ADVERTISEMENT

ತಾರೆಯರ ಸಂಕ್ರಾಂತಿ ಸಂಭ್ರಮ...

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 1:57 IST
Last Updated 15 ಜನವರಿ 2019, 1:57 IST
   

ಸಂಕ್ರಾಂತಿ ಹಬ್ಬವನ್ನು ಹೇಗೆಲ್ಲ ಆಚರಿಸುತ್ತೇವೆ, ಈ ಬಾರಿಯ ಸುಗ್ಗಿ ಹಬ್ಬ ಹೇಗೆ ವಿಶೇಷ ಎಂಬ ಬಗ್ಗೆ ಸ್ಯಾಂಡಲ್‌ವುಡ್‌ ತಾರೆಯರ ಮನಬಿಚ್ಚಿ ಮಾತನಾಡಿದ್ದಾರೆ...

***

ನನ್ನ ಪಾಲಿಗೆ ವಿಶೇಷ

ADVERTISEMENT

ಈ ಬಾರಿಯ ಸಂಕ್ರಾಂತಿ ನನ್ನ ಪಾಲಿಗೆ ವಿಶೇಷವಾದದ್ದು. ನನ್ನ ಅಭಿನಯದ ‘ಚಂಬಲ್’ ಮತ್ತು ‘ಐ ಲವ್‌ ಯೂ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿವೆ. ‘ಚಂಬಲ್‌’ನಲ್ಲಿ ನೀನಾಸಂ ಸತೀಶ್ ಅವರೊಂದಿಗೆ, ‘ಐ ಲವ್‌ ಯೂ’ದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿದ್ದೇನೆ. ಮಲಯಾಳಂನಲ್ಲಿ ಮುಮ್ಮುಟಿ ಅವರಿಗೆ ಜೋಡಿಯಾಗಿ ನಟಿಸಿದ್ದರೂ ಕನ್ನಡದಲ್ಲಿ ಸ್ಟಾರ್ ನಟರ ಜತೆಗೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಸತೀಶ್ ಮತ್ತು ಉಪೇಂದ್ರ ಅವರೊಂದಿಗೆ ಜೋಡಿಯಾಗಿರುವುದು ಸಂತಸವಾಗಿದೆ.

ಸೋನುಗೌಡ, ನಟಿ

***

ಸ್ನೇಹಿತರನನ್ನು ಭೇಟಿಯಾಗುವ ಸಂಭ್ರಮ

ನಮ್ಮದು ಸಂಪ್ರದಾಯಸ್ಥ ಕುಟುಂಬ. ಹಾಗಾಗಿ, ಸಂಕ್ರಾಂತಿ ಆಚರಿಸಲು ಶಿವಮೊಗ್ಗಕ್ಕೆ ಬಂದಿದ್ದೀನಿ. ಸಂಕ್ರಾಂತಿಯ ಮುನ್ನಾದಿನ (ಜ.14) ಅಮ್ಮನ ಹುಟ್ಟುಹಬ್ಬ. ಅಮ್ಮನ ಜತೆಗೆ ನಾವೂ ಸಂಭ್ರಮಿಸುತ್ತೀವಿ. ಈಗಾಗಲೇ ಎಳ್ಳುಬೆಲ್ಲ ರೆಡಿಯಾಗಿದೆ. ಸ್ನೇಹಿತರನ್ನು ಕಾಣಲು ಇದೊಳ್ಳೆಯ ಸಮಯ. ‘ಮಗಳು ಜಾನಕಿ’ಯಲ್ಲಿ ಸಂಜನಾ ಪಾತ್ರ ಮಾಡುತ್ತಿರುವುದರಿಂದ ಈಗ ಅಕ್ಕಪಕ್ಕದ ಮನೆಯವರು ಮಾತನಾಡಿಸುತ್ತಾರೆ. ಹೊರಗೆ ಹೋದಾಗ ಜನರು ಗುರುತಿಸಿ, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದು ಈ ಬಾರಿಯ ಸಂಕ್ರಾಂತಿ ವಿಶೇಷ ಅನ್ನಬಹುದು.

ಸುಪ್ರಿಯಾ ರಾವ್, ರಂಗಭೂಮಿ, ಕಿರುತೆರೆ ನಟಿ

***

ಎರಡನೇ ಸಂಕ್ರಾಂತಿ

ಮದುವೆಯಾದ್ಮೇಲೆ ಎರಡನೇ ಸಂಕ್ರಾಂತಿ ಇದು. ಮೊದಲ ವರ್ಷ ತಾತಾ ತೀರಿಹೋಗಿದ್ದರಿಂದ ಆಚರಿಸಲಾಗಲಿಲ್ಲ. ಈ ಬಾರಿ ತವರು ಮತ್ತು ಗಂಡನ ಮನೆ ಎರಡೂ ಕಡೆ ಹಬ್ಬದ ಸಂಭ್ರಮ. ಎರಡೂ ಕಡೆ ನಾನೇ ಪೊಂಗಲ್ ಮಾಡ್ತೀನಿ. ಗೆಣಸು ಬೇಯಿಸಿಕೊಂಡು ಚೆನ್ನಾಗಿ ತಿನ್ತೀನಿ. ಸಂಕ್ರಾಂತಿಗಾಗಿ ಶೂಟಿಂಗ್‌ಗೆ ಮೊದಲೇ ರಜೆ ಹೇಳಿಬಿಟ್ಟಿದ್ದೆ. ಹಬ್ಬದಲ್ಲಂತೂ ಕುಟುಂಬದ ಜತೆ ಕಾಲ ಕಳೆಯುವುದು ಮುಖ್ಯ. ಎಲ್ಲರೂ ಒಟ್ಟಿಗೆ ಸೇರುವುದೇ ಸಂಭ್ರಮ

ಅಪೂರ್ವ, ಕಿರುತೆರೆ ನಟಿ

ಕಿಚ್ಚು ಹಾಯಿಸುವ ನೆನಪು

ಸಂಕ್ರಾಂತಿ ಅಂದಾಕ್ಷಣ ಎತ್ತುಗಳನ್ನು ಕಿಚ್ಚು ಹಾಯಿಸುವುದೇ ನೆನಪಾಗುತ್ತದೆ. ನಗರದಲ್ಲಂತೂ ಇದು ಅಪರೂಪ. ಹಸುಗಳ ಕೋಡುಗಳಿಗೆ ಟೇಪು ಕಟ್ಟಿ, ಕಾಲಿಗೆ ಗೆಜ್ಜೆ ಕಟ್ಟುವ ಸಂಭ್ರಮ. ಬಾಲ್ಯದಲ್ಲಿ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸಂಕ್ರಾಂತಿ ಆಚರಿಸುವುದೇ ಸಂಭ್ರಮವಾಗಿತ್ತು. ಹಸು ಮಾಲೀಕರನ್ನು ಕಾಡಿಬೇಡಿ ಕಿಚ್ಚು ಹಾಯಿಸುತ್ತಿದ್ದೆವು. ಆಗ ನಮಗದು ಖುಷಿಯ ವಿಚಾರವಾಗಿತ್ತು. ದೊಡ್ಡವರಾದ್ಮೇಲೆ ಗೊತ್ತಾಯಿತು ಹಸುವಿನ ಕಾಲು ಮತ್ತು ಗೊರಸುಗಳಲ್ಲಿ ಸಣ್ಣ ಕ್ರಿಮಿಗಳಿದ್ದರೆ ಕಿಚ್ಚು ಹಾಯಿಸಿದಾಗ ಅದು ನಾಶವಾಗುತ್ತದೆ ಅಂತ.

ತಾಯಿ ಲೋಕೇಶ್, ರಂಗಭೂಮಿ ಫೋಟೊಗ್ರಾಫರ್

***

ಎಳ್ಳು ಬೆಲ್ಲ ರೆಡಿ

ಬೆಳಿಗ್ಗೆ ದೇವರ ಪೂಜೆ ಮಾಡಿ ವಿವಿಧ ರೀತಿಯ ಅಡುಗೆ ಮಾಡುವುದೇ ಹಬ್ಬದ ಸಂಭ್ರಮ. ಎಳ್ಳು, ಬೆಲ್ಲ ರೆಡಿಯಾಗಿದೆ. ಈ ಬಾರಿ ಹೂವಿನ ದರ ದುಬಾರಿಯಾಗಿದೆ. ಆದರೂ ಖರೀದಿಸಬೇಕು. ಊಟದಲ್ಲಿ ಅವರೆಕಾಯಿ ಸ್ಪೆಷಲ್ ಇರುತ್ತದೆ. ಅವರೆಕಾಯಿ ದೋಸೆ, ಸಿಹಿ, ಕಾರದ ಸಾರು ಎಲ್ಲವೂ ಇರುತ್ತೆ.

ರಮ್ಯಾ, ಸಿ.ವಿ.ರಾಮನ್ ನಗರ

***

ಕುಟುಂಬದೊಂದಿಗೆ ಹಬ್ಬ

18 ವರ್ಷಗಳಿಂದ ಹಬ್ಬ ಆಚರಿಸಲು ಆಗಿರಲೇ ಇಲ್ಲ. ರೀಟೈಲ್ ವ್ಯಾಪಾರದಲ್ಲಿದ್ದೆ. ಆಗ ಬಿಡುವು ಸಿಗುತ್ತಿರಲಿಲ್ಲ. ಹಳ್ಳಿಗಳಲ್ಲಿ ನೈಜವಾದ ಸಂಕ್ರಾಂತಿ ನೋಡಬಹುದು. ಈ ಬಾರಿ ಹಬ್ಬಕ್ಕೆ ನಾನಿರಲ್ಲ ಅಂತ ಕುಟುಂಬದವರು ಭಾವಿಸಿದ್ದರು. ಆದರೆ, ಇರ್ತೀನಿ ಅಂತ ಹೇಳಿದಾಗ ಅವರಿಗೆ ಸರ್ಪ್ರೈಸ್ ಅನಿಸ್ತು. ಈ ಬಾರಿ ಹೆಂಡತಿ–ಮಕ್ಕಳೊಂದಿಗೆ ಹಬ್ಬದಾಚರಣೆ ಮಾಡುವೆ.

ರಾಜಾನಂದ ಬಿ.ಕೆ, ವ್ಯಾಪಾರಸ್ಥರು, ರಾಜರಾಜೇಶ್ವರಿ ನಗರ

***

ದೇವಸ್ಥಾನಕ್ಕೆ ಹೋಗ್ತೀವಿ

ನನ್ನ ತವರು ಮನೆ ಮಾಗಡಿ. ಅಲ್ಲಿ ಹಳ್ಳಿಯ ಸಂಭ್ರಮವಿದೆ. ತಾಯಿ ಮನೆಯಲ್ಲಿ ಹಸುಗಳನ್ನು ಸಾಕಿದ್ದಾರೆ. ಅವುಗಳಿಗೆ ಅಲಂಕರಿಸಿ ಕಿಚ್ಚು ಹಾಯಿಸುತ್ತಿದ್ದೆವು. ಗಂಡನ ಮನೆ ಬನಶಂಕರಿ. ಇಲ್ಲಿ ಹಬ್ಬದ ಅಡುಗೆ ಮಾಡಿ, ಮಗಳು, ಪತಿಯೊಂದಿಗೆ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗ್ತೀನಿ. ತರಕಾರಿಗಿಂತ ಹೂವಿನ ರೇಟು ಜಾಸ್ತಿಯಾಗಿದೆ.

ಸುಧಾ ಸೋಮಶೇಖರ್, ಬನಶಂಕರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.