ADVERTISEMENT

ಸಮನಾಗಿ ನಡೆದರೆ ಜೀವನ ಸುಂದರ

ಕಲಾವತಿ ಬೈಚಬಾಳ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST
ಪತ್ರಿಕೆ ವ್ಯಾಪಾರಿ‌– ಬಾಲಾಜಿ
ಪತ್ರಿಕೆ ವ್ಯಾಪಾರಿ‌– ಬಾಲಾಜಿ   

ನಾನು ಬಾಲಾಜಿ. ಚನ್ನೈ ಹತ್ತಿರದ ಹಳ್ಳಿ ನನ್ನ ಸ್ವಂತ ಊರು. 1983ರಲ್ಲಿ ಎಸ್‌ಎಸ್‌ಎಲ್‌ಸಿ ಮಗಿಸಿ ಬೆಂಗಳೂರಿಗೆ ಬಂದೆ. ನನಗೆ ಈಗ 52ರ ಹರೆಯ.

ಈ ಮೊದಲು ನಮ್ಮದು ಲಾಟರಿ ಅಂಗಡಿ ಇತ್ತು. ಎಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟರ್ ಅಂಗಡಿ ಸಹ ಚೆನ್ನಾಗಿ ನಡೆಯುತ್ತಿತ್ತು. ಒಂದು ದಿನಕ್ಕೆ ಆರೇಳು ಲಕ್ಷ ರೂಪಾಯಿ ವ್ಯಾಪಾರ ಆಗೋದು. ಈಗ ಅದ್ಯಾವುದು ಇಲ್ಲ. ಎಲ್ಲಾ ನಿಂತು ಹೋಯಿತು. 4 ವರ್ಷಗಳ ಹಿಂದೆ ಇಲ್ಲೇ ಸುತ್ತಮುತ್ತ ನಾಲ್ಕಾರು ಪೇಪರ್‌ ಅಂಗಡಿಗಳಿದ್ವು. ನಾನು ಯಾಕೆ ಪೇಪರ್‌ ಅಂಗಡಿ ಇಡಬಾರದು ಅಂದುಕೊಂಡು ಹಲಸೂರಿನಲ್ಲಿ ಪೇಪರ್‌ ಅಂಗಡಿ ಹಾಕಿಕೊಂಡಿದ್ದೀನಿ.

ಬೆಳಗ್ಗೆ 4 ಗಂಟೆಗೆ ಎದ್ದು, ಹಲಸೂರು ಪೊಲೀಸ್‌ ಠಾಣೆ ಹತ್ತಿರ ಇರೋ ಪೇಪರ್‌ ಸೆಂಟರ್‌ಗೆ ಹೋಗಿ ಪೇಪರ್‌ ತರ್ತೀನಿ. ಇಷ್ಟೇ ಸಂಪಾದನೆ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಖರ್ಚೆಲ್ಲಾ ಕಳೆದು ದಿನಕ್ಕೆ ಸುಮಾರು ₹200 ಉಳಿಯುತ್ತೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ರವೆರೆಗೆ, ಮತ್ತೆ ಸಂಜೆ 4 ಗಂಟೆಯಿಂದ 7 ರವರೆಗೂ ಅಂಗಡಿ ತೆರೆದೆ ಇರ್ತೀನಿ.

ADVERTISEMENT

ನನಗೆ ಇಬ್ಬರು ಮಕ್ಕಳು. ಮಗಳು ಬಿಸಿಎ, ಮಗ ಪಿಯುಸಿ ಓದ್ತಿದ್ದಾನೆ. ನನ್ನ ಹೆಂಡ್ತಿ ಬಿ.ಎ. ಓದಿದ್ದಾಳೆ. ಇಲ್ಲೇ ಶಾಲೆಯಲ್ಲಿ ಕೆಲಸ ಮಾಡ್ತಾಳೆ. ನಾನು ಎಸ್‌ಎಸ್‌ಎಲ್‌ಸಿವರೆಗೂ ಓದಿದ್ದೇನೆ. ಅಕ್ಕನ ಮಗಳು ಅಂತಾ ಮದುವೆ ಆದೆ. ಮದುವೆ ಆದಾಗಿನಿಂದಾ ಅಕ್ಕನ ಮನೇಲೆ ಇದೀವಿ.

ಅಕ್ಕ ಕೆಇಬಿಯಲ್ಲಿ ಕೆಲಸ ಮಾಡ್ತಿದ್ರು. ಈಗ ನಿವೃತ್ತಿ ಆಗಿದೆ. ಹಲಸೂರಿನ ಮರ್ಫಿಟೌನ್‌ನಲ್ಲೆ ಅಕ್ಕನ ಸ್ವಂತ ಜಾಗ ಇತ್ತು. ಸಾಲಾಸೋಲಾ ಮಾಡಿ ಅಲ್ಲೇ ಮನೆ ಕಟ್ಟಿಕೊಂಡಿದ್ದೇವೆ. ಅಪ್ಪ–ಅಮ್ಮ ಊರಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ. ಅಣ್ಣ ತಮ್ಮಂದಿರು ಇದಾರೆ. ಕೆಲವರು ನೌಕರಿ ಮಾಡಿಕೊಂಡಿದ್ದಾರೆ, ಇನ್ನು ಕೆಲವರು ನಮ್ಮದೇ 10 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ.

ಸರ್ಕಾರದ ಜಾಗದಲ್ಲೆ ಪುಟ್ಟ ಅಂಗಡಿ ಹಾಕೊಂಡಿದ್ದೀನಿ. ಬಾಡಿಗೆ ಕಟ್ಟಲ್ಲ. ಮಳೆ ಬಿಸಿಲು ಅಂತೆಲ್ಲ ಲೆಕ್ಕ ಮಾಡಕ್ಕಾಗಲ್ಲ. ಬಿಸಿಲಾದ್ರೆ ನೆರಳಿನತ್ತ ಓಡೊದು, ಮಳೆ ಬಂದರೆ ಛತ್ರಿ ಇದೆ, ಹಾಕ್ಕೊಳೋದು, ದುಡಿಯೋದು. ಒಂದು ಗಂಟೆ ಬೇಗ ಹೋಗಬೇಕು ಅನಿಸಿದ್ರೆ ಹೋಗ್ತೀನಿ. ಬೇಗ ಬರಬೇಕು ಅಂದ್ರೆ ಬರ್ತೀನಿ. ಸ್ವಂತ ಉದ್ಯೋಗ, ಹೀಗಾಗಿ ಯಾರ ಹಂಗೂ ಇಲ್ಲ. ನೆಮ್ಮದಿಯಿಂದ ದುಡಿತಾ ಇದೀನಿ.

ಈ ಊರಿಗೆ ಬಂದು 35 ವರ್ಷ ಆಯ್ತು. ಬೆಂಗಳೂರು ನನಗೆ ಬದುಕು ಕೊಟ್ಟಿದೆ. ಮೊದಲು ತಮಿಳು ಮಾತ್ರ ಮಾತಾಡ್ತಿದ್ದೆ. ಈಗ ಆರೇಳು ಭಾಷೆ ಮಾತಾಡ್ತೀನಿ. ಜೀವನ ಒಂಥರಾ ಏಣಿ ಆಟದಂಗೆ. ಏರಿಕೆ– ಇಳಿಕೆ ಇದ್ದೇ ಇರುತ್ತೆ. ಏರಿದಾಗ ಬೀಗದೆ, ಇಳಿದಾಗ ಕುಗ್ಗದೆ ಸಮನಾಗಿ ನಡೆದರೆ ಮಾತ್ರ ಜೀವನ ಸುಂದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.