ADVERTISEMENT

ಹಳೇಗಾಡಿ ಕಬ್ಬಿಣ... ಕಲಾಕೃತಿ ನವನವೀನ

ಕಲಾಪ

ಸಚ್ಚಿದಾನಂದ ಕುರಗುಂದ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸಿಂಹ, ಕುದುರೆ, ಆನೆ, ಚೇಳು, ಪುರುಷ, ಮಹಿಳೆ, ಚರಕದಲ್ಲಿ ನೂಲು ನೇಯುತ್ತಿರುವ ಮಹಾತ್ಮಾಗಾಂಧಿ, ನೇಗಿಲಯೋಗಿ, ಒಂಟೆ, ಮರ, ಗಿಳಿ, ನಡೆಯುತ್ತಿರುವ ಮನುಷ್ಯ, ನವಿಲು, ರೋಬೋ ಮುಂತಾದವು ಶಾಪಗ್ರಸ್ತರಾಗಿ ನಿಂತಂತೆ ಕಾಣುತ್ತವೆ.

ಜೀವಕಳೆ ತುಂಬಿರುವ ಕಲಾಕೃತಿಗಳನ್ನು ಕಂಡಾಗ ಅನಿಸುವುದೇ ಹೀಗೆ.  ನಟ್‌, ಬೋಲ್ಟ್‌, ಚೈನ್‌, ಪೆಟ್ರೋಲ್‌ ಟ್ಯಾಂಕ್‌ ಇತ್ಯಾದಿ ಅಟೋಮೊಬೈಲ್‌ ತ್ಯಾಜ್ಯಗಳನ್ನು ಬಳಸಿಕೊಂಡು ಲೋಹಕ್ಕೂ ಜೀವ ತುಂಬುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕಟೂರಿ ವೆಂಕಟೇಶ್ವರ ರಾವ್‌ ಮತ್ತು ಅವರ ಪುತ್ರ ರವಿಚಂದ್ರ ಕಟೂರಿ ಅವರು ಈ ರೀತಿಯ ವಿಭಿನ್ನ ಮತ್ತು ವಿಶೇಷ ಪ್ರಯೋಗದಲ್ಲಿ ತೊಡಗಿದ್ದಾರೆ.

ಇಲ್ಲಿನ ಕಲಾಕೃತಿಗಳಿಗೆ ₨ 35 ಸಾವಿರದಿಂದ ₨ 2 ಲಕ್ಷದವರೆಗೆ ಬೆಲೆ ನಿಗದಿಪಡಿಸಿದ್ದಾರೆ.  ಬೈಕ್‌ಗಳ ಚೈನ್‌, ಸ್ಪ್ರಿಂಗ್‌ ಮುಂತಾದ ಸಾಮಗ್ರಿಗಳನ್ನು ಬಳಸಿ 200 ಕೆ.ಜಿ. ತೂಕದ ಸಿಂಹ ತಯಾರಿಸಲು ಈ ಕಲಾವಿದರು ಎರಡು ತಿಂಗಳ ಸಮಯ ತೆಗೆದುಕೊಂಡಿದ್ದಾರೆ. ಚರಕದಲ್ಲಿ ನೂಲು ನೇಯುತ್ತಿರುವ ಮಹಾತ್ಮಾಗಾಂಧಿ ಕಲಾಕೃತಿ ರೂಪುತಳೆದಿರುವುದು ತಂತಿಗಳಿಂದ. ಈ ಕಲಾಕೃತಿ ಮಾಡಲು ಹಿಡಿದ ಸಮಯ ಒಂದು ತಿಂಗಳು.

ಗುಂಟೂರಿನ ಮಾಯಾಬಜಾರ್‌ನಿಂದ ಅಟೋಮೊಬೈಲ್‌ ತ್ಯಾಜ್ಯವನ್ನು ಇವರು ಖರೀದಿಸುತ್ತಾರೆ. ಬೈಕ್‌, ಲಾರಿ, ಕಾರು, ಮುಂತಾದ ಎಲ್ಲ ವಾಹನಗಳ ಬಿಡಿಭಾಗಗಳ ತ್ಯಾಜ್ಯವನ್ನು ಖರೀದಿಸಿ ನೆಲದ ಮೇಲೆ ಹರಡುತ್ತಾರೆ. ನಂತರ ಕಲಾಕೃತಿಗಳಿಗೆ ಹೊಂದಾಣಿಕೆಯಾಗುವಂಥ ಒಂದೊಂದು ಬಿಡಿಭಾಗವನ್ನೂ ಆಯ್ಕೆ ಮಾಡುತ್ತಾ ತಯಾರಿಕೆಯನ್ನು ಮುಂದುವರಿಸುತ್ತಾರೆ.

‘ಕಲಾಕೃತಿಗಳನ್ನು ತಯಾರಿಸುವ ಮುನ್ನ ರೇಖಾಚಿತ್ರವನ್ನು ಹಾಕಿಕೊಳ್ಳುತ್ತೇವೆ. ನಂತರ ಮಣ್ಣಿನ ಕೆಲಸ ನಡೆಯುತ್ತದೆ. ಈ ಮಣ್ಣಿನ ಮೇಲೆ ನಮಗೆ ಬೇಕಾದಂತೆ ವಾಹನಗಳ ಬಿಡಿಭಾಗಗಳನ್ನು ಅಂಟಿಸುತ್ತಾ ಹೋಗುತ್ತೇವೆ. ಈ ಕಾರ್ಯ ಮುಗಿದ ಮೇಲೆ ಬಿಡಿಭಾಗಗಳನ್ನು ವೆಲ್ಡಿಂಗ್‌ ಮಾಡುತ್ತೇವೆ. ಈ ಪ್ರಕ್ರಿಯೆಗಳು ಪೂರ್ಣವಾದ ನಂತರ ಮಣ್ಣು ತೆಗೆದು ಸ್ವಚ್ಛಗೊಳಿಸುತ್ತೇವೆ. ಈ ಕಲೆ ಬಹಳ ಕಠಿಣ ಸವಾಲಿನಿಂದ ಕೂಡಿದೆ. ಮುಖ್ಯವಾಗಿ ತಾಳ್ಮೆ ಬೇಕು’ ಎಂದು ತಯಾರಿಕೆಯ ವಿವಿಧ ಹಂತಗಳನ್ನು ರವಿಚಂದ್ರ ವಿವರಿಸುತ್ತಾರೆ.

‘ಇಲ್ಲಿ ಲೋಹಗಳಿಗೆ ಕಲೆಯ ರೂಪ ನೀಡಿರಬಹುದು. ಆದರೆ, ಇವುಗಳ ಮೂಲಕ ಜನರಿಗೂ ಒಂದು ಸಂದೇಶ ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ನಿಸರ್ಗ, ಪ್ರಾಣಿಗಳನ್ನು ರಕ್ಷಿಸುವ ಕುರಿತು ಜನರಲ್ಲಿ ಅರಿವು ಮೂಡಬೇಕು. ನಿಸರ್ಗ ರಕ್ಷಣೆ ಸಂದೇಶ ಇವುಗಳ ಮೂಲಕವೂ ತಲುಪಬೇಕು’ ಎಂದು ರವಿಚಂದ್ರ ಹೇಳುತ್ತಾರೆ.

ಕಲಾವಿದರ ಕುಟುಂಬದ ಹಿನ್ನೆಲೆಯ ಈ ತಂದೆ, ಮಗ ಕಲೋಪಾಸನೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ. ದೇವಾಲಯಗಳ ನಿರ್ಮಾಣದಲ್ಲಿ ಇವರ ತಾತ ತೊಡಗಿಸಿಕೊಂಡಿದ್ದರು. ಏಳು ಪೀಳಿಗೆಯ ಈ ಕಲಾವಿದರ ಕುಟುಂಬಕ್ಕೆ ಕಲೆಯೇ ಆರಾಧ್ಯ ದೈವ. ಕಟೂರಿ ವೆಂಕಟೇಶ್ವರ್‌ರಾವ್‌ ಅವರು ಸಹ ದೇವಾಲಯಗಳ ವಿನ್ಯಾಸ ಮತ್ತು ಆಧುನಿಕ ಕಲಾಕೃತಿಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ವೃತ್ತಿಪರ ಕೌಶಲಗಳನ್ನು ಮೈಗೂಡಿಸಿಕೊಂಡು ಬಂದಿರುವ ವೆಂಕಟೇಶ್ವರ್‌ರಾವ್‌, ತಮ್ಮ ಮಗನಿಗೂ ಮಾರ್ಗದರ್ಶಕರಾಗಿದ್ದಾರೆ. ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಲಲಿತ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರವಿಚಂದ್ರ (24)  ಬಾಲ್ಯದಿಂದಲೂ ಕುಂಚ ಹಿಡಿದು ಬೆಳೆದು ಬಂದವರು.

‘ನನ್ನ ತಂದೆಯ ಕಲೆಯನ್ನು ನೋಡುತ್ತಾ ನಾನು ಬೆಳೆದೆ. ಸ್ನಾತಕೋತ್ತರ ಪದವಿ ಮುಗಿಸಿದ ನಂತರ ತ್ಯಾಜ್ಯಗಳಿಂದ ಕಲಾಕೃತಿಗಳನ್ನು ರಚಿಸುವ ಚಿಂತನೆ ಆರಂಭವಾಯಿತು.  ಹೈದರಾಬಾದ್‌ನಲ್ಲಿ 2011ರಲ್ಲಿ ಜೀವ ವೈವಿಧ್ಯ ಕುರಿತು ನಡೆದ ಸಮ್ಮೇಳನದಲ್ಲಿ ಇದೇ ರೀತಿಯ ಕಲಾಕೃತಿಗಳನ್ನು ಮೊದಲ ಬಾರಿ ತಯಾರಿಸಿದ್ದೆ.

ADVERTISEMENT

ನಂತರ 2012ರಲ್ಲಿ ಸಿಂಹದ ಕಲಾಕೃತಿ ರಚಿಸಿದೆ’ ಎಂದು ರವಿಚಂದ್ರ ಹೇಳುತ್ತಾರೆ. ಈ ಪ್ರದರ್ಶನ ಡಿ.19ರವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಮತ್ತು ಡಿ. 25ರಿಂದ ಜ.8ರವರೆಗೆ ಮೆಟ್ರೋ ರಂಗೋಲಿ ಕೇಂದ್ರದಲ್ಲಿ ನಡೆಯಲಿದೆ.
ಕಲಾವಿದರ ಸಂಪರ್ಕಕ್ಕೆ: 9989035253, 9440248636.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.