ರಾಹುಲ್ ಗಾಂಧಿ
–ಪಿಟಿಐ ಚಿತ್ರ
‘ಭಾರತ ಮಾತೆ ಯಾರು, ಭಾರತ ಮಾತೆ ಅಂದರೆ ಏನು?’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಕೇಳಿದ್ದಾರೆ ಎಂಬಂತೆ ಬಿಂಬಿಸುವ 18 ಸೆಕೆಂಡ್‌ಗಳ ವಿಡಿಯೊವೊಂದನ್ನು ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆಯಲ್ಲಿ (@ಬಿಜೆಪಿ4ಇಂಡಿಯಾ) ಪ್ರಕಟಿಸಲಾಗಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮುಖಂಡ ನವೀನ್ ಕುಮಾರ್ ಜಿಂದಾಲ್ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿದೇಶಿ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದವರು ಮಾತ್ರ ‘ಭಾರತ ಮಾತೆ ಯಾರು’ ಎಂದು ಕೇಳಬಹುದು ಎಂದು ಅವರು ಹೇಳಿದ್ದಾರೆ. ಬಿಜೆಪಿ ವಕ್ತಾರೆ ಅನುಜಾ ಕಪೂರ್ ಅವರು ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಆದರೆ ಈ ವಿಡಿಯೊವನ್ನು ತಪ್ಪಾಗಿ ಬಿಂಬಿಸಲಾಗಿದೆ.
ಆಲ್ಟ್ ನ್ಯೂಸ್ ಈ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿದೆ. ರಾಹುಲ್ ಗಾಂಧಿ ಮಾತನಾಡಿದ ಸಂದರ್ಭ ಯಾವುದು ಎಂಬುದು ಸರಿಯಾಗಿ ಗೊತ್ತಾಗುವುದಿಲ್ಲ. ರಾಹುಲ್ ಮಾತನಾಡಿದ ಕಾರ್ಯಕ್ರಮಕ್ಕೆ ಸಂಬಂಧಿಸಿ ಅಮರ್ ಉಜಾಲಾದಲ್ಲಿ ನವೆಂಬರ್ 19ರಂದು ವರದಿ ಪ್ರಕಟವಾಗಿದೆ. ರಾಜಸ್ಥಾನದ ಬುಂದಿಯಲ್ಲಿ ರಾಹುಲ್ ಮಾತನಾಡಿದ್ದಾರೆ. ‘ಭಾರತ ಮಾತೆ ಯಾರು’ ಎಂದು ಅವರು ಕೇಳುತ್ತಾರೆ. ಬಳಿಕ, ದೇಶದ ಜನರೆಲ್ಲರೂ ಸೇರಿಯೇ ಭಾರತ ಮಾತೆ ರೂಪುಗೊಳ್ಳುತ್ತಾಳೆ. ಈ ಭೂಮಿಯೇ ಭಾರತ ಮಾತೆ. ಈ ಘೋಷಣೆಗೆ ಪ್ರತಿಧ್ವನಿಯಾಗುವ ಪ್ರತಿಯೊಬ್ಬರು ಸೇರಿಯೇ ಭಾರತ ಮಾತೆ ರೂಪುಗೊಳ್ಳುತ್ತಾಳೆ ಎಂದು ರಾಹುಲ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.