Fact Check: ವೃದ್ಧೆಯನ್ನು ಜೀವಂತವಾಗಿ ಹೂಳಲು ಯತ್ನಿಸುತ್ತಿರುವ ವಿಡಿಯೊ ಸುಳ್ಳು
ವೃದ್ಧರೊಬ್ಬರು ವೃದ್ಧೆಯೊಬ್ಬರನ್ನು ಮನೆಯಿಂದ ಹೊರಕ್ಕೆ ಎಳೆದುಕೊಂಡು ಬಂದು, ಜೀವಂತವಾಗಿ ಹೂಳಲು ಯತ್ನಿಸುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಈ ಘಟನೆ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ ನಡೆದಿದೆ. 65 ವರ್ಷದ ಮುಸ್ಲಿಂ ವ್ಯಕ್ತಿ, 42 ವರ್ಷದ ತನ್ನ ತಂಗಿಯನ್ನೇ ಮದುವೆಯಾದ ನಂತರ ತನ್ನ ಅನಾರೋಗ್ಯ ಪೀಡಿತ 62 ವರ್ಷ ವಯಸ್ಸಿನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಆಕೆಯನ್ನು ಜೀವಂತ ಹೂಳಲು ಯತ್ನಿಸಿದ್ದಾನೆ’ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು. ಇದು ಕರ್ನಾಟಕದಲ್ಲಿ ನಡೆದ ಘಟನೆ ಅಲ್ಲ.
ವಿಡಿಯೊ ತುಣಕಿನ ಕೀ ಫ್ರೇಮ್ ಅನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಾಟ ನಡೆಸಿದಾಗ, ಬಾಂಗ್ಲಾದೇಶದ ಬಂಗಾಳಿ ಭಾಷೆಯ ದಿನಪತ್ರಿಕೆ ‘ಪ್ರೊತೊಮ್ ಅಲೊ’ದಲ್ಲಿ ಪ್ರಕಟವಾದ ವರದಿಯೊಂದು ಸಿಕ್ಕಿತು. ವಿಡಿಯೊದ ಕೀ ಪ್ರೇಮ್‌ನಲ್ಲಿದ್ದ ಚಿತ್ರವು ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರವನ್ನೇ ಹೋಲುತ್ತಿತ್ತು. ಆಗಸ್ಟ್ 8ರಂದು ಮಹಮ್ಮದ್ ಖಲಿಲೂರ್ ರೆಹಮಾನ್ (80) ಎಂಬಾತ ಪತ್ನಿ ಖೊಶೆಡಾ ಬೇಗಂಳ (70) ಅನಾರೋಗ್ಯದಿಂದ ಬೇಸತ್ತು ಆಕೆಯನ್ನು ಸಜೀವವಾಗಿ ಹೂಳಲು ಯತ್ನಿಸಿದ್ದಾನೆ ಎಂದು ವರದಿಯಲ್ಲಿತ್ತು. ಇನ್ನಷ್ಟು ಹುಡುಕಾಟ ನಡೆಸಿದಾಗ ಇದೇ ಪ್ರಕರಣವನ್ನು ಅಲ್ಲಿನ ಹಲವು ಮಾಧ್ಯಮಗಳು ವರದಿ ಮಾಡಿರುವುದೂ ತಿಳಿದು ಬಂತು. ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆಯಾಗಿದ್ದು, ಅದನ್ನು ಕರ್ನಾಟಕದಲ್ಲಿ ನಡೆದಿರುವುದು ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.