ADVERTISEMENT

ಕಳೆಯ ಪಾಲಾಗುತ್ತಿದೆ ಚಿಕ್ಕ ಬಾಣಾವರ ಕೆರೆ

ಪ್ರಜಾವಾಣಿ ಚಿತ್ರ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಕೆರೆಯ ಒಂದು ನೋಟ
ಕೆರೆಯ ಒಂದು ನೋಟ   

ಒಂದು ದಶಕದ ಹಿಂದೆ ಚಿಕ್ಕ ಬಾಣಾವರ ಕೆರೆಯ ನೀರು ಸಕ್ಕರೆಯಂತೆ ಸಿಹಿಯಾಗಿತ್ತು. ಮೀನುಗಳು ಸ್ವಚ್ಛಂದವಾಗಿಈಜುತ್ತಿದ್ದವು. ಗ್ರಾಮಸ್ಥರು ಬಲೆ ಹಾಕಿ ಮೀನು ಹಿಡಿಯುತ್ತಿದ್ದರು. ಕೆರೆಯ ಅಂಗಳದಲ್ಲಿ ಮಿಂಚುಳ್ಳಿಯ ಮೀನಿನ ಬೇಟೆಯಾಡುತ್ತಿದ್ದ ರಣಹದ್ದುಗಳು ಹಿಂಡು, ಹಿಂಡಾಗಿದ್ದವು. ಬಿಳಿ ಕೊಕ್ಕರೆ, ನೀರು ಕೋಳಿಗಳ ವಿಹಾರ ಕೆರೆಯ ಅಂದ ಹೆಚ್ಚಿಸಿದ್ದವು. ತೋರಣದಂತೆ ಇಳಿಬಿದ್ದ ಅಂದವಾಗಿ ಹೆಣೆದ ಗೀಜುಗದ ಗೂಡುಗಳು ಸ್ವಾಗತಿಸುತ್ತಿದ್ದವು. ನೂರೆಂಟು ಸೊಬಗಿನ ಜೀವಂತಿಕೆಯ ಜೀವವೈವಿಧ್ಯ ಕೆರೆಯ ಅಂಗಳದಲ್ಲಿ ಕಂಡು ಬರುತ್ತಿದ್ದವು. ಕೆರೆಯ ಒಡಲಲ್ಲಿದ್ದ ಜೀವ ಸಂಕುಲಗಳ ಬಾಳು ಚೆಲುವಾಗಿತ್ತು.

ಕಳೆದ ಐದು ವರ್ಷಗಳಿಂದ ಈಚೆಗೆ ಮೇದರಹಳ್ಳಿ ಗ್ರಾಮದಲ್ಲಿದ್ದ ತ್ಯಾಜ್ಯ ನಿರ್ವಹಣೆ ಘಟಕ ಕೆಲಸ ಮಾಡುವುದು ನಿಲ್ಲಿಸಿದ ಪರಿಣಾಮ ಶೆಟ್ಟಿಹಳ್ಳಿ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ ಗ್ರಾಮಗಳ ಚರಂಡಿ ನೀರು ಕೆರೆಯ ಒಡಲು ಸೇರ ತೊಡಗಿತು. ಕೆರೆಯ ಅನತಿ ದೂರದಲ್ಲಿ ಎರಡು ಅಪಾರ್ಟ್‌ಮೆಂಟ್‌ ತಲೆ ಎತ್ತಿದ್ದವು.ಕೆರೆ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ಗಳಲ್ಲಿ ಸ್ವಂತ ತ್ಯಾಜ್ಯ ನಿರ್ವಹಣಾ ಘಟಕಗಳಿಲ್ಲ. ಕೊಳಚೆ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಅವುಗಳ ತ್ಯಾಜ್ಯ ಕೆರೆ ಸೇರ ತೊಡಗಿದ ನಂತರ ಇಡೀ ಕೆರೆ ಕಲುಷಿತಗೊಂಡಿತು.

ಗಬ್ಬು ವಾಸನೆ

ADVERTISEMENT

ಕೋಳಿ, ಕುರಿ ಮಾಂಸದ ಅಂಗಡಿಗಳು ಮತ್ತು ಹೋಟೆಲ್‌ ತ್ಯಾಜ್ಯ ನೀರು ಕೆರೆಯ ಒಡಲಲ್ಲಿ ಸೇರಿದ ಕೂಡಲೇ ಗಬ್ಬುವಾಸನೆ ಶುರುವಾಯಿತು. ಕೆರೆ ನೀರು ಸೇರಿದ ಪ್ಲಾಸ್ಟಿಕ್‌ ಮತ್ತು ವಿಷಯುಕ್ತ ತ್ಯಾಜ್ಯ ತಿಂದು ಸಾವಿರಾರು ಮೀನುಗಳು ಪ್ರಾಣ ಬಿಟ್ಟವು. ಈ ವಾಸನೆ ಸಹಿಸಲಾರದೆ ಮೀನುಗಾರರು ಬಲೆ ಹಾಕುವುದನ್ನು ಬಿಟ್ಟರು. ಹುಲುಸಾಗಿ ಬೆಳೆದ ಕತ್ತೆ ಕಿವಿ ಕಳೆ ನಿಧಾನವಾಗಿ ಕೆರೆಯ ಅಸ್ತಿತ್ವವನ್ನೇ ನುಂಗಿ ಹಾಕಿದೆ. ಕ್ರಮೇಣ ಕೆರೆಯ ಸ್ವರೂಪವೇ ಬದಲಾಗಿ ಹೋಯಿತು ಎನ್ನುತ್ತಾರೆ ಚಿಕ್ಕಬಾಣಾವರದ ರಾಘವೇಂದ್ರ.

ಕೆರೆಯಲ್ಲಿದ್ದ ತ್ಯಾಜ್ಯ ದುರ್ನಾತದ ಜತೆಗೆ ಸೊಳ್ಳೆಗಳ ಉತ್ಪತ್ತಿ ತಾಣವಾಯಿತು. ಸೊಳ್ಳೆಗಳಿಂದ ಗ್ರಾಮಸ್ಥರು ರೋಗ, ರುಜಿನ ಕಾಡತೊಡಗಿದವು. ಕೆರೆಯ ಗರ್ಭದಲ್ಲಿದ್ದ ನೂರೆಂಟು ಜೀವ ಸಂಕುಲಗಳು ಮಾಯವಾದವು ಎಂದು ಗ್ರಾಮಸ್ಥರು ವಸ್ತುಸ್ಥಿತಿ ಬಿಚ್ಚಿಡುತ್ತಾರೆ.

ಒತ್ತುವರಿ ತೆರವಿನಲ್ಲಿ ರಾಜಕಾರಣ

ಸಂಸದರ ಅನುದಾನದಲ್ಲಿ ಈ ಕೆರೆಯ ಸುತ್ತ ಬೇಲಿ ನಿರ್ಮಿಸಿದರು. ಅಷ್ಟರೊಳಗೆ 110 ಎಕರೆ ಇದ್ದ ಕೆರೆಯ ವಿಸ್ತೀರ್ಣ 90 ಎಕರೆಗೆ ಇಳಿದಿತ್ತು. ಒತ್ತುವರಿಯಾದ ಕೆರೆಯ ಜಾಗ ಬಿಡಿಸಿಕೊಳ್ಳುವಲ್ಲಿ ರಾಜಕಾರಣ ನುಸುಳಿತು. ಮೂರು ದಿಕ್ಕಿನಲ್ಲಿ ಮಾತ್ರ ಗಡಿ ಗುರುತಿಸಿ ಒಂದು ಕಡೆ ಹಾಗೆ ಬಿಟ್ಟು ಬೇಲಿ ಹಾಕಿದರು. ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಕೆರೆ ಅಭಿವೃದ್ದಿ ಪಡಿಸುವುದಾಗಿ ಮಾತು ನೀಡಿದ್ದರು. ಅವರೆಲ್ಲ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿಯಿತು ಎನ್ನುವುದು ಗ್ರಾಮಸ್ಥರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.