ADVERTISEMENT

ವಜ್ರಕ್ಕೂ ಸರ್ಟಿಫಿಕೇಟ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 19:30 IST
Last Updated 26 ಆಗಸ್ಟ್ 2011, 19:30 IST
ವಜ್ರಕ್ಕೂ ಸರ್ಟಿಫಿಕೇಟ್
ವಜ್ರಕ್ಕೂ ಸರ್ಟಿಫಿಕೇಟ್   

`ಉತ್ಕೃಷ್ಟ ದರ್ಜೆ ವಜ್ರಕ್ಕೆ ಪ್ರಪಂಚದಲ್ಲೇ ಅತಿ ಹೆಚ್ಚು ಬೇಡಿಕೆ ಇರುವುದು ದಕ್ಷಿಣ ಭಾರತದಲ್ಲಿ. ಆದರೆ, ಇಲ್ಲಿ ವಜ್ರದ ಗುಣಮಟ್ಟವನ್ನು ಪ್ರಮಾಣೀಕರಿಸುವ ಯಾವುದೇ ಸಂಸ್ಥೆ ಇಲ್ಲ~ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ಇಂಟರ್‌ನ್ಯಾಷನಲ್ ಜೆಮೊಲಾಜಿಕಲ್ ಇನ್‌ಸ್ಟಿಟ್ಯೂಟ್ (ಐಜಿಐ) ವ್ಯವಸ್ಥಾಪಕ ನಿರ್ದೇಶಕ ರಮಿತ್ ಕಪೂರ್.

ಈಚಿನ ದಿನಗಳಲ್ಲಿ ಚಿನ್ನಕ್ಕೆ ಎಲ್ಲಿಲ್ಲದ ಬೇಡಿಕೆ. ಜನರು ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಲು ಹೆಚ್ಚು ಇಷ್ಟಪಡುವುದರಿಂದ ಬೆಲೆ ದಿನೇ ದಿನೇ ಏರುತ್ತಿದೆ.  ಹಾಗೆಯೇ ವಜ್ರಕ್ಕೂ ಅಪಾರ ಬೇಡಿಕೆ ಇದೆ. ಚಿನ್ನದ ಗುಣಮಟ್ಟವನ್ನು ಅಳೆಯಲು ಹಾಲ್‌ಮಾರ್ಕ್, ಕೆಡಿಎಂ ಮೊದಲಾದ ಸಂಸ್ಥೆಗಳಿವೆ. ಆದರೆ ವಜ್ರದ ಗುಣಮಟ್ಟವನ್ನು ಪ್ರಮಾಣೀಕರಿಸಲು ಯಾವುದೇ ಸರ್ಕಾರಿ, ಖಾಸಗಿ ಪ್ರಮಾಣಿಕರಣ ಸಂಸ್ಥೆಗಳು ಇಲ್ಲ.ಆಭರಣ ಅಂಗಡಿಯವರು ನೀಡುವ ಆಶ್ವಾಸನೆಯನ್ನೇ ನಂಬಿ ವಜ್ರ ಖರೀದಿ ಮಾಡುತ್ತಾರೆ. ಈ ಕೊರಗನ್ನು ನಿವಾರಿಸಲು ಐಜಿಐ ಮುಂದಾಗಿದೆ.

ಪ್ರಪಂಚದಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ಬೆಲ್ಜಿಯಂ ಮೂಲದ `ಐಜಿಐ~ ಅಂತರ್‌ರಾಷ್ಟ್ರೀಯ ಮನ್ನಣೆ ಪಡೆದ ವಜ್ರ ಸರ್ಟಿಫಿಕೇಷನ್ ಸಂಸ್ಥೆ. ವಿದೇಶಗಳಲ್ಲಿ ಮಾತ್ರವಲ್ಲದೆ ದೆಹಲಿ, ಮುಂಬೈ, ಕೋಲ್ಕತ್ತ, ತ್ರಿಶೂರ್, ಚೆನ್ನೈ ಸೇರಿದಂತೆ ದೇಶದ ವಿವಿಧೆಡೆ ವಜ್ರ ಪ್ರಮಾಣಿಸಿ ಕೊಡುವ ಸುಸಜ್ಜಿತ ಪ್ರಯೋಗಾಲಯ ತೆರೆದಿದೆ.

ಇಲ್ಲಿ ಗ್ರಾಹಕರು ತಾವು ಕೊಂಡ ವಜ್ರದ ಗುಣಮಟ್ಟದ ಪ್ರಮಾಣ ಪತ್ರ ಪಡೆಯಬಹುದು. ಈ ಸರ್ಟಿಫೈಡ್ ಕಾರ್ಡ್‌ನಲ್ಲಿ ವಜ್ರದ ಎಲ್ಲ ಮಾಹಿತಿಯನ್ನು ನಿಖರವಾಗಿ ಸೂಚಿಸಲಾಗಿರುತ್ತದೆ. ಇದಕ್ಕೆ ರೂ.350 ಶುಲ್ಕ.

ಜೊತೆಗೆ ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ವಜ್ರ ಪ್ರಮಾಣೀಕರಣ ದಿಂದ ಆಗುವ ಪ್ರಯೋಜನ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲು ಇದು ಈಚೆಗೆ ಪುರಭವನದಲ್ಲಿ ವರ್ಬ್ಯಾಟಲ್ ಸ್ಪರ್ಧೆ ಆಯೋಜಿಸಿತ್ತು. ಇಲ್ಲಿ ಸುಮಾರು 200 ಶಾಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಪಾಲ್ಗೊಂಡಿದ್ದರು.ತಾವು ಈವರೆಗೆ ಕೊಂಡ ವಜ್ರದ ಗುಣಮಟ್ಟದ ಬಗ್ಗೆ ಕಾಳಜಿ ತೆಗೆದುಕೊಳ್ಳದಿರುವುದಕ್ಕೆ ಪೋಷಕರು ಅಲವತ್ತುಕೊಂಡರು.

ಸಂಚಾರಿ ಲ್ಯಾಬ್: `ಗ್ರಾಹಕರ ಪ್ರತಿಕ್ರಿಯೆ ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷಾಂತ್ಯದಲ್ಲಿ ಬೆಂಗಳೂರಲ್ಲೇ ಲ್ಯಾಬ್ ತೆರೆಯಲಾಗುವುದು. ಸದ್ಯಕ್ಕೆ ನಾವು ಪ್ರತಿ 15 ದಿನಕ್ಕೊಮ್ಮೆ ಬೆಂಗಳೂರಿನಲ್ಲಿ ಮೊಬೈಲ್ ಲ್ಯಾಬೊರೇಟರಿ ಸೌಲಭ್ಯ ಒದಗಿಸಲಿದ್ದೇವೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಐಜಿಐ ಈಗಾಗಲೇ ಜೋಯಾಲುಕ್ಕಾಸ್, ಅಪರಂಜಿ, ಕಲ್ಯಾಣ್, ಶ್ರೀಕೃಷ್ಣ ಮೊದಲಾದ ಜ್ಯುವೆಲರಿಗಳೊಂದಿಗೆ ಕೈಜೋಡಿಸಿದೆ~ ಎನ್ನುತ್ತಾರೆ ರಮಿತ್.

ಐಜಿಐ ವಜ್ರ ಪ್ರಮಾಣಿಕರಣದ ಜೊತೆಗೆ ತರಬೇತಿ ನೀಡುವ ಕಾರ್ಯ ಸಹ ಮಾಡುತ್ತಿದೆ. ಪ್ರತಿ 6 ತಿಂಗಳಿಗೊಮ್ಮೆ 6 ದಿನದ ಜೆಮೆಟಾಲಜಿ ಕುರಿತ ತರಬೇತಿ ಕಾರ್ಯಾಗಾರ ಏರ್ಪಡಿಸುತ್ತಾ ಬರುತ್ತಿದೆ. ಇಲ್ಲಿ ಜ್ಯುವೆಲರಿ ಡಿಸೈನಿಂಗ್, ವಜ್ರ ಪ್ರಮಾಣೀಕರಿಸಿ ನೋಡುವ ಕಲೆ ಕುರಿತು ಪ್ರಾಯೋಗಿಕವಾಗಿ ಹೇಳಿಕೊಡಲಾಗುವುದು. ಇದರಿಂದ ಉದ್ಯೋಗ ಸೃಷ್ಟಿ ಸಹ ಆಗುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.