ADVERTISEMENT

40 ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಪಲ್ಲಕ್ಕಿ ಉತ್ಸವಕ್ಕೆ ಮೊದಲಿನಿಂದಲೂ ಆದ್ಯತೆ. ಜಾತ್ರೆ, ಸಿಡಿ ಉತ್ಸವಗಳಲ್ಲಿ ಒಂದೋ ಎರಡೋ ಪಲ್ಲಕ್ಕಿ ಉತ್ಸವ ನಡೆಯುವುದು ವಾಡಿಕೆ. ನೋಡುವ ಕುತೂಹಲ ಉಳ್ಳವರಿಗೆ ಅದೇ ದೊಡ್ಡದಾಗಿ ಕಾಣಿಸುತ್ತದೆ. ಆದರೆ, ಒಂದೇ ಉತ್ಸವದಲ್ಲಿ 40 ಪಲ್ಲಕ್ಕಿ ಉತ್ಸವಗಳು, ಸಿಡಿ ಕಾಣಸಿಕ್ಕರೆ ಅದು ನೋಡಲು ಅದ್ಭುತ.

ಅಂಥದೊಂದು ವಿಶೇಷ ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಸೇರಿದ ಬನ್ನೇರುಘಟ್ಟ ರಸ್ತೆಗೆ ಹೊಂದಿಕೊಂಡಿರುವ ಹುಳಿಮಾವು ಎಂಬಲ್ಲಿ ನಡೆಯಲಿದೆ. ಅದಕ್ಕೆ ಒಂದು ಮುಹೂರ್ತ ಕಲ್ಪಿಸಿರುವುದು ಹುಳಿಮಾವು ಶ್ರೀ ಕೋದಂಡರಾಮಸ್ವಾಮಿ ದೇವರ ಬ್ರಹ್ಮರಥೋತ್ಸವ. ಈ ಉತ್ಸವ ಇದೇ ಗುರುವಾರ (ಏಪ್ರಿಲ್ 12) ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ರಥೋತ್ಸವಕ್ಕೆ ಮುನ್ನ ಸಾವಿರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಆರತಿ ತಂದು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಕೋದಂಡರಾಮಸ್ವಾಮಿ ಪಲ್ಲಕ್ಕಿ ಉತ್ಸವಕ್ಕೆ ಪೂರಕವಾಗಿ ಆಂಜನೇಯ ಸ್ವಾಮಿ, ವಿನಾಯಕ, ವೆಂಕಟರಮಣಸ್ವಾಮಿ, ಸೋಮೇಶ್ವರ, ಕೃಷ್ಣ, ಮಂಜುನಾಥಸ್ವಾಮಿ, ಚೌಡೇಶ್ವರಿ, ಬನಶಂಕರಿ, ರೇಣುಕಾದೇವಿ, ಮುನೇಶ್ವರ, ಶನಿ ದೇವರು, ರೇಣುಕಾ ಎಲ್ಲಮ್ಮ , ಅಯ್ಯಪ್ಪ ಸ್ವಾಮಿ ಸೇರಿದಂತೆ 40 ದೇವರ ಪಲ್ಲಕ್ಕಿ ಉತ್ಸವ, ಮುತ್ತಿನ ಪಲ್ಲಕ್ಕಿ , ಚೈನಿಸ್ ಪಲ್ಲಕ್ಕಿ , ವಿದ್ಯುತ್ ಪಲ್ಲಕ್ಕಿಯೂ ಅಂದು ನಡೆಯುತ್ತದೆ.

ಬ್ರಹ್ಮ ರಥೋತ್ಸವದ ಸಡಗರ ಸುತ್ತಮುತ್ತಲ ಹತ್ತಾರು ಹಳ್ಳಿಯ ಹಾಗೂ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವಾರು ಪಟ್ಟಣಗಳಿಂದ ಬಂದುಸೇರುವ ಸಾವಿರಾರು ಜನರ ಸಮ್ಮುಖದಲ್ಲಿ ಅರಳುತ್ತದೆ. ದೇವಸ್ಥಾನದ ಧರ್ಮದರ್ಶಿ ಸಿ.ಲಕ್ಷ್ಮಿನಾರಾಯಣ ಈ ಕಾರ್ಯಕ್ರಮಕ್ಕೆ ಮತ್ತೊಂದು ಜನಾಕರ್ಷಣೆಯನ್ನು ಒಡ್ಡಿದ್ದಾರೆ. ಅದು ಪ್ರತಿ ವರ್ಷವೂ ಹೊಸ ಅನುಭವ ಕೊಡುವ ಬ್ರಹ್ಮರಥೋತ್ಸವ ಹೂವಿನ ಸುರಿಮಳೆ ವಿಶೇಷ ಹೆಲಿಕಾಪ್ಟರ್ ಬಳಸಿ ಈ ಪುಷ್ಪವೃಷ್ಠಿ ನಡೆಯುತ್ತದೆ.

ಹೂವಿನ ಪಕಳೆಗಳ ಮಳೆಯನ್ನು ಜನ ಎದುರು ನೋಡುವುದು ಪ್ರತಿವರ್ಷದ ಸಂಪ್ರದಾಯ ಎಂಬಂತಾಗಿದೆ.

ಹಗಲೆಲ್ಲಾ ಬ್ರಹ್ಮರಥೋತ್ಸವ, ಪುಷ್ಪವೃಷ್ಟಿ ಜನಮನ ಸೆಳೆದರೆ ರಾತ್ರಿಯಾಗುತ್ತಿದ್ದಂತೆ ಬೆಳಕು ಮೂಡುವವರೆಗೂ ನಡೆಯುವ ಪಲ್ಲಕ್ಕಿಗಳ ಮೆರವಣಿಗೆ ಕಳೆಗಟ್ಟುತ್ತದೆ. ಪಲ್ಲಕ್ಕಿಗಳ ಅಲಂಕಾರದಲ್ಲೂ ಪೈಪೋಟಿ. ಪೌರಾಣಿಕ ನಾಟಕ, ಯಕ್ಷಗಾನಗಳ ಮೆರುಗೂ ಉತ್ಸವಕ್ಕೆ ಇರುತ್ತದೆ.

ರಾಮಲಿಂಗೇಶ್ವರ, ಗುಹಾಂತರ ದೇವಾಲಯ, ಮೀನಾಕ್ಷಿ ಸುಂದರೇಶ್ವರ, ಮುನೇಶ್ವರ, ಶನೀಶ್ವರ, ಚೌಡೇಶ್ವರಿ, ದೊಡ್ಡಮ್ಮ, ಮಾರಮ್ಮ, ಕೆಂಪಮ್ಮ, ಬಲಮುರಿಗಣಪತಿ, ರಾಘವೇಂದ್ರಸ್ವಾಮಿ ಮಠ, ಭಗವತಿ ದೇವಸ್ಥಾನ, ವೈಷ್ಣವಿ ದೇವಿ, ವೆಂಕಟರಮಣ ಸ್ವಾಮಿ ದೇವಸ್ಥಾನ ಹೀಗೆ ಹಲವಾರು ದೇವಾಲಯಗಳು ಹುಳಿಮಾವು ಸುತ್ತಮುತ್ತ ಇವೆ. ಇವಕ್ಕೆಲ್ಲ ಕೇಂದ್ರ ಬಿಂದುವೇ ಕೋದಂಡರಾಮಸ್ವಾಮಿ ದೇವಸ್ಥಾನ.

ಕ್ರಿ.ಶ.1652ರಲ್ಲಿ ಸಾರಕೇಯ (ಈಗಿನ ಸಾರಕ್ಕಿ) ಮಹಾರಾಜನು ಈ ಪ್ರಾಂತ್ಯವನ್ನು ಆಳುತ್ತಿದ್ದನು. ಹುಳಿಮಾವು ಈ ವ್ಯಾಪ್ತಿಗೆ ಸೇರಿದ್ದರಿಂದ ಹುಳಿಮಾವಿಗೆ ಅಂದು ಅಮ್ರ ಎಂದು ಕರೆಯುತ್ತಿದ್ದರು.

ಆ ಸ್ಥಳದಲ್ಲಿ  ಕೋದಂಡರಾಮಸ್ವಾಮಿ ದೇವಾಲಯ ನಿರ್ಮಿಸಿ ಉತ್ಸವಗಳನ್ನು ನಡೆಸಿಕೊಂಡು ಬರುತ್ತಿದ್ದರು ಎಂದು ಸ್ಥಳೀಯವಾಗಿ ಲಭ್ಯವಾದ ಮಾಹಿತಿಯಿಂದ ತಿಳಿದುಬಂದಿದೆ. ಹುಳಿಮಾವು ಗ್ರಾಮಕ್ಕೆ ಹಿಂದೆ ಅಮರಾಪುರವೆಂದು ಕರೆಯುತ್ತಿದ್ದರೆಂದು ಶಾಸನದಿಂದ ತಿಳಿದುಬಂದಿದೆ. ಅಮ್ರ ಎಂದರೆ ಮಾವು ಅಥವಾ ಹುಳಿ ಎಂದರ್ಥ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.