ರಂಜಾನ್ ಪವಿತ್ರ ಮಾಸ ಸಂಯಮದೊಂದಿಗೆ ಸಹಬಾಳ್ವೆಯ ಮಂತ್ರವನ್ನೂ ಹೇಳಿಕೊಡುತ್ತದೆ. ಸೌಹಾರ್ದ ಹಾಗೂ ಸಮನ್ವಯವನ್ನು ಬದುಕಿನಲ್ಲಿ ಅಳವಡಿಸಲು ಸಹಾಯ ಮಾಡುವಂತಿರುತ್ತವೆ ಇಫ್ತಾರ್ ಕೂಟಗಳು.
ಯಾವುದೇ ಧಾರ್ಮಿಕ ಎಲ್ಲೆಗಳಿಲ್ಲದೆ, ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟಗಳನ್ನು ಹಲವೆಡೆ ಏರ್ಪಡಿಸಲಾಗುತ್ತದೆ. ಒಣಹಣ್ಣುಗಳು, ಹಣ್ಣುಗಳ ರಾಶಿ, ಸೌತೆ, ಬೀಟ್‌ರೂಟ್‌ಗಳು, ಸಮೋಸಾ, ಪಫ್‌ಗಳು, ಕಬಾಬ್, ಬಿರಿಯಾನಿಗಳೆಲ್ಲವೂ ಇಫ್ತಾರ್ ಕೂಟದ ಖಾದ್ಯಗಳು.
ಆದರೆ ಉಪವಾಸ ಮುರಿಯಲು ಮಾತ್ರ ಖರ್ಜೂರದ ಹಣ್ಣು, ಒಂದಷ್ಟು ಗುಟುಕು ಜೀವಜಲವೇ ಆಗಬೇಕು. ಖರ್ಜೂರ ಪವಿತ್ರ ಮಕ್ಕಾ ಮದೀನಾದಲ್ಲಿ ಬೆಳೆಯುವ ಹಣ್ಣಾಗಿರುವುದರಿಂದಲೇ ಇದಕ್ಕೆ ಉಪವಾಸ ಮುರಿಯುವ ಹೆಗ್ಗಳಿಕೆ ಇದೆ.
ಇದರಲ್ಲಿರುವ ಪೌಷ್ಟಿಕಾಂಶಗಳಿಂದಾಗಿ ತಿಂಗಳುಗಟ್ಟಲೆ ಉಪವಾಸವಿದ್ದರೂ ನಿತ್ರಾಣ ಎನಿಸುವುದಿಲ್ಲ. ಅರಕ್ತರಾಗುವುದಿಲ್ಲ. ಎರಡು ಖರ್ಜೂರ ತಿಂದರೂ ಒಂದು ಸಂಪೂರ್ಣ ಊಟದ ಶಕ್ತಿಯನ್ನು ಖರ್ಜೂರ ನೀಡುತ್ತದೆ. ಇದೇ ಕಾರಣಕ್ಕೆ ಶಿವರಾತ್ರಿಯ ಉಪವಾಸ ಮುರಿಯುವಾಗಲೂ ತುಪ್ಪದಲ್ಲಿ ಅದ್ದಿದ ಖರ್ಜೂರವನ್ನು ಸೇವಿಸಲಾಗುತ್ತದೆ.
ಖರ್ಜೂರದ ಸೇವನೆಯಿಂದಲೇ ಉಪವಾಸವಿದ್ದರೂ ಮುಖ ಕಳೆಗುಂದುವುದಿಲ್ಲ. ಹೊಸ ಕಾಂತಿ ಹುಟ್ಟುತ್ತದೆ.
ಖರ್ಜೂರದೊಂದಿಗೆ ಎಲ್ಲ ಬಗೆಯ ಹುಳಿ, ಸಿಹಿಯೊಗರಿನ ಹಣ್ಣುಗಳ ಸೇವನೆಯೂ ಇಫ್ತಾರ್ ಕೂಟದ ಒಂದು ಅಂಗವಾಗಿದೆ. ಹಣ್ಣುಗಳು ಸೃಷ್ಟಿಕರ್ತ ನೀಡಿರುವ ಆಹಾರ. ಅದನ್ನು ಎಲ್ಲರೂ ಸಮಪಾಲಾಗಿ ಹಂಚಿಕೊಂಡು ಸವಿಯಬೇಕು ಎನ್ನುವುದೇ ಇದರ ಸಂದೇಶ.
ಉಪವಾಸವನ್ನು ಮುರಿಯುವಲ್ಲಿ ಖರ್ಜೂರದಷ್ಟೇ ಮಹತ್ವದ ಪಾತ್ರವನ್ನು ಸಮೋಸಗಳು ವಹಿಸುತ್ತವೆ. ಈರುಳ್ಳಿ ಪಲ್ಯ ಹಾಗೂ ಖೀಮಾ ಭರಿತ ಸಮೋಸಾಗಳಲ್ಲಿ ಆಲೂಗಡ್ಡೆಗಿಲ್ಲ ಜಾಗ. 12 ಗಂಟೆಗಳಿಗಿಂತಲೂ ಹೆಚ್ಚುಕಾಲ ಖಾಲಿ ಹೊಟ್ಟೆಯಲ್ಲಿರುವಾಗ ಆಲೂಗಡ್ಡೆ ಸೇವಿಸಿದರೆ ವಾತದ ಸಮಸ್ಯೆಯಾಗಬಹುದು ಎಂದೇ ಈ ಸಂದರ್ಭದಲ್ಲಿ ಆಲೂಗಡ್ಡೆ ವರ್ಜ್ಯ.
ಮಧ್ಯಾಹ್ನದಿಂದಲೇ ಈರುಳ್ಳಿಭರಿತ ಸಮೋಸಾಗಳ ತಯಾರಿ ಆರಂಭವಾಗುತ್ತದೆ.
ಹೆಚ್ಚಿದ ಈರುಳ್ಳಿಗೆ ನೀರು ಸೋಕಿಸದೆ ಪಲ್ಯದಂತೆ ಒಗ್ಗರಣೆ ಹಾಕಿ, ಗೋಧಿ, ಮೈದಾ ಹಿಟ್ಟಿನ ಮಿಶ್ರಣದ ಪುಡಿಕೆಗಳಿಗೆ ಈ ಮಿಶ್ರಣವನ್ನು ತುಂಬಿ, ಬಾಯಿ ಕಟ್ಟಿ, ಎಣ್ಣೆಯಲ್ಲಿ ತೇಲಿಬಿಟ್ಟಾಗ, ಬರುವ ಘಂ.. ಎಂಬ ಘಮಲು ಎಣ್ಣೆಯ ಕಮರು ಹುಟ್ಟಿಸುವುದೇ ಇಲ್ಲ.
ಕೇವಲ ಖಾದ್ಯಗಳನ್ನು ಸವಿಯುವುದು ಮಾತ್ರ ಇಫ್ತಾರ್ ಕೂಟವಲ್ಲ. ಖಾದ್ಯಗಳನ್ನು ಎಲ್ಲರೊಡಗೂಡಿ ಸವಿಯುವುದೇ ಇದರ ಮಹತ್ವವಾಗಿದೆ.
ಮನೆಯಲ್ಲಾದರೆ ದಶ್ತರಖಾನಾ ಹಾಸಿಕೊಂಡು ಎಲ್ಲರೂ ಊಟ ಮಾಡುವ ಸೊಗಸೇ ಬೇರೆ. `ದಶ್ತರಖಾನಾ~ಗೆ ತನ್ನದೇ ಆದ ಮಹತ್ವವಿದೆ. ಇದೊಂಥರ ವಿಶ್ವಕುಟುಂಬದ ಭಾವವನ್ನೇ ಸಾರುವಂತಿದೆ. ಎಲ್ಲರೂ, ಎಲ್ಲರೊಡಗೂಡಿ, ಇರುವುದನ್ನು ಹಂಚಿಕೊಂಡು, ಆಹಾರವನ್ನು ಸವಿಯುತ್ತ, ಭಗವಂತನಿಗೆ ಈ ದಿನಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುವುದೇ ಆಗಿದೆ.
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತಿದೆಯಲ್ಲ, ಇಲ್ಲಿ ಹಾಸಿರುವಷ್ಟರಲ್ಲಿ ಎಲ್ಲರೂ ಕೂರಬೇಕು ಎನ್ನುವಂತಿದೆ. ಸಾಮೂಹಿಕ ಕೂಟಗಳಲ್ಲಿ ಪಂಕ್ತಿ ವ್ಯವಸ್ಥೆ ಮಾಡುವುದೂ ಇದೇ ಉದ್ದೇಶದಿಂದ.
ದೇಶ, ಭಾಷೆ, ಧರ್ಮ ಯಾವುದಾದರೇನು? ಭಗವಂತ ನೀಡಿರುವ ಸಕಲ ಸಮೃದ್ಧಿಯಲ್ಲಿ ಸಮಪಾಲು ಪಡೆಯಬೇಕು. ಅದು ನಮ್ಮ ಅಗತ್ಯಕ್ಕೆ ಬೇಕಿರುವಷ್ಟು ಎನ್ನುವುದೂ ಇಫ್ತಾರ್ ಕೂಟದ ಆಶಯವಾಗಿದೆ.
ಸೌಹಾರ್ದ ಹಾಗೂ ಸಮಬಾಳ್ವೆಗೆ ಹೆಸರಾದ ಹೈದರಾಬಾದ್ ಕರ್ನಾಟಕದಲ್ಲಿ ಇಫ್ತಾರ್ ಕೂಟಗಳಿಗೆ ತನ್ನದೇ ಆದ ಮಹತ್ವವಿದೆ. ಬೆಂಗಳೂರಿನಲ್ಲಿಯೂ ಆ ಭಾಗದ ಶಾಸಕರು, ಸಂಸದರು ತಮ್ಮ ಸ್ನೇಹಿತರಿಗಾಗಿ ಇಫ್ತಾರ್ ಕೂಟಗಳನ್ನು ಏರ್ಪಡಿಸುತ್ತಾರೆ.
ಈ ಸಂಪ್ರದಾಯ ಎಲ್ಲೆಡೆಯೂ ಮುಂದುವರಿದಿದೆ. ಇಫ್ತಾರ್ ಔತಣ ನೀಡಿದವರಿಗಾಗಿ ಹಾಗೂ ತಮ್ಮ ಆತ್ಮೀಯರಿಗಾಗಿ ಮುಸ್ಲಿಂ ಬಾಂಧವರು ಹಬ್ಬದ ದಿನ ಶೀರ್‌ಕುರ್ಮಾ ಕಳುಹಿಸಿ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.
ಹಬ್ಬದ ಹಿಂದಿನ ದಿನವೇ ಉಗುರು ಬಿಸಿ ನೀರಿನಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿಗಳನ್ನು ನೆನೆಸಿ ಇಡಲಾಗುತ್ತದೆ. ಮದರಂಗಿ ಹಚ್ಚಿದ ಕೆಂಬಣ್ಣದ ಚಿಗುರು ಬೆರಳುಗಳು, ವಾತ್ಸಲ್ಯದ ಮಡಿಕೆ ಬಿದ್ದಿರುವ ಅಮ್ಮನ ಕೈ ಬೆರಳುಗಳು ಈ ಒಣಹಣ್ಣುಗಳನ್ನು ಉದ್ದುದ್ದಕ್ಕೆ ಹೆಚ್ಚಿಡುತ್ತವೆ. ನಂತರ ತುಪ್ಪದಲ್ಲಿ ಘಮ್ಮೆನ್ನುವಂತೆ ಹುರಿಯಲಾಗುತ್ತದೆ.
ಖರ್ಜೂರ, ಗಸಗಸೆಯೊಂದಿಗೆ ಕುದಿಸಿದ ಹಾಲಿಗೆ ಶ್ಯಾವಿಗೆ ಎಳೆಯನ್ನು ಹಾಕಿ ಶೀರ್‌ಕುರ್ಮಾ ತಯಾರಿಸಲಾಗುತ್ತದೆ. ಇದಕ್ಕೆ ಒಣ ಹಣ್ಣುಗಳ ಅಲಂಕಾರ ವಿಶಿಷ್ಟ ರುಚಿಯನ್ನೂ ನೋಟವನ್ನೂ ನೀಡುತ್ತದೆ.
ಇಫ್ತಾರ್ ಕೂಟ ಹಾಗೂ ಶೀರ್‌ಕುರ್ಮಾದ ವಿನಿಮಯದೊಂದಿಗೆ ಸ್ನೇಹ, ಸೌಹಾರ್ದ, ಸಮಬಾಳ್ವೆಯ ಸವಿ ವರ್ಷವಿಡೀ ಸವಿಯುವಂತೆ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.