ADVERTISEMENT

ಸುಟ್ಟ ಬದುಕನ್ನು ಸರಿಪಡಿಸುತ್ತಾ...

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ಅವಳು ಸ್ಫುರದ್ರೂಪಿ ಹೆಣ್ಣುಮಗಳು. ಸುಂದರವಾದ ಇಬ್ಬರು ಹೆಣ್ಣು ಮಕ್ಕಳು. ಸಂಸಾರ ಚೆನ್ನಾಗಿ ಸಾಗುತ್ತಿತ್ತು. ಆದರೆ, ಗಂಡನಿಗೆ ಕುಡಿಯುವ ಅಭ್ಯಾಸ ಹೆಚ್ಚಾಯಿತು. ಆಗ ದಿನಾ ಜಗಳ, ಹೊಡೆಯುವುದು, ಬಡಿಯುವುದು ಸಾಮಾನ್ಯವಾದ ಸಂಗತಿಯಾಯಿತು.

ಕೊನೆಗೆ ಒಂದು ದಿನ ಕೈ ಹಿಡಿದ ಹೆಂಡತಿಗೆ ಆ್ಯಸಿಡ್ ಹಾಕಿ, ಮುಖವನ್ನೇ ವಿಕಾರ ಮಾಡಿದ....ಅವಳ ಹೆಸರು ರಹಮತ್‌ನ್ನೀಸಾ. ಮದುವೆಯ ವಯಸ್ಸು. ಪೋಷಕರು ಹಿಂದೆಮುಂದೆ ಯೋಚಿಸದೆ, ಎಂಜಿನಿಯರ್ ಆಗಿದ್ದಾನೆ ಎಂಬ ಕಾರಣಕ್ಕೆ ಅವನ ಜೊತೆ ಮದುವೆ ಮಾಡಿದರು. ವರದಕ್ಷಿಣೆಗಾಗಿ ಪೀಡಿಸತೊಡಗಿದ. ನೀಡುವಷ್ಟು ನೀಡಿದರು. ಕೊನೆಗೆ ಜಗಳ. ನಂತರ ಆ್ಯಸಿಡ್ ಸುರಿದು ದೇಹವನ್ನೇ ಘಾಸಿಗೊಳಿಸಿದ.

ಜಯಲಕ್ಷ್ಮಿ ಶಿಕ್ಷಕಿ. ಮನೆಯವರು ತೋರಿಸಿದವನನ್ನು ಬೇರೆ ಮಾತೇ ಆಡದೆ ಮದುವೆಯಾದರು. ಗಂಡನಿಗೆ ಬೇಕಾಗಿದ್ದು ಹಣ ಮಾತ್ರ. ಹಣ ಬೇಕೆಂದು ಪೀಡಿಸತೊಡಗಿದ. ಆದರೆ, ಕೊನೆಗೆ ಕೊಡುವುದಿಲ್ಲ ಎಂದು ತಿರುಗಿಬಿದ್ದ ಹೆಂಡತಿಯ ಮುಖದ ಮೇಲೆ ಆ್ಯಸಿಡ್ ಸುರಿದು ಮುಖವನ್ನು ಪೂರ್ತಿಯಾಗಿ ವಿಕಾರಗೊಳಿಸಿದ.

ಇಂತಹ ಹೃದಯವಿದ್ರಾವಕ ಘಟನೆಗಳು, ನೆನಪುಗಳಿಂದ ಅಲ್ಲಿನ ವಾತಾವರಣ ಒಂದು ಕ್ಷಣ ಗಂಭೀರವಾಯಿತು. ಅಲ್ಲಿದ್ದವರ ಕಣ್ಣಂಚುಗಳು ತೇವಗೊಂಡವು. ಇದು ಕಂಡುಬಂದಿದ್ದು `ಕರ್ನಾಟಕ ರಾಜ್ಯ ಮಹಿಳಾ ಆಯೋಗ~ವು ಏರ್ಪಡಿಸಿದ್ದ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಕಾನೂನುಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ.

ಇವು ಕೆಲವು ಘಟನೆಗಳು ಮಾತ್ರ. ಆದರೆ, ರಾಜ್ಯದಲ್ಲಿ ಇಂತಹ ಚಿಕ್ಕ ಕಾರಣಕ್ಕಾಗಿ ಗಂಡನಿಂದ, ಗಂಡನ ಮನೆಯವರಿಂದ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ಆ್ಯಸಿಡ್ ದಾಳಿಗೆ ತುತ್ತಾದ ಅನೇಕ ಮಹಿಳೆಯರು ದಿನಾಲು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.

ಒಬ್ಬರಿಗೆ ಮುಖವೇ ವಿಕಾರವಾಗಿ, ಕಣ್ಣುಗಳು ಕಾಣಿಸುತ್ತಿಲ್ಲ, ಆ್ಯಸಿಡ್‌ನಿಂದ ಕಣ್ಣುಗಳ ದೃಷ್ಟಿಯನ್ನೇ ಕಳೆದುಕೊಂಡು ಕತ್ತಲೆಯಲ್ಲಿ ಜೀವನ ಮಾಡುತ್ತಿದ್ದಾರೆ. ಇನ್ನು ಕೆಲವರಿಗೆ ದೇಹವೆಲ್ಲ ವಿಕಾರ. ಅದರ ಯಾತನೆ ಸಹಿಸಲು ಸಾಧ್ಯವಿಲ್ಲ.

`ಆ್ಯಸಿಡ್‌ನಿಂದ ಆಗಿರುವ ನೋವಿಗಿಂತ ಸಮಾಜ ನಮ್ಮನ್ನು ನಡೆಸಿಕೊಳ್ಳುವ ರೀತಿಗೆ ನೋವಾಗುತ್ತದೆ. ನಮ್ಮ ಮುಖ ನೋಡಿ ಮುಖ ತಿರುಗಿಸಿಕೊಳ್ಳುವವರೇ ಹೆಚ್ಚು. ಇದು ನಮ್ಮದಲ್ಲದ ತಪ್ಪು. ನಮಗೂ ಗೌರವಯುತವಾಗಿ ಬದುಕುವ ಅವಕಾಶ ನೀಡಿ~ ಎಂದು ತಮ್ಮ ನೋವಿನ ಧ್ವನಿಯಿಂದ ಅಳಲು ತೋಡಿಕೊಂಡವರು ಜಯಲಕ್ಷ್ಮಿ..

ಒಂದು ಕಡೆ ತನ್ನವನೆಂದು ಒಪ್ಪಿಕೊಂಡ ಗಂಡನಿಂದಲೇ ಈ ರೀತಿ ದೌರ್ಜನ್ಯ. ಅವನ ಕಣ್ಣಿನಲ್ಲಿ ಒಂದಿಷ್ಟೂ ಪಶ್ಚಾತ್ತಾಪವಿಲ್ಲ. ತಾನು ಮಾಡಿದ್ದೇ ಸರಿ ಎಂಬ ಧೋರಣೆ. ನಿತ್ಯದ ಬದುಕು ನರಕ. ಏಕೆಂದರೆ, ನಿತ್ಯ ಗುಳಿಗೆ, ಔಷಧಿ ಆಗಬೇಕು. ದೇಹವನ್ನು ಮೊದಲಿನಂತೆ ಸುಂದರಗೊಳಿಸಲು ಆಗದಿದ್ದರೂ ಘಾಸಿಗೊಂಡಿರುವ ಭಾಗಗಳನ್ನು ಚೇತನಗೊಳಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಾದ ಅನಿವಾರ್ಯತೆ. ಅದಕ್ಕಾಗಿ ಹಣ ಹೊಂದಿಸಬೇಕಾದ ಅವಶ್ಯಕತೆಯಿದೆ.

ಆದರೆ, ಆಸ್ಪತ್ರೆಯಲ್ಲಿ ಇಣುಕುವ ನಿರ್ದಯಿಯಾದ ನಗು. ಮೊದಲು ಹಣ ನೀಡಿ ನಂತರ ಚಿಕಿತ್ಸೆ ಎಂದು ಹೇಳುವ ವೈದ್ಯರು. ಇಲ್ಲಿ ಸಮಾಜದ ಇನ್ನೊಂದು ಮುಖದ ಅನಾವರಣ.
ಆದರೂ ಎದೆಗುಂದದೆ ತಮ್ಮ ಬದುಕನ್ನು ಮತ್ತೆ ಹೊಸದಾಗಿ ಕಟ್ಟಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಒಮ್ಮೆ ಬದುಕೇ ಸಾಕೆನಿಸಿದರೂ ತಮ್ಮನ್ನು ಈ ಸ್ಥಿತಿಗೆ ತಂದವರ ಮುಂದೆ ಸೋಲಬಾರದು ಎಂಬುದು ಅವರ ಸಂಕಲ್ಪ.

`ವಿರೂಪಗೊಂಡಿರುವುದು ದೇಹವಷ್ಟೇ ಮನಸ್ಸಲ್ಲ. ನಮ್ಮ ಮನಸ್ಸೇ ನಮ್ಮ ಶಕ್ತಿ~ ಎನ್ನುತ್ತಾ ಬದುಕು ಕಟ್ಟಿಕೊಳ್ಳಲು ನಿತ್ಯ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಮಕ್ಕಳ ಸಂತೋಷದಲ್ಲಿ ತಮ್ಮ ಸಂತಸ ಕಾಣುತ್ತಿದ್ದಾರೆ.

ಮುಖ ವಿರೂಪಗೊಳಿಸಿದ ಗಂಡನನ್ನೇ ಕ್ಷಮಿಸಿ ಮತ್ತೆ ಅವನ ಜತೆ ಸಂಸಾರ ಮಾಡುತ್ತಿದ್ದು, ಈಗಲೂ ಸಂಶಯ ಬುದ್ಧಿಯಿಂದ ಇನ್ನಷ್ಟು ಹಿಂಸೆ ನೀಡುತ್ತಿರುವ ಗಂಡನನ್ನು ಬಿಟ್ಟು ಬರಲಿಕ್ಕಾಗದೆ ಅದರಲ್ಲಿಯೇ ಜೀವನ ಸಾಗಿಸುತ್ತಿರುವ ತಿಪ್ಪಮ್ಮನವರದ್ದು ನೋವು ಬೆರೆತ ನಿಟ್ಟುಸಿರು. ಮಕ್ಕಳಿಗಾಗಿಯಷ್ಟೇ ಅವರು ಕಷ್ಟ ಸಹಿಸಿಕೊಂಡು ಸಂಸಾರ ಮಾಡುತ್ತಿರುವುದು.

`ಆ್ಯಸಿಡ್‌ನಿಂದ ರೂಪ ಹಾಳಾಗುತ್ತದೆ. ಅದು ಅಲ್ಲಿಗೇ ನಿಲ್ಲುವುದಿಲ್ಲ. ಮದುವೆಯಾಗಿ ಪ್ರೀತಿಸಿದ ಗಂಡನ ದೌರ್ಜನ್ಯ ಒಂದೆಡೆಯಾದರೆ, ಇನ್ನೊಂದೆಡೆ ಸಮಾಜ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಇದು ಬದುಕೇ ಸಾಕೆನ್ನುವಂತೆ ಮಾಡುತ್ತಿದೆ. ನಾವು ಮಾಡದ ತಪ್ಪಿಗೆ ನಮಗೇಕೆ ಶಿಕ್ಷೆ~ ಎಂದು ಪ್ರಶ್ನೆ ಎತ್ತುತ್ತಾರೆ ಗೀತಾ.ಹೀಗೆ ಕಳೆದುಹೋದ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿಯೇ ಇಂಥವರ ಬದುಕು ಸಾಗುತ್ತಿದೆ.
 

`ಆ್ಯಸಿಡ್ ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಬೇಕು. ಆ್ಯಸಿಡ್ ಸುಲಭವಾಗಿ ದೊರೆಯುತ್ತಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಆ್ಯಸಿಡ್ ಕಮರ್ಷಿಯಲ್‌ಗೆ ಮಾತ್ರ ಬಳಕೆಯಾಗಬೇಕೆ ಹೊರತು ಇನ್ನಾವುದೇ ಕೆಲಸಕ್ಕಲ್ಲ~
-ಸಿ.ಮಂಜುಳ. ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT