ADVERTISEMENT

‘ಮೈ ಶೂ ಷೋರೂಂ ಮೇ ಸೇಲ್ಸ್‌ಮನ್ ಹ್ಞೂ’

ಬಸ್‌ಕತೆ

ಬಸೀರ ಅಹ್ಮದ್ ನಗಾರಿ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಇದು ಬಿಎಂಟಿಸಿ ಬಸ್‌ನಲ್ಲಿ ನಡೆದ  ಒಂದು ಸ್ವಾರಸ್ಯಕರ ಸಂಗತಿ. ಕಚೇರಿಯಿಂದ ಹೊರಟಾಗ ರಾತ್ರಿ 9 ಗಂಟೆ. ಶಿವಾಜಿನಗರ ತಲುಪಿ ಆರ್‌.ಟಿ. ನಗರ ಬಸ್ ಹಿಡಿದಾಗ ಸುಮಾರು ಒಂಬತ್ತೂವರೆ ಆಗಿರಬೇಕು. ಸಿಲಿಕಾನ್‌ ಸಿಟಿಯಲ್ಲಿ ಅಂದು ಸಂಜೆ ವರುಣ ಅಕಾಲಿಕ ಸಂಚಾರಕ್ಕೆ ಬಂದಿದ್ದ!  ಶರದೃತುವಿನ ಚಳಿಯನ್ನು ಚಪ್ಪರಿಸಿ ನಿದ್ದೆ ಮಾಡಬೇಕು ಎಂದು ವಾರಾಂತ್ಯದ ವೇಳಾಪಟ್ಟಿ ಸಿದ್ಧಗೊಳಿಸಿದ್ದವರ ಆಸೆಗೆ ಇಂಬುಗೊಟ್ಟಿದ್ದ.

ಬಸ್‌ ಟಿಕೆಟ್‌ ಪಡೆಯುವ ವೇಳೆಗೆ ನಾನೂ ಸ್ವಲ್ಪ ನೆನೆದಿದ್ದೆ. ಆದರೆ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರನ್ನು ಹೊರತುಪಡಿಸಿ ಪೂರ್ತಿ ನೆನೆದವರ ಸಂಖ್ಯೆಯೇ ಹೆಚ್ಚಿತ್ತು.

ಕನ್ನಿಂಗ್‌ಹ್ಯಾಂ ರಸ್ತೆ ದಾಟಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯ ಮುಂದೆ ಬಸ್‌ ಬಲ ತಿರುವು ಪಡೆದಾಗ ನನ್ನ ಪಕ್ಕದ ಸೀಟಿಗೆ ಸಮಾಂತರವಾಗಿದ್ದ ಮತ್ತೊಂದು ಸೀಟಿನಲ್ಲಿ ಕುಳಿತು ಹಿಂದಿಯಲ್ಲಿ ಮೊಬೈಲ್‌ನಲ್ಲಿ  ಸಂಭಾಷಿಸುತ್ತಿದ್ದ ವ್ಯಕ್ತಿ ಗಮನ ಸೆಳೆದ.
ನೀಟಾಗಿ ಇನ್‌ಶರ್ಟ್‌ ಮಾಡಿಕೊಂಡಿದ್ದ ಅಸಾಮಿಯೊಬ್ಬ ತೊಡೆಯ ಮೇಲೊಂದು ವಸ್ತುವನ್ನಿಟ್ಟುಕೊಂಡು ಬರಿಗಾಲಲ್ಲಿ ಕುಳಿತಿದ್ದ! ಕುತೂಹಲ ತಣಿಸಿಕೊಳ್ಳಲು ಅವನ ಪಕ್ಕ ಖಾಲಿ ಇದ್ದ ಸೀಟಿನಲ್ಲಿ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ಬಸ್‌ ಟ್ರಾಫಿಕ್‌ನಲ್ಲಿ ಸಿಕ್ಕು ತಡವರಿಸಿ ಸ್ತಬ್ಧಗೊಂಡಿತ್ತು.

ನಾನು ಅವರೊಂದಿಗೆ ಮಾತಿಗಿಳಿದು ಊರು, ಉದ್ಯೋಗ ಕೇಳಿದೆ. ಆತ ‘ನನ್ನ ರಾಜ್ಯ ಉತ್ತರಾಖಂಡ. ಉದ್ಯೋಗ ಬೇಟೆಯೊಂದಿಗೆ ಬೆಂಗಳೂರು ಸೇರಿದೆ’ ಎಂದು ಸಿಲಿಕಾನ್‌ ಸಿಟಿ ಸೇರಿದ ಕಾರಣ ಹೇಳಿದ. ಆತನ ಹೆಸರು ನವೀನ್ ಸಿಂಗ್ ಚೌಹಾಣ್.
ಬಳಿಕ ನಾನು, ಆತ ಜೋಪಾನವಾಗಿ  ಹಿಡಿದುಕೊಂಡಿದ್ದ ವಸ್ತುವಿನತ್ತ ಗಮನ ಸೆಳೆದಾಗ, ಅವನು ನೀಡಿದ ಉತ್ತರ ನಿರೀಕ್ಷೆಯನ್ನು ನಿಜವಾಗಿಸಿತ್ತು! ಅವನ ಮಾತು ಹೀಗಿತ್ತು: ‘ಏ ಶೂಸ್‌ ಹೈ’. ‘ಆಜ್‌ ಹೀ ಖರೀದಾ ಕ್ಯಾ’ ಎಂದು ನಾನು ಮತ್ತಷ್ಟು ಕುತೂಹಲದಿಂದ ಕೇಳಿದಾಗ, ಆತ ‘ನಹಿ ನಹೀ...ದೋ ಮಹೀನೆ ಹೋ ಗಯೆ’ ಅಂದಾಗ  ನನ್ನ ಅವಸರಕ್ಕೆ ಆಕಸ್ಮಿಕ ತೆರೆ.

ಮತ್ತೆ ನಾನು ‘ಸ್ಟೂಡೆಂಟ್‌ ಹೋ ಕ್ಯಾ’ ಎಂದಾಗ, ‘ನಹಿ ಮೈ ಶೂ ಷೋರೂಂ ಮೇ ಸೇಲ್ಸ್‌ಮನ್ ಹ್ಞೂ’ ಅಂದಾಗ ನಗುವ ಸರದಿ ನನ್ನದಾಗಿದ್ದರೂ ‘ತುಮ್ಕೋ ತೊ ಶೂಸ್ ಫ್ರೀ ಮಿಲ್ತೆ ಹೋಂಗೆ. ಫಿರ್ ಪ್ಲಾಸ್ಟಿಕ್‌ ಮೇ ಕಿಸ್ಲಿಯೇ ರಖಾ ಹೈ’ ಎಂದು ಪ್ರಶ್ನಿಸಿದೆ.
‘ಹ್ಞಾ ಸಾಲ್ ಮೇ ಏಕ್‌ ಬಾರ್‌ ಫ್ರೀ. ಲೇಕಿನ್‌ ಇಸ್‌ ಶೂಸ್‌ಕೋ ಮೈನೆ ತೀನ್‌ ಹಜಾರ್‌ ರುಪಿಯಾ ದಿಯಾ ಹ್ಞೂಂ. ಏ ಲೆದರ್‌  ಶೂಸ್‌ ಹೈ. ಪಾನಿ ಲಗಾತೋ ಪೈಸಾ ಫಾಲ್ತೂ ಮೇ ವೇಸ್ಟ್’ ಅಂದ.

ಇನ್ನಷ್ಟು ಮಾತನಾಡಬೇಕು ಅನ್ನುವಷ್ಟರಲ್ಲಿ ಟ್ರಾಫಿಕ್‌ಅನ್ನು  ಸೀಳಿಕೊಂಡು ಸಂಚರಿಸಿದ್ದ  ಬಸ್ ಆರ್‌.ಟಿ. ನಗರ ತಲುಪಿತ್ತು. ಬಸ್‌ ಇಳಿದ ನನ್ನ ಮನಸು ಮಾತ್ರ ‘ಸಂಚಾರಿ ಮಳೆ’ಯಲ್ಲಿ ತಾನು ತೊಯ್ದು ತೊಪ್ಪೆಯಾಗಿದ್ದರೂ ಬೂಟುಗಳನ್ನು ಬಚಾವ್‌ ಮಾಡಿಕೊಂಡಿದ್ದ ಯುವಕನ ಬಗ್ಗೆ ಯೋಚಿಸುತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.