ADVERTISEMENT

ಸೂಫಿ ಸ್ವಾದ

ಡಿ.ಕೆ.ರಮೇಶ್
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಸಂಜೆಯ ನೀಲಿ ಇರುಳುಗಪ್ಪಿಗೆ ತಿರುಗುತ್ತಿತ್ತು. ಬೇಸಿಗೆಯನ್ನೇ ಮರೆಸುವಂತೆ ಮೋಡಗಳು ಮುತ್ತಿದ್ದವು. ಆಗಾಗ ಮಳೆಯ ಪನ್ನೀರು. ಸುತ್ತಲೂ ಮಲ್ಲಿಗೆಯ ಘಮ. ಕಣ್ಣತುಂಬುವ ಹೂಮಾಲೆ. ಉತ್ಸಾಹವೇ ತಾನಾಗಿ ಕುಣಿಯುತ್ತಿದ್ದ ನೀರಿನ ಬುಗ್ಗೆ. ಇವುಗಳ ಮಧ್ಯೆಯೇ ತೇಲಿ ಬರುತ್ತಿದ್ದ ಹಾಡು.

ಯಾರದು ಆ ಜೋಡಿ ಹಾಡುಗಾರರು? ಎಲ್ಲಿಂದ ಬಂದವರು? ಕೇಳುಗರ ತಲೆದೂಗುವಂತೆ ಹಾಡುತ್ತಿರುವವರು... ಯಾರವರು ಯಾರವರು ಎಂಬ ಪ್ರಶ್ನೆ ಏಳುತ್ತಿರುವಾಗಲೇ ಹನಿಯಾಗಿ ಹರಿಯುತ್ತಿದ್ದ ಹಾಡು ಧುಮ್ಮಿಕ್ಕುವ ಜಲಪಾತವಾಯಿತು. ಕೈಗೆ ಕೈ ಸೇರಿ ಮೂಡಿದ ಚಪ್ಪಾಳೆ ತಬಲವನ್ನೂ ನಾಚಿಸುವಂತಿತ್ತು. ಜತೆಗೆ ವಾಹ್ ವಾಹ್‌ಗಳ ಸುರಿಮಳೆ.

`ಮನ್ ಕುನ್‌ತೊ ಮೌಲಾ ಫಾ ಅಲಿ ಯುನ್ ಮಾಲಾ...~, `ತೂ ಬಡಾ ಗರೀಬ್ ನವಾಬ್ ಹೈ~, `ಹರ್ ಮೆ ಹರ್ ಕೊ ದೇಖಾ ದೇಖಾ...~ ಮಳೆ ನಿಂತರೂ ಹಾಡು ನಿಲ್ಲಲಿಲ್ಲ. ಖಾದ್ರಿ ಸಹೋದರರ ಕವ್ವಾಲಿ ಎಂದರೆ ಹಾಗೆ, ಸದಾ ಜಿನುಗುವ ನದಿ. 

`ಬಸವ ಅಂಬರ~ ಕರಕುಶಲ ವಸ್ತುಗಳ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭದ ಸವಿ ನೆನಪಿಗಾಗಿ ಹೈದರಾಬಾದ್‌ನ  ಅಮ್ಜಾದ್ ಅಜೀಜ್ ಅಹಮದ್ ಖಾನ್ ವಾರ್ಸಿ ಹಾಗೂ ಅಸಾದ್ ಜಹೀರ್ ಅಹಮದ್ ಖಾನ್ ವಾರ್ಸಿ ಅವರನ್ನು ಆಹ್ವಾನಿಸಿತ್ತು.

ಖ್ಯಾತ ಸೂಫಿ ಹಾಡುಗಾರ ಹೈದರಾಬಾದ್‌ನ ಅಜೀಜ್ ಅಹಮದ್ ಖಾನ್ ವಾರ್ಸಿ ಅವರ ಮೊಮ್ಮಕ್ಕಳು ಇವರು. ಹಳೆ ದೆಹಲಿ ಘರಾನಾದ ಕವ್ವಾಲ್ ಬಚ್ಚಾಯ್ ಪರಂಪರೆಗೆ ಸೇರಿದ ಇವರು ಕಳೆದ 20 ವರ್ಷಗಳಿಂದ ಹಾಡುಗಾರಿಕೆಯನ್ನೇ ಉಸಿರಾಗಿರಿಸಿಕೊಂಡಿದ್ದಾರೆ.

ಎಂಟನೇ ಶತಮಾನದಲ್ಲಿ ಪರ್ಷಿಯಾದಲ್ಲಿ ಹುಟ್ಟಿತು ಎನ್ನಲಾದ ಕವ್ವಾಲಿ ಇವರಿಗೆ ರಕ್ತಗತವಾದದ್ದು ಅಪ್ಪ ಉಸ್ತಾದ್ ಜಹೀರ್ ಅಹಮದ್ ಖಾನ್ ವಾರ್ಸಿ ಅವರಿಂದ. ಅದೇನೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತ ವಿದ್ಯೆಯಾಗಿರಲಿಲ್ಲ. ದಿನ ನಿತ್ಯ ಅಪ್ಪ ಹಾಡುತ್ತಿದ್ದರು; ಸಹೋದರರು ದೂರದಿಂದಲೇ ಕೇಳಿ ಕಲಿಯುತ್ತಿದ್ದರು. 

ಖಯಾಲ್ ಬಂದಿಶ್, ತಪ್ಪ, ಹೋರಿ, ತರಾನಾ ಮುಂತಾದ ಸಾಂಪ್ರದಾಯಿಕ ಸೂಫಿ ಕವ್ವಾಲಿ ಹಾಗೂ ಹಿಂದೂಸ್ತಾನಿ ರಾಗಗಳಲ್ಲಿ ಅವರಿಗೆ ಹಿಡಿತವಿದೆ. ಅಲ್ಲದೆ ಗಜಲ್, ತುಮರಿ, ಭಜನ್, ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತದಲ್ಲೂ ಸಿದ್ಧಹಸ್ತರು.

ಸೌದಿ ಅರೆಬಿಯಾ, ಬ್ಯಾಂಕಾಕ್, ಟರ್ಕಿ, ಸಿಂಗಾಪುರ ಹಾಗೂ ಮಾರೀಷಸ್‌ಗಳಲ್ಲಿ ಸಂಗೀತ ಗೋಷ್ಠಿಗಳನ್ನು ನೀಡಿದ್ದಾರೆ. ದೇಶದ ಮೂಲೆ ಮೂಲೆಗಳಿಗೂ ಇವರ ಹಾಡುಗಳು ತಲುಪಿವೆ.

`ಸೂಫಿ ಪರಂಪರೆ ಆತ್ಮ ಪರಮಾತ್ಮವನ್ನು ಮಿಲನಗೊಳಿಸುವ ಸಾಧನ~ ಎನ್ನುವ ಈ ಸಹೋದರರು ಭಾವೈಕ್ಯವನ್ನು ತಮ್ಮ ಹಾಡುಗಳ ಮೂಲಕ ಬಿತ್ತುತ್ತಿದ್ದಾರೆ. ಭಾರತೀಯರೆಲ್ಲರೂ ಸಹೋದರರು ಎಂಬ ಸೂಫಿ ಕವಿಗಳ ಮಂತ್ರವನ್ನು ಎಲ್ಲೆಡೆ ಸಾರುತ್ತಿದ್ದಾರೆ.

`ಭರ್‌ದೆ ಝೋಲಿ ಯಾ ಮಹಮದ್...~ ಎಂಬ ಜನಪ್ರಿಯ ಕವ್ವಾಲಿ ಹಾಡಿದಾಗಲಂತೂ ಸಭಿಕರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಹಾಗೆಯೇ `ದಮಾದಂ ಮಸ್ತ್ ಖಲಂದರ್~ ಹಾಗೂ `ಮೇರಾ ಪಿಯಾ ಘರ್ ಆಯಾ~ ಗೀತೆಗಳೂ ಮನಸೂರೆಗೊಂಡವು.  -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.