ADVERTISEMENT

‘ಫ್ಯಾಂಟಸಿ ಆಸೆ ಈಡೇರಿದೆ’

ಸಂದರ್ಶನ

ಮಂಜುಶ್ರೀ ಎಂ.ಕಡಕೋಳ
Published 10 ಆಗಸ್ಟ್ 2016, 19:30 IST
Last Updated 10 ಆಗಸ್ಟ್ 2016, 19:30 IST
ಸಚಿನ್ ದೇವ್
ಸಚಿನ್ ದೇವ್   

‘ದೇವರ ಸ್ವಂತ ನಾಡು’ ಕೇರಳದವರಾದ ಸಚಿನ್ ದೇವ್ ತಮ್ಮ ಚೊಚ್ಚಿಲ ಕೃತಿ ‘ಫೇತ್ ಆಫ್ ದಿ ನೈನ್‌’  ಮೂಲಕ ಇಂಗ್ಲಿಷ್ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ತಮ್ಮ ಕೃತಿ ಹಾಗೂ ಸಾಹಿತ್ಯ ಯಾತ್ರೆಯ ಕುರಿತು ‘ಮೆಟ್ರೊ’ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

*ನೀವು ಮೂಲತಃ ಎಂಜಿನಿಯರ್, ಸಾಹಿತ್ಯದ ಒಡನಾಟ ಬೆಳೆದಿದ್ದು ಹೇಗೆ?
ಎಂಜಿನಿಯರಿಂಗ್ ನನ್ನ ವೃತ್ತಿ. ಆದರೆ, ಬರವಣಿಗೆ ನನ್ನ ಪ್ರವೃತ್ತಿ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಅಪಾರ ಒಲವುಳ್ಳವನು ನಾನು. ದೊಡ್ಡ ಲೇಖಕನಾಗಬೇಕೆಂಬ ಕನಸು ಕಂಡಿದ್ದೆ. ಸಾಂಪ್ರದಾಯಿಕ ಶಿಕ್ಷಣ ಮುಗಿಸಿ ವೃತ್ತಿಯ ನಡುವೆಯೇ ಲೇಖಕನಾಗಿ ಬೆಳೆಯುವ ಇರಾದೆ ನನ್ನದು. ಬಾಲ್ಯದಲ್ಲಿ ಶೆರ್ಲಾಕ್‌ ಹೋಮ್ಸ್, ಶೇಕ್ಸ್‌ಪಿಯರ್, ಸಿಡ್ನಿ ಶೆಲ್ಡನ್, ಅರ್ಥರ್ ಹೈಲಿ ಹೀಗೆ ಅನೇಕ ಲೇಖಕರು ನನ್ನನ್ನು ಸೆಳೆದಿದ್ದಾರೆ.

*‘ಫೇತ್ ಆಫ್ ದಿ ನೈನ್’ ಕಾದಂಬರಿಯ ವೈಶಿಷ್ಟ್ಯ ಏನು?
‘ಫೇತ್ ಆಫ್ ದಿ ನೈನ್’ ಕಾಲ್ಪನಿಕ ರಮ್ಯ ಕಾದಂಬರಿ. ಮಹಾಕಾವ್ಯದ ಜಾಡಿನಲ್ಲೇ ರಚಿತವಾಗಿರುವ ಕೃತಿ ಇದು. ನನ್ನ ಮೊದಲ ಕೃತಿ ‘ಫ್ಯಾಂಟಸಿ’ಯಿಂದಲೇ (ಕಾಲ್ಪನಿಕತೆ) ಕೂಡಿರಬೇಕು ಎಂದು ಆಸೆಪಟ್ಟವನು ನಾನು. ಅದು ಈಗ ಈಡೇರಿದೆ.

ಹನ್ನೊಂದು ವರ್ಷದ ಬಾಲಕ ಇಶಾನ್ ಸುತ್ತ ಇಡೀ ಕಾದಂಬರಿ ಆವರಿಸಿದೆ. ತನ್ನ ವಿಶೇಷ ಶಕ್ತಿಯ ಅರಿವು ಆತನಿಗೆ ಇರುವುದಿಲ್ಲ. ಮುಂದೊಂದು ದಿನ ಆ ಶಕ್ತಿಯ ಅರಿವಾದಾಗ ಏನಾಗುತ್ತದೆ ಎಂಬುದು ಈ ಕೃತಿಯ ಮೂಲದ್ರವ್ಯ.

*ಸಾಹಿತ್ಯ ವಲಯದ ಪ್ರತಿಕ್ರಿಯೆ ಹೇಗಿದೆ?
ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ವಿಮರ್ಶಕರು ಚೆನ್ನಾಗಿದೆ ಎಂದು ಷರಾ ಬರೆದಿದ್ದಾರೆ. ಕಾದಂಬರಿ ಓದಿದ ಅನೇಕರು ಚೆನ್ನಾಗಿದೆ ಎಂದು ಬೆನ್ನುತಟ್ಟಿದ್ದಾರೆ. ಅಮೆಜಾನ್, ಫ್ಲಿಪ್ ಕಾರ್ಟ್‌ನಲ್ಲೂ ಕಾದಂಬರಿಯ ಪ್ರತಿಗಳು ದೊರೆಯುತ್ತವೆ.

*ಮಹಾಕಾವ್ಯಗಳು ನಿಮ್ಮ ಬರವಣಿಗೆಯನ್ನು ಹೇಗೆ ಪ್ರಭಾವಿಸಿವೆ?
ಭಾರತ ಮಹಾಕಾವ್ಯಗಳ ಆಗರ. ಶ್ರೇಷ್ಠ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣ ನಮ್ಮ ದೈನಂದಿನ ಜೀವನದೊಂದಿಗೆ ಹಾಸುಹೊಕ್ಕಾಗಿವೆ. ಜನಪದರ ಬಾಯಲ್ಲಿ ನಲಿದಾಡುತ್ತಿದ್ದ ಈ ಮಹಾಕಾವ್ಯಗಳು ಇತ್ತೀಚಿನ ದಶಕಗಳಲ್ಲಿ ಟಿವಿ ಮೂಲಕ, ವಿಡಿಯೊ ಗೇಮ್‌ ಮೂಲಕ ಹೊಸ ಪೀಳಿಗೆಯನ್ನೂ ಆವರಿಸಿದೆ.

ಈಗಲೂ ಇಂಥ ರಮ್ಯಾತ್ಮಕ ಕಾಲ್ಪನಿಕ ಕಥೆಗಳನ್ನು ಜನರು ಓದಲು ಬಯಸುತ್ತಾರೆ. ನಾನು ಲೇಖಕನಾಗಿ ಬರೆಯವುದಕ್ಕಿಂತ ಒಬ್ಬ ಓದುಗನ ನೆಲೆಯಲ್ಲಿಯೇ ಬರೆಯಲು ಇಚ್ಛಿಸುವೆ.

ಅಮಿತ್ ತ್ರಿಪಾಠಿ ಅವರ ‘ಶಿವ ಟ್ರೈಲೊಜಿ’ ನನ್ನ ಮೇಲೆ  ಅಪಾರ ಪ್ರಭಾವ ಬೀರಿದೆ. ಆ ಜಾಡಿನಲ್ಲಿಯೇ ‘ಫೇತ್ ಆಫ್ ದಿ ನೈನ್’ ಬರೆದೆ. ಕೆಟ್ಟದ್ದಕ್ಕೆ ಸೋಲಾಗಿ ಒಳ್ಳೆಯತನ ಮೆರೆಯುವ ಆಶಯವುಳ್ಳ ಎಲ್ಲಾ ಕಾವ್ಯಗಳೂ ನನ್ನ ಬರವಣಿಗೆಯನ್ನು ಪ್ರಭಾವಿಸಿವೆ.

*ನಿಮ್ಮ ಬಾಲ್ಯ ಹೇಗಿತ್ತು?
ನಾನು ಹುಟ್ಟಿ ಬೆಳೆದದ್ದು ಕೇರಳದ ಸಣ್ಣ ಪಟ್ಟಣ ಮಲಪ್ಪುರಂನಲ್ಲಿ. ಅಲ್ಲಿನ ಸಹಜ ಪ್ರಕೃತಿ ಸೌಂದರ್ಯ ನನ್ನನ್ನು ಪ್ರಭಾವಿಸಿದೆ.
ಮೊಬೈಲ್‌ ಫೋನ್‌, ಟ್ಯಾಬ್, ವಿಡಿಯೊ ಗೇಮ್‌ಗಳಿಲ್ಲದ ನನ್ನ ಬಾಲ್ಯ ಬಹು ಸುಂದರವಾಗಿತ್ತು. ಟಿವಿ ನೋಡಲೂ ಕೂಡಾ ನಮಗೆ ನಿರ್ಬಂಧ ವಿಧಿಸಲಾಗುತ್ತಿತ್ತು. ಟಿವಿ ನೋಡುವುದಾದರೆ ಅದು ಕುಟುಂಬದವರ ಜತೆಯೇ ಕುಳಿತು ನೋಡಬೇಕಾಗಿತ್ತು. ಭಾನುವಾರ ಮಾತ್ರ ಸಿನಿಮಾ ನೋಡುವ ಅವಕಾಶ ದೊರೆಯುತ್ತಿತ್ತು.

*ನಿಮ್ಮ ನೆಚ್ಚಿನ ಬರಹಗಾರ ಯಾರು?
ಬಹಳಷ್ಟು ಲೇಖಕರು ನನಗೆ ಇಷ್ಟ. ನನಗೆ ಸದಾ ಇಷ್ಟವಾಗುವ ಲೇಖಕ– ಆಲ್‌ಟೈಮ್‌ ಫೇವರೀಟ್ ಲೇಖಕ ಸ್ಟಿಫನ್ ಕಿಂಗ್. ಇತ್ತೀಚೆಗೆ ಜೊಯ್ ಅಬೆರ್ಕ್ರೋಮ್ಬೀ, ಮಾರ್ಕ್ ಲಾರೆನ್ಸ್ ಇಷ್ಟ. ಭಾರತೀಯ ಲೇಖಕರಲ್ಲಿ ಕೃಷ್ಣ ಉದಯಶಂಕರ್ ತುಂಬಾ ಇಷ್ಟದ ಲೇಖಕ.

*ನಿಮ್ಮ ಮುಂದಿನ ಯೋಜನೆ?
‘ಫೇತ್ ಆಫ್ ದಿ ನೈನ್’ನ ಮುಂದಿನ ಸರಣಿಯಾಗಿ ‘ವ್ಹೀಲ್ಸ್ ಆಫ್ ಜನನಿ’ ಬರಲಿದೆ. ನನ್ನ ಪತ್ನಿ ಜತೆಗೂಡಿ ‘ಟಾಕ್ ಅಬೌಟ್ ವರೈಟೀಸ್‌’ ಎನ್ನುವ ರೊಮ್ಯಾಂಟಿಕ್ ಕಾದಂಬರಿ ಬರೆಯುವ ಯೋಜನೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT