ADVERTISEMENT

ಅಜಿತ್ ಪವಾರ್ ಪ್ರಮಾಣ ಸ್ವೀಕಾರ

ಮತ್ತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಅಧಿಕಾರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST
ಅಜಿತ್ ಪವಾರ್ ಪ್ರಮಾಣ ಸ್ವೀಕಾರ
ಅಜಿತ್ ಪವಾರ್ ಪ್ರಮಾಣ ಸ್ವೀಕಾರ   


ಮುಂಬೈ (ಪಿಟಿಐ): ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಂದು ವಾರದ ಹಿಂದೆಯಷ್ಟೇ ಸರ್ಕಾರ ಹೊರಡಿಸಿದ ಶ್ವೇತಪತ್ರದಲ್ಲಿ ಭ್ರಷ್ಟಾಚಾರ ಆರೋಪದಿಂದ ಕಳಂಕರಹಿತರಾಗಿ `ಕ್ಲೀನ್ ಚಿಟ್' ಪಡೆದಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಶುಕ್ರವಾರ ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ಮತ್ತೆ ಎರಡನೇ ಬಾರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎನ್‌ಸಿಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಅವರಿಗೆ ರಾಜ್ಯಪಾಲ ಕೆ. ಶಂಕರನಾರಾಯಣನ್ ಅವರು ಇಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಕ್ರಮವನ್ನು ಖಂಡಿಸಿ ವಿರೋಧ ಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು.

ನೀರಾವರಿ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇರೆಗೆ ಅಜಿತ್ ಪವಾರ್ ಸೆಪ್ಟೆಂಬರ್ 25ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಎನ್‌ಸಿಪಿಗೆ ಸೇರಿದ 19 ಸಚಿವರು ಕೂಡ ರಾಜೀನಾಮೆ ಪ್ರಸ್ತಾಪ ಮುಂದಿಟ್ಟಿದ್ದರು. ಇದರಿಂದಾಗಿ ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಂಕಷ್ಟಕ್ಕೆ ಒಳಗಾಗಿತ್ತು.
1999-2009ರ ಅವಧಿಯಲ್ಲಿ ಅಜಿತ್ ಪವಾರ್ ಮಹಾರಾಷ್ಟ್ರದ ನೀರಾವರಿ ಸಚಿವರಾಗಿದ್ದಾಗ 20 ಸಾವಿರ ಕೋಟಿ ರೂಪಾಯಿ ಮೊತ್ತದ ನೀರಾವರಿ ಯೋಜನೆಗಳನ್ನು ತಮ್ಮ ಸ್ವೇಚ್ಛಾನುಸಾರವಾಗಿ ಗುತ್ತಿಗೆಗೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ 53 ವರ್ಷದ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜ್ಯ ಸಚಿವ ಸಂಪುಟವು ನವೆಂಬರ್ 29ರಂದು ನೀರಾವರಿ ಇಲಾಖೆಗೆ ಸಂಬಂಧಿಸಿದ ಶ್ವೇತಪತ್ರ ಹೊರಡಿಸಿತ್ತು. ಕಳೆದ 10 ವರ್ಷಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ನೀರಾವರಿ ಯೋಜನೆಗಳಲ್ಲಿ ಶೇ 28ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿತ್ತು. ಆದರೆ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆಯೇ ಹೊರತು ಅದು ತನಿಖಾ ವರದಿಯಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.