ಬೆಂಗಳೂರಿಗೆ ಮೊದಲು ಬಂದ ಖಾಸಗಿ ರೇಡಿಯೋ ವಾಹಿನಿ `ರೇಡಿಯೋ ಸಿಟಿ~. ಶುರುವಿಗೆ ಅದರಲ್ಲಿ ಬರೀ ಇಂಗ್ಲಿಷ್ ಹಾಡು ಹಾಕುತ್ತಿದ್ದರು. 2006ರಲ್ಲಿ ರೇಡಿಯೋ ಮಿರ್ಚಿ ಬಂದು ಸ್ಪರ್ಧೆಯ ವಾತಾವರಣ ಸೃಷ್ಟಿಯಾಯಿತು. ಮೊದಮೊದಲು ಮಿರ್ಚಿಯಲ್ಲಿ ಬರೀ ಹಿಂದಿ ಹಾಡು ಹಾಕುತ್ತಿತ್ತು.
ಬೆಂಗಳೂರು ಬಹುಭಾಷಾ ನಗರ ಅನ್ನುವುದು ನಿಜ. ಆದರೆ ಹೊರನೋಟಕ್ಕೆ ಕನ್ನಡ ಹಾಡು ಕೇಳುವವರೇ ಇಲ್ಲಿ ಇಲ್ಲ ಎಂಬಂಥ ನೆಲೆಯಿಂದ ಹೊರಟ ಈ ವಾಹಿನಿಗಳು ಬರುಬರುತ್ತಾ ತಮ್ಮ ಸಿದ್ಧಾಂತವನ್ನು ಬದಲಾಯಿಸಿಕೊಂಡವು. ಈಗ ಈ ಎರಡೂ ವಾಹಿನಿಗಳು ಕನ್ನಡ ಬಿಟ್ಟು ಬೇರೆ ಯಾವ ಭಾಷೆಯ ಹಾಡನ್ನೂ ಬಿತ್ತರಿಸುವುದಿಲ್ಲ.
ಈಚಿನ ವರ್ಷಗಳಲ್ಲಿ ಇನ್ನೂ ಹಲವಾರು ರೇಡಿಯೋ ಸ್ಟೇಷನ್‌ಗಳು ಬಂದಿವೆ. ಈಗ ಹನ್ನೊಂದು ಎಫ್‌ಎಂ ವಾಹಿನಿಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿವೆ. ಇವುಗಳಲ್ಲಿ ಮೂರು ಪ್ರಸಾರ ಭಾರತಿ (ಆಲ್ ಇಂಡಿಯ ರೇಡಿಯೋ) ನಡೆಸುವ ವಾಹಿನಿಗಳು. ಗ್ಯಾನ್ ವಾಣಿ (ಜ್ಞಾನ ವಾಣಿ ಎಂಬರ್ಥ) ಎಂಬುದು ಶಿಕ್ಷಣಕ್ಕೆ ಮೀಸಲಾದ, ಮುಕ್ತ ವಿಶ್ವವಿದ್ಯಾಲಯದವರು ನಡೆಸುವ ವಾಹಿನಿ. ರೇಡಿಯೋ ಒನ್, ಫೀವರ್ ಮತ್ತು ಇಂಡಿಗೋ ಬಿಟ್ಟರೆ ಬೇರೆಲ್ಲ ಖಾಸಗಿ ವಾಹಿನಿಗಳೂ ಕನ್ನಡ ಹಾಡುಗಳನ್ನು ಬಿತ್ತರಿಸುತ್ತಿವೆ. ಬೆಂಗಳೂರಿನಲ್ಲಿ ಎರಡು ವಾಣಿಜ್ಯೇತರ ಸಮುದಾಯ ರೇಡಿಯೋ ನಿಲಯಗಳೂ ಇವೆ.
ಇಷ್ಟೆಲ್ಲ ಇದ್ದರೂ ಬೆಂಗಳೂರಿನ ಫಿಲ್ಮೇತರ ಸಂಗೀತಗಾರರು ಯಾವುದೇ ಖಾಸಗಿ ಬಾನುಲಿ ಸಂಸ್ಥೆಯ ಬೆಂಬಲವೂ ಇಲ್ಲದೆ ಸೊರಗುತ್ತಿದ್ದಾರೆ. ಇದೊಂದು ವಿಚಿತ್ರವಾದ ಪರಿಸ್ಥಿತಿ. ಕಮರ್ಷಿಯಲ್ ಸಂಗೀತವನ್ನು ನಮ್ಮ ಮೇಲೆ ಹೇರುವುದೊಂದೇ ಖಾಸಗಿ ಎಫ್‌ಎಂನ ಉದ್ದೇಶವೇ? ಈ ಊರಿನ ಸಂಗೀತಗಾರಿಗೆ, ಸಂಗೀತ ವೈವಿಧ್ಯಕ್ಕೆ ವೇದಿಕೆಯಾಗಬೇಕು ಎನ್ನುವ ಯೋಚನೆ ಈ ವಾಹಿನಿಗಳಿಗೆ ಏಕೆ ಬರುತ್ತಿಲ್ಲ?
ಸಾಮಾನ್ಯವಾಗಿ ಕೇಳಿಬರುವ ವಾದ: ವ್ಯಾಪಾರಸ್ಥರಿಗೆ ತಮ್ಮ ಸಾಮ್ರೋಜ್ಯವನ್ನು ಎಲ್ಲ ನಗರಗಳಲ್ಲೂ ವಿಸ್ತರಿಸುವ ಆಸೆಯಿರುತ್ತದೆಯೇ ಹೊರತು ಆಯಾ ನಗರದ ವಿಶಿಷ್ಟ ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ಆಸಕ್ತಿ ಇರುವುದಿಲ್ಲ.
ನಮಗೆಲ್ಲ ಗೊತ್ತಿರುವಂತೆ, ಶಾಸ್ತ್ರೀಯ ಸಂಗೀತವನ್ನು ಆಕಾಶವಾಣಿ ತುಂಬಾ ಪ್ರೀತಿಯಿಂದ, ಹೊಣೆಗಾರಿಕೆಯಿಂದ ಬೆಳೆಸಿಕೊಂಡು ಬಂದಿದೆ. ಅಮೃತವರ್ಷಿಣಿ (100.1) ವಾಹಿನಿ ಮಾಡುತ್ತಿರುವ ಕೆಲಸ ಎಷ್ಟು ಅಮೂಲ್ಯ ಎಂದು ಎಷ್ಟೋ ಜನಕ್ಕೆ ಗೊತ್ತಿರಲಾರದು. ಲಾಭ ಒಂದೇ ಗುರಿಯಾಗಿರುವ ಖಾಸಗಿ ವಾಹಿನಿಗಳಿಗೂ ಸರ್ಕಾರದ ಬೆಂಬಲದಿಂದ ನಡೆಯುತ್ತಿರುವ ಅಮೃತವರ್ಷಿಣಿಗೂ ಇರುವ ದೊಡ್ಡ ವ್ಯತ್ಯಾಸ ಕಿವಿಯಾರೆ ಕೇಳುವ ಅವಕಾಶ ನಮಗೆ ಮಾತ್ರ ಇದೆ. (ಭಾರತದ ಬೇರೆ ಯಾವ ಊರಿನಲ್ಲೂ ಶಾಸ್ತ್ರೀಯ ಸಂಗೀತಕ್ಕೇ ಮೀಸಲಾದ ರೇಡಿಯೋ ವಾಹಿನಿ ಇಲ್ಲ). ಪ್ರಪಂಚದಲ್ಲೇ ಅತಿ ದೊಡ್ದದೆನಿಸಿಕೊಳ್ಳಬಹುದಾದ ಭಾರತೀಯ ಸಂಗೀತದ ಭಂಡಾರವೆಂದರೆ `ಆಲ್ ಇಂಡಿಯ ರೇಡಿಯೋ~.
ಸುಗಮ ಸಂಗೀತ, ಜನಪದ ಸಂಗೀತ, ಗಮಕದಂತಹ ಬೇರೆ ಬೇರೆ ಪ್ರಕಾರಗಳನ್ನು ಆಕಾಶವಾಣಿಯ ವಾಹಿನಿಗಳು ಬಿತ್ತರಿಸುತ್ತಿದೆ.
ಆದರೆ ಖಾಸಗಿ ವಾಹಿನಿಗಳಿಗೆ ಇಂಥ ಯಾವ ಪ್ರಕಾರದಲ್ಲೂ ಆಸಕ್ತಿ ಇಲ್ಲ. ಸ್ವಂತ ಸಂಗೀತವನ್ನು ಧ್ವನಿಮುದ್ರಿಸುವ ಗೋಜಿಗೇ ಹೋಗದ ಈ ವಾಹಿನಿಗಳಿಗೆ ಸಿನಿಮಾ ಸಂಗೀತ ಬಿಟ್ಟರೆ ಬೇರೆ ಏನೂ ಕಣ್ಣಿಗೆ ಬೀಳುವುದಿಲ್ಲ. ಖಾಸಗಿ ಚಾನೆಲ್‌ಗಳು ಸಂಗೀತವನ್ನು ಧ್ವನಿಮುದ್ರಿಸುವ ಸೌಕರ್ಯವನ್ನೂ ಕಲ್ಪಿಸಿಕೊಂಡಿಲ್ಲ.
ಕಂಪ್ಯೂಟರ್‌ನಿಂದ ಹಾಡನ್ನು ಬಿತ್ತರಿಸುವುದಕ್ಕೆ, ಆರ್‌ಜೆಗಳು ಹರಟುವುದಕ್ಕೆ ಎಷ್ಟು ಬೇಕೋ ಅಷ್ಟು ವ್ಯವಸ್ಥೆಯನ್ನು ಮಾಡಿಕೊಂಡು ಕೆಲಸ ಮುಗಿಸುತ್ತಿವೆ.
ಬೆಂಗಳೂರಿನ ಅತಿ ಜನಪ್ರಿಯ ಫಿಲ್ಮೇತರ ಸಂಗೀತ ಪ್ರಕಾರ ಯಾವುದು? ನನಗನ್ನಿಸುವಂತೆ, ಅದು ಸುಗಮ ಸಂಗೀತವೇ ಇರಬೇಕು. ನೂರಾರು ಸಂಗೀತಗಾರರು ಈ ಪ್ರಕಾರದಲ್ಲಿ ತೊಡಗಿದ್ದಾರೆ, ಕಾರ್ಯಕ್ರಮ ಕೊಡುತ್ತಿದ್ದಾರೆ.
ಕನ್ನಡ ಕಾವ್ಯವನ್ನು ಹಾಡುತ್ತಿದ್ದಾರೆ. ಎಂಬತ್ತರ ದಶಕದಲ್ಲಿ ಸುಗಮ ಸಂಗೀತದ ಧ್ವನಿಮುದ್ರಣಗಳು ತುಂಬಾ ಬರುತ್ತಿದ್ದವು. ಈಗ ಅವುಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ ರಾಜ್ಯೋತ್ಸವ, ಗಣೇಶ ಹಬ್ಬದ ಸಂದರ್ಭದಲ್ಲಿ, ಮದುವೆ ಮನೆಗಳಲ್ಲಿ ಈ ಪ್ರಕಾರ ಹಿಂದೆಂದಿಗಿಂತಲೂ ಜನಪ್ರಿಯವಾದಂತಿದೆ. ಸಿನಿಮಾ ಆರ್ಕೆಸ್ಟ್ರಾದಲ್ಲಿ ನಿರತರಾದ ಕೆಲವರು ಹೇಳುವಂತೆ, ಇಂದು ಹೊಸ ಸಿನಿಮಾ ಹಾಡನ್ನು ಕೇಳುವ ವ್ಯವಸ್ಥಾಪಕರು ತೀರ ಅಪರೂಪ. ಕನ್ನಡ ಬಲ್ಲವರ ಸಭೆ ಸಮಾರಂಭಗಳಲ್ಲಿ ಭಾವಗೀತೆ ಮತ್ತು ಹಳೆ ಚಿತ್ರ ಗೀತೆಗಳನ್ನು ಕೇಳುತ್ತಿದ್ದಾರೆಯೇ ಹೊರತು ಹೊಸ ಚಿತ್ರಗೀತೆಗಳನ್ನಲ್ಲ. ಈ ಜನಾಭಿರುಚಿಗೆ ಸ್ಪಂದಿಸುವುದು ಖಾಸಗಿ ವಾಹಿನಿಗಳಿಗೆ ಹಲವಾರು ಕಾರಣಗಳಿಂದ ಸಾಧ್ಯವಾಗುತ್ತಿಲ್ಲ.
ಪಶ್ಚಿಮದಲ್ಲಿ ರೇಡಿಯೋ ಸಂಗೀತವೆಂದರೆ ಫಿಲ್ಮೇತರ ಸ್ವತಂತ್ರ ಸಂಗೀತವೇ. ಆದರೆ ಇಲ್ಲಿ ನಾವು ಸಿನಿಮಾಕ್ಕೆ ತೀರ ಕೆಟ್ಟದಾಗಿ ಜೋತು ಬಿದ್ದಿದ್ದೇವೆ. ಬ್ಯಾಂಡ್‌ಗಳು, ತನಿ ಹಾಡುಗಾರರು ಮಾಡಿದ ರೆಕಾರ್ಡಿಂಗ್‌ಗಳನ್ನೇ ಅಲ್ಲಿನ ರೇಡಿಯೋ ನಿಲಯಗಳು ಪ್ರಸಾರ ಮಾಡುವುದು. ಇಲ್ಲೇ ಹುಟ್ಟಿ, ಬೇರೂರಿರುವ ಸಂಗೀತ ಪ್ರಕಾರವನ್ನು ಬಿತ್ತರಿಸಿ ಇಲ್ಲಿನ ಸಂಗೀತಗಾರರ ಮತ್ತು ಕೇಳುಗರ ನಡುವೆ ಸೇತುವೆ ಏರ್ಪಡಿಸುವ ಕೆಲಸ ಮಾಡಿದಲ್ಲಿ ಎಫ್‌ಎಂ ಚಾನಲ್‌ಗಳು ನಿಜ ಅರ್ಥದಲ್ಲಿ ಜನಪ್ರಿಯವಾಗಬಹುದಲ್ಲವೇ?
ಎಫ್‌ಎಂ ರೇನ್‌ಬೋದಂಥ ಎಐಆರ್ ನಡೆಸುವ ವಾಹಿನಿಯಲ್ಲೋ ಸುಗಮ ಸಂಗೀತಕ್ಕೆ ಸ್ವಲ್ಪ ತೊಡಕಿದ್ದಂತಿದೆ. ಆಡಿಶನ್ ಆಗದ ಸಂಗೀತಗಾರರು ಮಾಡಿದ ಧ್ವನಿಮುದ್ರಣಗಳನ್ನು ಅಲ್ಲಿ ಪ್ರಸಾರ ಮಾಡುವುದೇ ಇಲ್ಲವಂತೆ. ಒಂದು ಸೀಡಿಯಲ್ಲಿ ಭಾಗವಹಿಸಿದ ಎಲ್ಲ ಸಂಗೀತಗಾರರೂ ಆಡಿಶನ್ ಮಾಡಿಕೊಂಡಿರಬೇಕು ಎಂದು ನಿರೀಕ್ಷಿಸುವುದು ಅವಾಸ್ತವಿಕ ಅಲ್ಲವೇ? ಹೊಸ ತಲೆಮಾರಿನ ಭಾವಗೀತೆ ಮತ್ತು ಫಿಲ್ಮೇತರ ಸಂಗೀತ ಇಲ್ಲೂ ಪ್ರಸಾರವಾಗುತ್ತಿಲ್ಲ.
ಕನ್ನಡದ ಮಟ್ಟಿಗೆ, ಬೆಂಗಳೂರಿನಲ್ಲಿ ಹಬ್ಬಿ ಬೆಳೆದಿರುವ ಸ್ವತಂತ್ರ ಸಂಗೀತವೆಂದರೆ ಸುಗಮ ಸಂಗೀತ ಮತ್ತು ಈಚೆಗೆ ಹುಟ್ಟಿಕೊಳ್ಳುತ್ತಿರುವ, ನಾಲ್ಕೈದು ಸಂಗೀತಗಾರರು ಸೇರಿ ಮಾಡಿಕೊಳ್ಳುವ ಬ್ಯಾಂಡ್ ಸಂಗೀತ. ಇದನ್ನು ಗುರುತಿಸಿ, ಫಿಲ್ಮೇತರ ಸಂಗೀತಗಾರರಿಗೆ ದಿನದಲ್ಲಿ ಒಂದೆರಡು ಗಂಟೆಯಾದರೂ ಸಮಯ ಮೀಸಲಿಡುವ ದಿನ ಎಂದಾದರೂ ಬಂದೀತೆ?
ಇನ್ನಷ್ಟು ಹುಳಿ-ಸಿಹಿ ಖ್ಯಾತರು
ಕೀ ರಮ್ ನಾಗರಾಜ್, ಬಿಯರ್ ಪಂತುಲು, ಸಾರಾಯ್ ಗೋವಿಂದು, ಮಜ್ಜಗೇಶ್, ಬಿ ಜೋಯ್ಸ-ರೀ, ಮೈಸೂರ್ ಪಾಕ್ ನರಸಿಂಹಸ್ವಾಮಿ, ಸಂದೇಶ್ ನಾಗರಾಜು (ಸಂದೇಶ್ ಅನ್ನೋದು ಬಂಗಾಳಿ ಸಿಹಿ ತಿಂಡಿ)... ಖ್ಯಾತರು ಮತ್ತು ತಿಂಡಿ-ತೀರ್ಥ ಒಟ್ಟೊಟ್ಟಿಗೆ ನೆನೆದಾಗ ಹೊಳೆಯುವ ಹೆಸರುಗಳ ಪಟ್ಟಿ ಬೆಳೆಯುತ್ತಲೇ ಇದೆ. ಇವುಗಳಲ್ಲಿ ಕೆಲವನ್ನು ಸೂಚಿಸಿದವರು ಖ್ಯಾತ ರಂಗ ನಿರ್ದೇಶಕ ರಘುನಂದನ. ಈ ಹುಡುಗಾಟದ ಪಟ್ಟಿಗೆ ಸೇರಿಸಬಹುದಾದ ಇನ್ನೇನಾದರೂ ಹೆಸರು ನಿಮಗೆ ಹೊಳೆದರೆ ಇ-ಮೇಲ್‌ಗೆ ಕಳಿಸಿಕೊಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.