ADVERTISEMENT

ವಿಜ್ಞಾನ ಕಲಿಕೆಗೆ ಅನ್ವೇಷಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಬೆಂಗಳೂರು ಮೂಲದ ಶೈಕ್ಷಣಿಕ ಟ್ರಸ್ಟ್. ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ಶಿಕ್ಷಕರಿಗೆ ನೆರವಾಗುವ ನಿಟ್ಟಿನಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ಸಲುವಾಗಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ಮತ್ತು ವಿಜ್ಞಾನ ಮೇಳವನ್ನು ಆಯೋಜಿಸಿಕೊಂಡು ಬರುತ್ತಿದೆ.

ಅಗಸ್ತ್ಯ ಫೌಂಡೇಷನ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸಿನಾಪ್ಸಿಸ್ ಇಂಡಿಯಾ ಜತೆಗೂಡಿ ಈಚೆಗೆ ಶಿಕ್ಷಕರ ಭವನದಲ್ಲಿ `ಅನ್ವೇಷಣ~ ಎಂಬ ಎರಡು ದಿನದ ವಿಜ್ಞಾನ ಮೇಳ ಆಯೋಜಿಸಿತ್ತು. `ಅನ್ವೇಷಣ-2012~ ವಿಜ್ಞಾನ ಮೇಳ ಎಂಜಿನಿಯರಿಂಗ್ ಮತ್ತು ಶಾಲಾ ವಿದ್ಯಾರ್ಥಿಗಳ ನಡುವಿನ ಸಂವಹನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ಶಾಲೆಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಮಧ್ಯೆ ಇರುವ ಅಂತರ ತಗ್ಗಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿತ್ತು.

ಈ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ 36 ಶಾಲೆಗಳು ಮತ್ತು 36 ಎಂಜಿನಿಯರಿಂಗ್ ಕಾಲೇಜುಗಳು ಭಾಗವಹಿಸಿದ್ದವು. ಶಾಲಾ ವಿದ್ಯಾರ್ಥಿಗಳು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಸೃಜನಾತ್ಮಕತೆ ಬೆಳೆಸುವುದು `ಅನ್ವೇಷಣ-2012~ರ ಮುಖ್ಯ ಉದ್ದೇಶ. ವಿಜ್ಞಾನ ಮೇಳದ ಪೂರ್ವಭಾವಿಯಾಗಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳ 61 ಹೊಸ ಸಂಶೋಧನೆಗಳಲ್ಲಿ 36 ಸಂಶೋಧನೆಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.

ಮೇಳದಲ್ಲಿ ಭಾಗಿಯಾದ ಶಾಲಾ ವಿದ್ಯಾರ್ಥಿಗಳನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡದ ಜೊತೆ ಸೇರಿಸಿ ನಿರ್ದಿಷ್ಟ ಸಮಸ್ಯೆ ಪರಿಹರಿಸುವ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಈ ತಂಡಗಳಿಗೆ ವಿಜ್ಞಾನ ಮಾದರಿ ನಿರ್ಮಾಣ, ಪರಿಕಲ್ಪನೆ ಮತ್ತು ನಾಯಕತ್ವ ಗುಣಗಳ ಬಗ್ಗೆ ತರಬೇತಿ ನೀಡಲಾಗಿತ್ತು. ಪ್ರತಿಯೊಂದು ತಂಡ ಕೂಡ ತನ್ನ ಸಂಶೋಧನಾ ಯೋಜನೆ ಪ್ರದರ್ಶಿಸಿದವು.

ಪ್ರದರ್ಶನ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಮಾದರಿ ಮತ್ತು ಸಂಶೋಧನೆ ಬಗ್ಗೆ ವಿವರ ನೀಡಿದರು. ಕನಿಷ್ಟ ಸಂಪನ್ಮೂಲ ಬಳಕೆ.  ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಶುದ್ಧತೆ ವಿಶ್ಲೇಷಣೆ ಮೊದಲಾದ ಯೋಜನೆಗಳನ್ನು ಪ್ರದರ್ಶಿಸಿದರು.

`ಅನ್ವೇಷಣ ಶಾಲಾ ವಿದ್ಯಾರ್ಥಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಹೊಸ ಆಲೋಚನೆಗಳ ಪರಸ್ಪರ ವಿನಿಮಯಕ್ಕೆ  ವೇದಿಕೆ ಕಲ್ಪಿಸಿಕೊಡುತ್ತಿದೆ. ಇದು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಹಮ್ಮಿಕೊಳ್ಳಲು ಉತ್ತೇಜನ ಕೂಡ ನೀಡುತ್ತಿದೆ. ಕಲಿಕೆಯ ಮಧ್ಯದಲ್ಲಿಯೇ ಶಾಲೆ ತೊರೆಯುವ ವಿದ್ಯಾರ್ಥಿಗಳ ಪ್ರವೃತ್ತಿ ಕೂಡ ಇದರಿಂದ ಗಮನಾರ್ಹವಾಗಿ ಕಡಿಮೆಯಾಗಿದೆ.

ಉದ್ದಿಮೆ ಸಂಸ್ಥೆಗಳ ಜತೆ ಸಂಪರ್ಕಕ್ಕೆ ಬರಲು ಕಾಲೇಜು ವಿದ್ಯಾರ್ಥಿಗಳಿಗೂ ಇದರಿಂದ ನೆರವಾಗಲಿದೆ~ ಎನ್ನುತ್ತಾರೆ ಸಿನೊಪ್ಸಿಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಪೊರೇಟ್ ಉಪಾಧ್ಯಕ್ಷ ಡಾ. ಪ್ರದೀಪ್ ಕೆ. ದತ್ತಾ.

`ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸೃಜನಾತ್ಮಕತೆಯ ಉತ್ಸಾಹ ತುಂಬುವುದು ನಮ್ಮ ಗುರಿ. `ಅನ್ವೇಷಣ~ದಂತಹ ಮೇಳಗಳು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯ ಬೀಜ ಬಿತ್ತಿ, ಭವಿಷ್ಯದ ಸಂಶೋಧನೆಗಳಿಗೆ ಅಡಿಪಾಯ ಹಾಕಲಿದೆ~ ಎಂದು ಅಗಸ್ತ್ಯ ಇಂಟರನ್ಯಾಷನಲ್ ಫೌಂಡೇಷನ್ನಿನ ಅಧ್ಯಕ್ಷ ರಾಮ್‌ಜಿ ರಾಘವನ್ ಹೇಳಿದರು. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.