ADVERTISEMENT

ಶಬ್ದಾಲಂಕಾರದ ಅಪ್ಪಯ್ಯ...

ಮಂಜುಶ್ರೀ ಎಂ.ಕಡಕೋಳ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಶಬ್ದಾಲಂಕಾರದ ಅಪ್ಪಯ್ಯ...
ಶಬ್ದಾಲಂಕಾರದ ಅಪ್ಪಯ್ಯ...   

ನನ್ನ ಹೆಸರು ಬಿ. ವಿಠಲ ಆದರೆ, ನಾಟಕದಿಂದಾಗಿ ‘ಅಪ್ಪಯ್ಯ’ ಎನ್ನುವ ಹೆಸರೇ ಉಳಿದಿದೆ. ಮೂರು ದಶಕಗಳಿಂದ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ನೇಪಥ್ಯ ಕಲಾವಿದನಾಗಿ ಕೆಲಸ ಮಾಡ್ತಾ ಇದ್ದೀನಿ.

ರಂಗಭೂಮಿಗೆ ಬಂದ ಆರಂಭದ ದಿನಗಳಲ್ಲಿ ಜತೆಯಲ್ಲಿ ಕೆಲಸ ಮಾಡಲು ಸಿಕ್ಕವರು ಶಶಿಧರ ಅಡಪ. ಆಗ ಅವರು ತುಂಬಾ ನಾಟಕಗಳಿಗೆ ರಂಗವಿನ್ಯಾಸ ಮಾಡುತ್ತಿದ್ದರು. ಅವರಿಗೆ ಸಿಜಿಕೆ ಒಡನಾಟವೂ ಇತ್ತು. ನನ್ನ ತಂದೆ ಸೌಂಡ್ ಎಂಜಿನಿಯರ್ ಆಗಿದ್ದರು. ಆದರೆ, ನನಗೆ ಎಂಜಿನಿಯರಿಂಗ್ ಒಲಿದು ಬರಲಿಲ್ಲ. ಕಾರಣ, ನಾನು ಎಸ್ಎಸ್‌ಎಲ್‌ಸಿ ಫೇಲ್ ಆಗಿದ್ದೆ. ಅಲ್ಲಿಗೇ ಓದನ್ನು ಬಿಟ್ಟಿದ್ದ ನಾನು ಬೀದಿಯಲ್ಲಿ ಗಣೇಶೋತ್ಸವ, ರಾಮೋತ್ಸವಗಳಿಗೆ ಅಲಂಕಾರಗಳಲ್ಲಿ ತೊಡಗಿಸಿಕೊಂಡೆ.

1982ರಲ್ಲಿ ಗೆಳೆಯ ಜಿ.ಕೆ. ಮಲ್ಲೇಶ್‌ ಅವರು ಸೌಂಡ್ ಸಿಸ್ಟಂ ತೆರೆದರು. ಆ ದಿನಗಳಲ್ಲಿ ನಿರ್ದೇಶಕ ಜೆನ್ನಿ ಅವರು ‘ಚೋರ ಚರಣದಾಸ’ ನಿರ್ದೇಶಿಸಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕಕ್ಕೆ ಮಲ್ಲೇಶ್ ಸೌಂಡ್ ಮಾಡಬೇಕಿತ್ತು. ಆದರೆ, ಅಂದು ಅವರು ಬರಲಾಗಲಿಲ್ಲ. ನಾನೇ ಅಂದು ಆಕಸ್ಮಿಕವಾಗಿ ಶಬ್ದ ವಿನ್ಯಾಸ ಮಾಡಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬಂತು. ಆ ನಾಟಕದ ಯಶಸ್ಸನ್ನು ಕಂಡು ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ಬದುಕುಬಹುದು ಅಂತ ನಿಶ್ಚಯಿಸಿದೆ.

ADVERTISEMENT

ಮುಂದೆ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕಾಲ ಕಳೆಯುವುದು ಹೆಚ್ಚಾಯಿತು. ಆಗ ನಟರಂಗ, ಕಲಾಗಂಗೋತ್ರಿ, ಸೂತ್ರಧಾರ, ಬೆನಕ, ರಂಗಸಂಪದ ಹೀಗೆ ಏಳೆಂಟು ತಂಡಗಳು ಇದ್ದವು. ಒಂದು ತಂಡಕ್ಕೂ ಮತ್ತೊಂದು ತಂಡಕ್ಕೂ ಉತ್ತಮ ನಾಟಕ ಪ್ರದರ್ಶಿಸಲು ಸ್ಪರ್ಧೆಯೇ ಇರುತ್ತಿತ್ತು. ಆ ದಿನಗಳಲ್ಲಿ ನಾಟಕ ನೋಡಲು ಜನರು ಕ್ಯೂ ನಿಲ್ಲುತ್ತಿದ್ದರು. ಆಗೆಲ್ಲಾ ಕಲಾಕ್ಷೇತ್ರದಲ್ಲಿ ಒಂದು ದಿನ ನಾಟಕಕ್ಕೆ ಸೌಂಡ್ ಹಾಕಿದರೆ ದಿನಕ್ಕೆ ₹ 50 ಸಿಗುತ್ತಿತ್ತು. ಜತೆಗೆ ₹ 5 ಟಿಪ್ಸ್ ಕೂಡಾ. ಕಲಾಕ್ಷೇತ್ರದ ಎದುರಿನ ಮೆಟ್ರೊ ಹೋಟೆಲ್‌ನಲ್ಲಿ ಬರೀ ಎರಡೂವರೆ ರೂಪಾಯಿಗೆ ಹೊಟ್ಟೆ ತುಂಬಾ ಪರೋಟ ಮತ್ತು ಎಗ್ ಮಸಾಲ ತಿಂದು ಇನ್ನೂ ಎರಡೂವರೆ ರೂಪಾಯಿ ಉಳಿಸಿಕೊಳ್ಳುತ್ತಿದ್ದೆ.

ಹೀಗೆ ನಾಟಕಗಳಿಗೆ ಸೌಂಡ್ ವ್ಯವಸ್ಥೆ ಮಾಡುತ್ತಲೇ ಪರದೆ ಕಟ್ಟುವುದು ನಡೆದಿತ್ತು. ಒಮ್ಮೆ ಕಲಾಕ್ಷೇತ್ರದಲ್ಲಿ ಧ್ವನಿವರ್ಧಕದ ಸಮಸ್ಯೆ ಎದುರಾಯಿತು. ಆಗ ಅಲ್ಲಿನ ಮ್ಯಾನೇಜರ್ ವೆಂಕಟಪ್ಪ ಅವರು ಅದನ್ನು ಸ್ವಲ್ಪ ಸರಿಮಾಡಿಕೊಡಿ ಅಂದ್ರು. ಆಗಲಿ ಎಂದು ಎಲ್ಲಾ ಚೆಕ್ ಮಾಡಿ ಧ್ವನಿವರ್ಧಕ ಸರಿಮಾಡಿದೆ. ನನ್ನ ಕೆಲಸದಿಂದ ಖುಷಿಯಾದ ಅವರು ನಾಳೆಯಿಂದಲೇ ನೀನು ಕಲಾಕ್ಷೇತ್ರದ ದಿನಗೂಲಿ ನೌಕರನಾಗಿ ಕೆಲಸಕ್ಕೆ ಬಾ ಅಂದ್ರು. ಆಗ ನನಗೆ ದಿನಕ್ಕೆ ₹ 11 ಸಂಬಳವಿತ್ತು.ಮೂರು ವರ್ಷ ಕಲಾಕ್ಷೇತ್ರದಲ್ಲಿ ದಿನಗೂಲಿ ನೌಕರನಾಗಿ ದುಡಿದೆ. ಆ ದಿನಗಳಲ್ಲೇ ನಟಿ ಜೆಸ್ಸಿ ಪರಿಚಯವಾಯಿತು. ಸ್ನೇಹ ಪ್ರೇಮವಾಗಿ, ಸಿಜಿಕೆ ಸಾರಥ್ಯದಲ್ಲಿ ರಿಜಿಸ್ಟರ್ ಮದುವೆ ಆಯ್ತು. ಬೆಳಿಗ್ಗೆ ಮದುವೆಯಾಗಿ ಸಂಜೆ ನಾಟಕಕ್ಕೆ ಹಾಜರ್‌ ಆಗಿದ್ದೆ.

ನನ್ನ ಕೆಲಸ ನೋಡಿ ಟಿ.ಎಸ್. ನಾಗಾಭರಣ ಅವರ ಸಿನಿಮಾಕ್ಕೆ ಸಹಾಯಕ ಕಲಾನಿರ್ದೇಶಕನಾಗುವ ಅವಕಾಶ ಕೊಟ್ಟರು. ಶಶಿಧರ ಅಡಪ ಮತ್ತು ನಾನು ಅನೇಕ ಸಿನಿಮಾಗಳಿಗೆ ಕೆಲಸ ಮಾಡಿದೆವು. ಮುಂದೆ ಶಶಿ ನನಗೆ ಸ್ವತಂತ್ರ ಕಲಾ ನಿರ್ದೇಶಕನಾಗಲು ಬಲ ತುಂಬಿದರು.

90ರಲ್ಲಿ ಅಮೀರ್ ರಾಜಾ ಹುಸೇನ್ ಅವರ ’ಲೆಜೆಂಡ್ ಆಫ್ ರಾಮ್’ ಅನ್ನುವ ದೊಡ್ಡ ನಾಟಕ ನಡೆಯಿತು. ಅದಕ್ಕೆ ಪಶ್ಚಿಮ ಬಂಗಳಾದ ಬಿಜನ್ ದಾಸ್ ಗುಪ್ತಾ ಸೆಟ್ ಹಾಕಿದ್ದರು. ಜಾದೂಗಾರ ಕೆ.ಎಸ್. ರಮೇಶ್ ಮ್ಯಾಜಿಕ್ ಪಾರ್ಟ್ ಮಾಡುತ್ತಿದ್ದರು. ಆ ನಾಟಕದಲ್ಲಿ ಪುಷ್ಪಕವಿಮಾನ ಸೀನ್‌ಗೆ ದೊಡ್ಡದೊಂದು ಕ್ರೇನ್ ಬಳಸಿ ಅದರಲ್ಲಿ ಪುಷ್ಪಕವಿಮಾನ ವಿನ್ಯಾಸ ಮಾಡಿ, ಸೀತಾಪಹರಣ ನೈಜವಾಗಿ ಮೂಡಿಬರುವಂತೆ ಮಾಡಿದ್ದೆ. ಇದನ್ನು ನೋಡಿದ ಬಿಜನ್ ದಾಸ್ ಗುಪ್ತಾ ನನ್ನನ್ನು ಕರೆದು ನೀನು ಕಮರ್ಷಿಯಲ್ ಸಿನಿಮಾಕ್ಕೆ ಕೆಲಸ ಮಾಡಬೇಕು. ಬಾ ನಿನಗೆ ದುಡ್ಡು ಮಾಡೋದನ್ನು ಹೇಳಿಕೊಡ್ತೀನಿ ಅಂದ್ರು. ಆದರೆ, ನಾನು ಬೆಂಗಳೂರು ಬಿಟ್ಟು ಬರೋಲ್ಲ ಅಂದೆ. ಸರಿ ನಿನಗೆ ಇಷ್ವವಾದಾಗ ಬಾಂಬೆಗೆ ಬಂದುಬಿಡು ಅಂತ ಹೇಳಿ ಬೆಂಗಳೂರು–ಬಾಂಬೆ ವಿಮಾನದ ಟಿಕೆಟ್ ಮಾಡಿಸಿ ನನ್ನ ಜೇಬಿಗಿತ್ತರು.

ಬಿಜನ್ ಆಗಲೇ ದೊಡ್ಡ ಕಲಾ ನಿರ್ದೇಶಕರಾಗಿ ಹೆಸರು ಮಾಡಿದ್ದರು. ಹಮ್ ಆಪ್ ಕೈ ಕೌನ್, ತ್ರಿಮೂರ್ತಿಯಂಥ ಸಿನಿಮಾಗಳಿಗೆ ದೊಡ್ಡ ಸೆಟ್ ಹಾಕಿದವರು ಅವರು. ನಾನು ಹೀಗೆ ಒಂದು ದಿನ ಕೆ.ಎಸ್. ರಮೇಶ್ ಕಚೇರಿಯಲ್ಲಿ ಮಾತನಾಡುತ್ತಿರುವಾಗ ಬಿಜನ್ ಇದ್ದಕ್ಕಿದ್ದಂತೆ ಬಂದ್ರು. ಏನಯ್ಯಾ ವಿಮಾನದ ಟಿಕೆಟ್ ಕೊಟ್ಟರೂ ಬರಲಿಲ್ಲ ಅಂತ ಗದರಿದ್ರು. ಅವರ ಜತೆಗೆ ಬಾಂಬೆ ಹೋದೆ. ಆಗ ‘ಗುಪ್ತ್ ’ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಮೆಹಬೂಬ್ ಸ್ಟುಡಿಯೊದಲ್ಲಿ ‘ಗುಪ್ತ್ ಗುಪ್ತ್’ ಹಾಡಿಗೆ ದೊಡ್ಡ ಸೆಟ್ ಹಾಕಿದ್ದೆವು. ಬಿಜನ್ ಚೆನ್ನಾಗಿ ಕೆಲಸ ಕಲಿಸಿದರು. ಅವರು ನನ್ನನ್ನು ಬೆಂಗಳೂರಿಗೆ ಬರಲು ಬಿಡಲೇ ಇಲ್ಲ. ಅವರ ಜತೆ ‘ಧಡ್ಕನ್’ ಸಿನಿಮಾಕ್ಕೆ ಏಳು ವರ್ಷ ಕೆಲಸ ಮಾಡಿದ್ದೆ. ಇದರ ಮಧ್ಯೆ ಫಿಲಂಫೇರ್ ಅವಾರ್ಡ್ಸ್‌, ಮಿಸ್ಟರ್ ಇಂಡಿಯಾ, ಮಿಸ್ ಇಂಡಿಯಾ ಸ್ಪರ್ಧೆಗಳಿಗೆ ದೊಡ್ಡ ದೊಡ್ಡ ಸೆಟ್ ಹಾಕಿದೆವು. ಸಹಾರ ಇಂಡಿಯಾಕ್ಕಾಗಿ ಲಖನೌನಲ್ಲಿ ಸಹಾರ ಸಿಟಿ ನಿರ್ಮಿಸಿದೆವು.

2005ರಲ್ಲಿ ತಂದೆ ತೀರಿಹೋದರು. ತಾಯಿಗೆ ವಯಸ್ಸಾಗಿದ್ದರಿಂದ ಬೆಂಗಳೂರಿಗೆ ವಾಪಸ್ ಬಂದುಬಿಟ್ಟೆ. ಇಲ್ಲಿಗೆ ಬಂದವನೇ ಟಿ.ಎಸ್. ನಾಗಾಭರಣ ನಿರ್ದೇಶನದ ‘ಕಲ್ಲರಳಿ ಹೂವಾಗಿ’ಚಿತ್ರಕ್ಕೆ ಕಲಾನಿರ್ದೇಶನ ಮಾಡಿದೆ. ಆ ಚಿತ್ರಕ್ಕೆ ಅತ್ಯುತ್ತಮ ಕಲಾನಿರ್ದೇಶಕ ರಾಜ್ಯ ಪ್ರಶಸ್ತಿ ಸಿಕ್ಕಿತು. ಕನ್ನಡದಲ್ಲಿ ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು, ಭುಜಂಗಯ್ಯನ ದಶಾವತಾರ, ಕಲ್ಲರಳಿ ಹೂವಾಗಿ, ರಸಋಷಿ, ನಮ್ಮೆಜಮಾನ್ರು ಹಿಂದಿಯಲ್ಲಿ ಹಿಂದೂಸ್ತಾನ್‌ ಕಿ ಕಸಂ, ಗುಪ್ತ್, ಧಡ್ಕನ್, ಕಹೋ ನಾ ಪ್ಯಾರ್ ಹೈ, ರಕ್ಷಕ್, ಸೇರಿದಂತೆ ಎಂಟ್ಹತ್ತು ಸಿನಿಮಾಗಳಿಗೆ ಕಲಾನಿರ್ದೇಶನ ಮಾಡಿದೆ. ಮೂರ್ನಾಲ್ಕು ವರ್ಷ ಹಂಪಿ ಉತ್ಸವ,ವಜ್ರದ ವ್ಯಾಪಾರಿಗಳಾದ ಭರತ್ ಷಾ ವಿಜಯ್ ಷಾ ಅವರ ಮದುವೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸೆಟ್‌ಗಳನ್ನು ಹಾಕಿದೆ.

ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಅನ್ನೋದನ್ನು ಸಿಜಿಕೆ ಮತ್ತು ಆರ್. ನಾಗೇಶ್ ಹೇಳಿಕೊಟ್ಟಿದ್ದರು. ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದ ನನ್ನಂಥವನನ್ನೂ ಓದಿದವರ ಜತೆಗೆ ಸರಿಸಮಾನವಾಗಿ ಕುಳಿತುಕೊಳ್ಳುವಂತೆ ಮಾಡಿದ್ದು ಸಿಜಿಕೆ ಮತ್ತು ರಂಗಭೂಮಿ. ಅದಕ್ಕಾಗಿ ಅವರಿಬ್ಬರಿಗೂ ಹ್ಯಾಟ್ಸಾಫ್‌!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.