ADVERTISEMENT

ಲಲಿತಕಲಾ ಪರಿಷತ್‌ಗೆ 750ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ಪದ್ಮಭೂಷಣ, ಗಾಂಧಿವಾದಿ ಡಾ.ಎಚ್. ನರಸಿಂಹಯ್ಯ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ; ಶಿಕ್ಷಣತಜ್ಞ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿಯೂ ಆಗಿದ್ದವರು. ಅವರು ಸ್ಥಾಪಿಸಿದ ನ್ಯಾಷನಲ್ ಎಜುಕೇಷನ್ ಸೊಸೈಟಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.

ಲಲಿತ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 1990ರಲ್ಲಿ ಬೆಂಗಳೂರು ಲಲಿತಕಲಾ ಪರಿಷತ್ ಸ್ಥಾಪಿಸಿದ ಹೆಗ್ಗಳಿಕೆ ಸಹ ಅವರಿಗೆ ಸಲ್ಲುತ್ತದೆ. ಇದು ನಗರದ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿದೆ. 

ಕಳೆದ 21 ವರ್ಷದಲ್ಲಿ ಎಲ್ಲ ಹೆಸರಾಂತ ಕಲಾವಿದರು ಇಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಜತೆಗೆ ಹಲವು ಹೊಸ ಪ್ರತಿಭೆಗಳಿಗೆ ಇದು ವೇದಿಕೆ ಕಲ್ಪಿಸಿದೆ. ಒಮ್ಮೆಯೂ ತಪ್ಪದಂತೆ ನಿರಂತರವಾಗಿ 749 ಕಾರ್ಯಕ್ರಮ ನಡೆಸಿದೆ.

ಎಚ್ಚೆನ್ ಕಾಲಾನಂತರ ಅವರ ಆಶಯಕ್ಕೆ ಚ್ಯುತಿಬಾರದ ರೀತಿಯಲ್ಲಿ ಸಂಸ್ಥೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಕೀರ್ತಿ ಅವರ ಅಚ್ಚುಮೆಚ್ಚಿನ ಶಿಷ್ಯ, ಇಂದಿನ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅವರಿಗೆ ಸಲ್ಲುತ್ತದೆ.

ಕಲೆ, ಸಂಸ್ಕೃತಿ ಶಿಕ್ಷಣದ ಅವಿಭಾಜ್ಯ ಅಂಗ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಬೇಕು. ಆ ಮೂಲಕ ಲಲಿತ ಕಲೆಗಳನ್ನು ನಾಡಿನಾದ್ಯಂತ ಜೀವಂತವಾಗಿ ಇರಿಸಬೇಕು ಎಂದು ಪಣ ತೊಟ್ಟಂತೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಲಲಿತಕಲಾ ಪರಿಷತ್‌ನ ಜೀವನಾಡಿ. ಒಂದರ್ಥದಲ್ಲಿ ಒನ್‌ಮ್ಯಾನ್ ಆರ್ಮಿ.

`ಸಮಾಜ ಹಾಗೂ ಶಾಲೆಯ ನಡುವೆ ಸಾಂಸ್ಕೃತಿಕ ಕೊಂಡಿ ಬೆಸೆಯುವ ನಿಟ್ಟಿನಲ್ಲಿ ಲಲಿತಕಲಾ ಪರಿಷತ್‌ನ ಪಾತ್ರ ಹಿರಿದು. 20 ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರದಂದು ತಪ್ಪದೇ ಕಾರ್ಯಕ್ರಮ ಏರ್ಪಡಿಸಿದ ಹೆಗ್ಗಳಿಕೆ ಇದಕ್ಕಿದೆ.

ಇಲ್ಲಿ ಅತಿರಥ ಮಹಾರಥ ಕಲಾವಿದರೆಲ್ಲರೂ ಕಾರ್ಯಕ್ರಮ ನೀಡಿದ್ದಾರೆ. ನಾಡಿನ ಹೆಸರಾಂತ ಕಲಾವಿದರೆಲ್ಲರೂ ಸಂಸ್ಥೆಯ ಹಿರಿಮೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅತಿ ಕಡಿಮೆ ಸಂಭಾವನೆ ತೆಗೆದುಕೊಂಡು ಕಾರ್ಯಕ್ರಮ ನೀಡಿದ್ದಾರೆ. ಅವರನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ~ ಎನ್ನುತ್ತಾರೆ ರಾಮರಾವ್.

`ಟಿವಿ ಹಾಗೂ ಸಿನಿಮಾ ಅಬ್ಬರದಲ್ಲಿ ತನ್ನ ಮೊನಚು ಕಳೆದುಕೊಂಡಿದ್ದ ರಂಗಭೂಮಿ ಇಲ್ಲಿ ಸದಾ ಜೀವಂತಿಕೆಯಿಂದ ನಳನಳಿಸುತ್ತಿದೆ. ಎಚ್ಚೆನ್ ಕಲಾಕ್ಷೇತ್ರದಲ್ಲಿ ಸುಮಾರು 350ಕ್ಕೂ ಅಧಿಕ ನಾಟಕಗಳು ಪ್ರದರ್ಶನಗೊಂಡಿವೆ.
 
ಬಿ.ಜಯಶ್ರೀ, ಸಿ.ಆರ್.ಸಿಂಹ, ಬಿ.ವಿ.ರಾಜಾರಾಂ ಅವರಂತಹ ರಂಗಭೂಮಿಯ ಮೇರು ಪ್ರತಿಭೆಗಳು ಇಲ್ಲಿ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಹೆಗ್ಗೋಡಿನ ನೀನಾಸಂ ಕಲಾವಿದರ ತಿರುಗಾಟದ ಮೊದಲ ನಾಟಕ ಈ ಕಲಾಕ್ಷೇತ್ರದಲ್ಲಿಯೇ ಪ್ರದರ್ಶನಗೊಳ್ಳುತ್ತದೆ.
 
ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳ ತಂಡ ಸಹ ಹಲವು ನಾಟಕ ಪ್ರದರ್ಶಿಸಿದ ಹಿರಿಮೆ ಹೊಂದಿದ್ದಾರೆ~ ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ ಅವರು
ವೀಣೆ ದೊರೆಸ್ವಾಮಿ ಅಯ್ಯಂಗಾರ್, ಆರ್.ಕೆ. ಶ್ರೀಕಂಠನ್, ಕದ್ರಿ ಗೋಪಾಲನಾಥ್, ಎಂ.ಎಸ್.ಶೀಲಾ ಹೀಗೆ ಇಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
 
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿಗೆ ಅನ್ವರ್ಥವಾಗುವ ರೀತಿಯಲ್ಲಿದೆ  ಡಾ.ಎಚ್ಚೆನ್ ಕಲಾಕ್ಷೇತ್ರ. ಏಕೆಂದರೆ ಇಲ್ಲಿ ಹಾಡದ ಕಲಾವಿದರಲ್ಲ. ಎಚ್ಚೆನ್ ಸ್ಮರಣಾರ್ಥವಾಗಿ ರಾಮಸುಧಾ ಚಾರಿಟೆಬಲ್ ಟ್ರಸ್ಟ್ ಪ್ರತಿವರ್ಷ ಜೂನ್ 6ರಿಂದ 30ರ ವರೆಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ವಿಭಿನ್ನ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ.

ಪದ್ಮನಾಭ ಗಾಯನ
ಈ ಶುಕ್ರವಾರ ಬೆಂಗಳೂರು ಲಲಿತಕಲಾ ಪರಿಷತ್ ನಡೆಸುವ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಸಂಭ್ರಮ. ಏಕೆಂದರೆ ಇದು ಪರಿಷತ್‌ನ 750ನೇ ಕಾರ್ಯಕ್ರಮ. ಇದರ ಅಂಗವಾಗಿ ವಿದ್ವಾನ್ ಆರ್.ಕೆ.ಪದ್ಮನಾಭ ಅವರಿಂದ ಗಾಯನ.
 
ಪಕ್ಕವಾದ್ಯದಲ್ಲಿ ಆರ್.ಕೆ.ಶ್ರೀರಾಮ್ ಕುಮಾರ್ (ಪಿಟೀಲು), ವಿದ್ವಾನ್ ಕೆ.ಅರುಣ್ ಪ್ರಕಾಶ್ (ಮೃದಂಗ) ಹಾಗೂ ವಿದ್ವಾನ್ ಜಿ.ಗುರುಪ್ರಸನ್ನ (ಖಂಜರಿ).  ಸ್ಥಳ: ಡಾ. ಎಚ್ಚೆನ್ ಕಲಾಕ್ಷೇತ್ರ, ನ್ಯಾಷನಲ್ ಕಾಲೇಜು ಆವರಣ, ಜಯನಗರ 7ನೇ ಬ್ಲಾಕ್. ಸಂಜೆ 6.30. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.