`ಶಾಪಿಂಗ್~ ಎಂದರೆ ಕೇವಲ ಕೊಳ್ಳುವುದಲ್ಲ. ಅದರಲ್ಲಿ ಏನೆಲ್ಲ ಅಡಗಿದೆ ಗೊತ್ತೆ!
ವೀಕೆಂಡ್ ಬೇಸರ ಕಳೆಯಲು, ಪೇಟೆಯಲ್ಲಿ ಏನಾದರೂ ಹೊಸದು ಬಂದಿದೆಯೇ ತಿಳಿಯಲು, ಸ್ನೇಹಿತರೊಂದಿಗೆ ಅಥವಾ ಸಂಗಾತಿ ಜೊತೆ ವೇಳೆ ಕಳೆಯಲು, ಅವರನ್ನು ಖುಷಿ ಪಡಿಸಲು, ಸರ್‌ಪ್ರೈಸ್ ಕೊಡಲು...ಹೀಗೆ ಶಾಪಿಂಗ್‌ನೊಂದಿಗೆ ಹೆಣೆದುಕೊಂಡ ಅಂಶಗಳು ಹಲವು.
ಹೌದು, ಶಾಪಿಂಗ್ ಖಯಾಲಿ ಈಗ ಮನೆ-ಮನೆಯ ಮಾತಾಗಿದೆ. `ಒಂದು ತಿಂಗಳಿಂದ ಶಾಪಿಂಗೇ ಹೋಗಿಲ್ಲ~ ಎಂದು ಅನೇಕರು ಬೇಸರ ತೋಡಿಕೊಳ್ಳುತ್ತಾರೆ. ಅದರಲ್ಲೂ ದುಡಿಯುವ ಯುವಜನತೆಯ ಜೀವನದ ಅವಿಭಾಜ್ಯ ಅಂಗವಾಗಿದೆ ಶಾಪಿಂಗ್.
ಆರ್ಥಿಕ ಮುಗ್ಗಟ್ಟು, ಹಣದುಬ್ಬರ, ಬೆಲೆ ಏರಿಕೆಯಂತಹ ಚೂರಿಯಡಿಯಲ್ಲಿ ಸಿಕ್ಕರೂ ಕೆಲ ಪ್ರಕಾರದ ಶಾಪಿಂಗ್ ಮೇಲೆ ಈ ಬೆಳವಣಿಗೆ ಹೆಚ್ಚಿನ ಪರಿಣಾಮ ಬಿದ್ದಂತೆ ತೋರುತ್ತಿಲ್ಲ. ಅದರಲ್ಲೂ ಐಷಾರಾಮಿ ವಸ್ತುಗಳ ಮಾರುಕಟ್ಟೆ ಎಗ್ಗಿಲ್ಲದೇ ಸಾಗಿದೆ.
ಹೆಚ್ಚಿನ ಜನರಿಗೆ ಶಾಪಿಂಗ್ ಎನ್ನುವುದೇ ಒಂದು ಖುಷಿಯ ಸಂಗತಿ. ಅದರಲ್ಲೂ ಮಾಲ್‌ನಲ್ಲಿ ಶಾಪಿಂಗ್ ಮಾಡುವುದೆಂದರೆ ಖುಷಿ ಮತ್ತು ಪ್ರತಿಷ್ಠೆಯ ವಿಚಾರ.
ಶಾಪಿಂಗ್ ಬಗ್ಗೆ ಯಾರು ಏನು ಹೇಳುತ್ತಾರೆ? ತಿಂಗಳಿಗೆ ಎಷ್ಟು ಸಮಯ ಹಾಗೂ ಹಣವನ್ನು ಶಾಪಿಂಗ್‌ಗಾಗಿ ವ್ಯಯಿಸುತ್ತಾರೆ? ವಿಂಡೊ ಶಾಪಿಂಗ್, ಆನ್‌ಲೈನ್ ಶಾಪಿಂಗ್... ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ನಿಲುವು. ಅಂಥ ಕೆಲವರು `ಮೆಟ್ರೊ~ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವೀಕೆಂಡ್‌ಗಳಲ್ಲಿ ಶಾಪಿಂಗ್ ಮಾಲ್‌ಗಳು, ಸಿನಿಮಾ ಹಾಲ್‌ಗಳು ಗಿಜಿಗುಡುತ್ತವೆ. ಅತ್ತ ಸೂರ್ಯ ಸರಿದು, ಚಂದ್ರ ಇಣುಕಿ ಸಂಜೆಯ ಮಬ್ಬು ಹಬ್ಬುತ್ತಿದ್ದಂತೆ ಮಿಣಮಿಣ ದೀಪಗಳಿಂದ ಅಲಂಕೃತಗೊಂಡು ಹೊರ-ಒಳಗೂ ಮಾದಕತೆಯನ್ನು ತುಂಬಿಕೊಳ್ಳುತ್ತವೆ ಮಾಲ್‌ಗಳು.
ಖರೀದಿಸುವ ಉದ್ದೇಶದಿಂದ ಅಷ್ಟೇ ಅಲ್ಲ, ಸುಮ್ಮನೆ ಒಂದು ಸುತ್ತುಹಾಕಿ ಬರುವುದ ಕ್ಕಾಗಿಯೂ ಜನ ಮಾಲ್‌ಗಳತ್ತ ಹೆಜ್ಜೆ ಹಾಕುತ್ತಾರೆ. ಕೆಲವರು ಕಿಲೋ ಈರುಳ್ಳಿ ಕೊಂಡು ಮಾಲ್ ಕಂಡ ಸುಖ ಹಂಚಿಕೊಳ್ಳುವುದೂ ಉಂಟು!
=====
ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿರುವುದು ಆನ್‌ಲೈನ್ ಶಾಪಿಂಗ್ ಟ್ರೆಂಡ್. ಮುಖ್ಯವಾಗಿ ಇಲೆಕ್ಟ್ರಾನಿಕ್ ವಸ್ತುಗಳ ವಿಷಯಕ್ಕೆ ಬಂದಾಗ ಹೆಚ್ಚಿನ ಯುವಜನ ಆನ್‌ಲೈನ್‌ನಲ್ಲಿ ತಡಕಾಡುತ್ತಾರೆ. ಶಾಪಿಂಗ್‌ಗೆ ತೆರಳುವ ಮುನ್ನ ಹೊಸ ಬ್ರಾಂಡ್, ನೂತನ ವಿನ್ಯಾಸ, ನ್ಯೂ ಲುಕ್‌ಗಾಗಿ ಒಂದಷ್ಟು ಹೊತ್ತು ಆನ್‌ಲೈನ್‌ನಲ್ಲಿ ಸುತ್ತಿ ಬರುವ ಪರಿಪಾಠವೂ ಹೆಚ್ಚಿನ ಯುವ ಜನತೆಯಲ್ಲಿ ಕಂಡುಬರುತ್ತದೆ. fashionandyou.com , snapdeal.com, homeshop18.com, myntra.com, ebay.in, flipkart.com,www.indiaplaza.in, Naaptol, exclusivly.in ಮುಂತಾದ ಆನ್‌ಲೈನ್ ಜಾಲತಾಣಗಳು ಪೈಪೋಟಿಯ ಮೇಲೆ ತಮ್ಮ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತವೆ. ಹೊಸಬರನ್ನು ಸೆಳೆಯಲು ಆಕರ್ಷಕ ಆಫರ್‌ಗಳನ್ನು ಇಡುತ್ತವೆ. ಹೆಚ್ಚು ಜನ ಮಳಿಗೆಗಳಲ್ಲಿಯೇ ಖರೀದಿ ಮಾಡಲು ಬಯಸುತ್ತಾರೆ, ಏಕೆಂದರೆ ವಸ್ತುಗಳನ್ನು ಮುಟ್ಟಿ ನೋಡುವ, ಪರೀಕ್ಷಿಸುವ ಖುಷಿ ಆನ್‌ಲೈನ್ ಶಾಪಿಂಗ್‌ನಲ್ಲಿ ಸಿಗುವುದಿಲ್ಲ. ಅಲ್ಲದೇ, ಆನ್‌ಲೈನ್‌ನಲ್ಲಿ ತೋರಿಸುವ ಚಿತ್ರಗಳು ನೈಜ ಉತ್ಪನ್ನಗಳಿಗಿಂತ ಭಿನ್ನವಾಗಿರುತ್ತವೆ ಎನ್ನುವುದು ಅನೇಕರ ದೂರು. ಆದರೆ ಆನ್‌ಲೈನ್ ಮೂಲಕ ಆ ಬಗ್ಗೆ ಮಾಹಿತಿ ಹೆಕ್ಕುತ್ತಾರೆ. |
ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಂಜುನಾಥ್ ಲಕ್ಸೆಟ್ಟಿ, ಯಾವಾಗಲೂ ಮಾಲ್‌ನಲ್ಲಿ ಶಾಪಿಂಗ್ ಮಾಡುವುದನ್ನು ಎಂಜಾಯ್ ಮಾಡುತ್ತಾರೆ. `ನನಗೆ ಬೆಲೆಗಿಂತ ಬ್ರಾಂಡ್ ಮುಖ್ಯ. ಕೆಲವೊಮ್ಮೆ ಸ್ನೇಹಿತರೊಂದಿಗೆ ಸುಮ್ಮನೇ ಹೋದಾಗಲೂ ಅವರು ಖರೀದಿಸುವುದನ್ನು ನೋಡಿ ನನಗೂ ಮನಸ್ಸಾಗುತ್ತದೆ.
ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಮೆಟ್ರೊ, ಬಿಗ್ ಬಜಾರ್‌ನಂತಹ ಔಟ್‌ಲೆಟ್‌ಗಳಲ್ಲಿ ತಿಂಗಳಿಗೊಮ್ಮೆ ಖರೀದಿಸುತ್ತೇನೆ. ಇಲೆಕ್ಟ್ರಾನಿಕ್ ವಸ್ತುಗಳನ್ನು ಹೊರದೇಶಗಳಿಂದ ಆನ್‌ಲೈನ್ ಮೂಲಕ ಕೊಳ್ಳುತ್ತೇನೆ.
ಶಾಪಿಂಗ್ ವೇಳೆ ಹೊರಗೆ ತಿಂಡಿ ತಿನ್ನುವುದಿಲ್ಲ. ಆದರೆ ಓಪನ್ ಗಾರ್ಡನ್ ರೆಸ್ಟೂರಂಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ~ ಎನ್ನುತ್ತಾರೆ ಮಂಜುನಾಥ್.
====
`ನನ್ನದು ಕೊಳ್ಳುಬಾಕ ಸಂಸ್ಕೃತಿ ಏನೂ ಅಲ್ಲ, ಸುಮ್ಮನೇ ಅನಗತ್ಯವಾಗಿ ಮಾರುಕಟ್ಟೆಗೆ ಹೋಗುವುದಿಲ್ಲ. ನನಗೆ ಏನಾದರೂ ಬೇಕಾದಾಗ ಮಾತ್ರ ಹೋಗುತ್ತೇನೆ, ಆದರೆ ಇಷ್ಟವಾಗಿದ್ದನ್ನು ಕೊಳ್ಳುತ್ತೇನೆ~ ಎನ್ನುತ್ತಾರೆ ಶ್ವೇತಾ.
Dream Tekis Software Pvt ltd ಕಂಪೆನಿಯಲ್ಲಿ ಕಾರ್ಯಕಾರಿ ವಿಶ್ಲೇಷಕರಾಗಿ (Functional Analyst) ಆಗಿ ಕೆಲಸ ಮಾಡುತ್ತಿರುವ ಅವರು ತಿಂಗಳಿಗೆ ಒಂದೆರಡು ಬಾರಿ ಶಾಪಿಂಗ್‌ಗೆ ಹೋಗುತ್ತಾರೆ.
`ಹೆಚ್ಚಾಗಿ ಪ್ರತಿಷ್ಠಿತ ಮಾಲ್‌ಗಳಿಗೇ ಹೋಗುತ್ತೇನೆ ಹಾಗೂ ಬ್ರಾಂಡೆಡ್ ರೇಡಿಮೇಡ್ ಉಡುಪುಗಳನ್ನೇ ಖರೀದಿಸುತ್ತೇನೆ. ಹಾಗೆಂದು ನಾನು ಬ್ರಾಂಡ್ ಪ್ರಿಯಳಲ್ಲ.
ಕೆಲವೊಮ್ಮೆ ರಸ್ತೆ ಬದಿಯ ಬಟ್ಟೆಗಳು ನನಗೆ ಮೆಚ್ಚುಗೆಯಾದರೆ ಅವನ್ನೂ ಕೊಳ್ಳುತ್ತೇನೆ. ಒಬ್ಬಳೇ ಶಾಪಿಂಗ್ ಮಾಡುವುದು ನನಗಿಷ್ಟ. ಆದರೆ ಯಾವತ್ತೂ ಆನ್‌ಲೈನ್ ಶಾಪಿಂಗ್ ಮಾಡಿಲ್ಲ. ಅದರ ಮೇಲೆ ನಂಬಿಕೆ ಇಲ್ಲ. ಶಾಪಿಂಗ್‌ಗೆ ಹೋದಾಗ ಹೊರಗಡೆ ತಿನ್ನುವ ಅಭ್ಯಾಸವಿಲ್ಲ~ ಎನ್ನುತ್ತಾರೆ ಶ್ವೇತಾ.
====
`ನನಗಂತೂ ಮಾಲ್ ಶಾಪಿಂಗ್ ಇಷ್ಟ. ಉತ್ತಮ ಬ್ರಾಂಡ್‌ನ ಶೂ ಹಾಗೂ ಬಟ್ಟೆ ಖರೀದಿಸುತ್ತೇನೆ. ಆದರೆ ನನ್ನ ಪತ್ನಿ ರಸ್ತೆ ಪಕ್ಕದಲ್ಲಿ ಮಾರುವ ಫ್ಯಾನ್ಸಿ ಚಪ್ಪಲಿಗಳನ್ನು ಇಷ್ಟಪಡುತ್ತಾಳೆ~ ಎನ್ನುತ್ತಾರೆ ಬಿಎಲ್‌ಎಸ್ (Bangalore Institute of Legal studies) ನಲ್ಲಿ ಉಪನ್ಯಾಸಕರಾಗಿರುವ ವಿಶ್ವನಾಥ್ ಎಸ್.ಬಿ.
`ಶಾಪಿಂಗ್ ಮಾಡುವಾಗ ಬೆಲೆ ಬಗ್ಗೆ ನಾವಿಬ್ಬರೂ ಜಾಗೃತರಾಗಿರುತ್ತೇವೆ. ಯಾವಾಗಲೂ ಇಬ್ಬರೂ ಕೂಡಿಯೇ ಹೋಗುವುದು. ಆದರೆ ಇಂಥದ್ದೇ ದಿನ, ಇದೇ ಸಮಯ ಎಂದೇನೂ ಇಲ್ಲ.
ಸುಮ್ಮನೇ ಇಬ್ಬರೂ ಎಲ್ಲಿಗಾದರೂ ಹೊರಟಾಗ ಕಣ್ಣಿಗೆ, ಮನಸ್ಸಿಗೆ ಒಪ್ಪುವಂಥದ್ದೇನಾದರೂ ಕಂಡರೆ ಖರೀದಿಸುತ್ತೇವೆ. ಹಾಗೆಯೇ ಶಾಪಿಂಗ್ ಹೋದಾಗ ಏನಾದರೂ ತಿನ್ನುತ್ತೇವೆ. ಆದರೆ ಆನ್‌ಲೈನ್ ಶಾಪಿಂಗ್ ಮಾಡುವುದಿಲ್ಲ~ ಎನ್ನುತ್ತಾರೆ ವಿಶ್ವನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.