ಹಸೆ ಅಥವಾ ಚಿತ್ತಾರ ಕಲೆ ಮಲೆನಾಡಿನ ಬದುಕಿನೊಂದಿಗೆ ಹಾಸು ಹೊಕ್ಕಾಗಿದೆ. ಮಲೆನಾಡಿನ ಪ್ರತಿ ಮನೆಯೂ ಹಸೆಯಿಂದ ಅಲಂಕೃತಗೊಂಡಿರುತ್ತದೆ. ಇದು `ದೇವರಿ' ಜನಾಂಗದ ಕಲೆ. ಸೊರಬ, ಹೊಸನಗರ, ಸಿರ್ಸಿ, ಸಿದ್ದಾಪುರದಲ್ಲಿ ಈ ಜನಾಂಗ ವಾಸವಿದ್ದು ಹಸೆಚಿತ್ರಕ್ಕೆ ಕಲ್ಲಿನ ಪುಡಿ ಮತ್ತು ನೈಸರ್ಗಿಕ ಬಣ್ಣವನ್ನೇ ಬಳಸುತ್ತಿರುವುದು ಇದರ ವಿಶೇಷ.
ಚಿತ್ರ ರಚಿಸಲು ಬಳಸುವ ಬ್ರಷ್ ಕೂಡಾ ಸೆಣಬಿನ ದಾರದಿಂದ ಮಾಡಿದ್ದು. ಅದನ್ನು ಬಣ್ಣದಲ್ಲಿ ಅದ್ದಿ `ಎಂಬೋಸ್' ಮಾಡಿದಂಥ ಗೆರೆಗಳನ್ನು ಮೂಡಿಸುವ ರೀತಿ ತುಂಬ ಕಲಾತ್ಮಕವಾಗಿದೆ.ಹಸೆಯ ಇತಿಹಾಸ ಬಹಳ ಹಿಂದಿನದ್ದು. ಶಿಲಾಯುಗದಲ್ಲಿ ಮಾನವ ಕಲ್ಲಿನಿಂದ ಗುಹೆಯ ಗೋಡೆಗಳ ಮೇಲೆ ಮಾನವ ಮತ್ತು ಪ್ರಾಣಿಯ ಚಿತ್ರಗಳನ್ನು ರಚಿಸುತ್ತಿದ್ದ. ಅಕ್ಷರ ಕಂಡು ಹಿಡಿಯುವುದಕ್ಕೂ ಮೊದಲು ಗುಣಿಸು ಚಿಹ್ನೆ ಹಾಕುವ ಮೂಲಕ ಚಿತ್ರಗಳನ್ನು ಬಿಡಿಸುವುದನ್ನು ಕಂಡುಹಿಡಿದವರು ಶಿಲಾಯುಗದ ಮಾನವರು.
ಹಸೆಯ ಮೂಲ ಬುಡಕಟ್ಟು ಜನಾಂಗದ ಕಲೆ. ಗುಹೆಗಳಲ್ಲಿ ವಾಸಿಸುತ್ತಾ, ಬೇಟೆಯನ್ನೇ ಕಸುಬಾಗಿಸಿಕೊಂಡ ಬುಡಕಟ್ಟು ಜನಾಂಗ ಗುಹೆಯ ಗೋಡೆಗಳ ಮೇಲೆ ಪ್ರಾಣಿ, ಮನುಷ್ಯ ಮತ್ತು ಬೇಟೆಯ ಚಿತ್ರಗಳನ್ನು ತಮ್ಮದೇ ಕಲ್ಪನೆಯಲ್ಲಿ ರಚಿಸುತ್ತಿದ್ದರು. ನಂತರ ಮನೆಗಳನ್ನು ಕಟ್ಟಿಕೊಂಡು ವಾಸಮಾಡುವ ಸಂದರ್ಭದಲ್ಲಿ ಇದೇ ಚಿತ್ರಗಳನ್ನು ಮನೆಯ ಗೋಡೆಗಳ ಮೇಲೆ ರಚಿಸುತ್ತಿದ್ದರು. ಹೀಗೆ ಬಂದ ಕಲೆ ಮಲೆನಾಡಿನ ಮನೆಗಳ ಪ್ರಮುಖ ಭಾಗವಾಗಿದೆ.
ಆದರೆ ಹಸೆಯ ವಿನ್ಯಾಸ ಬದಲಾಗಿದೆ. ಇಡೀ ಮನೆಯ ವಿನ್ಯಾಸವನ್ನು ಹಸೆಯಲ್ಲಿ ಚಿತ್ರಿಸಲಾಗುತ್ತದೆ. ರಥ, ಆರತಿ, ದೀಪಗಳು ಮುಖ್ಯವಾಗಿದೆ. ಎಂಟರಿಂದ ಎಂಬತ್ತು ದೀಪಗಳನ್ನು ಒಂದೇ ಚಿತ್ರದಲ್ಲಿ ಕಾಣಬಹುದು. ಎಂಬತ್ತು ದೀಪಗಳು ಎಂಬತ್ತು ಕೋಟಿ ಜೀವರಾಶಿಯ ಸಂಕೇತ. ಮನೆಯೊಳಗೆ ಮದುಮಕ್ಕಳು, ಕಂಬಗಳು, ಮಂಟಪ, ಹೀಗೆ ಬದುಕಿಗೆ ಸಂಬಂಧಿಸಿದ ಎಲ್ಲ ಆಚರಣೆಗಳ ವಿವರಗಳು ಹಸೆ ಚಿತ್ತಾರದಲ್ಲಿ ಮೂಡಿವೆ.
ಮಲೆನಾಡಿನ ಮನೆಯಲ್ಲಿ ನಡೆಯುವ ಯಾವುದೇ ಆಚರಣೆ, ಮದುವೆ ಶಾಸ್ತ್ರ, ನೆಂಟರಿಷ್ಟರು ಬಂದಾಗ ಕುಳಿತುಕೊಳ್ಳುವ ಜಾಗ ಇಲ್ಲೆಲ್ಲ ಹಸೆ ಇದ್ದೇ ಇರುತ್ತದೆ. ಸೋಬಾನೆಯಲ್ಲಿ ಬರುವ ಎಲ್ಲ ಆಚರಣೆಗಳ ವಿವರಗಳು ಹಸೆ ಚಿತ್ತಾರದಲ್ಲಿ ಮೂಡುತ್ತವೆ.
ಸಿದ್ದಾಪುರದ ಈಶ್ವರ ನಾಯ್ಕ ಎಂಬ ಕಲಾವಿದರೊಬ್ಬರು ಸುಮಾರು 20 ವರ್ಷಗಳಿಂದ ಈ ಕಲೆಯಲ್ಲಿ ಪ್ರಯೋಗಗಳನ್ನು ಮಾಡುತ್ತಾ, ದೇಶದಾದ್ಯಂತ ಪ್ರದರ್ಶನಗಳನ್ನು ನಡೆಸುತ್ತಾ ಬಂದಿದ್ದಾರೆ. ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂ ಆವರಣದಲ್ಲಿ ಇವರ ಚಿತ್ತಾರ ಕಲಾಕೃತಿಗಳ ಪ್ರದರ್ಶನ ಇನ್ನು ಒಂದು ವಾರದವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ಫ್ರೇಮ್ ಹಾಕಿರುವ ಅರ್ಧ ಅಡಿಯ ಕಲಾಕೃತಿಗಳಿಂದ ಹಿಡಿದು ಎರಡು ಅಡಿಗಳವರೆಗಿನ ಕಲಾಕೃತಿಗಳು ಇವೆ. ಬಟ್ಟೆ, ಹ್ಯಾಂಡ್‌ಮೇಡ್ ಪೇಪರ್ ಮೇಲೆ ಹಸೆ ಚಿತ್ತಾರ ಕಾಣಬಹುದಾಗಿದೆ.
ಅಮ್ಮನಿಂದ ಬಂದ ಕಲೆ
ಅಮ್ಮನಿಂದ ಈ ಕಲೆಯನ್ನು ಕಲಿತಿರುವ ಕಲಾವಿದ ಈಶ್ವರ್ ನಾಯ್ಕ ಹೀಗೆನ್ನುತ್ತಾರೆ: ಸಂಪೂರ್ಣವಾಗಿ ನಶಿಸಿ ಹೋಗುತ್ತಿದ್ದ ಹಸೆ ಕಲೆಯ ಬಗ್ಗೆ ಸುಮಾರು ಹತ್ತು ವರ್ಷಗಳ ಅಧ್ಯಯನ ನಡೆಸಿದ್ದೇನೆ. ಸಾಂಪ್ರದಾಯಿಕ ಹಸೆ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಏಳು ವರ್ಷಗಳಿಂದ `ಚಿತ್ತಾರ ಚಾವಡಿ' ಸ್ಥಾಪಿಸಿ ಆರು ತಿಂಗಳ ತರಬೇತಿಯನ್ನು ನೀಡುತ್ತಿದ್ದೇನೆ. ಇಂತಹ ಸುಮಾರು 25 ಸಾವಿರ ಚಿತ್ರಗಳು ಈವರೆಗೂ ಮಾರಾಟವಾಗಿವೆ.
ಕೆನಡಾದ ಖ್ಯಾತ ಕಲಾವಿದ ರಾಬರ್ಟ್ ಚೇಟ್ಮಂಡ್ ಅವರ ಮನೆಯಲ್ಲೂ ನನ್ನ ಕಲಾಕೃತಿ ಸ್ಥಾನ ಪಡೆದಿದೆ. ಟೊರಂಟೋದ ಸೌತ್ ಏಷಿಯನ್ ಮ್ಯೂಸಿಯಂನಲ್ಲಿ ನನ್ನ ಕಲಾಕೃತಿಗಳು ಇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜ್ಞಾನಭಾರತಿಯಲ್ಲಿ ನಿರ್ಮಿಸುತ್ತಿರುವ ಕಲಾಗ್ರಾಮದಲ್ಲಿರುವ ಮನೆಗಳಲ್ಲಿ ಹಸೆ ಚಿತ್ತಾರವನ್ನು ಮಾಡಿದ್ದೇನೆ. ಮಾರುವ ಉದ್ದೇಶದಿಂದ ಹಸೆ ಚಿತ್ತಾರವನ್ನು ಹ್ಯಾಂಡ್‌ಮೇಡ್ ಪೇಪರ್ ಮೇಲೆ ರಚಿಸಲಾಗುತ್ತದೆ.
ಇಲ್ಲಿ ಬಳಸುವುದು ಎರಡೇ ಬಣ್ಣ. ಒಂದು ಕೆಂಪು ಕಲ್ಲಿನ ಪುಡಿ ಮತ್ತು ಅಕ್ಕಿಯನ್ನು ಒಂದು ವಾರ ನೆನೆಸಿ ರುಬ್ಬಿ ಬಳಸುವ ಬಿಳಿ ಬಣ್ಣ. ಹಸೆ ಚಿತ್ತಾರ ಮೂಲಕ ಮನೆಗಳ ಒಳಾಂಗಣ ವಿನ್ಯಾಸ ಮಾಡುತ್ತೇನೆ. ಐಟಿ ಉದ್ಯೋಗಿಗಳು ಕೆಲ ಸಾಫ್ಟ್‌ವೇರ್ ಕಂಪೆನಿಗಳು ಕಲಾಕೃತಿಗಳನ್ನು ಕೊಳ್ಳಲು ಮುಂದೆ ಬಂದಿವೆ. ನಗರದ ಜನರಿಗೆ ಹಸೆ ಚಿತ್ರಗಳನ್ನು ಪರಿಚಯಿಸುವ ದೃಷ್ಟಿಯಿಂದ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.