ADVERTISEMENT

ಸಮಕಾಲೀನ ಸಂಗತಿ ಗೆರೆಗಳಲ್ಲಿ

ಸುಬ್ರಹ್ಮಣ್ಯ ಎಚ್.ಎಂ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಸತೀಶ್ ಉಪಾಧ್ಯಾಯ ಅವರ ರಾಜಕೀಯ ವ್ಯಂಗ್ಯಚಿತ್ರ
ಸತೀಶ್ ಉಪಾಧ್ಯಾಯ ಅವರ ರಾಜಕೀಯ ವ್ಯಂಗ್ಯಚಿತ್ರ   

ಭಾರತೀಯ ವ್ಯಂಗ್ಯಚಿತ್ರಕಾರ ಗ್ಯಾಲರಿಗೆ 11ನೇ ವಾರ್ಷಿಕೋತ್ಸವ ಸಂಭ್ರಮ. ಇದರ ಅಂಗವಾಗಿ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ದೇಶದ ಪ್ರಮುಖ ರಾಜಕೀಯ ಘಟನಾವಳಿಗಳ ಕುರಿತ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡಿದ್ದು, ನೋಡುಗರಿಗೆ ಕಚಗುಳಿ ಇಡುತ್ತವೆ.

ದೇಶದ 50 ಪ್ರತಿಭಾವಂತರ ವ್ಯಂಗ್ಯಚಿತ್ರಗಳು, 8 ಮಂದಿ ಉದಯೋನ್ಮುಖ ಕಲಾವಿದರು, 7 ವಿದೇಶಿ ವ್ಯಂಗ್ಯಚಿತ್ರಗಳ ಅಪರೂಪ ಪ್ರದರ್ಶನ ಇದಾಗಿದೆ. ರಾಜಕೀಯ ವ್ಯಂಗ್ಯಚಿತ್ರಗಳು ನಗೆಬುಗ್ಗೆ ಉಕ್ಕಿಸಿದರೆ, ಉದಯೋನ್ಮುಖ ಕಲಾವಿದರು ಪ್ರಸಕ್ತ ವಿದ್ಯಮಾನಗಳಿಗೆ ಕನ್ನಡಿ ಹಿಡಿದಿದ್ದಾರೆ. ವಿದೇಶಿ ವ್ಯಂಗ್ಯಚಿತ್ರಗಳು ಆಯಾ ದೇಶಗಳ ಸಾಮಾಜಿಕ, ರಾಜಕೀಯ ವಿಡಂಬಣೆಯಿಂದ ಗಮನ ಸೆಳೆಯುತ್ತವೆ.

ಚಂದ್ರ ಗಂಗೊಳ್ಳಿ ರಚಿಸಿರುವ ಸ್ವಚ್ಛ ಭಾರತ, ಪಾಂಡುರಂಗ ರಾವ್ ಅವರ ಕೈಚಳ‌ಕದಲ್ಲಿ ಮೂಡಿ ಬಂದಿರುವ ಸಾಲಮನ್ನಾ, ಸುರೇಶ್ ವಗ್ಗಾ ಅವರ ಗೆರೆಗಳಲ್ಲಿ ಮೂಡಿರುವ ನೋಟು ನಿಷೇಧ, ರಂಗನಾಥ ಸಿದ್ದಾಪುರ ಅವರ ಮೊನಚು ರೇಖೆಗಳಲ್ಲಿ ಸೃಷ್ಟಿಯಾಗಿರುವ ಕಾವೇರಿ – ಮಹದಾಯಿ ನದಿ ನೀರು ವಿವಾದ ಕುರಿತ ಸಮಕಾಲೀನ ವ್ಯಂಗ್ಯಚಿತ್ರಗಳು ಇಲ್ಲಿನ ಪ್ರಮುಖ ಆಕರ್ಷಣೆ.

ADVERTISEMENT

(ಯತಿ ಸಿದ್ದಕಟ್ಟೆ ಕೈಚಳಕದಲ್ಲಿ ಮೂಡಿರುವ ವ್ಯಂಗ್ಯಚಿತ್ರ)

2007ಆಗಸ್ಟ್‌ 16ರಂದು ಅಂದಿನ ರಾಜ್ಯಪಾಲ ಟಿ.ಎನ್.ಚರ್ತುವೇದಿ ಈ ಗ್ಯಾಲರಿ ಉದ್ಘಾಟಿಸಿದ್ದರು. ಇದುವರೆಗೂ ಭಾರತೀಯ ಮತ್ತು ವಿದೇಶಿ ವ್ಯಂಗ್ಯಚಿತ್ರಕಾರರ 150 ಪ್ರದರ್ಶನಗಳನ್ನು ಇಲ್ಲಿ ಏರ್ಪಡಿಸಲಾಗಿದೆ. 2009ರಿಂದ ಮಾಯಾ ಕಾಮತ್ ಹೆಸರಿನಲ್ಲಿ ವ್ಯಂಗ್ಯಚಿತ್ರ ಸ್ಪರ್ಧೆ ಏರ್ಪಡಿಸಿ ಪ್ರತಿವರ್ಷ ಅತ್ಯುತ್ತಮ ರಾಜಕೀಯ ವ್ಯಂಗ್ಯಚಿತ್ರ, ಉದಯೋನ್ಮುಖ ಕಲಾವಿದರು ಮತ್ತು ವಿದೇಶಿ ವ್ಯಂಗ್ಯಚಿತ್ರಗಳಿಗೆ ಬಹುಮಾನ ನೀಡಲಾಗುತ್ತಿದೆ. ಅದರಂತೆ 2017ರ ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಬಹುಮಾನಕ್ಕೆ ಭಾಜನರಾದ ರಾಜಕೀಯ ವ್ಯಂಗ್ಯ ಚಿತ್ರಕಾರರಾದ ನವದೆಹಲಿಯ ಸಸಿಕುಮಾರ್, ಹೈದರಾಬಾದ್‌ನ ಮೃತ್ಯಂಜಯ, ತಿರುವನಂತಪುರಂನ ರಂಜಿತ್ ಎಂ.ಎಸ್ ಅವರಿಗೆ ಜೂ.2ರಂದು ನಡೆದ ಸಮಾರಂಭದಲ್ಲಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಶೇಷ ಜ್ಯೂರಿ ಪ್ರೋತ್ಸಾಹ ಪ್ರಶಸ್ತಿಗೆ ಜಮ್ಮು – ಕಾಶ್ಮೀರದ ಚಂದ್ರಶೇಖರ್, ಸತೀಶ್ ಉಪಾಧ್ಯಾಯ ಅಮರಾವತಿ, ಬೆಂಗಳೂರಿನ ಯತೀಶ್ ಸಿದ್ಧಕಟ್ಟೆ ಹಾಗೂ ಅತ್ಯುತ್ತಮ ವಿದೇಶಿ ವ್ಯಂಗ್ಯಚಿತ್ರ ಬಹುಮಾನಕ್ಕೆ ಉಜ್ಬೇಕಿಸ್ತಾನದ ಮಕ್‌ದೊಜೊನ್ ಎಶೊಗ್ಲೋವ್, ಇಂಡೋನೇಷ್ಯಾದ ಜೈಯಿಟ್ ಕುಸ್ತಾನಾ, ಉದಯೋನ್ಮುಖ ವ್ಯಂಗ್ಯಚಿತ್ರಗಾರ ಪ್ರಶಸ್ತಿಯನ್ನು ಕಾಸರಗೋಡಿನ ಆಲಿ ಹೈದರ್ ಪಡೆದಿದ್ದಾರೆ ಎಂದು ಗ್ಯಾಲರಿಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ.ನರೇಂದ್ರ ಮಾಹಿತಿ ಹಂಚಿಕೊಂಡರು.

ಇಂಧನ ಕಂಪನಿ ಐಟಿ ವ್ಯವಸ್ಥಾಪಕ ತಾಹಿರ್ ಬಗಾಸ್ರವಾಲಾ, ಮಾಯಾ ಕಾಮತ್ ಸ್ಮಾರಕ ಟ್ರಸ್ಟಿ ಅಮರನಾಥ್ ಕಾಮತ್, ನೈಸ್‌ ಕಂಪನಿಯ ಮಹಾದೇವ್.ಟಿ ಬಹುಮಾನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

150ನೇ ಪ್ರದರ್ಶನ

ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಎಂ.ಜಿ.ರಸ್ತೆ
ಸಮಯ: ಬೆಳಿಗ್ಗೆ10ರಿಂದ ಸಂಜೆ 6ರವರೆಗೆ

ಪ್ರದರ್ಶನದ ಕೊನೆ: ಜೂನ್ 30. ಪ್ರವೇಶ ಉಚಿತ

ಮಾಹಿತಿಗೆ: cartoonistsindia.com
ಇ–ಮೇಲ್: info@cartoonistsindia.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.