ಭಾರತದಲ್ಲಿ ಹತ್ತರಲ್ಲಿ ಶೇ ಎರಡರಷ್ಟು ಮಂದಿಗೆ ಮಾತ್ರ ಸರಿಯಾದ ವೈನ್ ಆಯ್ಕೆ ಮತ್ತು ಯಾವ ರೀತಿ ಅದನ್ನು ಸೇವಿಸಬೇಕು ಎಂಬ ಬಗ್ಗೆ ಅರಿವಿದೆ.
ಈ ಬಾರಿಯ ಅಂತರರಾಷ್ಟ್ರೀಯ ವೈನ್ ಉತ್ಸವ ವೈನ್‌ಪ್ರಿಯರಿಗೆ ಹೊಸ ಲೋಕವನ್ನು ಸೃಷ್ಟಿಸಿದ್ದು ಸುಳ್ಳಲ್ಲ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ನೈನ್ ಹಿಲ್ಸ್ ಸಹಯೋಗದಲ್ಲಿ ವಿವಿಧ ಬಗೆಯ ವೈನ್ ಉತ್ಸವ ನಡೆಯಿತು.
ಇಲ್ಲಿ ಕೇವಲ ನೋಡುವುದಷ್ಟೇ ಅಲ್ಲದೆ ವೈನ್ ಸವಿಯುವ ಅವಕಾಶವೂ ಸಾರ್ವಜನಿಕರಿಗೆ ಇತ್ತು. ಬರೀ ವೈನ್ ಮಾರಾಟವಲ್ಲದೆ ಗ್ರೇಪ್ ಸ್ಟಾಂಪಿಂಗ್ (ದ್ರಾಕ್ಷಿಯನ್ನು ಕಾಲಿನಿಂದ ತುಳಿದು ಅದರ ರಸವನ್ನು ತೆಗೆಯುವುದು), ಕೈಮಗ್ಗ ವಸ್ತುಗಳ ಪ್ರದರ್ಶನ, ವಿಂಟೇಜ್ ಕಾರುಗಳ ಶೋ, ಪ್ರಸಿದ್ಧ ಯುಫೋರಿಯ ತಂಡದಿಂದ ಮನರಂಜನಾ ಕಾರ್ಯಕ್ರಮಗಳು ಈ ಬೇಸಿಗೆಯಲ್ಲಿ ಬೆಂಗಳೂರಿಗರಿಗೆ ಮತ್ತು ಪ್ರದರ್ಶನಕ್ಕೆ ಆಗಮಿಸಿದ ವಿದೇಶಿಯರಿಗೆ ತಂಪೆರಿದಿತ್ತು.
ಮಧುಲೋಕ, ಕಿನ್‌ವಾಹ, ಫೋರ್ ಸೀಸನ್ಸ್, ಲಾ ಬೆಲಾ, ಗ್ರೋವರ್ ವೈನ್ ಯಾರ್ಡ್ಸ್, ಎಲೈಟ್, ಸುಲ ಮುಂತಾದ ವೈನ್ ಕಂಪೆನಿಗಳ ಮಳಿಗೆಗಳು ವೈನ್‌ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು.
ಒಟ್ಟು 20 ವೈನ್ ಮಳಿಗೆಗಳು ತಂತಮ್ಮ ವೈನ್‌ಗಳ ಪ್ರಚಾರ ಮತ್ತು ಮಾರಾಟದ ಜೊತೆಗೆ ಅವನ್ನು ಉಪಯೋಗಿಸುವುದರಿಂದ ಆಗುವ ಪರಿಣಾಮಗಳ ಕುರಿತು ಮಾಹಿತಿ ನೀಡುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ವೈನ್ ಬಗ್ಗೆ ಇದ್ದ ತಪ್ಪು ಭಾವನೆಗಳು ದೂರವಾದವು.
ವಿವಿಧ ಬಗೆಯ ರೆಡ್ ವೈನ್, ವೈಟ್ ವೈನ್, ರೋಸ್ ವೈನ್, ಡೆಸರ್ಟ್ ವೈನ್‌ಗಳ ಮಾರಾಟ ಭರದಿಂದ ಸಾಗಿತ್ತು. ಆದರೆ ಸಾರ್ವಜನಿಕರು ರೆಡ್ ವೈನ್ ಕೊಳ್ಳಲು ಹೆಚ್ಚಾಗಿ ಮುಗಿಬೀಳುತ್ತಿದ್ದರು.
ಹೆರಿಟೇಜ್ ವೈನ್ ಸಂಸ್ಥೆಯ ಸಂಘಟಕರೊಬ್ಬರ ಪ್ರಕಾರ ಭಾರತದಲ್ಲಿ ಶೇ 2ರಷ್ಟು ಮಂದಿಗೆ ಮಾತ್ರ ಸರಿಯಾದ ವೈನ್ ಆಯ್ಕೆ ಮತ್ತು ಯಾವ ರೀತಿ ಅದನ್ನು ಸೇವಿಸಬೇಕು ಎಂಬ ಅರಿವಿದೆ. ಉಳಿದವರಿಗೆ ವೈನ್ ಸಾಮಾನ್ಯ ಪೇಯವಾಗಿದೆ ಅಷ್ಟೆ.
ಆದ್ದರಿಂದ ನಾವು ವೈನ್ ಸೇವಿಸುವುದರಿಂದ ಆಗುವ ಪರಿಣಾಮ ಮತ್ತು ಅದನ್ನು ಯಾವ ರೀತಿ ಆಯ್ಕೆ ಮಾಡಬೇಕು ಎಂಬುದರ ವಿಚಾರವಾಗಿ ಮಾಹಿತಿ ಸಹ ನೀಡುತ್ತಿದ್ದೇವೆ ಎಂದರು.
ಮಿತವಾದ ವೈನ್ ಸೇವನೆಯಿಂದ ಮಾನಸಿಕ ಒತ್ತಡ ಮತ್ತು ಹೃದಯ ಸಂಬಂಧಿ ರೋಗಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಚರ್ಮಕ್ಕೆ ಕೂಡ ಹೊಸ ಕಾಂತಿ ಬರುತ್ತದೆ.
ಊಟದ ಜೊತೆ ವೈನ್ ಸೇವನೆಯಿಂದ ಜೀರ್ಣಕ್ರಿಯೆ ಸಲೀಸಾಗಿ ಆಗುತ್ತದೆ- ಹೀಗೆ ವೈನ್ ಸೇವನೆಯಿಂದ ಅನೇಕ ಉಪಯೋಗಗಳಿದ್ದು, ನಾವು ಊಟದ ಜೊತೆ ನೀರನ್ನು ಹೇಗೆ ಸೇವಿಸುತ್ತೆವೋ ಹಾಗೆಯೇ ವಿದೇಶಿಯರು ವೈನನ್ನು ಊಟದ ಜೊತೆ ಸೇವಿಸುತ್ತಾರೆ. ಮಹಿಳೆಯರೂ ಸೇವಿಸಬಹುದಾದ ಪೇಯ ವೈನ್.
ಇದರಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇರುವುದರಿಂದ ಯಾವುದೇ ಅಪಾಯ ಇಲ್ಲ. ಹಿಂದಿನ ವರ್ಷದ ವೈನ್ ಮೇಳಕ್ಕಿಂತ ಈ ಬಾರಿಯ ವೈನ್ ಮೇಳ ನಿಜವಾಗಿಯೂ ವಿಭಿನ್ನವಾಗಿತ್ತು. ಆದರೆ ಪ್ರವೇಶ ದರ 300ರೂಪಾಯಿಗಿಂತ ಕಡಿಮೆ ಇದ್ದಿದ್ದರೆ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಸಾಮಾನ್ಯರೂ ಭಾಗವಹಿಸಬಹುದಾಗಿತ್ತೆನೋ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.