ADVERTISEMENT

ವರದರಾಜು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 19:30 IST
Last Updated 18 ಫೆಬ್ರುವರಿ 2011, 19:30 IST

ಎಸ್.ಪಿ. ವರದರಾಜು ಆತ್ಮೀಯರ ಬಳಗ: ಶನಿವಾರ ನಾಟಕಕಾರ ಲಾಲ್ ಮಹಮದ್ ಅಲ್ದಾಳ ಮತ್ತು ರೇವತಿ ಕಲ್ಯಾಣ್‌ಕುಮಾರ್ ಅವರಿಗೆ ವರದರಾಜು ಪ್ರಶಸ್ತಿ ಪ್ರದಾನ. ಆಶಯ ನುಡಿ: ಬರಗೂರು ರಾಮಚಂದ್ರಪ್ಪ, ಅತಿಥಿ: ಬಿ.ಎಂ.ವೆಂಕಟೇಶ್. ಅಧ್ಯಕ್ಷತೆ: ನಟ ಲೋಕನಾಥ್.

ದಿವಂಗತ ವರದರಾಜು ಅವರು ಡಾ. ರಾಜ್‌ಕುಮಾರ್ ಅವರ ತಮ್ಮ. ಅಣ್ಣನ ವೃತ್ತಿಜೀವನದ ಉದ್ದಕ್ಕೂ ಬೆನ್ನೆಲುಬಾಗಿ ನಿಂತು ಸಹಕರಿಸಿದವರು. ರಾಜ್‌ಕುಮಾರ್ ತಮ್ಮನೊಂದಿಗೆ ಗಾಢ ಬಾಂಧವ್ಯ ಹೊಂದಿದ್ದರು. ವರದರಾಜು ನೆನಪಿನಲ್ಲಿ ‘ಎಸ್.ಪಿ. ವರದರಾಜು ಆತ್ಮೀಯರ ಬಳಗ’ ಪ್ರತಿ ವರ್ಷ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ತಲಾ ಒಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಈ ಸಾಲಿನ ರಂಗ ಪ್ರಶಸ್ತಿಗೆ ಗುಲ್ಬರ್ಗ ಜಿಲ್ಲೆ ಜೇವರ್ಗಿ ತಾಲ್ಲೂಕು ಮಳ್ಳಿ ಗ್ರಾಮದ ಲಾಲ್ ಮಹಮದ್ ಅಲ್ದಾಳ ಅವರನ್ನು ಆಯ್ಕೆ ಮಾಡಲಾಗಿದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಗುಲ್ಬರ್ಗ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ವಿಜಾಪುರ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಸತತವಾಗಿ ನಾಟಕ ಬರೆದು ಆಡಿಸುತ್ತ ಬಂದಿರುವ ಅಲ್ದಾಳರು ಹೆಸರಾಂತ ವೃತ್ತಿ ನಾಟಕಕಾರರು.

ಅಲ್ದಾಳ   
 ರೇವತಿ ಕಲ್ಯಾಣ್‌ಕುಮಾರ್

‘ಅಲ್ದಾಳ ಕವಿ’ಗಳೆಂದೇ ಖ್ಯಾತರು. ಪವಾಡ ಪುರುಷರ ಬಗ್ಗೆ 40ಕ್ಕೂ ಹೆಚ್ಚು ನಾಟಕಗಳನ್ನು ಬರೆದು ನಿರ್ದೇಶಿಸಿ ಅವುಗಳ ಸಾವಿರಾರು ಪ್ರಯೋಗಗಳಿಗೆ ಕಾರಣರಾಗಿದ್ದಾರೆ. 73ರ ಹರಯದಲ್ಲೂ ಅಲ್ದಾಳ ಕವಿಗಳು ನಾಟಕಗಳನ್ನು ಕಲಿಸುತ್ತ ಹಳ್ಳಿ ಹಳ್ಳಿ ಸುತ್ತುತ್ತಾರೆ. ಬರವಣಿಗೆ, ನಿರ್ದೇಶನ ಅವರ ನಿರಂತರ ಕಾಯಕ. ಹಾಗಾಗಿ ಅವರು ನಿಜ ಅರ್ಥದಲ್ಲಿ ರಂಗ ಜಂಗಮ.

ಚಲನಚಿತ್ರ ಕ್ಷೇತ್ರದ ಪ್ರಶಸ್ತಿಯನ್ನು ದಿವಂಗತ ನಟ ಕಲ್ಯಾಣ್‌ಕುಮಾರ್ ಅವರ ಪತ್ನಿ ರೇವತಿ ಕಲ್ಯಾಣ್‌ಕುಮಾರ್ ಅವರಿಗೆ ನೀಡಲಾಗುತ್ತಿದೆ.  ರೇವತಿ ನಟಿಯಾಗಿ, ನಿರ್ಮಾಪಕಿಯಾಗಿ, ಲೇಖಕಿಯಾಗಿ ಸಾಕಷ್ಟು ದುಡಿದಿದ್ದಾರೆ. ಪತಿ ದಿ.ಕಲ್ಯಾಣಕುಮಾರ್ ಅವರ ಬೆಂಬಲಕ್ಕೆ ನಿಂತು ಅವರಿಗೆ ನೈತಿಕ ಸ್ಥೈರ್ಯ ತುಂಬಿದ್ದಲ್ಲದೆ  ಸ್ವಯಂ ಸಾಧನೆಯನ್ನು ಮಾಡಿದ ಹೆಗ್ಗಳಿಕೆ ಅವರದ್ದು.
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT