ADVERTISEMENT

ಅಗ್ರಿಗೋಲ್ಡ್‌ ಆಸ್ತಿ ವಿವರ ಸಲ್ಲಿಸಿಲ್ಲ ಕೋರ್ಟ್‌ಗೆ ಝಿ ಎಸ್ಸೆಲ್‌ ಹೇಳಿಕೆ

ಪಿಟಿಐ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST

ಹೈದರಾಬಾದ್‌: ಲಕ್ಷಾಂತರ ಠೇವಣಿದಾರರಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಅಗ್ರಿಗೋಲ್ಡ್‌ನ ಆಡಳಿತ ಮಂಡಳಿಯು ತನ್ನ ವಶದಲ್ಲಿರುವ ಸಂಪತ್ತು ಮತ್ತು ಠೇವಣಿ ಮೊತ್ತದ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಝಿ ಎಸ್ಸೆಲ್‌ ಸಮೂಹವು ಇಲ್ಲಿಯ ಹೈಕೋರ್ಟ್‌ ಪೀಠಕ್ಕೆ ತಿಳಿಸಿದೆ.

ಅಗ್ರಿಗೋಲ್ಡ್‌ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಝಿ ಎಸ್ಸೆಲ್‌ ಸಮೂಹವು, ಕೋರ್ಟ್‌ ಸೂಚನೆಯಂತೆ ಈಗಾಗಲೇ ಅಗತ್ಯವಾದ ಮೊತ್ತವನ್ನು ಕೋರ್ಟ್‌ನಲ್ಲಿ ಠೇವಣಿ ಇರಿಸಿದೆ. ಅಗ್ರಿಗೋಲ್ಡ್‌ನ ಬಂಧಿತ ನಿರ್ದೇಶಕರು ಮತ್ತು ಅಧ್ಯಕ್ಷರು ಬೇರೆ, ಬೇರೆ ಜೈಲುಗಳಲ್ಲಿ ಇರುವುದರಿಂದ ಮಾಹಿತಿ ಸಂಗ್ರಹಿಸುವುದು ಸಾಧ್ಯವಾಗುತ್ತಿಲ್ಲ ಎಂದು ಪೀಠದ ಗಮನಕ್ಕೆ ತಂದಿದೆ.

ಇದಕ್ಕೆ ಸ್ಪಂದಿಸಿರುವ ಪೀಠವು, ಬಂಧಿತ ಎಲ್ಲ 17 ಜನರನ್ನು ಒಂದೇ ಜೈಲಿನಲ್ಲಿ ಇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಂಧ್ರಪ್ರದೇಶದ ಜೈಲು ಇಲಾಖೆಗೆ ಸೂಚಿಸಿದೆ. ಎಸ್ಸೆಲ್‌ ಸಮೂಹವು ಬಯಸಿರುವ ಎಲ್ಲ ಮಾಹಿತಿ ಸಂಗ್ರಹಿಸಿ ಒಂದು ತಿಂಗಳಲ್ಲಿ ತನಗೆ ವರದಿ ಸಲ್ಲಿಸಬೇಕು ಎಂದೂ ಹೇಳಿದೆ.

ADVERTISEMENT

ತನ್ನ ವಶದಲ್ಲಿ ಇರುವ 15 ಬೇರೆ, ಬೇರೆ ಗರಿಷ್ಠ ಮೌಲ್ಯದ ಆಸ್ತಿಗಳ ವಿವರಗಳನ್ನು ಸಲ್ಲಿಸಲು ವಿಳಂಬ ಮಾಡಿರುವ ಅಗ್ರಿಗೋಲ್ಡ್‌ನ ಧೋರಣೆಗೆ ಪೀಠವು ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಠೇವಣಿದಾರರ ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭಿಸಿದ್ದ ಸಿಐಡಿಯು ವಿವರಗಳ ದೃಢೀಕರಣ ವಿಳಂಬ ಕಾರಣಕ್ಕೆ ಕೋರ್ಟ್‌ಗೆ ಇನ್ನೂ ಮಾಹಿತಿ ಸಲ್ಲಿಸಿಲ್ಲ. ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.