ADVERTISEMENT

‘ಬೆಲ್ಲಿ’ ಬೆಡಗಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

‘ಮನಸ್ಸಿನಲ್ಲಿ ಭಾರತಕ್ಕೆ ಬರುವ ಯೋಚನೆಯೇ ಇರಲಿಲ್ಲ. ರಜಾ ಕಳೆಯಲೆಂದು ಇಲ್ಲಿಗೆ ಬಂದೆ. ನನ್ನ ಜೀವನ ಈ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂದು ಅಂದಾಜಿಸಿರಲಿಲ್ಲ...’ ಹೀಗೆ ಹೇಳುವಾಗ ಸನಾಜ್ ಭಕ್ತಿಯಾರಿ ಮುಖದಲ್ಲಿ ಸಂತಸ ತುಂಬಿತ್ತು. ಇರಾನ್‌ ಮೂಲದ ಈ ಬೆಲ್ಲಿ ನೃತ್ಯಗಾರ್ತಿ ರಜಾ ಕಳೆಯಲೆಂದು ಬ್ಯಾಗ್ ಹೇರಿಕೊಂಡು ನೇರ ಬಂದಿದ್ದು ಭಾರತಕ್ಕೆ.

ಅದೂ ಎಂಟು ವರ್ಷದ ಹಿಂದೆ. ಆರು ತಿಂಗಳು ಭಾರತದ ಹಲವೆಡೆ ಅಲೆದಾಡಿದವರು. ಇರಾನ್‌ ಮೂಲದ ಹುಡುಗನನ್ನು ಪ್ರೀತಿಸಿ, ಮದುವೆಯಾಗಿ ಬೆಂಗಳೂರಿ­ನಲ್ಲೇ ನೆಲೆಸಿದರು. ಇಲ್ಲೇ ತಮ್ಮ ‘ಸನಾಜ್ ಡಾನ್ಸ್‌ ಸ್ಟುಡಿಯೊ’ ಆರಂಭಿಸಿದರು ನೃತ್ಯದಲ್ಲಿ ಹೊಸ ಪರಿಕಲ್ಪನೆಗಳು ಚಿಗುರೊಡೆಯುತ್ತಿದ್ದ ಕಾಲವದು.

ಆಗಿನ್ನೂ ಬೆಲ್ಲಿ ಡಾನ್ಸ್‌ ಬಗ್ಗೆ ಜನರಿಗೆ ಅಷ್ಟು ತಿಳಿದಿರಲಿಲ್ಲ. ಆಗ ತಮ್ಮ ಹವ್ಯಾಸವಾಗಿದ್ದ ಬೆಲ್ಲಿ ನೃತ್ಯವನ್ನು ಗಂಭೀರವಾಗಿ ಪರಿಗಣಿಸುಂತೆ ಸನಾಜ್‌ಗೆ ಅವರ ಪತಿ ಸಲಹೆ ನೀಡಿದ್ದರು. ನೃತ್ಯವನ್ನು ಕಲಿಸಲು ಇಂಗ್ಲಿಷ್‌ ಬರದಿದ್ದ ತಮಗೆ ಹೇಗೆಲ್ಲಾ ಕಷ್ಟವಾಯಿತು ಎಂಬುದನ್ನು ಸನಾಜ್ ಹಂಚಿಕೊಂಡರು: ‘ನನ್ನ ಕೆರಿಯರ್ ಬಗ್ಗೆ ಅಷ್ಟು ಗಂಭೀರವಾಗಿ ಯೋಚಿಸದಿದ್ದರೂ ಇಲ್ಲಿ ಬೆಲ್ಲಿ ಡಾನ್ಸ್‌ಗೆ ಸಾಕಷ್ಟು ಪ್ರಾಮುಖ್ಯ ಇದೆ ಎಂಬುದು ತಿಳಿದುಬಂತು.

ADVERTISEMENT

ಈ ಹಿಂದೆ ನಾನು ನೃತ್ಯ ಶಿಕ್ಷಕಿಯಾಗಿದ್ದರೂ ಅದೇ ನನ್ನ ಜೀವನ ನಿರ್ವಹಣೆಗೆ ದಾರಿ ಆಗುವುದೆಂದು ಊಹಿಸಿರಲಿಲ್ಲ. ಆದರೆ ಇಲ್ಲಿನ ಜನರಿಗೆ ಬೆಲ್ಲಿ ನೃತ್ಯದ ಬಗ್ಗೆ ಕುತೂಹಲ ಇದ್ದದ್ದು ತಿಳಿದುಬಂತು. ನೃತ್ಯವನ್ನು ಈ ಪರಿ ಪ್ರೀತಿಸುವವರನ್ನು ನಾನು ಕಂಡಿರಲಿಲ್ಲ. ಇಲ್ಲಿನವರ ನೃತ್ಯಪ್ರೀತಿಯೇ ನನಗೆ ಪ್ರೋತ್ಸಾಹವಾಯಿತು’.

ಬೆಲ್ಲಿ ಡಾನ್ಸ್‌ ಕಲಿಸುವ ಕನಸಿನೊಂದಿಗೆ ಇಲ್ಲಿಗೆ ಬಂದ ಸನಾಜ್, ತಮ್ಮದೇ ಡಾನ್ಸ್‌ ಸ್ಟುಡಿಯೊ ತೆರೆಯಲು ನಿರ್ಧರಿಸಿದರು. ಆದರೆ ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಈ ವಿದೇಶಿ ಮಹಿಳೆಗೆ ಇಂಗ್ಲಿಷ್‌ ಬರುವುದಿಲ್ಲ, ಇನ್ನು ನೃತ್ಯ ಹೇಗೆ ಹೇಳಿಕೊಡುತ್ತಾರೆ ಎಂಬ ಅನುಮಾನ ಜನರ ಮನದಲ್ಲಿ ಮೂಡಬಾರದು ಎಂಬ ಕಾರಣಕ್ಕೆ ಸಾಕಷ್ಟು ಹೆಣಗಾಡಿದ್ದರಂತೆ ಸನಾಜ್. ಬೆಲ್ಲಿ ಎಂದರೆ ನೋಡಲು ಮುಜುಗರವಾಗುವ ನೃತ್ಯ ಎಂದೇ ಭಾವಿಸಿದ್ದ ಜನರಿಗೆ ಬೆಲ್ಲಿ ನೃತ್ಯ ಎಂದರೇನು ಎಂದು ವಿವರಿಸುವುದೇ ಬಲು ಕಷ್ಟವಾಗಿತ್ತಂತೆ.

ಇಷ್ಟೆಲ್ಲಾ ಆದರೂ ಜನರನ್ನು ತಲುಪಲು ಸನಾಜ್‌ ಹೆಚ್ಚೇನೂ ಸಮಯ ತೆಗೆದುಕೊಳ್ಳಲಿಲ್ಲ. ನಿಮಗೆ ಕನ್ನಡ ಬರುತ್ತದೆಯೇ ಎಂದು ಕೇಳಿದಾಕ್ಷಣ, ‘ಒಂದು ನಿಮಿಷ ಇರಿ’ ಎಂದು ಉತ್ತರಿಸುತ್ತಾರೆ ಅವರು. ಕೆಲವು ಕನ್ನಡ ಪದಗಳನ್ನು ಕಲಿತಿರುವ ಅವರು, ಇಂಗ್ಲಿಷ್‌ ಇದ್ದರೆ ಇಲ್ಲಿ ಬದುಕು ಸುಲಭ ಎಂಬುದನ್ನು ಕಂಡುಕೊಂಡಿದ್ದಾರೆ. ಇನ್ನು ಸಂಸ್ಕೃತಿಯ ವಿಚಾರದಲ್ಲಿ ಇರಾನಿಗೂ, ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿರುವುದನ್ನೂ ಹೇಳಿಕೊಂಡರು.

ಅದರಲ್ಲೂ ಇಲ್ಲಿನ ಆಹಾರ ಪದ್ಧತಿ ಮೊದಮೊದಲು ಅಚ್ಚರಿ ಉಂಟು ಮಾಡಿದೆಯಂತೆ. ‘ಉತ್ತರ ಭಾರತದ ಆಹಾರ ಇರಾನಿನ ಆಹಾರವನ್ನು ಹೋಲುತ್ತದೆ. ಆದರೆ ದಕ್ಷಿಣ ಭಾರತದ ಆಹಾರ ಸ್ವಲ್ಪ ಖಾರ. ಅದೂ ಅಲ್ಲದೆ ಭಾರತೀಯರಂತೆ ಊಟ ಮಾಡುವುದನ್ನು ಕಲಿಯಲು ಒಂದು ವರ್ಷ ತೆಗೆದುಕೊಂಡೆ. ನಮಗೆ ಬಿರಿಯಾನಿ ಎಂದರೆ ಮಾಮೂಲು.

ಆದರೆ ಇಲ್ಲಿ ಬಿರಿಯಾನಿಯೊಂದಿಗೆ ರಾಯತಾ ಸೇರಿಸಿ ತಿನ್ನುತ್ತಾರೆ. ರಾಯತಾದಲ್ಲೂ ಸಾಕಷ್ಟು ವಿಧಗಳಿವೆ. ಈಗ ನನ್ನ ಭಾರತೀಯ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುವ ಅಭ್ಯಾಸ ಇಟ್ಟುಕೊಂಡಿದ್ದೇನೆ. ಖಾರದ ಆಹಾರ  ತಿನ್ನುವುದನ್ನು ರೂಢಿಸಿಕೊಳ್ಳುತ್ತಿದ್ದೇನೆ’ ಎಂದು ನಗುತ್ತಾ ಹೇಳಿಕೊಂಡರು ಸನಾಜ್.ಭಾರತದ ಬಗ್ಗೆ ಅವರು ಹೆಮ್ಮೆ ಪಡುವ ವಿಷಯಗಳಲ್ಲಿ ಇಲ್ಲಿನ ಜನರು ಹಬ್ಬಗಳನ್ನು ಆಚರಿಸುವ ಪರಿಯೂ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.