ADVERTISEMENT

ತ್ಯಾಗರಾಜರಿಗೆ ಸ್ವರಮೇಳಾಭಿಷೇಕ ಇಂದು

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ತ್ಯಾಗರಾಜರಿಗೆ ಸ್ವರಮೇಳಾಭಿಷೇಕ ಇಂದು
ತ್ಯಾಗರಾಜರಿಗೆ ಸ್ವರಮೇಳಾಭಿಷೇಕ ಇಂದು   

ಕರ್ನಾಟಕ ಸಂಗೀತಕ್ಕೆ ಭಾವಪೂರ್ಣ ಕೀರ್ತನೆಗಳ ಮೂಲಕ ಹೊಸ ಆಯಾಮ ನೀಡಿದ ಖ್ಯಾತ ವಾಗ್ಗೇಯಕಾರರಲ್ಲಿ ತ್ಯಾಗರಾಜರದು ಬಹುದೊಡ್ಡ ಹೆಸರು. ತ್ಯಾಗರಾಜರಿಗೆ ವರ್ಷಕ್ಕೊಂದು ಬಾರಿ ಶ್ರದ್ಧಾಪೂರ್ವಕ ಆರಾಧನೆ ಮಾಡಿ ನಮನ ಸಲ್ಲಿಸುವ ಸಂಪ್ರದಾಯ ನಾಡಿನ ಸಂಗೀತ ಕ್ಷೇತ್ರದಲ್ಲಿದೆ. ಗಾಯನ, ವಾದನ ಮತ್ತು ಉಪಾಸನೆ ಮೂಲಕ ಆರಾಧನೆ ನಡೆಯುತ್ತದೆ. ನಗರದ ‘ಕರ್ನಾಟಕ ಸಂಗೀತ ಕಲಾವಿದರ ಸೇವಾ ಸಂಘ’ ಈ ಬಾರಿಯೂ ಸ್ವರಮೇಳಾಭಿಷೇಕದ ಮೂಲಕ ತ್ಯಾಗರಾಜರನ್ನು ಆರಾಧಿಸಲಿದೆ.

ನಾಗಸ್ವರ ಮತ್ತು ಡೋಲು ವಾದನ ಕಲಾವಿದರನ್ನು ಒಳಗೊಂಡ ಈ ಸಂಘ ಈ ಬಾರಿ ಹಮ್ಮಿಕೊಂಡಿರುವ ಸ್ವರಮೇಳದಲ್ಲಿ ವಿವಿಧ ಭಾಗಗಳ ಕಲಾವಿದರ ತಂಡಗಳು ಮುಂಜಾನೆಯಿಂದ ರಾತ್ರಿವರೆಗೂ ನಾಗಸ್ವರ ಮತ್ತು ಡೋಲು ಮೇಳ ನಡೆಸಲಿದ್ದಾರೆ. ಒಂದೊಂದು ತಂಡದಲ್ಲಿಯೂ ಐದು ಮಂದಿ ಇರುತ್ತಾರೆ. ಬೆಳಿಗ್ಗೆ 6.30ಕ್ಕೆ ಆಂಜನೇಯ ಸ್ವಾಮಿಗೆ ಅಭಿಷೇಕದೊಂದಿಗೆ ಮೇಳಕ್ಕೆ ಚಾಲನೆ ಸಿಗುತ್ತದೆ. ನಂತರ ಸ್ವರಮೇಳ ಆರಂಭ.
ಮೂವರು ಸಾಧಕರಿಗೆ ಸನ್ಮಾನ ಸಮಾರಂಭವೂ ನಡೆಯಲಿದೆ.

‘ದೇವಸ್ಥಾನಗಳಲ್ಲೇ ಆಗಲಿ, ಶುಭ ಸಮಾರಂಭಗಳಲ್ಲೇ ಆಗಲಿ ನಾಗಸ್ವರ ಮತ್ತು ಡೋಲು ವಾದನ ಇಲ್ಲದಿದ್ದರೆ ಸಮಾರಂಭ ಕಳೆಗಟ್ಟುವುದಿಲ್ಲ. ಹಬ್ಬ ಮತ್ತು ಸಡಗರದ ವಾತಾವರಣವನ್ನು ಕಟ್ಟಿಕೊಡುವ ಈ ಎರಡು ವಾದ್ಯಗಳು ನಮಗೆ ಜೀವನ ಕೊಟ್ಟಿವೆ. ಆದರೆ ತ್ಯಾಗರಾಜರ ಕೃತಿಗಳು ಇಲ್ಲದಿದ್ದರೆ ಈ ಎರಡೂ ವಾದ್ಯಗಳು ಸಪ್ಪೆ ಎನಿಸುತ್ತವೆ’ ಎಂಬುದು, ಸಂಘದ ಖಜಾಂಜಿ ಎಂ.ಆರ್. ರಘುರಾಮ್‌ ಅವರ ಅಭಿಪ್ರಾಯ.

ADVERTISEMENT

(ರಘುರಾಮ್‌)

‘ಶುಭ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಚಿತ್ರಗೀತೆಗಳನ್ನೂ ನುಡಿಸುತ್ತಾರೆ. ಈಗಿನ ಯುವಜನರಿಗೆ ಸಂಗೀತದ ಬಗ್ಗೆ ಆಸಕ್ತಿಯಿದ್ದರೂ ಕೆಲವು ಆಧುನಿಕ ಗೀತೆಗಳನ್ನು ನುಡಿಸುವಂತೆ ಹೇಳುತ್ತಾರೆ. ಆದರೆ ಚಲನಚಿತ್ರಗಳಲ್ಲಿ ಬಳಕೆಯಾಗಿರುವ ಶಾಸ್ತ್ರೀಯ ಸಂಗೀತದ ಹಾಡುಗಳಿಗೆ ಈಗಲೂ ಹೆಚ್ಚು ಬೇಡಿಕೆ ಇದೆ. ಎಷ್ಟೇ ಹಾಡುಗಳನ್ನು ನುಡಿಸಿದರೂ ಕಾರ್ಯಕ್ರಮ ಶುರುವಾಗುವುದು ತ್ಯಾಗರಾಜರ ಕೃತಿಗಳಿಂದಲೇ’ ಎಂದು ಸಂಘದ ಅಧ್ಯಕ್ಷ, ಡೋಲು ಕಲಾವಿದ ರಾಜ್‌ಕುಮಾರ್‌ ಹೇಳುತ್ತಾರೆ.

ತಮಿಳುನಾಡಿನ ಬಹುತೇಕ ದೇವಸ್ಥಾನಗಳಲ್ಲಿ ನಾಗಸ್ವರ ವಾದನ ಮತ್ತು ಡೋಲು ಸೇವೆ ಇಲ್ಲದೆ ಬೆಳಗ್ಗಿನ ಪೂಜೆ ನಡೆಯುವುದಿಲ್ಲ. ಇಂತಹುದೇ ಸಂಪ್ರದಾಯ ಬೆಂಗಳೂರಿನಲ್ಲಿ ಅನೇಕ ದೇವಸ್ಥಾನಗಳಲ್ಲಿ ಈಗಲೂ ನಡೆಯುತ್ತಿರುವುದು ಸಂತೋಷದ ಸಂಗತಿ ಎನ್ನುತ್ತಾರೆ ರಘುರಾಮ್‌.

*

ತ್ಯಾಗರಾಜರು, ಕನಕದಾಸರು ಮತ್ತು ಪುರಂದರದಾಸರ ಆರಾಧನಾ ಮಹೋತ್ಸವ: ಬೆಳಿಗ್ಗೆ 6.30ಕ್ಕೆ ಆಂಜನೇಯಸ್ವಾಮಿಗೆ ಅಭಿಷೇಕ, 9ಕ್ಕೆ ತ್ಯಾಗರಾಜಸ್ವಾಮಿಯ ಮೆರವಣಿಗೆ. ಆಯೋಜನೆ–ಸ್ಥಳ–ಕರ್ನಾಟಕ ಸಂಗೀತ ಕಲಾವಿದರ ಸೇವಾ ಸಂಘ, ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನ, ವಿನಾಯಕ ಟಾಕೀಸ್‌ ಎದುರು, ಮೈಸೂರು ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.