ADVERTISEMENT

ವೈಟ್‌ಫೀಲ್ಡ್‌ನಲ್ಲಿ ತತ್ಸಮ ಜ್ಯೋತಿರ್ಲಿಂಗ ದರ್ಶನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬೆಂಗಳೂರನ್ನು ಬ್ರಿಟಿಷರು ಸೇನಾ ನೆಲೆಯನ್ನಾಗಿ ರೂಪಿಸಿದ ಬೆನ್ನಲ್ಲೇ ಬ್ರಿಟಿಷರ ವಾಸಕ್ಕೆಂದೇ ವಿಶಾಲವಾದ ಬಡಾವಣೆಯೊಂದನ್ನೂ ಅಭಿವೃದ್ಧಿಪಡಿಸಿದರು. ಅದೇ `ವೈಟ್‌ಫೀಲ್ಡ್~.

ಬಿಳಿಯರ ಕಾಲದಲ್ಲಿ ಪ್ರಾಮುಖ್ಯ ಪಡೆದುಕೊಂಡಿದ್ದ ವೈಟ್‌ಫೀಲ್ಡ್‌ಗೆ ಈಗ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕಂಪೆನಿಗಳ ತಾಣವೆಂಬ ಹಣೆಪಟ್ಟಿ. ಮಾಹಿತಿ ಜಗತ್ತಿನ ಬೃಹತ್ ಪಾರ್ಕ್ ಐ.ಟಿ.ಪಿ.ಎಲ್. ಇರುವುದೂ ಇಲ್ಲಿಯೇ.

ಐಷಾರಾಮಿ ಕಟ್ಟಡಗಳೇ ತುಂಬಿರುವ ವೈಟ್‌ಫೀಲ್ಡ್‌ನಲ್ಲಿ ದೇವಾಲಯಗಳ ಬರ ಹೋಗಲಾಡಿಸಲು ಮಹಾಗಣಪತಿ ಮತ್ತು ಸುಬ್ರಹ್ಮಣ್ಯಸ್ವಾಮಿ ಆಲಯ ಸಮುಚ್ಚಯವೊಂದು ಮುಖ್ಯರಸ್ತೆಯಲ್ಲಿ ತಲೆ ಎತ್ತುತ್ತಿದೆ. ಈ ಸಮುಚ್ಚಯ ವಿಭಿನ್ನವಾಗಿ ಮೈದಾಳಬೇಕೆಂಬ ಮಹದಾಸೆ ದಾನಿಗಳಾದ ಎಸ್. ಶಿವರಾಜ್ ಅವರದು. ಅದಕ್ಕೆಂದೇ ವೈಟ್‌ಫೀಲ್ಡ್‌ನಲ್ಲಿಯೇ ದ್ವಾದಶ ಜ್ಯೋತಿರ್ಲಿಂಗ ದರ್ಶನ ಮಾಡಿಸುವ ಕೆಲಸಕ್ಕೂ ಅವರು ಕೈಹಾಕಿದ್ದಾರೆ.

ಭಾರತದಲ್ಲಿ ಹನ್ನೆರಡು ಜ್ಯೋತಿರ್ಲಿಂಗ ಕ್ಷೇತ್ರಗಳಿವೆ. ಇವು ಅತ್ಯಂತ ಪ್ರಾಚೀನ ಲಿಂಗಗಳು. ಕಾಶಿ ವಿಶ್ವೇಶ್ವರ, ಕೇದಾರೇಶ್ವರ, ನಾಗೇಶ್ವರ, ಮಹಾ ಕಾಳೇಶ್ವರ ಸೋಮನಾಥೇಶ್ವರ, ಓಂಕಾರೇಶ್ವರ, ತ್ರಿಯಂಭಕೇಶ್ವರ, ಘಷ್ಣೇಶ್ವರ, ರಾಮೇಶ್ವರ, ಭೀಮಾಶಂಕರ, ವೈದ್ಯನಾಥೇಶ್ವರ ಹಾಗೂ ಶ್ರಿಶೈಲ ಮಲ್ಲಿಕಾರ್ಜುನ ಇವೇ ಆ ಲಿಂಗಗಳು.

ಭಾರತದಾದ್ಯಂತ ಹರಡಿರುವ ಎಲ್ಲಾ ಜ್ಯೋತಿರ್ಲಿಂಗಗಳನ್ನು ಸಂದರ್ಶಿಸುವ ಬಯಕೆ ಬಹುಮಂದಿ ಆಸ್ತಿಕರದು. ಇಂತಹ ಅವಕಾಶ ಎಲ್ಲರಿಗೂ ಸಿಗುವುದೂ ಅಪರೂಪ. ಬೆಂಗಳೂರಿನಲ್ಲಿಯೇ ಪವಿತ್ರ ಜ್ಯೋತಿರ್ಲಿಂಗಗಳನ್ನು ತತ್ಸಮ ರೂಪದಲ್ಲಿ ನಿರ್ಮಿಸಿದರೆ ಹೇಗೆ ಎಂಬುದು ಶಿವರಾಜ್ ಅವರ ಮನಸ್ಸಿನಲ್ಲಿ ಮೂಡಿದ ಮೇಲೆ ಅನೇಕ ದಾನಿಗಳ ನೆರವಿನಿಂದ ಜ್ಯೋತಿರ್ಲಿಂಗಗಳನ್ನು ಸಿದ್ಧಗೊಳಿಸಿದ್ದಾರೆ.

ಅವು ಪ್ರತಿಷ್ಠಾಪನೆಗೆ ಸಿದ್ಧವಾಗಿದ್ದರೂ ದೇವಾಲಯ ಸಮುಚ್ಚಯ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಸಿದ್ಧಗೊಂಡಿರುವ 12 ಲಿಂಗಗಳನ್ನು ಸಾರ್ವಜನಿಕ ದರ್ಶನಕ್ಕೆ ಅಣಿಗೊಳಿಸಿದ್ದು ಕಾಶಿ, ನಾಸಿಕ್, ಕೇದಾರನಾಥ, ಶ್ರಿಶೈಲ, ಉಜ್ಜಯಿನಿ, ರಾಮೇಶ್ವರ ಹೀಗೆ 12 ಊರುಗಳಲ್ಲಿರುವ ಜ್ಯೋತಿರ್ಲಿಂಗಗಳನ್ನೂ ಬೆಂಗಳೂರು ವೈಟ್‌ಫೀಲ್ಡ್ ಮುಖ್ಯ ರಸ್ತೆಯ ದೇವಾಲಯ ಆವರಣದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಾಳೆ (ಮಂಗಳವಾರ) ಪ್ರದರ್ಶನಕ್ಕಿಡಲಾಗುವುದು.

ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ರೂಪುಗೊಳ್ಳುತ್ತಿರುವ ಈ ದೇವಾಲಯ ಸಮುಚ್ಚಯ ಪೂರ್ಣಗೊಂಡಾಗ ತತ್ಸವ ಜ್ಯೋತಿರ್ಲಿಂಗಗಳು ಒಂದೆಡೆ ಕಾಯಂಆಗಿ ನೆಲೆಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.