ADVERTISEMENT

‘ನಮ್ಮ ಕೆಲಸ ಹಗ್ಗದ ಮ್ಯಾಲೆ ನಡ್ದಂಗೆ’

ಮಂಜುನಾಥ ಹಲಸಳ್ಳಿ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
‘ನಮ್ಮ ಕೆಲಸ ಹಗ್ಗದ ಮ್ಯಾಲೆ ನಡ್ದಂಗೆ’
‘ನಮ್ಮ ಕೆಲಸ ಹಗ್ಗದ ಮ್ಯಾಲೆ ನಡ್ದಂಗೆ’   

ನನ್ನೆಸರು ಸರ್ದಾರ್. ಕೋಲರ ಜಿಲ್ಲೆ ಮಾಲೂರ್ ಹತ್ರ ಅಬ್ಬೇನಹಳ್ಳಿ ನಮ್ಮೂರು. ನಾನು ಚಿಕ್ಕಹುಡುಗ ಆಗಿದ್ದಾಗಿಂದ ಎತ್ತುಗಳಿಗೆ ಲಾಳ ಕಟ್ಟೋದೆ ನನ್ನ ಕೆಲಸ. ನಮ್ಮ ತಾತ ಮುತ್ತಾತನ ಕಾಲದಿಂದಲೂ ಇದೇ ನಮ್ಮ ಕಸಬು. ನಮ್ಮ ಅಪ್ಪಂಗೆ ನಾವು ನಾಲ್ಕು ಜನ ಮಕ್ಕಳು, ಅದರಾಗೆ ಒಬ್ಬ ಅಣ್ಣ ತೀರೋದ್ರು. ಇನ್ನು ಮೂರು ಜನ ನಾವು ಇದೇ ಕೆಲಸ ಮಾಡ್ಕೊಂಡು ಬಂದಿದ್ದೀವಿ.

ಸದ್ಯ ನಮ್ಮ ಅಣ್ಣೋರು ಈ ಕೆಲಸ ಬಿಟ್ಟವರೆ. ಆದ್ರೆ ನನ್ನ ಜೀವನಕ್ಕೆ ಈ ಕೆಲಸಾನೇ ಆಧಾರ. ನನ್ನ ಹತ್ರ ಆಸ್ತಿ ಅಂತ ಏನು ಇಲ್ಲ. ಇರೋದು ಒಂದು ಮನೆ ಓಡಾಡೋಕೆ ಒಂದು ಟಿವಿಎಸ್ ಗಾಡಿ, ಇಷ್ಟೆ ನಾನ್ ದುಡಿದು ಸಂಪಾದನೆ ಮಡಿರೋದು ಸಾಮಿ.

ನಮ್ಮ ಅಪ್ಪ ಈ ಸುತ್ತ ಹತ್ತು ಹಳ್ಳಿಗೂ ಬಲೆ ಹೆಸರವಾಸಿ ಆಸಾಮಿ. ಲಾಳ ಕಟ್ಟೋದು ಅಲ್ದೆ ಕಾಮನ ಹಬ್ಬದಾಗೆ ಹುಲಿ ವೇಸ ಹಾಕೋನು ಅಂದ್ರೆ ಹುಲಿನೇ ಬಂದಂಗಿರೋದು ಅಂತಿದ್ರು ಎಲ್ಲಾರೂ. ಅವ್ರೆ ನನಗೆ ಈ ಕೆಲಸ ಕಲ್ಸಿದ್ದು ಸಾಮಿ. ಐದನೆ ಕ್ಲಾಸ್ ತನಕ ಓದಿಸಿದ್ರು, ಆಮೇಲೆ ನನ್ನನ್ನು ಇದೆ ಕೆಲಸಕ್ಕೆ ಕರೆದುಕೊಂಡು ಹೋಗೊರು.

ADVERTISEMENT

ನಮ್ಮ ಅಪ್ಪನೆ ನಮಗೆ ಗುರು. ಅವರು ಕಲಿಸಿದ ವಿದ್ಯೆಯಿಂದ ಇವತ್ತು ಮೂರು ಹೊತ್ತು ಊಟ ಮಾಡ್ತಾಯಿದ್ದಿನಿ. ಇನ್ನ ಸರ್ಕಾರದಿಂದ ನಮಗೆ ಯಾವುದೆ ಸವಲತ್ತು, ಅದಾಯ ಇಲ್ಲ. ನಾವು ಮಾಡೋ ಕೆಲಸ ಅವರಿಗೆ ಗೊತ್ತೊ ಇಲ್ವೊ, ನಮ್ಮಂತಹವರನ್ನು ಗುರುತಿಸಿ ಏನಾದರೂ ಅದಾಯ ಬರೋ ಹಂಗ್ ಮಾಡಿದ್ರೆ ಒಳ್ಳೇದಾಯ್ತದೆ.

ಮೈಯಾಗೆ ಮಣ್ಣಿರೊವರಗೂ ಈ ಕೆಲಸ ಮಾಡ್ತೀವಿ. ವಯಸ್ಸಾದ ಮ್ಯಾಕೆ ಜೀವನಕ್ಕೆ ಎನಾದ್ರೂ ಆಧಾರ ಬೇಕಲ್ವ. ಮೊದಲೆಲ್ಲ ಲಾಳ ಕಟ್ಟಿದ್ರೆ ರಾಗಿ ಜೋಳ ಕೊಡ್ತಿದ್ರು, ಇವಾಗ ಕಾಸ್ ಇಸ್ಕೊಳ್ತಿವಿ. ಒಂದು ದಿನಕ್ಕೆ ಮೂರು ಜೊತೆ ಎತ್ತುಗಳಿಗೆ ಲಾಳ ಕಟ್ಟಿದ್ರೆ 500 ರಿಂದ 600 ರೂಪಾಯಿ ಸಿಕ್ತದೆ. ಅದ್ರೊಳಗೆ ನನ್ನ ಲಾಳ ಮಾಡ್ಸೋ ಖರ್ಚು, ಓಡಾಡೋ ಪೆಟ್ರೋಲ್ ಖರ್ಚು ಎಲ್ಲಾ ಹೋಗಿ ₹300/₹400 ಉಳಿತದೆ.

ದೊಡ್ಡ ಬಂಗಲೆ ಕಟ್ಟಕೊಳ್ದೆ ಇದ್ರು, ಜೀವನ ನಡೆಸೊ ಅಷ್ಟು ವ್ಯವಸ್ಥೆ ಮಾಡಕೊಂಡಿದ್ದೀನಿ.  ನಮ್ಮ ಸುತ್ತಮುತ್ತ ಎಲ್ಲಾದ್ರೂ ದನಗಳ ಜಾತ್ರೆ ನಡದ್ರೆ ನಮ್ಮನ್ನು ಕರೆದು ಒಂದು ಹಾರ ಹಾಕಿ ಗೌರವ ನೀಡ್ತಾರೆ. ಅದೇ ನನಗೆ ಸಿಕ್ಕಿರೋ ಇನಾಮು. ರೈತರು ಎಲ್ಲೆ ಕಾಣ್ಸಿದ್ರೂ ಪ್ರೀತಿಯಿಂದ ಮಾತಾಡಿಸ್ತಾರೆ, ಆ ವಿಶ್ವಾಸನೇ ನಾನು ಮಾಡಿರೋ ಆಸ್ತಿ ಅನ್ಕೊಂಡಿದಿನಿ.

ನಂಗೆ ಇರೋದು ಒಬ್ಬನೆ ಮಗ, ಅವನು ಐಟಿಐ ಓದ್ತಾ ಇದಾನೆ. ಇವನ ಕಾಲಕ್ಕೆ ಈ ಕೆಲಸಾ ಜೀವಂತವಾಗಿ ಮುಂದುವರೆಯಲ್ಲ ಬಿಡಿ. ಅವನ ಬದುಕು ಅವನು ನೋಡ್ಕೊತಾನೆ. ಆದರೆ ಮುಂದಿನ ತಲೆಮಾರಿಗೆ ಈ ಕೆಲಸ ಉಳಿಯಾಕಿಲ್ಲ ಬಿಡಿ. ಮೊದಲೆಲ್ಲಾ ಊರಿಗೆ ಐವತ್ತರಿಂದ ನೂರು ಜೊತೆ ಎತ್ತುಗಳು ಇರ್ತಿದ್ವು. ಇವಾಗೆ ಊರಿಗೆ ಎರಡು ಜೊತೆ ಎತ್ತಿಲ್ಲ, ಇನ್ನ ಲಾಳ ಕಟ್ಟೋದು ಎಲ್ಲಿ?... ಎತ್ತುಗಳ ರೇಟು ಮುಗಿಲು ಮುಟ್ಟೋಗೈತೆ. ಎಲ್ಲಾರು ಟ್ರ್ಯಾಕ್ಟರ್ ಇಟ್ಟಕೋಳಕ್ಕೆ ಶುರು ಮಾಡವರೆ, ಎತ್ತುಗಳನ್ನ ಸಾಕೋದು ಅಷ್ಟು ಸುಲಭ ಅಲ್ಲ ಬಿಡಿ. ಆದರೆ ನಾನು ಎತ್ತು ಕಟ್ಟಿದ್ದೋನೆ.

ನಾನು ಸುಮಾರು ದನಗಳನ್ನ ನೋಡಿದ್ದೀನಿ. ‘ನಮ್ಮ ಕೆಲಸ ಒಂಥರಾ ಹಗ್ಗದ ಮ್ಯಾಲೆ ನಡ್ದಂಗೆ’ ಕೆಲವೊಂದು ಪುಂಡ ದನಗಳ ಪ್ರಾಣಕ್ಕೆ ಆಪತ್ತು ಮಾಡಿ ಬಿಡ್ತಾವೆ. ಒಂದ್ಸಲ ಒಂದು ಎತ್ತು ನನ್ನ ಹೊಟ್ಟೆಗೆ ಒದ್ದಿತ್ತು, ಅವತ್ತು ಬದುಕಿದ್ದೆ ಹೆಚ್ಚು. ಹಂಗೊ ಇಂಗೋ ಇದರಾಗೆ ಜೀವನ ಮಾಡ್ಕೊಂಡು ಬಂದಿದಿನಿ.

ಆರಕ್ಕೆ ಏರಿಲ್ಲ ಮೂರಕ್ಕೆ ಇಳ್ದಿಲ್ಲ ಅನ್ನೋ ಹಂಗೆ ನಡೀತಾ ಐತೆ ಜೀವನ. ಇನ್ನೆಲ್ಲಾ ಆ ದ್ಯಾವ್ರು ಅಲ್ಲಾಗೆ ಸೇರಿದ್ದು. ನಮಗೆ ಬದ್ಕೋಕೆ ಈ ದಾರಿ ತೋರಿಸಿದ, ಇದನ್ನೆ ಮಾಡ್ತಾ ಇದೀನಿ. ಮುಂದೆ ಏನೋ ಯಾರೀಗ್ ಗೊತ್ತು? ಇವತ್ತಿನ ಅನ್ನಕ್ಕೆ ನಮ್ಮ ಈ ದುಡಿಮೆನೆ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.