ADVERTISEMENT

‘ಸೂಪರ್‌ ದಂಪತಿ’ಯಲ್ಲಿ ಮುರಳಿ ಮೋಡಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:45 IST
Last Updated 28 ಜೂನ್ 2019, 19:45 IST
   

‘ಬಿಗ್‌ಬಾಸ್‌’ ಪಯಣದ ಬಳಿಕ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳದ ಮುರಳಿ ಅವರು ಈಗ ‘ಸೂಪರ್‌ ದಂಪತಿ’ ಗೇಮ್‌ ಶೋ ಮೂಲಕ ಕಿರುತೆರೆಯ ಮೇಲೆ ಜಾದೂ ಮಾಡಲು ಸಿದ್ದತೆ ನಡೆಸಿದ್ದಾರೆ.

‘ಕಲರ್ಸ್‌ ಸೂಪರ್‌’ ಚಾನಲ್‌ನಲ್ಲಿ ಹೊಸದಾಗಿ ಆರಂಭವಾಗಲಿರುವ ‘ಸೂಪರ್‌ ದಂಪತಿ’ ಕಾರ್ಯಕ್ರಮವನ್ನು ಮರಳಿ ನಡೆಸಿಕೊಡಲಿದ್ದಾರೆ. ಅಷ್ಟೇ ಅಲ್ಲ ಅವರದೇ ಪ್ರೊಡಕ್ಷನ್‌ ಹೌಸ್‌ (ಸುಶ್ರುತ್‌ ಎಂಟರ್‌ಟೈನ್‌ಮೆಂಟ್‌) ನಿಂದ ಈ ಶೋ ನಿರ್ಮಾಣಗೊಳ್ಳುತ್ತಿರುವುದು ವಿಶೇಷ. ಈ ಕುರಿತು ಪ್ರಜಾವಾಣಿ ಮೆಟ್ರೊ ನಡೆಸಿದ ಸಂದರ್ಶನದಲ್ಲಿ ಅವರು ತಮ್ಮ ಹೊಸ ಪಯಣದ ಕುರಿತ ಕನಸಿನ ಹಾದಿಯನ್ನು ಹಂಚಿಕೊಂಡಿದ್ದಾರೆ.

* ಬಿಗ್‌ಬಾಸ್‌ ಮುಗಿದು ತುಂಬಾ ದಿನಗಳ ಬಳಿಕ ಕಾಣಿಸಿಕೊಳ್ಳುತ್ತಿದ್ದೀರಾ. ಇಷ್ಟೊಂದು ಅಂತರ ಅಗತ್ಯವಿತ್ತಾ?

ADVERTISEMENT

ಹೌದು. ಇದು ಪೂರ್ವನಿರ್ಧರಿತ. ಬೇರೆ ಚಾನಲ್‌ನೊಂದಿಗೆ ನಾನು 1,750ಕ್ಕೂ ಹೆಚ್ಚು ಎಪಿಸೋಡ್‌ ಮಾಡಿದ್ದೇನೆ.ಈ ಶೋನಲ್ಲಿ 6000ಕ್ಕಿಂತ ಹೆಚ್ಚು ಖಾದ್ಯಗಳನ್ನು ತಯಾರಿಸಿದ್ದೇವೆ. 5 ವರ್ಷ ನಿರಂತರವಾಗಿ ಕಾರ್ಯಕ್ರಮ ಮಾಡಿದ್ದೇನೆ. ಅದೂ ಕೂಡ ನಮ್ಮ ಪ್ರೊಡಕ್ಷನ್‌ ಹೌಸ್‌ನಿಂದ ಮಾಡಿದ ಕಾರ್ಯಕ್ರಮವೇ ಆಗಿತ್ತು. ಅಡುಗೆ ಮನೆ ಇಮೇಜ್‌ನಿಂದ ಹೊರಬಂದು ಏನಾದರೂ ಹೊಸತು ಮಾಡುವ ಬಯಕೆ ಇತ್ತು. ಮೊದಲಿನಿಂದಲೂ ಬಿಗ್‌ಬಾಸ್‌ಗೆ ನನ್ನನ್ನು ಕರೆಯುತ್ತಿದ್ದರು. ಆದರೆ ಆ ಚಾನಲ್‌ನೊಂದಿಗೆ ಒಪ್ಪಂದ ಇದ್ದಿದ್ದರಿಂದ ಹೋಗಿರಲಿಲ್ಲ. ಆ ಬಳಿಕ ಕಾಲ ಕೂಡಿ ಬಂತು. ಮೂರು ತಿಂಗಳಿಂದ ನಾನು ‘ಸೂಪರ್‌ ದಂಪತಿ’ ಕಾರ್ಯಕ್ರಮಕ್ಕಾಗಿಯೇ ಕೆಲಸ ಮಾಡಿದ್ದೇನೆ.

* ಕಾರ್ಯಕ್ರಮದ ಸಿದ್ದತೆ ಹೇಗೆ ನಡೆಯಿತು?

‘ಸೂಪರ್‌ ದಂಪತಿ’ ಒಂದು ಸವಾಲಿನ ಕಾರ್ಯಕ್ರಮ. ಜಿಲ್ಲಾಮಟ್ಟದಲ್ಲಿ ತುಂಬಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಇದುವರೆಗೂ ತಾಲ್ಲೂಕು ಮಟ್ಟದಲ್ಲಿ ಯಾರೂ ಇಂತದ್ದೊಂದು ಕಾರ್ಯಕ್ರಮ ಮಾಡೇ ಇಲ್ಲ. ಕಿರುತೆರೆಗೆ ಇದು ಹೊಸದು. ಚಲಿಸುವ ವೇದಿಕೆ ಸಿದ್ದಪಡಿಸಿದ್ದೇವೆ. ಬಿಗ್‌ಬಾಸ್‌ ಮನೆ ವಿನ್ಯಾಸಗೊಳಿಸಿದ್ದ ಮುಂಬೈನ ಶ್ಯಾಮ್‌ ಭಾಟಿಯಾ ಅವರೇ ಈ ವೇದಿಕೆಯನ್ನೂ ಸಿದ್ದಗೊಳಿಸಿದ್ದಾರೆ.

* ತಾಲ್ಲೂಕು ಮಟ್ಟದಲ್ಲಿ ಶೂಟಿಂಗ್ ಮಾಡಲು ಹೊಸ ಸವಾಲುಗಳು ಏನಿರಬಹುದು?

ಹೆಜ್ಜೆ ಹೆಜ್ಜೆಗೂ ಸವಾಲುಗಳಿವೆ. ಅಲ್ಲಿ ಸಾಕಷ್ಟು ಜನ ಸೇರುತ್ತಾರೆ. ಅವರನ್ನು ನಿಯಂತ್ರಣ ಮಾಡಬೇಕು. ಮಳೆಗಾಲ ಆಗಿರೋದ್ದರಿಂದ ಕಾರ್ಯಕ್ರಮದ ರೂಪುರೇಷೆ ಬದಲಾಗುತ್ತಿರಬೇಕು. ದೊಡ್ಡ ಗೇಮ್‌ಶೋಗಳ ಸೆಟಪ್‌ ಕೂಡ ಕಷ್ಟ. ದಿನಕ್ಕೆ ಕನಿಷ್ಟ 12 ಗೇಮ್‌ ಸಿದ್ದ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾಗುವ ವಸ್ತುಗಳನ್ನು 3 ತಿಂಗಳಿನಿಂದಲೇ ಸಿದ್ದಗೊಳಿಸಿದ್ದೇವೆ. ಸಂಜೆ ಹೊತ್ತು ಶೂಟಿಂಗ್‌ ಮಾಡಬೇಕು. ದಿನಕ್ಕೆ ಮೂರು ಎಪಿಸೋಡ್ ಮಾಡುವುದು ಅಂದ್ರೆ ತಮಾಷೆನಾ. ಆರು ತಾಸು ಶೂಟಿಂಗ್ ಮಾಡಲೇಬೇಕು. ಯಾಕೆಂದರೆ ಈ ಶೋ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿದೆ.

* ತಾಲ್ಲೂಕು ಮಟ್ಟದಲ್ಲಿ ಹೇಗೆ ಕಾರ್ಯಕ್ರಮ ರೂಪಿಸಿದ್ದೀರಿ?

ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ತುಮಕೂರು, ಶಿರಾ, ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗದಲ್ಲಿ ಶೂಟಿಂಗ್ ಮಾಡಲಿದ್ದೇವೆ. ಒಂದು ತಾಲ್ಲೂಕಿನಲ್ಲಿ ಮೂರು ಕಾರ್ಯಕ್ರಮ ಮಾಡುತ್ತೇವೆ. ತಿಂಗಳಲ್ಲಿ 10 ದಿನ ಶೂಟಿಂಗ್‌ ಮಾಡಬೇಕು. ಎರಡನೇ ಹಂತದಲ್ಲಿ ದಾವಣಗೆರೆ, ಹರಿಹರ, ರಾಣಿಬೆನ್ನೂರು, ಜಗಳೂರು, ಬ್ಯಾಡಗಿ ಎಂದು ಯೋಜನೆ ಮಾಡಲಾಗಿದೆ. ಎಲ್ಲಾ ತಾಲ್ಲೂಕುಗಳಲ್ಲೂ ಮಾಡುತ್ತೇವೆ. ಜುಲೈ 15ರಿಂದ ಕಾರ್ಯಕ್ರಮ ಪ್ರಸಾರವಾಗುವ ನಿರೀಕ್ಷೆ ಇದೆ.

* ಬೇರೆ ಗೇಮ್‌ಶೋಗಳಿಗಿಂತ ಇದು ಹೇಗೆ ಭಿನ್ನವಾಗಿದೆ?

ದಂಪತಿಗಳು ಗೇಮ್‌ ಆಡುತ್ತಾರೆ ಅಂದ್ರೆ ಅದರಲ್ಲಿ ತಮಾಷೆ, ಹಾಸ್ಯ, ಪ್ರೀತಿ ಎಲ್ಲವೂ ಇದ್ದೇ ಇರುತ್ತದೆ. ಇದನ್ನು ನಾವು ಬಳಸಿಕೊಂಡು ಒಂದು ಒಳ್ಳೆಯ ಮನರಂಜನೆ ಕಾರ್ಯಕ್ರಮ ಮಾಡಬಹುದು. ದಂಪತಿಗಳಿಗಾಗಿಯೇ ವಿಶೇಷವಾದ ಆಟಗಳನ್ನು ನಾವು ಸಿದ್ದ ಮಾಡಿಕೊಂಡಿದ್ದೇವೆ. ಇದು ಪಕ್ಕಾ ಗೇಮ್‌ ಶೋ. ಸ್ವಲ್ಪ ಸಮಯ ಮಾತ್ರ ಮಾತು, ಹರಟೆ, ಹಾಡು ಎಂದೆಲ್ಲಾ ಇರಬಹುದು ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.