ಹಾರಾಟ ನಡೆಸುತ್ತಿದ್ದ ವಿಮಾನವೊಂದರ ಒಳಗಡೆ ದಟ್ಟ ಹೊಗೆ ಆವರಿಸಿದ ಮತ್ತು ಪ್ರಯಾಣಿಕರು ಆತಂಕಗೊಂಡು ಕಿರುಚಾಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಅಪಘಾತಕ್ಕೆ ಈಡಾದ ಏರ್ ಇಂಡಿಯಾ ವಿಮಾನದ ಒಳಗಡೆ ಪತನಕ್ಕೂ ಮುನ್ನ ಕಂಡು ಬಂದ ದೃಶ್ಯ ಇದು ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು.
ವಿಡಿಯೊ ತುಣುಕಿನ ಒಂದು ಕೀ ಫ್ರೇಮ್ ಅನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಇದೇ ಪ್ರತಿಪಾದನೆಯೊಂದಿಗೆ ಹಲವರು ವಿಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂತು. ರಿವರ್ಸ್ ಇಮೇಜ್ ವಿಧಾನದ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ @TheWapplehouse ಎಂಬ ‘ಎಕ್ಸ್’ ಖಾತೆಯಲ್ಲಿ 2023ರ ಮಾರ್ಚ್ 17ರಂದು ಇದೇ ವಿಡಿಯೊ ಪೋಸ್ಟ್ ಮಾಡಿರುವುದು ಕಂಡು ಬಂತು. ಆ ಪೋಸ್ಟ್‌ನಲ್ಲಿ ನೀಡಲಾಗಿರುವ ವಿವರಣೆಯಂತೆ, ಅದು 2020ರ ಜನವರಿಯಲ್ಲಿ ನಡೆದ ಘಟನೆಯಾಗಿದ್ದು, ಐರ್ಲೆಂಡ್‌ನ ವಿಮಾನಯಾನ ಸಂಸ್ಥೆ ರ‍್ಯಾನ್‌ಏರ್‌ನ ವಿಮಾನವೊಂದು ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಅದರ ಒಳಗಡೆ ಹೊಗೆ ಆವರಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ, ಗೊಂದಲ ಸೃಷ್ಟಿಯಾಗಿತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ ಈ ಘಟನೆ ಸಂಬಂಧ ಪ್ರಕಟವಾದ ಮಾಧ್ಯಮ ವರದಿಗಳು ದೊರೆತವು. ಐದು ವರ್ಷಗಳಷ್ಟು ಹಿಂದೆ ನಡೆದಿದ್ದ ಘಟನೆಯ ವಿಡಿಯೊವನ್ನು ಅಹಮದಾಬಾದ್ ದುರಂತಕ್ಕೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.