ADVERTISEMENT

ಹೊಸಬರಿಗೆ ಫ್ಯಾಷನ್ ಸುಸ್ವಾಗತ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಇದೇನು ಎಲ್ಲಾ ಶ್ವೇತ ವಸ್ತ್ರಧಾರಿಗಳ ತಲೆಯಲ್ಲಿ ಹೂವು ಮತ್ತು ಎಲೆಗಳ ಕಿರೀಟ. ದೂರದಿಂದ ನೋಡಿದರೆ ದೇವತೆಗಳು ಮೇಲಿಂದ ಬಂದು ಇಲ್ಲಿ ನೆರೆದಿದ್ದಾರೋ ಎಂಬಂಥ ದೃಶ್ಯ.

ಅದು ಫಾರ್ಚೂನ್ ಹೊಟೇಲ್‌ನ  ಮೈದಾನದಲ್ಲಿ ಸಿದ್ಧವಾದ ವೇದಿಕೆ. `ಕೃಪಾನಿಧಿ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್~ನ ವಿದ್ಯಾರ್ಥಿಗಳೆಲ್ಲಾ ಅಲ್ಲಿ ಸೇರಿದ್ದರು. ಈ ಬಾರಿಯ `ಫ್ರೆಶರ್ಸ್‌ ಡೇ~ ಭಿನ್ನವಾಗಿದೆ ಎಂಬ ಸೂಚನೆಯನ್ನು ಅವರು ಧರಿಸಿದ್ದ ಉಡುಪುಗಳೇ ಕೊಡುತ್ತಿದ್ದವು. ಇದು ಯಾವ ಬಗೆಯ ಉಡುಪು ಎಂಬ ಗೊಂದಲ ನಿವಾರಿಸಲೋ ಎಂಬಂತೆ `ಗ್ರೀಕ್ ಶೈಲಿ~ ಎಂದು ಹೇಳಿ ಒಬ್ಬಳು ನಕ್ಕಳು.

ಮಾತು, ನಗು, ಕೇಕೆಗಳೇ ಅಲ್ಲಿ ತುಂಬಿಕೊಂಡಿದ್ದವು. `ನನ್ನ ಫೋಟೊ ಹೀಗೆ ತೆಗಿ~ ಎನ್ನುತ್ತಾ ಪೋಸ್ ಕೊಡಲು ಕುಳಿತ ಒಬ್ಬಾಕೆಗೆ ತನ್ನ ಬಟ್ಟೆಗೆ ಎಲ್ಲಿ ಮಣ್ಣು ಮೆತ್ತಿಕೊಳ್ಳುವುದೋ ಎಂಬ ಆತಂಕ. `ಅರೆ ಸಾಕು ಕಾರ್ಯಕ್ರಮ ಶುರುವಾಗುತ್ತಿದೆ.

ನಾವಿಲ್ಲಿಯೇ ಇದ್ದರೆ ಹೇಗೆ?~ ಎಂದು ಒಂದು ತಂಡ ಬಂದು ಫೋಟೊ ಕ್ಲಿಕ್ಕಿಸುತ್ತಿದವರನ್ನು ಎಚ್ಚರಿಸಿದ್ದೇ, ಫೋಟೊಗೆ ಪೋಸ್ ಕೊಡುತ್ತಿದ್ದ ಆ ಹುಡುಗಿ ಸಪ್ಪೆಮೋರೆ ಹಾಕಿಕೊಂಡು ಹೊರಟಳು.

ಹಸಿರು ಹ್ಲ್ಲುಲುಹಾಸಿನ ಮಧ್ಯೆ ಮರದ ನೆರಳಿನಲ್ಲಿ ಇದ್ದ ಪುಟ್ಟ ವೇದಿಕೆಯದು. ಸಂಜೆಯ ಚುಮುಚುಮು ಗಾಳಿ, ಮಂದವಾದ ಸಂಗೀತ ಕಿವಿ ಮೇಲೆ ಬಿದ್ದಾಗ ಸುಂದರ ಅನುಭೂತಿ.

ಅಷ್ಟೂ ಹೊತ್ತು ಓಡಾಡುತ್ತಿದ್ದ ವಿದ್ಯಾರ್ಥಿಗಳು ಕ್ಷಣಕಾಲ ಸುಮ್ಮನಾದರು. ಇರುವೆಗಳ ಸಾಲಿನಂತೆ ಬಂದು ಶಿಸ್ತಿನ ಸಿಪಾಯಿಗಳಂತೆ ಆಸೀನರಾದರು.

 ಆ ವೇದಿಕೆ ಕೂಡ ಎಲ್ಲಕ್ಕಿಂತ ಭಿನ್ನವಾಗಿತ್ತು. ಅದರ ಬಳಿ ಬೆಂಕಿ ಉರಿಯುತ್ತಿರುವ ನಾಲ್ಕು ದೀವಟಿಗೆ ಹಿಡಿದು ಕಟ್ಟುಮಸ್ತಾದ ನಾಲ್ಕು ಹುಡುಗರು ಬಂದು ನಿಂತರು. ಹಿನ್ನೆಲೆ ವಾದ್ಯ ಕೇಳಿಬಂದಾಗ ಅದೇ ಕಾರ್ಯಕ್ರಮದ ಪ್ರಾರಂಭಕ್ಕೆ ಸೂಚನೆ ಎಂದು ಅರಿತ ಒಂದು ಜೋಡಿ ವೇದಿಕೆಗೆ ಬಂತು. ಆ ಜೋಡಿ ಅಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಮರೆಯಾಯಿತು. ಉದ್ಘಾಟನೆಗೆ ಮುನ್ನ ಬಾನೆತ್ತರಕ್ಕೆ ಚಿಮ್ಮಿದ ಸಿಡಿಮದ್ದುಗಳು ಬಣ್ಣ ಬಣ್ಣದ ಚಿತ್ತಾರ ಮೂಡಿದವು. ಅಷ್ಟು ಹೊತ್ತು ಸುಂದರವಾಗಿದ್ದ ಆ ವಾತಾವರಣ ಸ್ವಲ್ಪ ಹದಗೆಟ್ಟಿದ್ದು ಆ ಸಿಡಿಮದ್ದುಗಳ ಕೆಟ್ಟ ವಾಸನೆಯಿಂದ.

ನಂತರ ವೇದಿಕೆ ಮೇಲೆ ರಾರಾಜಿಸಿದ್ದು ನೃತ್ಯ ತಂಡ. ಅಲ್ಲಿ ಸೇರಿದ್ದವರು ಕಣ್ಣರೆಪ್ಪೆ ಮುಚ್ಚಲು ಕೂಡ ಯೋಚಿಸುವ ಹಾಗಿತ್ತು ಅವರ ನೃತ್ಯ ಭಂಗಿ. ನೃತ್ಯ ಮುಗಿದ ಕ್ಷಣದಲ್ಲಿಯೇ ವೇದಿಕೆಯ ಮೇಲೆ ಗ್ರೀಕ್ ಉಡುಗೆ ತೊಟ್ಟ ಹುಡುಗರು ಬಂದರು.

ಅವರಿಗೆ ಜತೆಯಾಗಿ ಹುಡುಗಿಯರು ಬೆಕ್ಕಿನ ನಡಿಗೆಯಲ್ಲಿ ಬಂದಾಗ ಚಪ್ಪಾಳೆ, ಸಿಳ್ಳೆ ಜೋರಾಯಿತು. ಪಾಶ್ಚಾತ್ಯ ಸಂಗೀತದ ಲಯಕ್ಕೆ ತಕ್ಕಂತೆ ಅವರ ಹೆಜ್ಜೆಗಳು, ಮೊಗದಲ್ಲಿ ತುಸು ಭಯ ಮೂಡಿದ್ದನ್ನು ತೋರಿಸದೆಯೇ ಆತ್ಮವಿಶ್ವಾಸದಿಂದ ಮುಗುಳ್ನಗೆ ಬೀರುತ್ತಿದ್ದರು.

`ಗ್ರೀಕ್ ಶೈಲಿಯ ಈ ಶೋ ಹೊಸ ಬಗೆಯದು. ಇಲ್ಲಿರುವ ವಿದ್ಯಾರ್ಥಿಗಳ ಕಣ್ಣಲ್ಲಿ ನಿರೀಕ್ಷೆ, ಕುತೂಹಲವಿದೆ. ಎರಡು ವರ್ಷದ ಈ ಅವಧಿ ಅವರು ನಮ್ಮಂದಿಗೆ ಇರುತ್ತಾರೆ. ಅದು ಎಂದಿಗೂ ಮರೆಯಲಾಗದ ನೆನಪು. ವಿದ್ಯಾರ್ಥಿಗಳಿಗೆ ಸಮಯ ತುಂಬಾ ಅಮೂಲ್ಯವಾದದ್ದು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಗುರಿ ಇರಬೇಕು. ಸಕಾರಾತ್ಮಕ ಯೋಚನೆ ಇದ್ದರೆ ಮಾತ್ರ ಏನಾದರೂ ಹೊಸತನ್ನು ಮಾಡಬಹುದು~ ಎಂದು ಕಾಲೇಜಿನ ಅಧ್ಯಕ್ಷ ಡಾ. ಸುರೇಶ್ ನಾಗ್‌ಪಾಲ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಮಾತು ಮುಗಿದ ಮೇಲೆ ಮತ್ತೆ ಮನರಂಜನೆ ಹೊನಲಾಯಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT