ಟಿ.ವಿ. ಷೋಗಳ ಮೂಲಕ ಜನಪ್ರಿಯಗೊಂಡ ನಟ ರಜನೀಶ್ ದುಗ್ಗಲ್ ನೃತ್ಯಾಧಾರಿತ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
‘ಖತ್‌ರೋಂಕೆ ಖಿಲಾಡಿ’ 5ನೇ ಸಂಚಿಕೆ ವಿಜೇತರಾಗುವ ಮೂಲಕ ಬಾಲಿವುಡ್ ಲೋಕಕ್ಕೆ ಪದಾರ್ಪಣೆ ಮಾಡಿದ ರಜನೀಶ್ ಮೊದಲ ಚಿತ್ರ ‘1920’. ‘ನೃತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆತರೆ ಖುಷಿಯಿಂದ ಭಾಗವಹಿಸುತ್ತೇನೆ. ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನನಗೆ ಸಂತಸ ನೀಡುತ್ತದೆ ಹಾಗೂ ಆಸಕ್ತಿದಾಯಕವಾಗಿರುತ್ತದೆ’ ಎಂದಿದ್ದಾರೆ ರಜನೀಶ್.
‘ಝಲಕ್ ದಿಖ್‌ಲಾಜಾ‘ ಷೋನಲ್ಲಿ ರಜನೀಶ್ ಭಾಗವಹಿಸಬೇಕಾಗಿತ್ತು. ಆದರೆ ಅವರು ‘ಡೈರೆಕ್ಟ್ ಇಷ್ಕ್’ ಸಿನಿಮಾದಲ್ಲಿ ಬ್ಯುಸಿ ಆಗಿರುವುದರಿಂದ ಈ ಷೋನಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದಾರೆ. ‘ಝಲಕ್ ದಿಖ್‌ಲಾಜಾ ಹಾಗೂ ಡೈರೆಕ್ಟ್ ಇಷ್ಕ್ ಅವಕಾಶಗಳು ಒಂದೇ ಸಮಯಕ್ಕೆ ಬಂದವು. ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದರಿಂದ ಒಪ್ಪಿಕೊಂಡೆ. ಸಿನಿಮಾ ಕಥೆ ವಿಭಿನ್ನವಾಗಿಲ್ಲದಿದ್ದರೆ ನಾನು ನೃತ್ಯಕ್ಕೆ ಸಂಬಂಧಿಸಿದ ರಿಯಾಲಿಟಿ ಷೋನಲ್ಲೇ ಪಾಲ್ಗೊಳ್ಳುತ್ತಿದ್ದೆ’ ಎಂದಿದ್ದಾರೆ.
ನೃತ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಯಕೆ ಹೊಂದಿದ್ದ ಅವರು, ‘ಬಿಗ್ ಬಾಸ್’ನಂಥ ರಿಯಾಲಿಟಿ ಷೋ ಅವಕಾಶ ಸಿಕ್ಕಿದ್ದರೆ ಖಂಡಿತ ಪಾಲ್ಗೊಳ್ಳುತ್ತಿರಲಿಲ್ಲ ಎಂದೂ ತಿಳಿಸಿದ್ದಾರೆ. ‘ಬಿಗ್‌ಬಾಸ್‌ನಲ್ಲಿ ಭಾಗವಹಿಸಬೇಕು ಎಂದೆನಿಸಿಲ್ಲ. ತೀರಾ ವಿಭಿನ್ನ ವೇದಿಕೆ ಒದಗಿಸುವ ಆ ಕಾರ್ಯಕ್ರಮದಲ್ಲಿ ಭಾಗವಹಿಸಬಲ್ಲೆ ಎಂದೂ ನಾನಂದುಕೊಂಡಿಲ್ಲ’ ಎಂದಿರುವ ಅವರು ಸದಾ ವಿಭಿನ್ನ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸುತ್ತಾರೆ. ತೀರಾ ಹೆಚ್ಚು ಸಮಯ ತೆಗೆದುಕೊಳ್ಳುವಂಥ ಪ್ರಾಜೆಕ್ಟ್‌ಗಳಲ್ಲಿ ಭಾಗವಹಿಸುವುದು ವೃತ್ತಿಬದುಕಿನ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.