ADVERTISEMENT

ಅಣು ಶಕ್ತಿ ಹೊಂದುವ ಅವಕಾಶ-ಸೀಮಿತ ಬೇಡ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಮುಂಬೈ (ಪಿಟಿಐ): ಅಣು ಶಕ್ತಿ ಹೊಂದುವ ಅವಕಾಶವು ಕೇವಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ದಲ್ಲಿ ಎಲ್ಲರಿಗೂ ಸಮಾನ ಜವಾಬ್ದಾರಿ ಇರಬೇಕು ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐಎಇಎ) ಮಹಾನಿರ್ದೇಶಕ ಯೂಕಿಯಾ ಅಮನೊ ಅಭಿಪ್ರಾಯಪಟ್ಟಿದ್ದಾರೆ.

‘ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಈಗ ಅಣು ಶಕ್ತಿಯನ್ನು ಹೊಂದುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಶಾಂತಿಪಾಲನೆಯ ಉದ್ದೇಶದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಇರುವ ಅಣ್ವಸ್ತ್ರ ತಂತ್ರಜ್ಞಾನದ ಬಳಕೆಯ ಹಕ್ಕು ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಇರಬೇಕು. ಹಾಗೆಯೇ ಇಂತಹ ತಂತ್ರಜ್ಞಾನ ಬಳಕೆ ಮಾಡುವಾಗ ಅತ್ಯುನ್ನತ ಮಟ್ಟದ ಸುರಕ್ಷಾ ಕ್ರಮಗಳನ್ನು ಮತ್ತು ಭದ್ರತೆಯ ನೀತಿಯನ್ನು ಅನುಸರಿಬೇಕು’ ಎಂದರು.

ಭಾರತೀಯ ಪರಮಾಣು ಸೊಸೈಟಿಯ 21ನೇ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಯೂಕಿಯಾ ಅಮನೊ, ‘ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ವಿಕಿರಣ ತಂತ್ರಜ್ಞಾನದ ಪರಿಣಾಮ’ ಕುರಿತು ಉಪನ್ಯಾಸ ನೀಡಿದರು.

ADVERTISEMENT

2030ರ ವೇಳೆಗೆ ಹೊಸದಾಗಿ 10-25ರಾಷ್ಟ್ರಗಳು ಅಣು ಶಕ್ತಿ ಹೊಂದುವ ನಿರೀಕ್ಷೆ ಇದೆ. ಇಂತಹ ರಾಷ್ಟ್ರಗಳು ಏಷ್ಯಾದಲ್ಲೇ ಹೆಚ್ಚಾಗಿರುತ್ತವೆ. ಭಾರತ, ಚೀನಾ, ಜಪಾನ್ ಮತ್ತು ಕೊರಿಯಾ ಗಣರಾಜ್ಯಗಳು ಸಹ ತಮ್ಮ ಅಣು ಶಕ್ತಿ ಯೋಜನೆಯನ್ನು ವಿಸ್ತರಿಸಲಿವೆ. ಜಗತ್ತಿನಲ್ಲಿ ಈಗ 61 ಅಣು ಸ್ಥಾವರಗಳು ನಿರ್ಮಾಣವಾಗುತ್ತಿದ್ದು, ಅದರಲ್ಲಿ 39 ಸ್ಥಾವರಗಳು ಏಷ್ಯಾದಲ್ಲೇ ಇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.