದ್ಧವಾಗಿ  ನನುಬ್ರೋವು ವಿಡಚಿ  ಆನೆ ನಡಿಗೆಯಲ್ಲಿ ಹೊಮ್ಮಿತು.  ನಮ್ಮಿತಿ  ಕೃತಿಯನ್ನು ರಾಗ, ನೆರವಲ್, ಸ್ವರಗಳಿಂದ ಅಲಂಕರಿಸಿದರು. ಸುಲಲಿತವಾಗಿ ಸಂಚರಿಸುವ ಕಂಠ ಹೊಂದಿರುವ ತ್ರಿಚೂರು ಸಹೋದರರು ಹೆಚ್ಚಿನ ಅನುಭವದಿಂದ ತಮ್ಮ ಗಾಯನಕ್ಕೆ ಪ್ರೌಢತೆ ತುಂಬಬಹುದು. ಪಿಟೀಲಿನಲ್ಲಿ ವಿಜಯ ರಾಘವನ್, ಮೃದಂಗದಲ್ಲಿ ತ್ರಿಚೂರು ಮೋಹನ್ ಹಾಗೂ ಘಟದಲ್ಲಿ ವೆಂಕಟಸುಬ್ರಮಣ್ಯ ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.