ADVERTISEMENT

ವೈಭವದ ನರ್ತನ: ಕಲಾತ್ಮಕ ಗಾಯನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಚೌಡಯ್ಯ ಸ್ಮಾರಕ ಭವನದ ಅಕಾಡೆಮಿ ಆಫ್ ಮ್ಯೂಸಿಕ್ ನಡೆಸಿದ ನಾಲ್ಕು ದಿನಗಳ ನೃತ್ಯ ವೈಭವದಲ್ಲಿ ಹಿರಿಯ ಹಾಗೂ ನುರಿತ ನೃತ್ಯ ಕಲಾವಿದರ ಪ್ರದರ್ಶನ ನೋಡುವ ಸದವಕಾಶ ರಸಿಕರಿಗೆ ದೊರಕಿತು.

ಕೂಚಿಪುಡಿ ನಾಟ್ಯವೆನ್ನುತ್ತಲೇ ನಮ್ಮ ಕಣ್ಣ ಮುಂದೆ ಬರುವುದು `ಭಾಮಾ ಕಲಾಪ~. ಆ ಪ್ರಕಾರದ ಪ್ರವರ್ತಕರಲ್ಲಿ  ಸಿದ್ಧೇಂದ್ರ ಯೋಗಿ ಪ್ರಮುಖರು.

ಶ್ರೀಕೃಷ್ಣನನ್ನು ಸದಾ ತನ್ನ ಹಿಡಿತದಲ್ಲೆೀ ಇಟ್ಟುಕೊಳ್ಳಬೇಕೆಂಬ ಹೆಬ್ಬಯಕೆ ಸುಂದರಿ, ಸ್ವಾಭಿಮಾನಿ ಸತ್ಯಭಾಮೆಯದು. ಆಕೆ ಒಂದು ರೀತಿಯಲ್ಲಿ ಅಹಂಕಾರಿಯೂ ಹೌದು. ಅಂಥ ನೀಲವೇಣಿಯ ಗುಣಲಕ್ಷಣಗಳನ್ನು ಚಿತ್ರಿಸುವ ಭಾಮಾ ಕಲಾಪಮು ನಿಜಕ್ಕೂ ಅನುಪಮ. ಅದನ್ನು ಪರಿಣಾಮಕಾರಿಯಾಗಿ ಅನುವರ್ತಿಸಬೇಕಾದರೆ ವಿಶೇಷವಾದ ಪ್ರತಿಭೆ ಮತ್ತು ಪರಿಣತಿ ಅತ್ಯವಶ್ಯಕ.

ಹಿರಿಯ ಅನುಭವಿ ನರ್ತಕಿ ಮಂಜು ಭಾರ್ಗವಿ ಅವರು ಭಾಮಾ ಕಲಾಪದ ಸಾರಸರ್ವಸ್ವವನ್ನೂ ಗ್ರಹಿಸಿ ರಸಿಕರಿಗೆ ಅದರ ಸತ್ವವನ್ನು ಉಣಬಡಿಸುವುದರಲ್ಲಿ ಅಸಾಧಾರಣ ಯಶಗಂಡವರು.

ಅದರ ಸಮದ್ಧ ಸಾಹಿತ್ಯ, ಕಿವಿಗಳನ್ನು ತಣಿಸುವ ಪ್ರಭಾವಕಾರಿ ಸಂಗೀತ ಮತ್ತು ನಾಟಕೀಯ ತತ್ವಗಳನ್ನು ಯಥಾವತ್ತಾಗಿ ಸಂವೇದನಾಶೀಲರಾಗಿ ಪ್ರದರ್ಶಿಸಿದರು. ಗರ್ವಿಷ್ಠೆ ಸತ್ಯಭಾಮೆಯನ್ನು ಪ್ರತಿನಿಧಿಸುವ ಉದ್ದನೆಯ ಜಡೆಯೊಂದಿಗೆ ಆ ಪಾತ್ರವನ್ನು ಸಂಭಾಳಿಸಿದರು.

ಗಾಯಕ ಸೂರ್ಯನಾರಾಯಣ ಅವರ ಗಾಯನದಲ್ಲಿ ಸಾಕಷ್ಟು ಏರುಪೇರುಗಳು ಕಾಣಬಂದರೂ ಸಹಗಾಯಕಿ ಸುಧಾರಾಣಿ ಅವರ ಉಚಿತ ಗಾಯನ ಮತ್ತು ಮಂಜು ಅವರ ನೃತ್ಯ ಕೌಶಲ್ಯ ತೃಪ್ತಿಕೊಟ್ಟವು.

ರೋಚಕ ಕಥಕ್
ಶಾಸ್ತ್ರೀಯ ಕಥಕ್‌ನ ಸೊಬಗು, ಸಮಕಾಲೀನ ನೃತ್ಯದ ಕಲಾತ್ಮಕತೆ ಮತ್ತು ಸಮೂಹ ನೃತ್ಯದ ಶಿಸ್ತನ್ನು ಅಭಿವ್ಯಕ್ತಗೊಳಿಸಿದ ನಿರುಪಮಾ ಮತ್ತು ರಾಜೇಂದ್ರ ಅವರ ಕಥಕ್ ಕಿತಥೋಂ ರೋಚಕವೆನಿಸಿತು. ಚಿತ್ರ ವಿಚಿತ್ರ ವೇಷಭೂಷಣಗಳು ಮಿಶ್ರ ಅನುಭವ ನೀಡಿದವು.

ನಿರುಪಮ ಅವರು ಶಕುಂತಲೆಯಾಗಿ, ರಾಜೇಂದ್ರ ದುಶ್ಯಂತನಾಗಿ ನಿರೂಪಿಸಿದ ಪ್ರಯೋಗಾತ್ಮಕ ಸಂಯೋಜನೆ ಕಥನಾತ್ಮಕವಾಗಿ ರಂಜಿಸಿತು.

ಸುಪರಿಚಿತ ಕಥೆಯ ಮಂಡನೆ ಮತ್ತು ಶೃಂಗಾರದ ಉತ್ಕೃಷ್ಟ ಅಭಿವ್ಯಕ್ತಿಯಲ್ಲಿ ನೃತ್ಯ ದಂಪತಿಗಳ ಅಭಿನಯ ಹಿರಿಮೆ ಅನಾವರಣಗೊಂಡಿತು. ಮುಂದಿನ ಉತ್ಸಾಹದಲ್ಲಿ ಹೆಸರಿಗೆ ತಕ್ಕಂತೆ ಅವರ ತತ್ಕಾರಗಳು ಮತ್ತು ನೃತ್ತ ಚೇತೋಹಾರಿಯಾಗಿತ್ತು. ಅವರ ಹಸ್ತಪಾದ ಚಲನೆಗಳಿಗೆ ಅನುಸಾರವಾಗಿ ಸಭಿಕರೂ ಸಹ ಚಪ್ಪಾಳೆ ತಟ್ಟುತ್ತ ಭಾಗಿಗಳಾದುದು ಗಮನಾರ್ಹ ಸಂಗತಿ.

ಕಲಾವಂತಿಕೆಯ ಗಾಯನ
ಹೆಸರಿಗೆ ತಕ್ಕಂತೆ ನುರಿತ ಯುವ ಗಾಯಕಿ ಕಲಾವತಿ ಅವಧೂತ್ ತಮ್ಮ ಕಲಾವಂತಿಕೆಯಿಂದ ಅಪೂರ್ವ ಮತ್ತು ಸೊಗಸಾದ ಗಾಯನ ಕಛೇರಿಯನ್ನು ಇಸ್ರೋ ಬಡಾವಣೆಯ ಕೇಶವ ಸಂಸ್ಕೃತಿ ಸಭೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಿ ರಂಜಿಸಿದರು.

ಹಿರಿಯ ಸಂಗೀತಜ್ಞ ಎಸ್. ಕೃಷ್ಣಮೂರ್ತಿ ಅವರನ್ನು ಕೇಶವ ಕಲಾರತ್ನ ಬಿರುದಿನೊಂದಿಗೆ ಸನ್ಮಾನಿಸಿದ ನಂತರ ನಡೆದ ಆಪ್ತ ಕಛೇರಿಯಲ್ಲಿ ಕರ್ನಾಟಕ ಸಂಗೀತದ ಕಲೆ ಮತ್ತು ತಾಂತ್ರಿಕತೆಯನ್ನು ತುಂಬಿ ತಮ್ಮ ವಿದ್ವತ್ತು ಮತ್ತು ಪರಿಣತಿಗಳನ್ನು ಸಮಗ್ರವಾಗಿ ಪ್ರದರ್ಶಿಸಿದರು.

ಹಿರಿಯ ಮೃದಂಗ ವಿದ್ವಾಂಸ ಎ.ವಿ.ಆನಂದ್ ಹಾಗೂ ಅನುಭವಸ್ಥ ಘಟ ವಾದಕ ನಾರಾಯಣಮೂರ್ತಿ ಅವರ ಪಕ್ಕವಾದ್ಯಗಳ ಸಹಕಾರದ ಪೂರ್ಣ ಸದುಪಯೋಗ ಮಾಡಿಕೊಂಡ ಕಲಾವತಿ, ಸಮದ್ಧವಾಗಿದ್ದ ಕೇಳ್ಮೆಯ ಅನುಭವ ನೀಡಿದರು. ಯುವ ಪಿಟೀಲು ವಾದಕಿ ಮೈಸೂರು ಶ್ವೇತಾ ಅವರ ವಾದನ ಉಪಯುಕ್ತವಾಗಿತ್ತು. ಆದರೆ ಆ ಗಂಟು ಮುಖ ಏಕೆ ಎಂದು ಗೊತ್ತಾಗಲಿಲ್ಲ.

ಕಲಾವತಿ ಅವರು ಶ್ರೀರಾಗದ ವರ್ಣದೊಂದಿಗೆ ತಮ್ಮ ಕಛೇರಿಗೆ ಚಾಲನೆ ನೀಡಿದರು. ನಂತರ ಜಯ ಜಾನಕೀ ಕಾಂತ ರಚನೆಯನ್ನು ಚುರುಕಾಗಿ ಹಾಡಿ ಮನ ಸೆಳೆದರು. ಸಂದರ್ಭಕ್ಕೆ ತಕ್ಕಂತೆ ವರಲಕ್ಷ್ಮಿಯನ್ನು ಗೌರಿಮನೋಹರಿ ರಾಗದ `ಅಪೂರ್ವ ವರಲಕ್ಷ್ಮೀಂ~ ಕೃತಿಯ ಮೂಲಕ ಸ್ತುತಿಸಿದರು.

`ಸ್ಮರಣೆಯೊಂದೇ ಸಾಲದೆ~ ರಚನೆಯನ್ನು ಭಾವ ಪೂರ್ಣವಾಗಿ ಹಾಡಿ ಸಿಂಹೇಂದ್ರಮಧ್ಯಮ ರಾಗವನ್ನು ಸವಿಸ್ತಾರವಾಗಿ ನಿರೂಪಿಸಿದರು. ಆಲಾಪನೆಯಲ್ಲಿ ರಾಗದ ಸೂಕ್ಷ್ಮತೆಗಳನ್ನು ಆವಶ್ಯಕ ಸಂಚಾರಗಳು ಮತ್ತು ಸಂಗತಿಗಳ ಪ್ರಯೋಗದ ಮೂಲಕ ಪ್ರಕಟಿಸಿ ರಾಗ ಸ್ವರೂಪವು ಬಹು ಕಾಲ ಹಸುರಾಗಿ ಉಳಿಯುವಂತೆ ಹಾಡಿದರು. `ನಿನ್ನೆ ನಮ್ಮಿತಿ~ ಕೃತಿಯನ್ನು ಸಾಹಿತ್ಯ ಮತ್ತು ಸ್ವರ ವಿಸ್ತಾರಗಳೊಂದಿಗೆ ಸಜ್ಜುಗೊಳಿಸಿ `ರಸಿಕರ ಪ್ರಶಂಸೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.